ಬಿಸಿಸಿಐ ಎಡವಟ್ಟಿನಿಂದ ಏಳು ಯುವ ಕ್ರಿಕೆಟಿಗರ ಕನಸು ಭಗ್ನ!

Update: 2016-12-02 09:40 GMT

ಹೊಸದಿಲ್ಲಿ, ಡಿ.2: ಬಿಸಿಸಿಐ ಮಾಡಿರುವ ಎಡವಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಅಂಡರ್-19 ಯೂತ್ ಏಷ್ಯಾ ಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಬಣ್ಣದ ಉಡುಪು ಧರಿಸಿ ಆಡಬೇಕೆಂಬ ಏಳು ಯುವ ಆಟಗಾರರ ಕನಸು ಭಗ್ನಗೊಂಡಿದೆ.

ಏಷ್ಯಾಕಪ್ ಗೆ ಈಗಾಗಲೇ ಆಯ್ಕೆ ಮಾಡಿರುವ 15 ಸದಸ್ಯರ ತಂಡದಲ್ಲಿ ಏಳು ಆಟಗಾರರು ಆಯ್ಕೆಗೆ ಅನರ್ಹರಾಗಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ.

ಶುಕ್ರವಾರದಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಪೂರ್ವಸಿದ್ಧತೆ ಶಿಬಿರದಲ್ಲಿ ಅಂಡರ್-19 ತಂಡ ಭಾಗವಹಿಸಬೇಕಾಗಿತ್ತು. ಆದರೆ, ಒಂದು ದಿನ ಮುಂಚಿತವಾಗಿ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಏಳು ಆಟಗಾರರು ಆಯ್ಕೆಯ ಮಾನದಂಡವನ್ನು ಹೊಂದಿಲ್ಲ. ಹಾಗಾಗಿ ಅವರು ಶ್ರೀಲಂಕಾಕ್ಕೆ ತೆರಳುವುದಿಲ್ಲ ಎಂದು ಮಾಹಿತಿ ನೀಡಿದೆ.

ಬಿಸಿಸಿಐ ಅಂಡರ್-19 ತಂಡದ ಆಯ್ಕೆಯ ವೇಳೆ ಆಟಗಾರರ ಜನ್ಮದಿನದ ಬಗ್ಗೆ ಮಾಡಿರುವ ಎಡವಟ್ಟು ಇಷ್ಟೇಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ. ಬಿಸಿಸಿಐ 1997ರಲ್ಲಿ ಜಯಿಸಿರುವ ಆಟಗಾರರು ಆಯ್ಕೆಗೆ ಅರ್ಹರು ಎಂದು ಭಾವಿಸಿತ್ತು. ಆದರೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿಯಮದ ಪ್ರಕಾರ 1-9-1998ರಲ್ಲಿ ಜನಿಸಿರುವ ಆಟಗಾರರು ಮಾತ್ರ ಟೂರ್ನಿಯಲ್ಲಿ ಆಡಲು ಅರ್ಹರಾಗುತ್ತಾರೆ ಎಂದು ಮೊದಲೇ ಮಾಹಿತಿ ನೀಡಿತ್ತು.

ಆಯ್ಕೆಗಾರರ ಸಮಿತಿ ಸದಸ್ಯ, ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿ ತಪ್ಪು ಮಾಹಿತಿ ನೀಡಿರುವ ಕಾರಣ ಡಿ.13 ರಿಂದ ಕೊಲಂಬೊದಲ್ಲಿ ಆರಂಭವಾಗಲಿರುವ ಟೂರ್ನಿಗೆ ಆಯ್ಕೆಯಾಗಿದ್ದ ಏಳು ಆಟಗಾರರು ಇದೀಗ ಅನರ್ಹರಾಗಿದ್ದಾರೆ.

‘‘ಇದೊಂದು ದೊಡ್ಡ ಪ್ರಮಾದ. ಅದೃಷ್ಟವಶಾತ್ ಅದು ಈಗಲೇ ನಮ್ಮ ಗಮನಕ್ಕೆ ಬಂದಿದೆ. ಶ್ರೀಲಂಕಾಕ್ಕೆ ತೆರಳಿದ ಬಳಿಕ ಇದು ಗೊತ್ತಾಗಿದ್ದರೆ ಸಮಸ್ಯೆಯಾಗುತ್ತಿತ್ತು. ಆಯ್ಕೆಗಾರರು ಈ ಬಗ್ಗೆ ಮಾಹಿತಿ ನೀಡಿದ ತಕ್ಷಣ ಬದಲಿ ಏಳು ಆಟಗಾರರನ್ನು ಆಯ್ಕೆ ಮಾಡಲಾಗಿದೆ’’ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

  ಬಿಸಿಸಿಐಗೆ ತನ್ನ ತಪ್ಪಿನ ಅರಿವಾದ ಬಳಿಕ ಪತ್ರಿಕಾ ಹೇಳಿಕೆಯನ್ನು ನೀಡುವ ಗೋಜಿಗೆ ಹೋಗದೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬದಲಿ ಆಟಗಾರರ ಹೆಸರನ್ನು ಹಾಕಿದೆ.

 ಕೊನೆಯ ಕ್ಷಣದಲ್ಲಿ ಅವಕಾಶ ವಂಚಿತರಾದ ಏಳು ಆಟಗಾರರುಗಳೆಂದರೆ: ಆರಂಭಿಕ ಬ್ಯಾಟ್ಸ್‌ಮನ್ ಸಂದೀಪ್ ಥೋಮರ್(ಉತ್ತರಪ್ರದೇಶ), ದಿಗ್ವಿಜಯ್ ರಂಗಿ(ಹಿಮಾಚಲಪ್ರದೇಶ), ಡರಿಲ್ ಫೆರೆರೋ(ಕೇರಳ), ರಿಷಭ್ ಭಗತ್(ಪಂಜಾಬ್), ಸಿಮರ್‌ಜಿತ್ ಸಿಂಗ್(ದಿಲ್ಲಿ), ಇಝಾನ್ ಸೈಯದ್(ಮಹಾರಾಷ್ಟ್ರ) ಹಾಗೂ ಚಂದನ್ ಸಹಿನಿ(ಹೈದರಾಬಾದ್).

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂದೀಪ್ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ವೀಸಾ ಹಾಗೂ ಪಾಸ್‌ಪೋರ್ಟ್ ಸಹಿತ ಎಲ್ಲ ವಿಧಾನವನ್ನು ಪೂರೈಸಿದ್ದರು.ಆದರೆ, ಕೇವಲ 8 ದಿನವಿರುವಾಗ ಟೂರ್ನಿಯಿಂದ ವಂಚಿತವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಬದಲಿ ಆಟಗಾರರಾಗಿ ಹಿಮಾಂಶು ರಾಣಾ, ಸಲ್ಮಾನ್ ಖಾನ್, ಹಾರ್ವಿಕ್ ದೇಸಾಯಿ, ಯಶ್ ಠಾಕೂರ್, ಹೆರಂಬ್ ಪರಬ್, ವಿವೇಕಾನಂದ ತಿವಾರಿ ಹಾಗೂ ಹೀತ್ ಪಟೇಲ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News