×
Ad

2000 ರೂಪಾಯಿಯ ನಕಲಿ ನೋಟು!

Update: 2016-11-27 23:39 IST

ಮುಂಬೈ, ನ.27: ಐನೂರು ಮತ್ತು 2000 ರೂ. ನಕಲಿ ನೋಟುಗಳನ್ನು ಮುದ್ರಿಸುವುದು ಅಸಾಧ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೊಳ್ಳುತ್ತಿರುವ ಸಮಯದಲ್ಲಿ ಹೊಸ ಕಳ್ಳನೋಟುಗಳು ಚಲಾವಣೆಯಾಗು ತ್ತಿರುವುದು ಆತಂಕ ಮೂಡಿಸಿದೆ. ಮುಂಬೈಯ ಕಿರಾಣಿ ಅಂಗಡಿ ಮಾಲಕರೊಬ್ಬರಿಗೆ 500 ರೂಪಾಯಿಯ ಹೊಸ ನಕಲಿ ನೋಟುಗಳು ಸಿಕ್ಕಿವೆ. ಈ ಮಧ್ಯೆ ಹೈದರಾಬಾದ್‌ನಲ್ಲಿ 2000 ರೂಪಾಯಿ ನೋಟು ಸೇರಿದಂತೆ ನಕಲಿ ನೋಟು ಮುದ್ರಿಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ಗುರುವಾರ ರಾತ್ರಿ 7:30ಕ್ಕೆ ಮುಂಬೈಯ ಕಿರಾಣಿ ಅಂಗಡಿ ಮಾಲಕ ಜಯಾಬೆನ್ ವಿಕ್ಮನಿ ಅಂಗಡಿಯಲ್ಲಿದ್ದಾಗ, 35 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ 10 ರೂಪಾಯಿ ಚಾಕಲೇಟ್ ಖರೀದಿಸಲು ಆಗಮಿಸಿದ. ಆತ 500 ರೂಪಾಯಿ ನೀಡಿದ್ದಕ್ಕೆ 490 ರೂಪಾಯಿ ಚಿಲ್ಲರೆ ನೀಡಿದ್ದಾಗಿ ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಜಯಾಬೆನ್ ತಮ್ಮ ಮಗನಿಗೆ 500 ರೂಪಾಯಿ ಹೊಸ ನೋಟು ತೋರಿಸಿದರು. ಮಗ ತನ್ನ ಸ್ನೇಹಿತರ ಬಳಿ ಇದ್ದ ಹೊಸ ನೋಟಿನ ಜತೆಗೆ ತಾಳೆ ನೋಡಿದಾಗ ಇದು ನಕಲಿ ಎನ್ನುವುದು ಗಮನಕ್ಕೆ ಬಂತು.

ನೋಟಿನಲ್ಲಿ ಅಂತರ್ಗತವಾಗಿರಬೇಕಾದ ಸೆಕ್ಯುರಿಟಿ ಥ್ರೆಡ್ ಬದಲು ಪ್ಲಾಸ್ಟಿಕ್ ತೂರಿಸಲಾಗಿತ್ತು. ಸ್ವಚ್ಛಭಾರತ್ ಲೋಗೊ ಮೇಲೆ ಇರುವ ಗಾಂಧೀಜಿ ಚಿತ್ರ ಕೂಡ ವಿಭಿನ್ನವಾಗಿದೆ ಎಂದು ಅವರು ವಿವರಿಸಿದರು. ಈ ಮಧ್ಯೆ 2000 ರೂಪಾಯಿಯ ಹೊಸ ನೋಟು ಸೇರಿದಂತೆ ಒಟ್ಟು 2.22 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News