ಗರ್ಭನಿರೋಧಕ ಚುಚ್ಚುಮದ್ದು: ಹೆಚ್ಚಿದ ಮಹಿಳಾ ಹಕ್ಕು ಚರ್ಚೆಯ ಸದ್ದು

Update: 2016-12-04 18:12 GMT

ಜನಸಾಮಾನ್ಯರಿಗೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯಡಿ ಗರ್ಭನಿರೋಧಕ ಚುಚ್ಚುಮದ್ದು ಉಚಿತವಾಗಿ ಲಭ್ಯವಾಗುವಂತೆ ಭಾರತ ಸರಕಾರ ವ್ಯವಸ್ಥೆ ಮಾಡಿದೆ. ಇದು ವಿಶ್ವದ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಆಯ್ಕೆಗಳ ಬಗ್ಗೆ ವಿಸ್ತೃತ ಚರ್ಚೆಗೆ ಕಾರಣವಾಗಿದೆ.

ಈ ವಿವಾದಾಸ್ಪದ ಗರ್ಭನಿರೋಧಕವು ಡ್ರಗ್ ಡಿಪೋಟ್ ಮೆಡ್ರಾಕ್ಸಿಪ್ರೊಜೆಸ್ಟಿರಾನ್ ಅಸಿಟೇಟ್ (ಡಿಪಿಎಂಎ)ಎಂಬ ರಾಸಾ ಯನಿಕವನ್ನು ಒಳಗೊಂಡಿದ್ದು, ಇದನ್ನು ಪ್ರಾಥಮಿಕ ಹಾಗೂ ಜಿಲ್ಲಾಮಟ್ಟದಲ್ಲಿ ಇದೀಗ ಪರಿಚಯಿಸಲಾಗುತ್ತಿದೆ. ಇದು ಚುಚ್ಚು ಮದ್ದಿನ ರೂಪದಲ್ಲಿ ಲಭ್ಯವಾಗಲಿದೆ. ಇದು ಮಹಿಳೆಯರ ಗರ್ಭ ಕಂಠದ ದ್ರವವನ್ನು ಹೆಚ್ಚು ದಪ್ಪಗೊಳಿಸಿ, ವೀರ್ಯಾಣುವು ಅಂಡಾಣು ಜತೆ ಸಂಯೋಗ ಹೊಂದದಂತೆ ತಡೆಯುತ್ತದೆ. ಈ ಮೂಲಕ ಇದು ಗರ್ಭಧಾರಣೆಯನ್ನು ತಡೆಗಟ್ಟುತ್ತದೆ. ದೇಶಾದ್ಯಂತ ಲಭ್ಯವಿರುವ ಇತರ ಗರ್ಭನಿರೋಧಕಗಳಿಗಿಂತ ಇದು ಅಗ್ಗವೂ ಆಗಿದೆ.
ಕಳೆದ ಎರಡು ದಶಕಗಳಿಂದ ಹಲವು ದೇಶಗಳಲ್ಲಿ ಇಂಥ ಚುಚ್ಚುಮದ್ದು ರೂಪದ ಗರ್ಭನಿರೋಧಕ ಬಳಕೆಯಲ್ಲಿದೆ. 1990ರ ದಶಕದಿಂದೀಚೆಗೆ ಭಾರತದಲ್ಲೂ ಸರಕಾರಿ ಆಸ್ಪತ್ರೆಗಳಲ್ಲಿ ಇಲ್ಲದಿದ್ದರೂ, ಖಾಸಗಿ ವಲಯದಲ್ಲಿ ಇದು ಲಭ್ಯವಿದೆ. ಸರಕಾರಿ ವ್ಯವಸ್ಥೆಯಲ್ಲಿ ಇದು ಲಭ್ಯವಾಗುವುದರಿಂದ ಮಹಿಳೆಯರಿಗೆ ಹೆಚ್ಚಿನ ಸ್ವಾಯತ್ತತೆ ಹಾಗೂ ಆಯ್ಕೆಯ ಅವಕಾಶ ಸಿಗುತ್ತದೆ ಎನ್ನುವುದು ಈ ಗರ್ಭನಿರೋಧಕದ ಪ್ರತಿಪಾದಕರ ವಾದ. ಜತೆಗೆ ಇದು ದೇಶದಲ್ಲಿ ಆತಂಕಕಾರಿ ಪ್ರಮಾಣದಲ್ಲಿರುವ ಹೆರಿಗೆ ಸಾವಿನ ದರವನ್ನೂ ಕಡಿಮೆ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಶ್ವ ಆರೋಗ್ಯಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ಗಂಟೆಗೆ ಐದು ಮಂದಿ ಮಹಿಳೆಯರು ಹೆರಿಗೆ ಸಂದರ್ಭದ ಸಂಕೀರ್ಣತೆಗಳಿಂದ ಅಸು ನೀಗುತ್ತಿದ್ದಾರೆ. ವಾರ್ಷಿಕ 45 ಸಾವಿರ ಮಹಿಳೆಯರು ಹೆರಿಗೆ ವೇಳೆ ಉಲ್ಬಣಿಸುವ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಜಗತ್ತಿನಲ್ಲಿ ಸಂಭವಿಸುವ ಒಟ್ಟು ಹೆರಿಗೆ ಸಾವಿನ ಪೈಕಿ ಭಾರತದ ಪಾಲು ಶೇ. 