ಅಸಂಖ್ಯಾತ ಮಕ್ಕಳ ಬದುಕು ಹೈರಾಣ

Update: 2016-12-05 18:31 GMT

ಮಾಹಿತಿ ಹಕ್ಕು ಕಾಯ್ದೆಯಡಿ ಅಂಕಿ ಅಂಶಗಳನ್ನು ಪಡೆದು ತನಿಖೆ ಕೈಗೊಂಡಾಗ, ದೇಶದಲ್ಲಿ ಕಳೆದ ಏಳು ವರ್ಷಗಳಲ್ಲಿ 14,474 ಮಕ್ಕಳಿಗೆ ರಕ್ತಪೂರಣ ವೇಳೆ ಎಚ್‌ಐವಿ ಸೋಂಕು ತಗುಲಿರುವುದು ಬಹಿರಂಗವಾಗಿದೆ. ಆದರೆ ಭಾರತ ಸರಕಾರ ಇನ್ನೂ ಈ ವೈದ್ಯಕೀಯ ಸಂಕಷ್ಟದ ಸ್ಥಿತಿಯ ಬಗ್ಗೆ ಯಾವುದೇ ತನಿಖೆ ಅಥವಾ ಅಧ್ಯಯನ ಕೈಗೊಂಡಿಲ್ಲ. ಪರಿಣಾಮವಾಗಿ ಲಕ್ಷಾಂತರ ಮಂದಿಯ ಬದುಕು ಅಪಾಯದಲ್ಲಿದೆ.
ಅಷ್ಟು ಮಾತ್ರವಲ್ಲದೆ, ಕಳೆದ ಒಂದು ವರ್ಷದಲ್ಲಿ ಈ ಪ್ರಮಾಣ ಶೇ. 10ರಷ್ಟು ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ.

ನೀಳ, ಕೃಶ ಹಾಗೂ ಕಡುಬಣ್ಣದ 11ರ ಬಾಲಕ ಜೈಪ್ರಕಾಶ್ ಗಲ್ಲಿ ಕ್ರಿಕೆಟ್ ಮತ್ತು ಚಿಪ್ಸ್ ಪ್ರೇಮಿ. ಪಶ್ಚಿಮ ಗುಜರಾತ್‌ನ ಜುನಾಗಢದ ಈ ಬಾಲಕ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಪೋಷಕರ ಕಳವಳಕ್ಕೆ ಕಾರಣವಾಯಿತು, ಅಂತಿಮವಾಗಿ ಪುಟ್ಟ ಬಾಲಕ ಶಾಲೆ ತೊರೆಯಬೇಕಾಯಿತು. ಐದು ವರ್ಷದ ಹಿಂದೆ ಡಿಸೆಂಬರ್‌ನ ಒಂದು ಮುಂಜಾನೆ ಬಾಲಕನ ಮೂಗು ಹಾಗೂ ಬಾಯಿಯಿಂದ ರಕ್ತ ಸೋರಿತು. ಸ್ಥಳೀಯ ಸರಕಾರಿ ಆಸ್ಪತ್ರೆಯ ವೈದ್ಯರು, ಸುಮಾರು 100 ಕಿಲೋಮೀಟರ್ ದೂರದ ರಾಜ್‌ಕೋಟ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಮರುದಿನ ಮುಂಜಾನೆ ಬಾಲಕ ಕೊನೆಯುಸಿರೆಳೆದ.

ಒಂದು ವರ್ಷದ ಮಗುವಾಗಿದ್ದಾಗಲೇ ತಲ್ಸೇಮಿಯಾ ರೋಗ ತಗುಲಿದ್ದ ಈತನಿಗೆ ಸ್ಥಳೀಯ ಸಿವಿಲ್ ಆಸ್ಪತ್ರೆಯಲ್ಲಿ ರಕ್ತಪೂರಣ(ರಕ್ತ ವರ್ಗಾವಣೆ) ಮೂಲಕ ಎಚ್‌ಐವಿ ಸೋಂಕು ಹರಡಿರುವುದು ಬೆಳಕಿಗೆ ಬಂತು. ಇದು ಕೇವಲ ಈತನ ಉದಾಹರಣೆಯಲ್ಲ. ಇತರ 35 ಮಂದಿ ತಲ್ಸೇಮಿಯಾ ಪೀಡಿತ ಮಕ್ಕಳ ಕರುಣ ಕಥೆ. ಈ ಆಸ್ಪತ್ರೆಯಲ್ಲಿ ರಕ್ತಪೂರಣ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲ ಮಕ್ಕಳೂ ಈಗ ಎಚ್‌ಐವಿ ಸೋಂಕಿತರು. ಈ ಪೈಕಿ ಎಂಟು ಮಕ್ಕಳು ಮೃತಪಟ್ಟಿವೆ.
