ವಿಮರ್ಶೆ ವಿಶ್ಲೇಷನೆ ಮತ್ತು ವಿಮೋಚನೆ

Update: 2016-11-28 15:37 GMT

ಮಕ್ಕಳು ಮುಕ್ತವಾಗಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ತೊಡಗಿರುವಾಗ ನಿಷ್ಪಕ್ಷಪಾತವಾಗಿ, ಪೂರ್ವಾಗ್ರಹಗಳಿಲ್ಲದೇ ಮಕ್ಕಳನ್ನು ಗಮನಿಸಬೇಕು, ವಿಶ್ಲೇಷಿಸಬೇಕು. ತೋರುವ ಹಲವು ಬಗೆಗಳಲ್ಲಿ ನಮ್ಮ ಮಗುವೂ ಇರಬಹುದು, ಅಥವಾ ನಮ್ಮ ಮನೆಗೆ ಬರುವಂತಹ ಇತರೇ ಮಕ್ಕಳೂ ಇರಬಹುದು. ವಿಶ್ಲೇಷಣೆ ಅಗತ್ಯ . ವಿಶ್ಲೇಷಣೆಯ ನಂತರ ವಿಮರ್ಶೆ ಮಾಡಬೇಕಾಗುವುದು. ವಿಮರ್ಶೆಗೆ ಮಕ್ಕಳನ್ನು ಒಳಪಡಿಸಿದಾಗ ನಮ್ಮ ಅಥವಾ ಆಯಾ ಮಗುವಿನ ಜವಾಬ್ದಾರಿಯುತ ಹಿರಿಯರ ವಿಮರ್ಶೆಯೂ ಆಗುತ್ತದೆ. ಇದರಿಂದ ಮುಂದೆ ನಕಾರಾತ್ಮಕ ಆಗುವಿಕೆಗಳಿಂದ ವಿಮೋಚನೆ ಎಂಬ ಒಂದು ಆಶಾಭಾವ, ಭರವಸೆ! 

ಮಕ್ಕಳು ಸೇರಿದಾಗ ವಿಶ್ಲೇಷಣೆ

ನಮ್ಮ ಗೆಳೆಯರ, ಸಂಬಂಕರ, ಪಕ್ಕದ ಮನೆಯವರ, ಅವರ ಮನೆಗೆ ಬಂದಿರುವವರ ಮಕ್ಕಳೆಲ್ಲಾ ಯಾವುದಾದರೂ ರಜೆಗೆ ಒಂದಾಗಿ ಒಂದು ಕಡೆ ಆಟವಾಡುವಾಗ ಗಮನಿಸಿ ನೋಡಿ. ಕೆಲವು ಮಕ್ಕಳು ತಮ್ಮದೇ ಹಟ ನಡೆಯಬೇಕೆಂದು ಪಟ್ಟು ಹಿಡಿದಿರುತ್ತಾರೆ. ತಾವು ಆಡುತ್ತಿರುವ ಹೊಸ ಮಗುವಿನೊಂದಿಗೂ ಅದು ತಾನು ಹೇಳಿದ ಹಾಗೆಯೇ ಕೇಳಬೇಕೆಂದು ಹಟ ಹಿಡಿದಿರುತ್ತದೆ.

ಮಕ್ಕಳಲ್ಲಿ ಕೆಲವು ಗುಣ ಲಕ್ಷಣಗಳನ್ನು ಗುರುತಿಸಿ. ಅವರ ಸ್ವಭಾವ, ನಡೆದುಕೊಳ್ಳುವ ರೀತಿ ನೀತಿಗಳು. ಮಾತಾಡುವ ಬಗೆಗಳು, ಅವರ ತಂತ್ರ ಮತ್ತು ಪ್ರತಿತಂತ್ರಗಳು, ಎದುರಿಸುವಂತಹ ಮನೋಭಾವ, ಒಪ್ಪಿಕೊಳ್ಳುವಂತಹ ಬಾಗುವಿಕೆ; ಹೀಗೆ ಹಲವಾರು ಗುಣಗಳು ಅವರ ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ಕಾಣುತ್ತಿರುತ್ತವೆ. ಮಕ್ಕಳು ಮುಕ್ತವಾಗಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳಲ್ಲಿ ತೊಡಗಿರುವಾಗ ನಿಷ್ಪಕ್ಷಪಾತವಾಗಿ, ಪೂರ್ವಾಗ್ರಹಗಳಿಲ್ಲದೇ ಮಕ್ಕಳನ್ನು ಗಮನಿಸಬೇಕು, ವಿಶ್ಲೇಷಿಸಬೇಕು. ತೋರುವ ಹಲವು ಬಗೆಗಳಲ್ಲಿ ನಮ್ಮ ಮಗುವೂ ಇರಬಹುದು, ಅಥವಾ ನಮ್ಮ ಮನೆಗೆ ಬರುವಂತಹ ಇತರೇ ಮಕ್ಕಳೂ ಇರಬಹುದು. ವಿಶ್ಲೇಷಣೆ ಅಗತ್ಯ. ವಿಶ್ಲೇಷಣೆಯ ನಂತರ ವಿಮರ್ಶೆ ಮಾಡಬೇಕಾಗುವುದು. ವಿಮರ್ಶೆಗೆ ಮಕ್ಕಳನ್ನು ಒಳಪಡಿಸಿದಾಗ ನಮ್ಮ ಅಥವಾ ಆಯಾ ಮಗುವಿನ ಜವಾಬ್ದಾರಿಯುತ ಹಿರಿಯರ ವಿಮರ್ಶೆಯೂ ಆಗುತ್ತದೆ. ಇದರಿಂದ ಮುಂದೆ ನಕಾರಾತ್ಮಕ ಆಗುವಿಕೆಗಳಿಂದ ವಿಮೋಚನೆ ಎಂಬ ಒಂದು ಆಶಾಭಾವ, ಭರವಸೆ!