17ರಷ್ಟು. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಚುಚ್ಚುಮದ್ದು ರೂಪದ ಗರ್ಭನಿರೋಧಕವನ್ನು ಬೆಂಬಲಿಸಿದೆ. ಇದು ಗುಣಮಟ್ಟದ ಔಷಧ ಹಾಗೂ ಅನಪೇಕ್ಷಿತ ಗರ್ಭಧಾರಣೆ ತಡೆಯುವಲ್ಲಿ ಪ್ರಯೋಜನಕಾರಿ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಆದರೆ ಭಾರತದ ನಾಗರಿಕ ಸಮಾಜದಲ್ಲಿ ಮಾತ್ರ ಈ ಬಗ್ಗೆ ಒಮ್ಮತವಿಲ್ಲ. ಪಾಪ್ಯುಲೇಶನ್ ಫೌಂಡೇಷನ್ ಆಫ್ ಇಂಡಿಯಾ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದಂಥ ಸಂಘಟನೆಗಳು ಸರಕಾರದ ನಡೆಯನ್ನು ಬೆಂಬಲಿಸಿವೆ. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಅತ್ಯುನ್ನತ ಸಂಸ್ಥೆಯಾಗಿರುವ ಫೆಡರೇಷನ್ ಆಫ್ ಅಬ್‌ಸ್ಟ್ರಾಟಿಕ್ ಆ್ಯಂಡ್ ಗೈನಕಾಲಜಿಕಲ್ ಸೊಸೈಟಿ ಆಫ್ ಇಂಡಿಯಾ ಕೂಡಾ ವೈಜ್ಞಾನಿಕ ಲಾಭದ ಹಿನ್ನೆಲೆಯಲ್ಲಿ ಇದಕ್ಕೆ ಬೆಂಬಲ ಸೂಚಿಸಿವೆ.
ಆದರೆ ರಾಷ್ಟ್ರೀಯ ಕಾರ್ಯಕ್ರಮದ ಅಂಗವಾದ ಈ ನಡೆಯನ್ನು ಮಹಿಳಾ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದಾರೆ. ದೇಶದ ಪ್ರಮುಖ ಔಷಧ ಸಂಸ್ಥೆಯಾದ ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (ಡಿಟಿಎಬಿ) ವರದಿಯನ್ನು ಇವರು ಉಲ್ಲೇಖಿಸುತ್ತಾರೆ. ಈ ವರದಿಯ ಪ್ರಕಾರ ಡಿಪಿಎಂಎ ಬಳಕೆ ಮಹಿಳೆಯರ ಎಲುಬು ಶಿಥಿಲಕ್ಕೆ ಕಾರಣವಾಗುತ್ತದೆ. ಈ ಚುಚ್ಚುಮದ್ದಿನ ಆಸ್ಪಿಯೊಪೊರಾಟಿಕ್ (ಅಸ್ಥಿರಂಧ್ರತೆ)ಪರಿಣಾಮವು ಈ ಚುಚ್ಚುಮದ್ದು ನೀಡುವುದು ನಿಲ್ಲಿಸಿದ ಬಳಿಕವೂ ದೀರ್ಘ ಅವಧಿಯ ವರೆಗೆ ಇರುತ್ತದೆ. ಇದರ ಪರಿಣಾಮವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ದೇಶದ ಪ್ರಸೂತಿ ತಜ್ಞರ ಜತೆ ವಿಸ್ತೃತವಾಗಿ ಚರ್ಚೆ ನಡೆಸದೆ ಇದನ್ನು ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಸೇರಿಸಬಾರದು ಎಂದು ಡಿಟಿಎಬಿ ಸಲಹೆ ಮಾಡಿತ್ತು.