‘‘ನಮ್ಮೆಲ್ಲ ಸಂತೋಷವೂ ಮಕ್ಕಳ ಅಕಾಲಿಕ ಮರಣದೊಂದಿಗೆ ಮಣ್ಣುಪಾಲಾಯಿತು. ನಾವು ಈಗ ಯಾರಿಗಾಗಿ ಬದುಕಬೇಕು?’’ ಎನ್ನುವುದು ಜುನಾಗಢದ ದಿನಗೂಲಿ ನೌಕರ 50 ವರ್ಷದ ರಫೀಕ್ ರಾಣವ ಅವರ ಪ್ರಶ್ನೆ. ಇವರು ನತದೃಷ್ಟ ಜೈಪ್ರಕಾಶ್‌ನ ತಂದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಅಂಕಿ ಅಂಶಗಳನ್ನು ಪಡೆದು ತನಿಖೆ ಕೈಗೊಂಡಾಗ, ದೇಶದಲ್ಲಿ ಕಳೆದ ಏಳು ವರ್ಷಗಳಲ್ಲಿ 14,474 ಮಕ್ಕಳಿಗೆ ರಕ್ತಪೂರಣ ವೇಳೆ ಎಚ್‌ಐವಿ ಸೋಂಕು ತಗುಲಿರುವುದು ಬಹಿರಂಗವಾಗಿದೆ. ಆದರೆ ಭಾರತ ಸರಕಾರ ಇನ್ನೂ ಈ ವೈದ್ಯಕೀಯ ಸಂಕಷ್ಟದ ಸ್ಥಿತಿಯ ಬಗ್ಗೆ ಯಾವುದೇ ತನಿಖೆ ಅಥವಾ ಅಧ್ಯಯನ ಕೈಗೊಂಡಿಲ್ಲ. ಪರಿಣಾಮವಾಗಿ ಲಕ್ಷಾಂತರ ಮಂದಿಯ ಬದುಕು ಅಪಾಯದಲ್ಲಿದೆ.
ಅಷ್ಟು ಮಾತ್ರವಲ್ಲದೆ, ಕಳೆದ ಒಂದು ವರ್ಷದಲ್ಲಿ ಈ ಪ್ರಮಾಣ ಶೇ. 10ರಷ್ಟು ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆ. 2014-15ರಲ್ಲಿ 1,424 ಮಂದಿಗೆ ರಕ್ತಪೂರಣ ವೇಳೆ ಎಚ್‌ಐವಿ ಸೋಂಕು ತಗುಲಿದ್ದರೆ, 2015-16ರಲ್ಲಿ ಈ ಪ್ರಮಾಣ 1,559ಕ್ಕೆ ಹೆಚ್ಚಿದೆ ಎನ್ನುವುದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯಿಂದ ಆರ್‌ಟಿಐ ಮೂಲಕ ಪಡೆದ ದಾಖಲೆಗಳಿಂದ ತಿಳಿದುಬರುತ್ತದೆ.
ಹಿಂದಿನ ಐದು ವರ್ಷಗಳ ಕಾಲ ನಿರಂತರವಾಗಿ ಇಳಿಕೆ ಕಂಡ ಈ ಪ್ರಮಾಣ ಕಳೆದ ಒಂದು ವರ್ಷದಲ್ಲಿ ಶೇ. 10ರಷ್ಟು ಏರಿಕೆ ಕಂಡಿರುವುದು ನೈಜ ಆತಂಕಕ್ಕೆ ಕಾರಣವಾದ ಅಂಶ. ಆದರೂ ನ್ಯಾಕೊ ರಕ್ತ ಬ್ಯಾಂಕ್‌ಗಳ ಕುರಿತ ವರದಿಯಲ್ಲಿ ಈ ಹೆಚ್ಚಳ ಅಂಶವನ್ನು ಕಡೆಗಣಿಸಿದೆ. ‘‘ನಿರಂತರ ಪ್ರಯತ್ನ ಹಾಗೂ ಸಕ್ರಿಯ ಚಟುವಟಿಕೆಗಳಿಂದ ರಕ್ತಪೂರಣ ಮೂಲಕ ಸೋಂಕು ವರ್ಗಾವಣೆ ಕಳೆದ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.’’ ಎನ್ನಲಾಗಿದೆ.
