ಸನ್ಯಾಸಿಯ ಸಂಬಳ ಮತ್ತು ಸಂಸಾರಿಯ ಖರ್ಚು!

Update: 2016-11-28 18:44 GMT

ಪ್ರಧಾನಮಂತ್ರಿಗಳು ಟೆಲಿವಿಷನ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುವುದು ಎಂದರೇನು?

ದೇಶದಲ್ಲಿರುವ 135 ಕೋಟಿ ಜನಸಂಖ್ಯೆಗೆ, ಅಂದಾಜು 25 ಕೋಟಿ ಮನೆಗಳಿವೆ.ಈ ಮನೆಗಳಲ್ಲಿ ಟೆಲಿವಿಷನ್ ಇರುವವರ ಮನೆಗಳು ಅಂದಾಜು 12 ಕೋಟಿ (2011ರ ಜನಗಣತಿಯನ್ವಯ) ಅಂದರೆ, ಟೆಲಿವಿಷನ್ ಮೂಲಕ ತಲುಪಲು ಸಾಧ್ಯವಾಗುವುದು ಅಂದಾಜು 60-70ಕೋಟಿ ಜನರನ್ನು ಮಾತ್ರ. ರೇಡಿಯೋ ಬಳಕೆದಾರರ ಸಂಖ್ಯೆ ಅಂದಾಜು 16 ಕೋಟಿ. ಹೀಗೆ ಯಾವ ಅಂದಾಜಿನಲ್ಲೂ ದೇಶದೊಳಗೆ 30-40ಕೋಟಿ ಜನರನ್ನು ತಲುಪಲು ಪ್ರಧಾನಮಂತ್ರಿಗಳಿಗೆ ಸಾಧ್ಯ ಆಗುವುದೇ ಇಲ್ಲ.

ರವಿವಾರ ಪ್ರಧಾನಮಂತ್ರಿಗಳು ತಮ್ಮ ‘ಮನ್ ಕೀ ಬಾತ್’ನಲ್ಲಿ ದೇಶದ ಯುವಕರು ಕ್ಯಾಷ್ ಲೆಸ್ ಆರ್ಥಿಕತೆಗೆ ಮುಂದಾಗಬೇಕು ಮತ್ತು ಪ್ರತಿಯೊಬ್ಬರೂ 10 ಮಂದಿಗಾದರೂ ಕ್ಯಾಷ್ ಲೆಸ್ ಲೇವಾದೇವಿ ಮಾಡುವುದನ್ನು ಕಲಿಸಿಕೊಡಲು ಹೇಳಿದ್ದಾರಂತೆ. ಶೇ.7%ಜನ ಹಳ್ಳಿಗಳಲ್ಲಿ ವಾಸಿಸುವ ಭಾರತದಲ್ಲಿ, ಪ್ರಧಾನಿಯವರ ಈ ಮಾತುಗಳು ತಲುಪಿದ್ದು ಎಷ್ಟು ಜನರನ್ನು ಎಂಬ ಪ್ರಶ್ನೆ ಒಂದೆಡೆಯಾದರೆ,ದೇಶದಲ್ಲಿರುವ ಅಂದಾಜು 103 ಕೋಟಿ ಮೊಬೈಲ್ ಫೋನುಗಳನ್ನು ಬಳಸುತ್ತಿರುವವರು ನೂರಕ್ಕೆ 81%ಮಂದಿ ಮಾತ್ರ. ಅಂದರೆ, ಇನ್ನೂ 30-40 ಕೋಟಿ ಮಂದಿಯ ಕೈನಲ್ಲಿ ಮೊಬೈಲ್ ಫೋನ್ ಇಲ್ಲ.

ಬ್ಯಾಂಕ್ ಅಕೌಂಟ್‌ಗಳ ಲೆಕ್ಕ ತೆಗೆದರೆ, 2011ರ ತನಕ ಶೇ.35%ಇದ್ದ ಬ್ಯಾಂಕ್ ಅಕೌಂಟ್ ಗಳ ಪ್ರಮಾಣ ಈಗ ಜನಧನ್ ಯೋಜನೆಯ ಬಳಿಕ ಶೇ.53% ಗೆ ಏರಿದೆ. ಅಂದರೆ,ಇನ್ನೂ ಅಂದಾಜು 50-60ಕೋಟಿ ಜನರ ಕೈನಲ್ಲಿ ಬ್ಯಾಂಕ್ ಅಕೌಂಟ್‌ಗಳೇ ಇಲ್ಲ.