ಈ ಚುಚ್ಚುಮದ್ದು ರೂಪದ ಗರ್ಭನಿರೋಧಕಕ್ಕೆ ಅನುಮೋದನೆ ನೀಡಿರುವುದರ ವಿರುದ್ಧ ಹಲವು ಆರೋಗ್ಯ ಕಾರ್ಯಕರ್ತರ ಗುಂಪು ಗಳು, ಮಹಿಳಾ ಸಂಘಟನೆಗಳು ಹಾಗೂ ಜನರ ಜಾಲಗಳು ಜಂಟಿ ಹೇಳಿಕೆ ನೀಡಿವೆ. 1986ರಷ್ಟು ಹಿಂದೆಯೇ ಭಾರತದ ಮಹಿಳಾ ಸಂಘಟನೆಗಳು ಇಂಥ ಚುಚ್ಚುಮದ್ದು ರೂಪದ ಗರ್ಭನಿರೋಧಕದ ಗಂಭೀರ ಸಮಸ್ಯೆಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದವು. ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನದ ಆಧಾರದಲ್ಲಿ ಮಹಿಳಾ ಸಂಘಟನೆಗಳು ವಾದ ಮಂಡಿಸಿದ್ದವು.
ಮಹಿಳಾ ಆರೋಗ್ಯ ಮತ್ತು ಪುನರುತ್ಪತ್ತಿ ಹಕ್ಕುಗಳ ಪ್ರತಿಪಾದಕರು ಹೇಳುವಂತೆ, ಇದರ ದೀರ್ಘಾವಧಿ ಬಳಕೆಯು ಮಹಿಳೆಯರ ಋತುಸ್ರಾವ, ಅಮೆನೋರಿಯಾ, ಎಲುಬಿನ ವಿಖನಿಜೀಕರಣ (ಡಿಮಿನರಲೈಸೇಷನ್) ಮೇಲೆ ಪರಿಣಾಮ ಬೀರುತ್ತದೆ. ಇದರ ಬಳಕೆಯಿಂದ ತೂಕ ಹೆಚ್ಚಳ, ತಲೆನೋವು, ಆಲಸ್ಯ, ಹೊಟ್ಟೆ ಉಬ್ಬರಿಸುವುದು, ಲೈಂಗಿಕ ನಿರಾಸಕ್ತಿ ಹಾಗೂ ಎಲುಬು ಸಾಂದ್ರತೆ ಕಡಿಮೆಯಂಥ ಸಮಸ್ಯೆಗಳೂ ವರದಿಯಾಗಿವೆ. ಇತ್ತೀಚಿನ ನಿದರ್ಶನವೆಂದರೆ, ಆಫ್ರಿಕಾದಲ್ಲಿ ಈ ಗರ್ಭನಿರೋಧಕ ಚುಚ್ಚುಮದ್ದು ಬಳಕೆಯಿಂದಾಗಿ ಕಾಂಡೋಮ್‌ಗಳನ್ನು ಬಳಸುವುದು ಕಡಿಮೆಯಾಗಿದೆ. ಇದರಿಂದಾಗಿ ಎಚ್‌ಐವಿ ಸೋಂಕು ತಗುಲುವ ಸಾಧ್ಯತೆ ಹೆಚ್ಚುತ್ತದೆ ಎನ್ನುವುದು ಈ ವರ್ಗದ ವಾದ.