‘‘ನ್ಯಾಕೊ ವರದಿಯು ದೇಶಾದ್ಯಂತ ಇರುವ ಸಮಗ್ರ ಸಲಹಾ ಹಾಗೂ ತಪಾಸಣಾ ಕೇಂದ್ರಗಳಲ್ಲಿ ಜನರು ಸ್ವಯಂ ಆಗಿ ವರದಿ ಮಾಡಿದ ಪ್ರಕರಣಗಳನ್ನು ಆಧರಿಸಿದ್ದು’’ ಎನ್ನುವುದನ್ನು ನ್ಯಾಕೊದ ರಕ್ತ ಸುರಕ್ಷತಾ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕಿ ಶೋಭಿಣಿ ರಾಜನ್ ಒಪ್ಪಿಕೊಳ್ಳುತ್ತಾರೆ. ‘‘1990ರ ದಶಕದಲ್ಲಿ ಶೇ. 15ರಷ್ಟು ಇದ್ದ ಪ್ರಮಾಣ ಇದೀಗ ಶೇ. 1ಕ್ಕಿಂತಲೂ ಕಡಿಮೆಯಾಗಿದೆ’’ ಎನ್ನುವುದು ಅವರ ಸಮರ್ಥನೆ.
ಅಭಿವೃದ್ಧ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂಥ ಪ್ರಕರಣ ಅಪರೂಪ. ಉದಾಹರಣೆಗೆ ಕೆನಡಾದಲ್ಲಿ 1986ರಿಂದೀಚೆಗೆ ಹಾಗೂ ಅಮೆರಿಕದಲ್ಲಿ 2008ರಿಂದೀಚೆಗೆ ರಕ್ತಪೂರಣ ಮೂಲಕ ಏಡ್ಸ್ ಸೋಂಕು ಹರಡಿರುವ ಒಂದು ಪ್ರಕರಣವೂ ವರದಿಯಾಗಿಲ್ಲ.
ಆದರೆ ಭಾರತದಲ್ಲಿ ಪ್ರತಿ 100 ಏಡ್ಸ್ ರೋಗಿಗಳ ಪೈಕಿ ಒಬ್ಬ ರಕ್ತಪೂರಣದ ವೇಳೆ ಸೋಂಕು ತಗುಲಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ 3 ಲಕ್ಷಕ್ಕೆ ಒಂದು ಎನ್ನುವುದನ್ನು ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಸಂಸ್ಥೆಯ ಅಂಕಿ ಅಂಶ ದೃಢಪಡಿಸುತ್ತದೆ. ಅಂದರೆ ಭಾರತದಲ್ಲಿ ರಕ್ತಪೂರಣ ಮೂಲಕ ಸೋಂಕು ಹರಡುವ ಸಾಧ್ಯತೆ, ಅಮೆರಿಕಕ್ಕಿಂತ 3000 ಪಟ್ಟು ಅಧಿಕ.
ಅಮೆರಿಕದಲ್ಲಿ 2008ರಿಂದ 2014ರವರೆಗೆ 3,12,860 ಎಚ್‌ಐವಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 2008ರಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ರಕ್ತಪೂರಣ ಮೂಲಕ ಸೋಂಕು ಹರಡಿದೆ ಎಂದು ಸಿಡಿಸಿ ಅಂಕಿ ಅಂಶ ವಿವರಿಸುತ್ತದೆ.

ಸರಕಾರಕ್ಕೆ ಮಾಹಿತಿ ಇಲ್ಲವೇ?