ಸರಕಾರ ಒದಗಿಸಿರುವ ಆಧಾರ್ ಕಾರ್ಡ್‌ಗಳ ಲೆಕ್ಕ ತೆಗೆದುಕೊಳ್ಳಿ. ಸರಕಾರದ ಲೆಕ್ಕಾಚಾರಗಳ ಪ್ರಕಾರ ದೇಶದ 108ಕೋಟಿ ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆ.ಅಂದರೆ ಇಲ್ಲೂ ಅಂದಾಜು 25 ಕೋಟಿ ಜನ ಹೊರಗುಳಿದಿದ್ದಾರೆ.
ಈ ಎಲ್ಲ ಸ್ಟಾಟಿಸ್ಟಿಕ್ಸ್‌ಗಳು ಒಟ್ಟಾಗಿ ಹೇಳುವುದು ಏನೆಂದರೆ, 135ಕೋಟಿ ಜನರ ಭಾರತದೊಳಗೆ ಇನ್ನೊಂದು 40-50ಕೋಟಿ ಜನರ ಭಾರತ ಇದ್ದು,ಅವರು ಇನ್ನೂ ಇದ್ಯಾವುದೂ ಕಟ್ಟುಗಳೊಳಗೆ ಸಿಕ್ಕಿಲ್ಲ ಎಂದೇ. ಸರಕಾರದ ಲೆಕ್ಕದಿಂದ ಎಲ್ಲ ಹಾದಿಗಳಲ್ಲೂ ಹೊರಗುಳಿದಿರುವ ಈ ಭಾರತ ಯಾರಿಗೆ ಸೇರಿದ್ದು?

ಅಗ್ನಿ ಪರೀಕ್ಷೆಗೆ ದಿನ ಬಂತು!
ನೋಟು ರದ್ದತಿಯ ಬಳಿಕದ ಕೇಂದ್ರ ಸರಕಾರ ಎದುರಿಸಬೇಕಾಗಿರುವ ಮೊದಲ ಅಗ್ನಿಪರೀಕ್ಷೆಯ ದಿನ ಹತ್ತಿರವಾಗುತ್ತಿದೆ. ದೇಶದಾದ್ಯಂತ ನಗದು ಸರಬರಾಜು ತೀರಾ ಕುಂಟು ನಡೆಯಲ್ಲಿರುವುದು,ಮಧ್ಯಾಹ್ನಕ್ಕೆ ಮೊದಲೇ ಬ್ಯಾಂಕುಗಳು-ಎಟಿಎಮ್ಗಳು ಕಾಸು ಖಾಲಿ ಮಾಡಿಕೊಂಡು ಕೈ ಎತ್ತುತ್ತಿರುವುದು ಅವ್ಯಾಹತವಾಗಿ ನಡೆಯುತ್ತಲೇ ಇದೆ.

ಈಗ ನಾಡಿದ್ದು, ಡಿಸೆಂಬರ್ ಒಂದರಿಂದ ಒಂದು ವಾರ ನೌಕರ ವರ್ಗದವರಿಗೆ ಸಂಬಳದ ದಿನಗಳು ಬರಲಿವೆ. ದೇಶದಾದ್ಯಂತ ದುಡಿಯುವ, ಮಧ್ಯಮ ವರ್ಗದವರು ತಮಗೆ ನಗದಾಗಿ ಸಿಗುವ ಅಥವಾ ತಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುವ ಸಂಬಳದ ದುಡ್ಡಿಗಾಗಿ ಕಾಯುತ್ತಿದ್ದಾರೆ.ಆ ದುಡ್ಡು ನಗದಾಗಿ ಸಿಕ್ಕಿದರೆ ಮಾತ್ರ ಅವರ ತಿಂಗಳ ರೇಷನ್, ತರಕಾರಿ, ಹಾಲು ಮನೆಗೆ ಬರುವುದು. ಮನೆ ಬಾಡಿಗೆ,ವಿದ್ಯುತ್ ಬಿಲ್ಲು, ನೀರಿನ ಬಿಲ್ಲು, ಫೋನ್ ಬಿಲ್ಲು ಪಾವತಿ ಆಗುವುದು. ಈ ಖರ್ಚುಗಳಲ್ಲಿ ಮುಕ್ಕಾಲು ಭಾಗ ನಗದಾಗಿಯೇ ನಡೆಯುವುದು. ಅಂದಹಾಗೆ ಈ ಪಾವತಿಗಾಗಿ ಬೇಕಾಗುವ ದುಡ್ಡು ಎಷ್ಟು ಗೊತ್ತೇ?ಅಂದಾಜು ಐದರಿಂದ ಆರು ಲಕ್ಷ ಕೋಟಿ ರೂಪಾಯಿಗಳು. ಬೇರೆಲ್ಲಾ ಬಿಡಿ. ಬರಿಯ ಕೇಂದ್ರ ಸರಕಾರಿ ನೌಕರರ ಸಂಬಳವೇ ಅಂದಾಜು ಒಂದೂವರೆ ಲಕ್ಷ ಕೋಟಿ.

