ಥಿಯೇಟರ್ ಗೆ ಕಡ್ಡಾಯ ಮಾಡಿದ ರಾಷ್ಟ್ರಗೀತೆ ನ್ಯಾಯಾಲಯಕ್ಕೆ ಬೇಡ ಎಂದ ಸುಪ್ರೀಂ ಕೋರ್ಟ್ !

Update: 2016-12-02 07:37 GMT

ಹೊಸದಿಲ್ಲಿ, ಡಿ.2: ದೇಶದ ನ್ಯಾಯಾಲಯಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

 ದೇಶದ ಎಲ್ಲ ಕೋರ್ಟ್‌ಗಳ ಕಾರ್ಯಕಲಾಪ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ತಾನು ಈ ಹಿಂದೆ ನೀಡಿದ್ದ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಆದೇಶವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿತು. ‘ಸರಿಯಾದ ಅರ್ಜಿ’ಯನ್ನು ಸಲ್ಲಿಸುವಂತೆ ವಕೀಲರಿಗೆ ಸೂಚಿಸಿತು.

ದೇಶದ ಎಲ್ಲ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದ ಎರಡು ದಿನಗಳ ಬಳಿಕ ಈ ತೀರ್ಪು ಹೊರ ಬಂದಿದೆ.

ದೇಶದ ಎಲ್ಲ ಸಿನೆಮಾ ಮಂದಿರಗಳಲ್ಲಿ ಪ್ರತಿ ಸಿನೆಮಾ ಪ್ರದರ್ಶನದ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ನುಡಿಸಬೇಕು. ಸಿನೆಮಾ ಪರದೆಯಲ್ಲಿ ರಾಷ್ಟ್ರಧ್ವಜವಿರಬೇಕು. ರಾಷ್ಟ್ರಗೀತೆ ನುಡಿಯುತ್ತಿದ್ದಾಗ ಎದ್ದುನಿಂತು ಗೌರವ ನೀಡುವುದು ಎಲ್ಲರ ಕರ್ತವ್ಯ ಎಂದು ಜಸ್ಟಿಸ್ ದೀಪಕ್ ಮಿಶ್ರಾ ಹಾಗೂ ಅಮಿತಾವ ರಾಯ್ ಅವರಿದ್ದ ದ್ವಿಸದಸ್ಯ ಪೀಠ ಎರಡು ದಿನಗಳ ಹಿಂದೆ ಆದೇಶ ನೀಡಿತ್ತು. ಸುಪ್ರೀಂಕೋರ್ಟ್‌ನ ಈ ಆದೇಶ ದೇಶದ ಗಮನ ಸೆಳೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News