×
Ad

ಬಜರಂಗಿಗಳು ನನ್ನ ಮೇಲೆ ಅತ್ಯಾಚಾರವೆಸಗಿದ ಬಳಿಕ ಥಳಿಸಿ ನೇಣು ಹಾಕಲು ಪ್ರಯತ್ನಿಸಿದ್ದರು

Update: 2016-11-27 23:46 IST

ಮೀರತ್,ನ.27: ಬುಲಂದಶಹರ್ ಜಿಲ್ಲೆಯ ಖುರ್ಜಾ ಎಂಬಲ್ಲಿ ಕಳೆದ ವಾರ ಬಜರಂಗಿಗಳ ಗುಂಪೊಂದು ಮುಸ್ಲಿಮ್ ಜೋಡಿಯೊಂದನ್ನು ಹಿಗ್ಗಾಮುಗ್ಗಾ ಥಳಿಸಿತ್ತು. ಮಹಿಳೆಯನ್ನು ಹಿಂದೂ ಎಂದು ಭಾವಿಸಿದ್ದ ಅವರು ಆಕೆ ಮುಸ್ಲಿಮ್ ಎನ್ನುವುದು ಗೊತ್ತಾದ ಬಳಿಕವೂ ಥಳಿತವನ್ನು ನಿಲ್ಲಿಸಿರಲಿಲ್ಲ. ಮರ್ಯಾದೆಗಂಜಿ ಈ ವಿಷಯದ ಬಗ್ಗೆ ಕೆಲವು ದಿನಗಳವರೆಗೆ ವೌನವಾಗಿದ್ದ ಮಹಿಳೆ ಕೊನೆಗೂ ನ್ಯಾಯಾಲಯದಲ್ಲಿ ತನ್ನ ಕರುಣಾಜನಕ ಕಥೆಯನ್ನು ಹೇಳಿಕೊಂಡಿದ್ದಾಳೆ. ಬಜರಂಗಿಗಳ ಗುಂಪು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿತ್ತು ಎಂದಾಕೆ ನ್ಯಾಯಾಲಯದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾಳೆ. ಇಷ್ಟಾದ ಬಳಿಕ ಪೊಲೀಸರು ಈ ಮೊದಲು ದಾಖಲಿಸಿಕೊಂಡಿದ್ದ ಎಫ್‌ಐಆರ್‌ನ್ನು ಬದಲಿಸಿ ಸಾಮೂಹಿಕ ಅತ್ಯಾಚಾರದ ಆರೋಪವನ್ನು ಸೇರಿಸಿದ್ದಾರೆ.