1.ಮನೆಯಲ್ಲಿ ಹೇಳಿದ ಮಾತು ಕೇಳದೇ ಎಲ್ಲದಕ್ಕೂ ಹಟ ಮಾಡುವುದು. ಆದರೆ ಹೊರಗೆ ಹೋದಾಗ ಹಟ ಮಾಡದೇ ನೋಡಿದವರು ಮೆಚ್ಚುವಂತೆ ನಡೆದುಕೊಳ್ಳುವುದು.

2.ಮನೆಯಲ್ಲಿ ಹಟ ಮಾಡುವುದಿಲ್ಲ. ತಗ್ಗಿ ಬಗ್ಗಿ ನಡೆಯುತ್ತದೆ. ಆದರೆ ಹೊರಗೆ ಹೋದಾಗ ಎಲ್ಲರ ಎದುರು ಹಟ ಮಾಡಿ ತನ್ನ ಕೆಲಸ ಸಾಸಿಕೊಳ್ಳುತ್ತದೆ. ಬೇಕು ಗಳನ್ನು ಈಡೇರಿಸಿಕೊಳ್ಳುತ್ತದೆ.

3.ಮನೆಯಲ್ಲಿಯೂ ಜೋರು ಹಟ ಮಾಡುವುದು. ಹೊರಗಡೆಯೂ ಹಟ ಮಾಡು ವುದು. ಅದಕ್ಕೆ ಮನೆ ಮತ್ತು ಹೊರಗಡೆಗೆ ಹೆಚ್ಚೇನೂ ವ್ಯತ್ಯಾಸವೇ ಇರುವುದಿಲ್ಲ. ಎಲ್ಲಾ ಕಡೆಯೂ ಹಟ ಹಿಡಿದು ಜೋರು ದನಿಯಲ್ಲಿ ಕೂಗಾಡುವುದು.
    
4.ಎಲ್ಲರೂ ತಾನು ಹೇಳಿದ ಹಾಗೆಯೇ ಕೇಳಬೇಕು ಎಂದು ಹಟ ಹಿಡಿಯುವುದು. ಮನೆಯಲ್ಲಿ ದೊಡ್ಡವರು, ಆಟವಾಡುವಾಗ ಜೊತೆಗಾರರು ಹೇಳಿದ ಮಾತು ಕೇಳದಿದ್ದರೆ ವಸ್ತುಗಳನ್ನು ಬಿಸಾಡಿ ಅಥವಾ ಆಟವನ್ನು ಕೆಡಿಸಿ ಅಳುತ್ತಾ ತನಗೆ ಮುದ್ದಿಸುವವರ ಬಳಿ ಇತರರ ಮೇಲೆ ಚಾಡಿ ಹೇಳುವುದು.

5.ಹಟ ಮಾಡುವುದಿಲ್ಲ. ಕೂಗಾಡುವುದಿಲ್ಲ. ಆದರೆ ತನಗೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂದು ಅನಿಸಿದಾಗ ಮೆಲ್ಲನೆ ಒಂದು ಮೂಲೆ ಸೇರಿಕೊಂಡು ಅಳುತ್ತಾ ಕೂರುವುದು. ಏಕೆ ಹೇಳು ಅಂದರೂ ಹೇಳುವುದಿಲ್ಲ. ಬಹಳ ಬಲವಂತ ಮಾಡಿದರೆ ಒಂದು ಮಗು ತನ್ನ ಮೇಲೆ ಜೋರು ಮಾಡಿತೆಂದೋ ಅಥವಾ ತನ್ನ ಆಟದಲ್ಲಿ ಕಡೆಗಣಿಸಿದರೆಂದೋ ಏನೋ ಒಂದು ದೂರು ಹೇಳುವುದು.

6.ಈ ಒಂದು ಬಗೆಯ ಮಗು ಹಟ ಮಾಡುವುದಿಲ್ಲ. ಆದರೆ ಎಲ್ಲವನ್ನೂ ನೋಡಿಕೊಂಡಿದ್ದು ಮೆಲ್ಲನೆ ತಾನು ಅಲ್ಲಿಂದ ಜಾರಿಕೊಳ್ಳುವುದು. ಟಾಯ್ಲೆಟ್ಟಿಗೋ ಅಥವಾ ಮತ್ತೇನೋ ತನ್ನ ತುರ್ತಿನ ಕೆಲಸಕ್ಕೆ ಎಂದು ಹೋಗುವುದೋ, ನಿದ್ರೆ ಬರುತ್ತಿದೆ ಎಂದು ಹೇಳುವುದೋ, ಹೊಟ್ಟೆ ಹಸಿಯುತ್ತಿದೆ ಎಂದೋ; ಒಟ್ಟು ಆಟದಿಂದ ಮತ್ತು ತನಗೆ ಬೇಡದ ಮಕ್ಕಳ ಸಂಗದಿಂದ ಮೆಲ್ಲನೆ ತಪ್ಪಿಸಿಕೊಂಡು ಬಂದುಬಿಡುತ್ತದೆ.