ಈ ಸವಾಲಿಗೆ ಕೇಂದ್ರ ಸರಕಾರ, ರಿಸರ್ವ್ ಬ್ಯಾಂಕ್ ಎಷ್ಟು ಸನ್ನದ್ಧ ಎಂಬ ವಿಚಾರ, ಕಳೆದ 15 ದಿನಗಳಲ್ಲಿ ಆಗಿರುವ ಚಟುವಟಿಕೆಗಳನ್ನು ಗಮನಿಸಿದರೆ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತಿದೆ. ಇದೆಲ್ಲ ಮಾಡಲಾಗದ್ದಲ್ಲ. ಆದರೆ ಬೇಕಾದಷ್ಟು ಪೂರ್ವ ತಯಾರಿ ಇಲ್ಲದೆ ಮಾಡಲಾಗುವಂತಹದೂ ಅಲ್ಲ.

ಕಾರ್ಡ್ ಸ್ವೈಪ್ ಮಾಡುವ, ಇಲೆಕ್ಟ್ರಾನಿಕ್ ವಾಲೆಟ್ ಬಳಸುವ, ಮೊಬೈಲ್ ಮೂಲಕ ಪಾವತಿ ಮಾಡುವ ಸಲಹೆಗಳು ಆಕರ್ಷಕ ಅನ್ನಿಸಿದರೂ ಊಟಕ್ಕಿಲ್ಲದ ಉಪ್ಪಿನಕಾಯಿಗಳೇ.ಸಣ್ಣ ಸಣ್ಣ ಊರುಗಳಲ್ಲಿ ಕಾರ್ಡ್ ಸ್ವೈಪ್ ಮಾಡುವ ಸಾಧನಗಳಿರುವ ಅಂಗಡಿಗಳ ಪ್ರಮಾಣವೇ ಶೇ.10-20. ಮೇಲಾಗಿ ಹೊಸ ಸ್ವೈಪ್ ಸಾಧನಗಳಿಗಾಗಿ ಎದ್ದಿರುವ ಬೇಡಿಕೆ ಪೂರೈಸಲು ಬ್ಯಾಂಕ್‌ಗಳಾಗಲಿ ಸ್ವೈಪ್ ಸಾಧನ ತಯಾರಿಸುವ ಸಂಸ್ಥೆಗಳಾಗಲಿ ಸಜ್ಜಾದಂತಿಲ್ಲ. ಹಾಗಾಗಿ ಅಲ್ಲೂ ಸರದಿ ಸಾಲು ಆರಂಭವಾಗಿದೆ.

ನೋಟು ರದ್ದತಿಗೆ ಪೂರ್ವ ತಯಾರಿ ಇರಲಿಲ್ಲ ಎಂದರೆ,ಗಂಟು ಕಳ್ಳರಿಗೆ ಪೂರ್ವ ತಯಾರಿ ಅವಕಾಶ ಕೊಡುವಂತಿರಲಿಲ್ಲ ಎನ್ನುತ್ತಿದೆ ಸರಕಾರ. ಸರಿ.ಗಂಟುಕಳ್ಳರ ಬೆನ್ನುಹತ್ತಿ.ಆದರೆ, ಒಪ್ಪೊತ್ತಿನ ಗಂಜಿಗೆ ಚಡಪಡಿಸುತ್ತಿರುವವರ ನೆನಪು ಬಿಡಬೇಡಿ. ಅವರೂ ಭಾರತ, ಅವರೇ ಭಾರತ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News