 
ನಿನ್ನೆ ಸ್ಥಳೀಯ ಹಿಂದಿ ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬಜರಂಗಿಗಳು ತನ್ನ ಮೇಲೆ ಅತ್ಯಾಚಾರವನ್ನಷ್ಟೇ ನಡೆಸಿದ್ದಲ್ಲ, ತನ್ನನ್ನು ನೇಣು ಬಿಗಿದು ಕೊಲ್ಲಲೂ ಯತ್ನಿಸಿದ್ದರು ಎಂದು ಮಹಿಳೆ ತಿಳಿಸಿದಳು. ‘‘ನಾನು ಮತ್ತು ನನ್ನ ಸ್ನೇಹಿತ ಪಿಝ್ಝಿ ತಿನ್ನಲೆಂದು ಹೋಟೆಲ್‌ಗೆ ಹೋಗಿದ್ದೆವು. ಏಕಾಏಕಿ ನಾವು ಕುಳಿತಿದ್ದ ಕೋಣೆಗೆ ನುಗ್ಗಿದ ತಂಡವೊಂದು ಇಲ್ಲೇಕೆ ಕುಳಿತಿದ್ದೀರಿ ಎಂದು ಪ್ರಶ್ನಿಸಿತ್ತು. ಉತ್ತರಿಸುವ ಮೊದಲೇ ಅವರು ನಮ್ಮಿಬ್ಬರನ್ನೂ ಥಳಿಸಲು ಆರಂಭಿಸಿದ್ದರು. ನಾನು ಮುಸ್ಲಿಮ್ ಎಂದು ಗೊತ್ತಾದ ಬಳಿಕವೂ ಅವರು ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಕೋಮು ನಿಂದನೆಗಳನ್ನು ಮಾಡಿದ ಅವರು ನನ್ನ ಸ್ನೇಹಿತನನ್ನು ಅಲ್ಲಿಂದ ಹೊರಗೆಳೆದೊಯ್ದ ಬಳಿಕ ನನ್ನನ್ನು ಇನ್ನೊಂದು ಕೋಣೆಗೆ ಹೊತ್ತೊಯ್ದಿದ್ದರು. ಅಲ್ಲಿ ಐವರು ಒಬ್ಬರಾದ ಬಳಿಕ ಒಬ್ಬರಂತೆ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ’’ಎಂದು ಆಕೆ ವಿವರಿಸಿದಳು.
ಅವರು ತಾವು ಬಜರಂಗ ದಳ ಕಾರ್ಯಕರ್ತರೆಂದು ಹೇಳಿಕೊಂಡಿದ್ದರು. ತಾವು ಬಯಸಿದ್ದನ್ನು ಮಾಡಬಹುದು, ತಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದೂ ಹೇಳಿಕೊಂಡಿದ್ದರು ಎಂದಾಕೆ ಹೇಳಿದಳು.
ಈ ಘಟನೆಯ ವೀಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ‘‘ನೀವು ಈ ಹಿಂದೂ ಬಡಾವಣೆಯನ್ನು ಹೊಲಸೆಬ್ಬಿಸುತ್ತಿದ್ದೀರಿ ’’ ಎಂದು ಈ ಗುಂಪು ಜೋಡಿಯನ್ನು ಉದ್ದೇಶಿಸಿ ಹೇಳಿದ್ದು ವೀಡಿಯೊದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಘಟನೆಯ ಬಳಿಕ ಮನೆಗೆ ಬಂದ ಮಹಿಳೆ ನಮಗೆ ಪ್ರತಿಯೊಂದನ್ನೂ ತಿಳಿಸಿದ್ದಳು. ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಅವರು ಆಕೆಯನ್ನು ಮತ್ತಷ್ಟು ಥಳಿಸಿದ್ದರು. ಅದೃಷ್ಟಕ್ಕೆ ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಆಕೆ ಮುಖವನ್ನು ಮುಚ್ಚಿಕೊಂಡಿದ್ದಳು. ಅವಳೀಗ ಕೋರುತ್ತಿರುವುದು ನ್ಯಾಯ ಮಾತ್ರ ಎಂದು ನೆರೆಮನೆಯ ಮಹಿಳೆಯೋರ್ವಳು ತಿಳಿಸಿದಳು.

ಘಟನೆಯ ಕುರಿತು ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ನಿರ್ದೇಶ ನೀಡಿದ ಬಳಿಕ ಜಿಲ್ಲಾಡಳಿತವು ಚುರುಕಾಗಿದೆ.
ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಐವರನ್ನು ನಾವು ಬಂಧಿಸಿದ್ದು, ಇನ್ನುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ನ್ಯಾಯಾಲಯದಲ್ಲಿ ಮಹಿಳೆಯ ಹೇಳಿಕೆಯ ಬಳಿಕ ಆಕೆಯನ್ನು ವೈದ್ಯಕೀಯ ತಪಾಸಣೆ ಗೊಳಪಡಿಸಿದ್ದು,ವರದಿಗಾಗಿ ಕಾಯುತ್ತಿದ್ದೇವೆ ಎಂದು ಬುಲಂದಶಹರ್ ಜಿಲ್ಲಾಧಿಕಾರಿ ಎ.ಕೆ.ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News