 7.ಮತ್ತೊಂದು ಬಗೆಯ ಮಕ್ಕಳು ತೀರಾ ಪಾಪದವು. ಬಲಿಪಶುಗಳಾಗಲಿಕ್ಕೇನೇ ಹುಟ್ಟಿರುವಂತೆ ಆಡುವವು. ಮಕ್ಕಳು ಆಡುವಾಗ ಕೊಟ್ಟ ಪಾತ್ರ ನಿರ್ವಹಿಸುವವು. ಬೈದರೆ ಬೈಸಿಕೊಳ್ಳುವವು. ಹೊಡೆದರೆ ಹೊಡೆಸಿಕೊಳ್ಳುವವು. ಆಟದಿಂದ ಹೊರಗೆ ಹಾಕಿದರೆ ಮೂಲೆಯಲ್ಲಿ ಕೂರುವವು. ಪರ್ಯಾಯವಾಗಿ ಇನ್ನೊಂದು ಆಟವನ್ನೂ ಆಡುವುದಿಲ್ಲ. ಕೋಪ ಬರುವುದು, ಆದರೆ ತೋರಿಸಿಕೊಳ್ಳುವುದಿಲ್ಲ. ಅಳು ಬರುವುದು, ಆದರೆ ಅಳುವುದಿಲ್ಲ. ತಮ್ಮದೇನೋ ಅನ್ನಬೇಕೆಂದುಕೊಳು್ಳವವು, ಎಂದಿಗೂ ಹೇಳುವುದೇ ಇಲ್ಲ.

ಈ ರೀತಿಯಾಗಿ ಹಲವು ಬಗೆಗಳಲ್ಲಿ ಮಕ್ಕಳು ವರ್ತಿಸುವುದನ್ನು ನೋಡುತ್ತೇವೆ. ಹಾಗೆ ನೋಡುವಾಗ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, 

ವಸ್ತು ಮತ್ತು ಆತ್ಮ ವಿಮರ್ಶೆ

ಇನ್ನೂ ಕೆಲವೊಮ್ಮೆ ಮಕ್ಕಳನ್ನು ಮಾತ್ರವಲ್ಲದೇ ಹಿರಿಯರು ಮಕ್ಕಳನ್ನು ನೋಡಿಕೊಳ್ಳುವ ಪರಿಯನ್ನು ಗಮನಿಸುವಾಗಲೂ ಕೂಡ ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವ ಸಾಧ್ಯತೆಗಳು ಒದಗುವುವು.

ತಂದೆ ಎಂಬ ಎಟಿಎಂ

ಇತ್ತೀಚೆಗೆ ನಮ್ಮ ಮತ್ತು ನಮ್ಮ ತಂಡದ ಸದಸ್ಯರ ಮಕ್ಕಳೊಂದಿಗೆ ಹೊರಗೆ ಸುತ್ತಾಡಲು ಹೋಗಿದ್ದಾಗ ಓರ್ವ ಲೇಖಕಿಯ ಮನೆಗೆ ಹೋಗಿದ್ದೆವು. ಆಗ ನನ್ನೊಡನೆ ಇದ್ದ ಕಲಾವಿದನೊಬ್ಬ ತನ್ನ ಮೂರು ವರ್ಷದ ಮಗುವನ್ನು ತಾನೇ ಎತ್ತಿಕೊಂಡು ಕತೆಗಳನ್ನು ಹೇಳುತ್ತಾ, ಅದೂ ಇದೂ ತೋರಿಸುತ್ತಾ ಊಟ ಮಾಡಿಸುತ್ತಿದ್ದ. ಮಗುವನ್ನು ಶೌಚಾಲಯಕ್ಕೆ ಕರೆದೊಯ್ಯುವುದು, ಬಟ್ಟೆ ಬದಲಿಸುವುದು, ಸ್ನಾನ ಮಾಡಿಸುವುದು; ಇತ್ಯಾದಿಗಳನ್ನೆಲ್ಲಾ ಮಾಡುವಾಗ ಆ ಮಗುವು ತಂದೆಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿತ್ತು. ಆಗ ಅವನು ಉತ್ತರಿಸಿಕೊಂಡು ಅವಳಿಗೆ ಆರೈಕೆ ಮಾಡುತ್ತಿದ್ದ. ಮೂರು ದಿನಗಳ ಕಾಲ ಈ ವಿಷಯಗಳನ್ನೆಲ್ಲಾ ಗಮನಿಸಿದ ಲೇಖಕಿಯ ತಂದೆ ಏಕಾಂತದಲ್ಲಿ ಮಾತಾಡುತ್ತಾ ಹೇಳಿದರು. ‘‘ಈಗ ನನಗೆ ಅರಿವಾಗುತ್ತಿದೆ ಆಗ ನಾನು ಎಷ್ಟು ತಪ್ಪು ಮಾಡಿದೆ ಎಂದು. ನಾನು ಎಂದಿಗೂ ಮಗುವನ್ನು ಆ ರೀತಿಯಲ್ಲಿ ಮುದ್ದಿಸಿದವನೇ ಅಲ್ಲ. ಎಂದಿಗೂ ಸ್ನಾನವನ್ನು ಮಾಡಿಸಿಲ್ಲ. ಊಟ ಮಾಡಿಸಿಲ್ಲ. ಮಗು ಮಲ ಅಥವಾ ಮೂತ್ರ ಮಾಡಿದಾಗ ಎತ್ತಿದವನಲ್ಲ. ಶಾಲೆಯ ಹೋಂ ವರ್ಕ್ ಏನು ಮಾಡಿದೆ, ಈ ದಿನ ಶಾಲೆ ಹೇಗಿತ್ತು ಎಂದು ಕೇಳಿದವನಲ್ಲ. ಮಗುವು ಹಸಿವಾಗಿ ಅತ್ತರೆ, ನೋಡು ಮಗು ಅಳುತ್ತಿದೆ ಎನ್ನುತ್ತಿದ್ದೆ. ಅದು ಮೂತ್ರಿಸಿಕೊಂಡರೆ, ನೋಡು ಅದಕ್ಕೆ ಬಟ್ಟೆ ಬದಲಿಸಬೇಕು, ಕ್ಲೀನ್ ಮಾಡಬೇಕು ಎನ್ನುತ್ತಿದ್ದೆನೇ ಹೊರತು ಅದೂ ನನ್ನ ಕೆಲಸ ಎಂದು ಎಂದೂ ಅನ್ನಿಸಿಯೇ ಇರಲಿಲ್ಲ. ಮಾಡೂ ಇಲ್ಲ. ಅದೇ ರೀತಿಯಲ್ಲಿ ಈಗ ಮಕ್ಕಳೂ ಕೂಡ ಏನನ್ನೇ ಚರ್ಚಿಸಬೇಕೆಂದರೂ ಅವರ ಅಮ್ಮನನ್ನೇ ಅವಲಂಬಿಸುತ್ತಾರೆ. ಅವರು ಮಾತಾಡಿಕೊಂಡು ನನಗೆ ದುಡ್ಡು ಕೊಡುವ ಭಾಗ್ಯ ಮಾತ್ರ ನೀಡುತ್ತಾರೆ. ಆಗಲೂ ಅಷ್ಟೇ ಯಾವುದಕ್ಕೇ ಬೇಕೆಂದರೂ ದುಡ್ಡು ಕೊಡುತ್ತಿದ್ದೆ. ಅಪ್ಪಂದಿರು ಹೀಗೆಲ್ಲಾ ಮಾಡಬೇಕೆಂದೂ ನನಗೆ ಹೊಳೆದೇ ಇರಲಿಲ್ಲ. ಏಕೆಂದರೆ ನಾವೂ ನೋಡಿರಲಿಲ್ಲ.’’ ಈಗ ಅವರಿಗೆ ತಮ್ಮ ಮಕ್ಕಳು ತಮ್ಮೆಡನೆ ಆತ್ಮೀಯ ವಾಗಿ ವಿಷಯಗಳನ್ನು ಹಂಚಿಕೊಳ್ಳುವುದಾಗಲಿ, ಚರ್ಚಿಸುವುದಾಗಲಿ ಏನೂ ಮಾಡುವುದಿಲ್ಲ ಎಂಬ ನೋವಿದೆ. ತಾಯಿ ಮತ್ತು ಮಕ್ಕಳು ಎಲ್ಲಾ ಒಂದು ಕಡೆ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾವೊಬ್ಬರು ಒಂಟಿಯಂತೆ ಕುಳಿತಿರಬೇಕಾ ಗುತ್ತದೆ. ಅವರೂ ಕೂಡ ಇವರನ್ನು ಉದ್ದೇಶಪೂರ್ವಕವಾಗಿ ಕೈ ಬಿಡುವುದಿಲ್ಲ. ಆದರೆ, ಅವರಿಗೆ ಇವರ ಭಾಗವಹಿಸುವಿಕೆಯ ಅಭ್ಯಾಸವೇ ಆಗಿಲ್ಲ. ಈಗಲೂ ಇವರಿಗೆ ತಂದೆ ಎಂದರೆ ಎಟಿಎಂ. ಅವರ ನಿರ್ಧಾರಗಳಿಗೆ ಹಣ ಒದಗಿಸುವ ಅಗತ್ಯ.