ಆದಾಗ್ಯೂ ತಜ್ಞರು ಹೇಳುವಂತೆ ವಾಸ್ತವ ಸಮಸ್ಯೆ ಇರುವುದು ಮಹಿಳೆಯರ ಆರೋಗ್ಯದ ವಿಚಾರದಲ್ಲಲ್ಲ. ಕುಟುಂಬ ಯೋಜನೆಯ ಮಾನವಹಕ್ಕು ಆಧರಿತ ದೃಷ್ಟಿಕೋನದಲ್ಲಿ. ‘‘ಮಹಿಳೆಯರ ನಿರ್ದಿಷ್ಟ ಆಯ್ಕೆ ಸ್ವಾತಂತ್ರ್ಯದ ಲಭ್ಯತೆಯನ್ನು ನಾವೇಕೆ ನಿಯಂತ್ರಿಸಬೇಕು? ಈ ವಿಷಯದ ಬಗ್ಗೆ ಹೊಸ ಚರ್ಚೆ ಆರಂಭಿಸಲು ಇದು ಸಕಾಲವಲ್ಲವೇ?’’ ಎಂದು ಪಾಪ್ಯುಲೇಶನ್ ಫೌಂಡೇಷನ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕಿ ಪೂನಂ ಮುತ್ರೇಜಾ ಪ್ರಶ್ನಿಸುತ್ತಾರೆ.
ಇತರ ಎಲ್ಲ ವಿಷಯಗಳಲ್ಲಿ ಮಹಿಳೆಯರ ಆಯ್ಕೆಯ ಅವಕಾಶಗಳನ್ನು ಹೆಚ್ಚಿಸುತ್ತಿದ್ದು, ಮಹಿಳೆಯರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದರೆ, ಹಾರ್ಮೋನ್ ಆಧರಿತ ತಂತ್ರಜ್ಞಾನದ ಮೂಲಕ ಅವರ ಆಯ್ಕೆ ಹಕ್ಕನ್ನು ನಿಯಂತ್ರಿಸಲಾಗುತ್ತದೆ ಎಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ದೇಶದಲ್ಲಿ ಮೂಳೆ ಸವೆತ ಹಾಗೂ ವಿಟಮಿನ್ ಡಿ ಸಮಸ್ಯೆ ಈಗಾಗಲೇ ಆತಂಕಕಾರಿ ಪ್ರಮಾಣದಲ್ಲಿದ್ದು, ಡಿಪಿಎಂಎ ಬಳಕೆಯಿಂದ ಎಲುಬುಗಳ ಅ ಖನಿಜೀಕರಣ ಆಗುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ದೇಶದ ವಿವಾಹಿತ ಮಹಿಳೆಯರಲ್ಲಿ ಗರ್ಭನಿರೋಧಕ ಗಳ ಬಳಕೆ ಪ್ರಮಾಣ ಶೇ. 54.8ರಷ್ಟಿದೆ. ಈ ಪೈಕಿ ಶೇ. 48.2ರಷ್ಟು ಮಂದಿ ಆಧುನಿಕ ಕ್ರಮಗಳನ್ನು ಅನುಸರಿಸು ತ್ತಿದ್ದಾರೆ. ಇದು ನೆರೆಯ ಭೂತಾನ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗೆ ಹೋಲಿಸಿದರೆ ಕಡಿಮೆ. ಈ ದೇಶಗಳಲ್ಲಿ ಕ್ರಮವಾಗಿ ಶೇ.65.6, 61.2 ಹಾಗೂ 68.ರಷ್ಟು ವಿವಾಹಿತ ಮಹಿಳೆಯರು ಗರ್ಭನಿರೋಧಕ ಬಳಕೆ ಮಾಡುತ್ತಾರೆ.
