ಈಶ್ವರಪ್ಪ ‘ಬ್ರಿಗೇಡ್’ಗೆ ಬಿಜೆಪಿ ಎಚ್ಚರಿಕೆ

Update: 2016-12-04 15:32 GMT

ಬೆಂಗಳೂರು, ಡಿ.4: ರಾಯಣ್ಣ ಬ್ರಿಗೇಡ್‌ನಲ್ಲಿ ಭಾಗವಹಿಸುವ ಬಿಜೆಪಿ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮರುಳಿಧರ ರಾವ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ನೇತೃತ್ವದಲ್ಲಿ ಹಿಂದುಳಿದ ಸಮುದಾಯದ ಸಮಾವೇಶ ಮಾಡಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮತ್ತೊಂದು ಹಿಂದುಳಿದವರ ಸಮಾವೇಶ ಮಾಡಬಾರದೆಂದು ಅವರು ಸೂಚಿಸಿದರು.

ಬಿಜೆಪಿ ತತ್ವ ಸಿದ್ದಾಂತಗಳ ಮೇಲೆ ರಾಜ್ಯ ಬಿಜೆಪಿ ನಾಯಕರಿಗೆ ಗೌರವವಿದೆ ಎಂದು ಭಾವಿಸಿದ್ದೇನೆ. ಈ ಹಿನ್ನೆಲೆಯಲ್ಲಿ ರಾಯಣ್ಣ ಬಿಗ್ರೆಡ್‌ನಲ್ಲಿ ಬಿಜೆಪಿ ನಾಯಕರು ಗುರುತಿಸಿಕೊಳ್ಳಬಾರದು. ಯಾರಾದರು ಗುರುತಿಸಿಕೊಳ್ಳಲು ಮುಂದಾದರೆ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಸಂಘಟನೆಗಾಗಿ ಪಕ್ಷದಲ್ಲಿ ಒಬಿಸಿ ಮೋರ್ಚಾ ಇದೆ. ಈ ಮೋರ್ಚಾದ ಅಡಿಯಲ್ಲೆ ಎಲ್ಲರೂ ಹಿಂದುಳಿದ ವರ್ಗಗಳ ಸಂಘಟನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸೇರಿದಂತೆ ಬೇರೆ ಯಾವ ಸ್ವಯಂ ಸೇವಾ ಸಂಸ್ಥೆಗಳು ಸಂಘಟನೆಗಳ ಮೂಲಕ ಹಿಂದುಳಿದವರ ಸಂಘಟನೆಗೆ ಪಕ್ಷ ಬೆಂಬಲಿಸುವುದಿಲ್ಲ ಎಂದು ಮುರಳಿಧರ ರಾವ್ ಹೇಳಿದರು.

ಕಪ್ಪುಹಣದ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಕಪ್ಪುಹಣದ ವಿರುದ್ಧ ನಡೆದಿರುವ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ನಗದು ರಹಿತ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News