ಕೆಮ್ಮಬಹುದೋ ಬೇಡವೋ?

ಬೆಳೆಯುವ ಪೈರು ಅಂಕಣದಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾಗಿರುವ ಪುಸ್ತಕಗಳ ಸರಣಿಯನ್ನು ನೋಡುತ್ತಾ ಕುಳಿತಿದ್ದ ಓರ್ವ ಮಧ್ಯ ವಯಸ್ಕ ತಂದೆ ಎಲ್ಲಾ ಪುಸ್ತಕಗಳನ್ನೂ ಒತ್ತೊಟ್ಟಿಗೆ ಮಾಡಿ ತನ್ನತ್ತ ಇಟ್ಟುಕೊಂಡು ವೌನವಾಗಿ ಕುಳಿತಿದ್ದ. ಭಂಗಿಯೇ ಹೇಳುತ್ತಿತ್ತು ಆತ ಭಾವುಕನಾಗಿದ್ದಾನೆಂದು. ವಯಸ್ಸಿನಲ್ಲಿ ನನಗಿಂತ ಕಿರಿಯನಾಗಿದ್ದ ಅವನಿಗೆ ಏನಾಯಿತೆಂದು ಕೇಳಿದೆ. ಆತ ಅಳತೊಡಗಿದ.