ಭಾರತದಲ್ಲಿ ಕುಟುಂಬ ಯೋಜನೆಯ ಪ್ರಾಥಮಿಕ ವಿಧಾನವೆಂದರೆ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ. ಸುಮಾರು ಶೇ. 65.7ರಷ್ಟು ಮಂದಿ ಈ ವಿಧಾನ ಅನುಸರಿಸುತ್ತಿದ್ದು, ಇದು ವಿಶ್ವದಲ್ಲೇ ಅತ್ಯಧಿಕ. ಇದಕ್ಕೆ ಮುಖ್ಯ ಕಾರಣವೆಂದರೆ ದೇಶದ ಸಾರ್ವಜನಿಕ ಆರೋಗ್ಯ ವಲಯದಲ್ಲಿ ಹೆಚ್ಚಿನ ಗರ್ಭನಿರೋಧಕ ವಿಧಾನಗಳ ಲಭ್ಯತೆ ಇಲ್ಲದಿರುವುದು ಎನ್ನುವುದು ತಜ್ಞರ ಅಭಿಮತ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಬಡ ಮಹಿಳೆಯರು ಪರೀಕ್ಷಾರ್ಥ ಪ್ರಯೋಗಕ್ಕೆ ಗುರಿಯಾಗುವ (ಗಿನಿಪಿಗ್) ಅಪಾಯವಿದೆ ಎಂದೂ ಹೇಳಲಾಗುತ್ತಿದೆ.
‘‘ಮಹಿಳೆಯರ ಪುನರುತ್ಪತ್ತಿ ಆರೋಗ್ಯವು ನಿರಂತರವಾಗಿ ನೈತಿಕ ವಿಷಯಗಳು, ಒಪ್ಪಿಗೆ ಹಾಗೂ ಜಾಗತಿಕ ಔಷಧ ಕಂಪೆನಿಗಳ ಮತ್ತು ಶ್ರೀಮಂತ ದೇಶಗಳ ಬೇರೂರಿದ ಹಿತಾಸಕ್ತಿಗಳಿಂದ ಭರಿತವಾದ ಇತಿಹಾಸ’’ ಎಂದು ‘ವುಮನ್ ಪವರ್ ಕನೆಕ್ಟ್’ ಎಂಬ ಮಹಿಳಾ ಹಕ್ಕುಗಳ ಸಂಘಟನೆಯ ಸ್ವಯಂಸೇವಕಿ ಮುಕ್ತ ಪ್ರಭಾ ಅಭಿಪ್ರಾಯಪಡುತ್ತಾರೆ. ಈ ಕಾರಣದಿಂದ ಡಿಪಿಎಂಎ ಬಳಕೆಯ ಬಗ್ಗೆ ಎಚ್ಚರಿಕೆಯಿಂದ ಮುನ್ನಡೆಯುವುದು ಅಗತ್ಯ. ಈ ಮೂಲಕ ಮಹಿಳೆಯರಿಗೆ ಆಯ್ಕೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ, ಅವರ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಸಲಹೆ ನೀಡಬೇಕಾಗಿದೆ ಎಂದು ಸ್ಪಷ್ಟಪಡಿಸುತ್ತಾರೆ.
ಅನಪೇಕ್ಷಿತ ಗರ್ಭಧಾರಣೆ, ಅಸುರಕ್ಷಿತ ಗರ್ಭಪಾತ, ಹೆರಿಗೆ ಸಂದರ್ಭದ ಸಾವು ಹಾಗೂ ಜೀವನ ಪರ್ಯಂತ ಅನಾರೋಗ್ಯ ದಂಥ ಸಮಸ್ಯೆಗಳಿಂದ ಭಾರತೀಯ ಮಹಿಳೆಯರು ನರಳುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ, ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿಯ ಕೊರತೆ ಕೂಡಾ ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ. ಇದರ ಜತೆಗೆ ಭಾರತದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಇತಿಹಾಸ ಕೂಡಾ ಚೆನ್ನಾಗಿಲ್ಲ. ಉದಾಹರಣೆಗೆ 2014ರಲ್ಲಿ ಇಂಥ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಮಲಿನ ಉಪಕರಣಗಳನ್ನು ಬಳಸಿ ಹನ್ನೆರಡಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ.