‘‘ನಮ್ಮ ತಂದೆ ಕೆಲಸದಿಂದ ಬರುವ ಸಮಯಕ್ಕೆ ನಾವು ನಮ್ಮ ಎಲ್ಲಾ ಆಟಗಳನ್ನು ಓಡಾಟಗಳನ್ನು ನಿಲ್ಲಿಸಿಬಿಡುತ್ತಿದ್ದೆವು. ಮಾತುಕತೆಗಳೂ ನಿಂತು ಹೋಗಿರುತ್ತಿದ್ದವು. ಸ್ಕೂಲ್ ಪುಸ್ತಕ ತೆಗೆದುಕೊಂಡು ಮಾಡಿ ಮೇಲೆ ಕುಳಿತಿರ ಬೇಕಿತ್ತು. ಮೂವರು ಅಣ್ಣ ತಮ್ಮಂದಿರೂ ಕೂಡ ಕದಲದೇ ಓದಿಕೊಂಡು ಕುಳಿತಿರಬೇಕಿತ್ತು. ನಮ್ಮ ತಂದೆ ಬಂದವರೇ ಈಗ ನಾವು ಓದುತ್ತಿರುವುದನ್ನು ನೋಡಿ ತಾವು ಮುಖ ಕೈ ಕಾಲು ತೊಳೆಯಲು ಹೋಗುವ ಮುನ್ನ ಯಾರಿಗಾದರೂ ಹೇಳುತ್ತಿದ್ದರು. ನಾನು ಮುಖ ತೊಳೆದು ಬಂದ ಮೇಲೆ ನಿನ್ನ ಕೇಳುತ್ತೇನೆ. ಏನು ಓದಿದೆಯೋ ಒಪ್ಪಿಸಬೇಕು ಎನ್ನುತ್ತಿದ್ದರು. ಯಾರಿಗೆ ಹೇಳುತ್ತಿದ್ದರೋ ಅವರಿಗೆ ಅದು ದೊಡ್ಡ ಪರೀಕ್ಷೆ. ಸರಿಯಾಗಿ ಒಪ್ಪಿಸಲಿಲ್ಲ ಎಂದರೆ, ಸರಿಯಾಗಿ ಬೀಳುತ್ತಿತ್ತು. ಯಾವ ವಸ್ತುವಾದರೂ ಸರಿಯೇ ಮೈ ಮೇಲೆ ಬೀಳಬಹುದಿತ್ತು. ಭಯಕ್ಕೇ ಎಷ್ಟೋ ಸಲ ಮೂತ್ರಿಸಿಕೊಳ್ಳುತ್ತಿದ್ದೆವು. ಅವರು ಬಿದಿರಿನ ಚೇರಿನ ಮೇಲೆ ಕುಳಿತುಕೊಂಡಿರುತ್ತಿದ್ದರು. ನಾವು ಚಾಪೆ ಹಾಕಿಕೊಂಡು ಕೆಳಗೆ ಕುಳಿತಿರುತ್ತಿದ್ದೆವು. ಈಗಲೂ ನೆನಸಿಕೊಂಡರೆ ಅವು ಅದೆಂತಹ ಭಯದ ದಿನಗಳಾಗಿದ್ದವು ಅನ್ನಿಸತ್ತೆ. ಮಾತಾಡುವುದಿರಲಿ, ಕೆಮ್ಮಲೂ ಭಯವಾಗುತ್ತಿತ್ತು. ಈ ಸಮಯದಲ್ಲಿ ಕೆಮ್ಮಬಹುದೋ ಬೇಡವೋ, ಕೆಮ್ಮಿದರೆ ಎಷ್ಟು ಕೆಮ್ಮಬೇಕು, ಹೇಗೆ ಕೆಮ್ಮಬೇಕು ಎಂದೆಲ್ಲಾ ಯೋಚಿಸಬೇಕಿತ್ತು. ಟಾಯ್ಲೆಟ್ಟಿಗೂ ಕೂಡ ನಿಗದಿತ ಸಮಯದಲ್ಲೇ ಹೋಗಬೇಕಿತ್ತು. ಅವರು ನಿಗದಿಪಡಿಸಿದ ಹೊತ್ತಲ್ಲಿ ಅಲ್ಲದೇ ಶೌಚಕ್ಕೆ ಹೋದರೆ, ಯಾವಾಗಂದ್ರೆ ಆವಾಗ ಟಾಯ್ಲೆಟ್‌ಗೆ ಹೋಗಬಾರದು ಎಂದು ಬೈಯುತ್ತಿದ್ದರು. ನಮ್ಮ ತಂದೆ ಎಂದಿಗೂ ನಮಗೆ ಮುತ್ತುಕೊಡುವುದು, ಎತ್ತಿಕೊಳ್ಳುವುದು ಇರಲಿ, ಪಕ್ಕದಲ್ಲಿ ಕುಳಿತುಕೊಂಡು ಮೈದಡಿವಿದ್ದೇ ನೆನಪಿಲ್ಲ. ನಿಮ್ಮ ಪುಸ್ತಕಗಳನ್ನು ನೋಡುವಾಗ ಅದನ್ನೇ ಯೋಚಿಸುತ್ತಿದ್ದೆ. ಆದರೆ ನೆನಪಿಗೇ ಬರಲಿಲ್ಲ. ನನಗೆ ಬುದ್ಧಿಯೇನೂ ಬಾರದಿದ್ದ ವಯಸ್ಸಿನಲ್ಲಿ ಮುದ್ದಿಸಿದ್ದರೇನೋ? ಆದರೆ ನನಗೆ ಬುದ್ಧಿ ಬರುವ ಮುನ್ನ ಏನು ಮಾಡಿದ್ದರೂ ನನಗೆ ಎಲ್ಲಿ ನೆನಪಿರುತ್ತದೆ? ನಮಗೆ ಬುದ್ಧಿ ಬಂದಮೇಲಿನ ವಿಷಯಗಳಷ್ಟೇ ಅಲ್ಲವೇ ನೆನಪಿರುವುದು?’’

ಆತನ ಭೂತಬಾಧೆ ಇಲ್ಲಿಗೇ ನಿಲ್ಲಲಿಲ್ಲ.

‘‘ಈಗ ನಾನು ನೆನಪಿಸಿಕೊಳ್ಳುತ್ತಿದ್ದೇನೆ. ನಾನೂ ನನ್ನ ಮಗನ ಬಳಿ ನನ್ನ ತಂದೆ ಯಂತೆಯೇ ಆಡುತ್ತಿದ್ದೇನೆ. ಯಾವಾಗಲೂ ಅಲ್ಲ. ಆದರೆ ಕೆಲವೊಮ್ಮೆ ನಾನೂ ನನ್ನ ತಂದೆಯ ಮಾತುಗಳನ್ನೇ ಆಡುವುದು, ಅವರಂತೆಯೇ ವರ್ತಿಸುವುದು, ಅವರ ಹಾಗೆಯೇ ಗದರುವುದು ನೆನಪಿಗೆ ಬರುತ್ತಿದೆ. ಇಲ್ಲ, ನಿಜವಾಗಿ ಹಾಗೆ ಮಾಡಬಾರದು. ನನ್ನ ಮಗ ಈಗ ನಾಲ್ಕನೆಯ ತರಗತಿ ಓದುತ್ತಿದ್ದಾನೆ. ನಾನೇ ನೆನಪಿಸಿಕೊಳ್ಳುವಂತೆ ಹೋದ ವರ್ಷದಿಂದ ಅವನನ್ನು ಮೊದಲಿನಂತೆ ಮುದ್ದಿಸುವುದು, ಹತ್ತಿರದಲ್ಲಿ ಕೂರಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಓದುವುದರ ಕಡೆಗೆ ಹೆಚ್ಚು ಗಮನ ಕೊಡುವಂತೆ ಹೇಳುತ್ತಿರುತ್ತೇನೆ. ಗದರದಿದ್ದರೆ ಹೇಳಿದ ಮಾತು ಕೇಳುವುದಿಲ್ಲ ಎಂದು ಗಡಸು ಮುಖ ಹಾಕಿಕೊಳ್ಳುತ್ತೇನೆ. ಇಲ್ಲಾ, ಹೀಗೆ ಮಾಡಬಾರದು. ನಾನೂ ನನ್ನ ತಂದೆಯ ರೀತಿ ಮಾಡಬಾರದು. ನನ್ನ ಮಗನಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಬಾರದು. ಅವನೂ ನನ್ನ ರೀತಿ ಮುಂದೊಂದು ದಿನ ಅಳುತ್ತಾ ಕೂರಬಾರದು. ನಾನು ಏನೂ ಹೇಳುತ್ತಿರಲಿಲ್ಲ. ಬರಿದೇ ತಲೆದೂಗುತ್ತಾ ಅವನ ನೋಡುತ್ತಿದ್ದೆ. ಮಧ್ಯೆದಲ್ಲಿ ಒಂದೆರಡು ಬಾರಿ ಆತ ತೀವ್ರವಾಗಿ ಭಾವೋದ್ರೇಕಕ್ಕೆ ವಾಲಿದಾಗ ಆತನ ಹಸ್ತಗಳನ್ನು ಹಿಡಿದು ಮೃದುವಾಗಿ ಅದುಮಿದೆ. ಇದೇ ರೀತಿಯಲ್ಲಿ ನನ್ನ ನೆಂಟರ ಬಂಧುವೊಬ್ಬನೂ ಕೂಡ ಬೆಳೆಯುವ ಪೈರು ಪುಸ್ತಕವನ್ನು ಓದುವಾಗ ತನ್ನ ತಂದೆಯ ಆಡಳಿತವನ್ನು ಇದೇ ರೀತಿ ನೆನಪಿಸಿ ಕೊಂಡಿದ್ದ ಹಾಗೂ ಹೇಳಿದ್ದ, ‘‘ನಾನಂತೂ ನನ್ನ ಮಗಳನ್ನು ನನ್ನ ಮೇಲೆ ಆಡಲು ಬಿಟ್ಟು ಬಿಡುತ್ತೇನೆ. ಅವಳಂತೂ ನಮ್ಮನ್ನೆಲ್ಲಾ ಬುಗುರಿ ತಿರುಗಿಸುವಂತೆ ತಿರುಗಿಸುತ್ತಾಳೆ. ಇದೊಂದು ಸಮಯ ಅವರ ಇಷ್ಟಕ್ಕೆ ನಾವೂ ಆಟವಾಡೋಣ. ಇದರಲ್ಲೂ ಆನಂದವಿದೆ. ನಮ್ಮ ಬಳಿ ಅವಳು ನೂರಕ್ಕೆ ನೂರು ಮುಕ್ತವಾಗಿರಲಿ’’.