ಈ ಬಗ್ಗೆ ಮಾಧ್ಯಮಗಳು ಧ್ವನಿ ಎತ್ತಿದ ಪರಿಣಾಮವಾಗಿ ಸರಕಾರ, ಹಲವು ವರ್ಷಗಳಿಂದ ಅನುಸರಿಸುತ್ತಲೇ ಬಂದ ಇಂಥ ಶಸ್ತ್ರಚಿಕಿತ್ಸೆ ಮೇಲಿನ ಅವಲಂಬನೆಯನ್ನು ಮರುಪರಿಶೀಲನೆ ಮಾಡಲು ಮುಂದಾಯಿತು. ಆದರೆ 2015-16ರಲ್ಲಿ ಮತ್ತೆ 110 ಸಾವುಗಳು ಲೋಪಯುಕ್ತ ಶಸ್ತ್ರಚಿಕಿತ್ಸೆ ಕಾರಣದಿಂದ ಸಂಭವಿಸಿದವು. ದೇಶದಲ್ಲಿ ಶಿಶು ಸಾವು ಪ್ರಮಾಣ ಅಧಿಕವಾಗಿರುವ ಕಾರಣ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಬಗ್ಗೆ ಮಹಿಳೆಯರು ಒಲವು ತೋರುತ್ತಿಲ್ಲ. ಮುಂದಿನ ಹಂತದಲ್ಲಿ ಮಕ್ಕಳನ್ನು ಪಡೆಯುವ ತಮ್ಮ ಆಯ್ಕೆ ಹಕ್ಕು ಕೂಡಾ ಇದರಿಂದ ಮೊಟಕುಗೊಳ್ಳುತ್ತದೆ ಎಂಬ ಭಾವನೆಯೂ ಅವರಲ್ಲಿದೆ. ಇಷ್ಟಾಗಿಯೂ 2014ರಲ್ಲಿ ದೇಶದಲ್ಲಿ 14 ಲಕ್ಷ ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಗೆ ಒಳಗಾದ ಪುರುಷರು ಕೇವಲ 5,004.
ಡಿಎಂಪಿಎಯ ಇನ್ನೂ ನಿಕೃಷ್ಟ ಅಂಶವೆಂದರೆ ಇದು ಕೇವಲ ಮಹಿಳೆಯರನ್ನೇ ಗುರಿಯಾಗಿಸಿರುವುದು. ಇದು ಲಿಂಗಸೂಕ್ಷ್ಮ ವಿಚಾರವೂ ಅಲ್ಲವೇ? ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಸುಲಭ ಹಾಗೂ ಅಪಾಯ ಸಾಧ್ಯತೆಯೂ ಕಡಿಮೆ. ಇದನ್ನು ಏಕೆ ಜನಪ್ರಿಯಗೊಳಿಸುತ್ತಿಲ್ಲ ಎನ್ನುವುದು ಮಹಿಳಾಪರ ಹೋರಾಟಗಾರರ ಪ್ರಶ್ನೆ.
ಪ್ರಭಾ ಅವರ ಮಾತಿನಲ್ಲೇ ಹೇಳುವುದಾದರೆ, ‘‘ಭಾರತದಲ್ಲಿ ಮಹಿಳೆ ಎಷ್ಟು ಮಕ್ಕಳನ್ನು ಹೊಂದಬೇಕು ಎನ್ನುವುದನ್ನು ನಿರ್ಧರಿಸು ವುದು ಪುರುಷರೇ ಆಗಿದ್ದರೂ, ಕುಟುಂಬ ಯೋಜನೆಯಲ್ಲಿ ಅವರ ಪಾಲ್ಗೊಳ್ಳುವಿಕೆ ನಗಣ್ಯ. ಪ್ರಸ್ತುತ ಚರ್ಚೆಯು ಪುರುಷರನ್ನು ಇದರಲ್ಲಿ ತೊಡಗಿಸಲು ಹಾಗೂ ಲಿಂಗ ತಾರತಮ್ಯವನ್ನು ನಿವಾರಿಸಲು ಒಳ್ಳೆಯ ಅವಕಾಶ’’
ಕೃಪೆ: thewire.in

Writer - ನೀತಾ ಲಾಲ್

contributor

Editor - ನೀತಾ ಲಾಲ್

contributor

Similar News