ಪೀಳಿಗೆಗಳ ಗಮನಿಸಿ

ಅವಳೊಂದು ತಾಯಿ. ನನ್ನದೇ ವಯಸ್ಸು. ಬೆಳೆದು ನಿಂತಿರುವ ತನ್ನ ಮಗ ಮತ್ತು ಮಗಳ ಬಗ್ಗೆ ದೂರುತ್ತಿದ್ದಳು. ಅವರು ನಡೆದುಕೊಳ್ಳುವ ರೀತಿ ಮತ್ತು ಅವರು ವರ್ತಿಸುವ ಬಗೆ, ಅವರಿಂದ ಜಗಳ ಹುಟ್ಟುವ ಕಾರಣಗಳು ಎಲ್ಲವನ್ನೂ ಹೇಳುತ್ತಿದ್ದಳು. ಅವಳು ಹೇಳುವುದೇನೂ ನನಗೆ ಹೊಸತಾಗಿರಲಿಲ್ಲ. ಅವಳದೇ ಕುಟುಂಬದ ಅವಳನ್ನು ಕೇಂದ್ರವಾಗಿರಿಸಿಕೊಂಡು ಹಿಂದಕ್ಕೆ ನಾಲ್ಕು ಪೀಳಿಗೆಗಳನ್ನು ಮತ್ತು ಮುಂದೆ ಮೂರು ಪೀಳಿಗೆಗಳನ್ನು ನೋಡುತ್ತಿದ್ದೇನೆ. ಅವಳು, ಅವಳ ತಾಯಿ, ಅವಳ ಅಜ್ಜಿ, ಮತ್ತು ಅಜ್ಜಿಯ ವೌಖಿಕ ಪರಂಪರೆಯ ಮೂಲಕ ಅವರ ಹಿಂದಿನ ತಲೆಮಾರು. ಹಾಗೆಯೇ ಅವಳ ನಂತರದ ಅವಳ ತಾಯಿಯ ತಂಗಿ ಮತ್ತು ತಮ್ಮಂದಿರ ಮಕ್ಕಳ ಪೀಳಿಗೆ, ಅವರ ಮಕ್ಕಳ ಪೀಳಿಗೆ ಮತ್ತು ಅವಳದೇ ಮಕ್ಕಳ ಪೀಳಿಗೆ. ಹೀಗೆ ಸಮಕಾಲೀನರಾಗಿದ್ದರೂ ವಿವಿಧ ಪೀಳಿಗೆಗಳಿಗೆ ಸೇರುವ ಒಟ್ಟು ಏಳು ಪೀಳಿಗೆಗಳನ್ನು ಗಮನಿಸಿದೆ. ಅವಳ ಮಕ್ಕಳ ಕುರಿತಾಗಿ ಹೇಳುತ್ತಿರುವ ಅನೇಕಾನೇಕ ವಿಷಯಗಳು ಸಾಮಾನ್ಯವಾಗಿ ಎಲ್ಲಾ ಪೀಳಿಗೆಗಳಲ್ಲೂ ಪುನರಾವರ್ತನೆಯಾಗಿವೆ. ಆ ವರ್ತನೆಗಳನ್ನು ಪದೇ ಪದೇ ಎಲ್ಲಾ ಮಕ್ಕಳಲ್ಲೂ ಕಾಣುತ್ತಿದ್ದೇವೆ. ಯಾವ ತಾಯಿಯು ತನ್ನ ಮಗಳ ಬಗ್ಗೆ ದೂರುತ್ತಿದ್ದಳೋ, ಅದೇ ಬಗೆಯ ದೂರನ್ನು ಅವಳ ತಾಯಿಯು ಅವಳ ಬಗ್ಗೆ ಮಾಡುತ್ತಿದ್ದದ್ದು ನಾನೇ ಕೇಳಿದ್ದೆ. ಅಲ್ಲದೇ ಅವಳ ತಾಯಿಯೂ ಕೂಡ ಅಂತಹ ವರ್ತನೆಗಳನ್ನು ತೋರುತ್ತಿದ್ದಳು ಎಂಬುದನ್ನು ಅವಳ ಅಜ್ಜಿಯಿಂದ ಕೇಳಿದ್ದೆ. ಈಗ ನನ್ನ ಆಶ್ಚರ್ಯಕ್ಕೆ ಮೂರು ತಲೆಮಾರುಗಳ ನಂತರವೂ ಅದೇ ಬಗೆಯ ಪುನರಾವರ್ತಿತ ವರ್ತನೆಗಳನ್ನು ಗಮನಿಸುತ್ತಿದ್ದೇನೆ. ದೂರುಳನ್ನು ಕೇಳುತ್ತಿದ್ದೇನೆ.

ಎಚ್ಚರವಿಲ್ಲದೇ ನಮ್ಮ ಹಿರಿಯರ ತಪ್ಪುಗಳನ್ನು ಒಪ್ಪುಗಳನ್ನೆಲ್ಲಾ ಪ್ರಭಾವಕ್ಕೆ ಒಳಗಾಗಿ ಸಾಗಿಸುತ್ತಲೇ ಬರುವ ಕಾರಣದಿಂದ ಇವು ಘಟಿಸುತ್ತವೆ. ಪೀಳಿಗೆಯಿಂದ ಪೀಳಿಗೆಗೆ ವರ್ತನೆಗಳು, ದೂರುಗಳು ಮುಂದುವರಿಯುತ್ತವೆ. ಪ್ರಜ್ಞಾಪೂರ್ವಕವಾಗಿ ಇದನ್ನು ಗಮನಿಸಿದವರು ಇಂತಹ ಪರಂಪರೆಯನ್ನು ಮುರಿಯಬೇಕು. ಒಮ್ಮೆ ತಂಪಾದ ತಲೆಹೊತ್ತು, ನಮ್ಮ ಈಗಿನ ಪೀಳಿಗೆ ಅಂದರೆ ನಾನು, ನನ್ನ ಅಣ್ಣ ತಮ್ಮ, ಅಕ್ಕ ತಂಗಿ ಇವರುಗಳ ಸಾಲು, ಅವರ ಹಿಂದಿನ, ಅಂದರೆ, ನಮ್ಮ ತಂದೆ ತಾಯಿ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆಯಂದಿರ, ಸೋದರ ಮಾವಂದಿರ ಸಾಲುಗಳು, ಅವರ ಹಿಂದಿನ, ನಮ್ಮ ಅಜ್ಜಿ, ತಾತ, ಚಿಕ್ಕ ತಾತ, ದೊಡ್ಡ ತಾತ; ಇವರ ಸಾಲುಗಳು; ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅವರ ವರ್ತನೆಗಳು, ನಡವಳಿಕೆಗಳು, ನಿರ್ಣಯಗಳು ಹೇಗಿದ್ದವೆಂದು ಗಮನಿಸಬೇಕು. ಅದರ ನಂತರ ಉಂಟಾದ ಪರಿಣಾಮಗಳನ್ನು ಗಮನಿಸಬೇಕು. ಗಮನಿಸಿ ನೋಡಿದರೆ ಅನೇಕ ವರ್ತನೆಗಳು ಮತ್ತು ಗುಣಾವಗುಣಗಳು ಪುನರಾವರ್ತಿತವಾಗಿರುತ್ತವೆ. ಕಲಿಕೆಯಲ್ಲಿ, ವಿದ್ಯಾಭ್ಯಾಸದಲ್ಲಿ ವ್ಯತ್ಯಾಸಗಳಿದ್ದಿರಬಹುದು, ವೃತ್ತಿಯಲ್ಲಿ, ಸಂಪಾದನೆಗಳಲ್ಲಿ ವ್ಯತ್ಯಾಸಗಳಿದ್ದಿರಬಹುದು. ಆದರೆ ಪ್ರವೃತ್ತಿಗಳಲ್ಲಿ, ಗುಣಾವಗುಣಗಳಲ್ಲಿ, ಮನೋಭಾವಗಳಲ್ಲಿ ಸಾಮ್ಯತೆಗಳನ್ನು ಕಾಣುತ್ತೇವೆ. ಈ ಸಾಮ್ಯತೆಗಳಿಗೆ ಮುಖ್ಯ ಕಾರಣ ವಂಶವಾಹಿನಿ ಏನಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರಗಳಿದ್ದಂತೆ, ಕುಟುಂಬಗಳಲ್ಲಿ ಮನೋಭಾವದ ಪರಿಸರವೂ ಸೂಕ್ಷ್ಮವಾಗಿರುತ್ತದೆ. ಅದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಎಚ್ಚರಗೊಳ್ಳದಿದ್ದ ಪಕ್ಷದಲ್ಲಿ, ಸಂಮೋಹಿತರಾದಂತೆ, ಅದರ ಪ್ರಭಾವದಲ್ಲಿಯೇ ನಾವೂ ಮುಂದುವರೆದಿರುತ್ತೇವೆ ಹಾಗೂ ನಮ್ಮ ಹಿಂದಿನ ಮತ್ತು ಮುಂದಿನ ಪೀಳಿಗೆಗಳೂ ಕೂಡ ತಮ್ಮ ನಡೆಯನ್ನು ಕಂಡುಕೊಂಡಿರುತ್ತದೆ. ಆದ್ದರಿಂದ ಮಕ್ಕಳ ಯಾವುದೇ ವಿಪರೀತಗಳೆನಿಸುವಂತಹ ವರ್ತನೆಗಳು ಕಂಡರೆ ತಲೆಮಾರುಗಳನ್ನು ಕಣ್ಮುಂದೆ ತಂದುಕೊಳ್ಳಬೇಕು. ಮನೆಯವರನ್ನು ವಿರೋಸುವ, ಮನೆಬಿಟ್ಟು ಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವ, ಜಿದ್ದಿಗೆ ಬಿದ್ದು ಹಟ ಸಾಸುವ, ವ್ಯಕ್ತಿಗಳಿಗೆ ಅಂಟಿಕೊಳ್ಳುವ; ಹೀಗೆ ನಾನಾ ಬಗೆಯ ವಿಪರೀತಗಳ ಪ್ರವೃತ್ತಿಗಳನ್ನು ಕೊನೆಗಾಣಿಸಲು ಅದು ಸಹಕಾರಿಯಾಗಬಹುದು. ಕೆಲವು ಸಲ ಓರ್ವ ವ್ಯಕ್ತಿ ಮನೆಯಿಂದ ಹೊರಗೆ ಹೋಗಿ ಹಾಸ್ಟೆಲ್ ಅಥವಾ ದೂರದಲ್ಲೆಲ್ಲೋ ಓದು, ವೃತ್ತಿ ಎಂದು ಮಾಡಿಕೊಂಡು, ಮನೆಯವರ ಮನೋಭಾವದ ಪ್ರಭಾವದಿಂದ ಹೊರತಾಗಿ ಹಿಂದಿರುಗಿದವನು ತಮ್ಮ ಮನೆಯವಂತೆ ಆಡದೇ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರುತ್ತದೆ. ಆದರೆ ಅವರಿಗೆ ಉಳಿದವರನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಹಿಂದಿನ ಮತ್ತು ಮುಂದಿನ ತಲೆಮಾರುಗಳ ಸ್ವಭಾವಗಳನ್ನು ಗಮನಿಸಿದರೆ, ವೈಪರೀತ್ಯಗಳ ಮತ್ತು ಬೇಡವಾದುವುಗಳನ್ನು ಗುರುತಿಸಿದರೆ, ನಾವು ನಮ್ಮ ಮಾದರಿ ಯನ್ನು ಹೊಸದಾಗಿ ಕಟ್ಟಿಕೊಳ್ಳಲು ಸಾಧ್ಯ. ಹಾಗೂ ನಮ್ಮ ಮುಂದಿನ ಪೀಳಿಗೆಗಳನ್ನು ನಕಾರಾತ್ಮಕವಾಗಿರುವ ವೈಪರೀತ್ಯಗಳ ಪ್ರಭಾವದಿಂದ ತಪ್ಪಿಸಲು ಸಾಧ್ಯವಾಗ ಬಹುದು. ಕುಟುಂಬಗಳಲ್ಲಿ ತಲೆವಾರುಗಳ ಮನೋಧೋರಣೆಗಳ ಸೂಕ್ಷ್ಮ ಪ್ರಭಾವದ ಕಾರಣಗಳನ್ನು ಮತ್ತು ಪರಿಣಾಮಗಳನ್ನು ಖಂಡಿತವಾಗಿಯೂ ನಿರ್ಲಕ್ಷಿಸಬಾರದು. ಮಕ್ಕಳು ಬರಿಯ ತಂತ್ರಜ್ಞಾನದಲ್ಲಿ ಮುಂದುವರಿದುಬಿಟ್ಟರೆ ಖಂಡಿತ ಸಾಲದು. ಸೂಕ್ಷ್ಮ ವಾಗಿ ಪ್ರಭಾವ ಬೀರುವ ಮನಸ್ಥಿತಿಗಳ ಪರಂಪರೆಯನ್ನು ಗಮನಿಸಲೇಬೇಕು. ಅನಗತ್ಯ ಮತ್ತು ವಿಕಾಸಪರವಾಗಿರದ್ದನ್ನು ತುಂಡರಿಸಲೇಬೇಕು.

Writer - ಯೋಗೇಶ್ವರ್ ಮಾಸ್ಟರ್

contributor

Editor - ಯೋಗೇಶ್ವರ್ ಮಾಸ್ಟರ್

contributor

Similar News