ಭಾರತದಲ್ಲಿ ವಿಚಿತ್ರವೆಂದರೆ ಸರಕಾರ ತನ್ನದೇ ಅಂಕಿ ಅಂಶಗಳನ್ನು ಅಲ್ಲಗಳೆಯುತ್ತಿದೆ. ‘‘ಇಷ್ಟೊಂದು ದೊಡ್ಡ ಸಂಖ್ಯೆಯ ಮಂದಿ ದೇಶಾದ್ಯಂತ ರಕ್ತಪೂರಣ ಮೂಲಕ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?’’ ಎಂದು ಲೋಕಸಭೆಯಲ್ಲಿ 2016ರ ಆಗಸ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಾಟೀಲ್ ಅವರಿಂದ ಬಂದ ಉತ್ತರ ‘‘ಇಲ್ಲ’’ ಎನ್ನುವುದು. ನ್ಯಾಕೊ ಅಂಕಿ ಅಂಶಕ್ಕೆ ವಿರುದ್ಧವಾಗಿ ಸಚಿವರು ರಕ್ತಪೂರಣ ಮೂಲಕ ಎಚ್‌ಐವಿ ಸೋಂಕು ಹರಡುತ್ತಿರುವುದು ಹೆಚ್ಚುತ್ತಿರುವುದನ್ನು ನಿರಾಕರಿಸಿದರು.
ದೇಶದಲ್ಲಿ ರಕ್ತಪೂರಣದ ಮೂಲಕ ಎಚ್‌ಐವಿ ಸೋಂಕು ಹರಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವುದು 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತ್ಯೇಕ ಆರ್‌ಟಿಐ ಅರ್ಜಿಗಳ ಮೂಲಕ ಪಡೆದ ಮಾಹಿತಿಯಲ್ಲಿ ದೃಢಪಟ್ಟಿದೆ. ಕರ್ನಾಟಕದ ಏಡ್ಸ್ ನಿಯಂತ್ರಣ ಸೊಸೈಟಿ ಮಾತ್ರ ತನ್ನ ವ್ಯಾಪ್ತಿಯ ಪ್ರದೇಶಗಳಲ್ಲಿ ರಕ್ತಪೂರಣ ಮೂಲಕ ಎಚ್‌ಐವಿ ಸೋಂಕು ಹರಡುತ್ತಿದೆ ಎನ್ನುವುದನ್ನು ಅಲ್ಲಗಳೆದಿದೆ. ಕರ್ನಾಟಕದಲ್ಲಿ ರಕ್ತಪೂರಣದ ಮೂಲಕ ಎಚ್‌ಐವಿ ಸೋಂಕು ತಗುಲಿದ ಯಾವ ನಿದರ್ಶನವೂ ಇಲ್ಲ. ಇಲ್ಲಿ ರಕ್ತನಿಧಿಗಳನ್ನು ನಿರಂತರವಾಗಿ ತಪಾಸಣೆಗೆ ಗುರಿಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಆದರೆ ನ್ಯಾಕೊದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಅಂಕಿ ಅಂಶಗಳಿಂದ ತಿಳಿದುಬರುವ ಅಂಶವೆಂದರೆ, ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ರಕ್ತಪೂರಣ ಮೂಲಕ ಎಚ್‌ಐವಿ ಸೋಂಕು ಹರಡಿದ 976 ಪ್ರಕರಣಗಳು ವರದಿಯಾಗಿವೆ. 2015-16ರಲ್ಲಿ ಇಂಥ 94 ಪ್ರಕರಣಗಳು ಬೆಳಕಿಗೆ ಬಂದಿವೆ.
ಛತ್ತೀಸ್‌ಗಡದಂಥ ಕೆಲ ರಾಜ್ಯಗಳು, ಈ ನಿರ್ದಿಷ್ಟ ಅಂಶದ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಒಪ್ಪಿಕೊಂಡಿವೆ. ಜಾರ್ಖಂಡ್‌ನಂಥ ರಾಜ್ಯಗಳು ಇಂಥ ಮಾಹಿತಿ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ.
‘‘ಈ ನಿಟ್ಟಿನಲ್ಲಿ ಸರಕಾರ ಅಧ್ಯಯನ ಕೈಗೊಂಡರೆ ಎಲ್ಲಿ ಸಮಸ್ಯೆ ಆಗುತ್ತಿದೆ ಎನ್ನುವುದು ತಿಳಿಯುತ್ತದೆ. ರಕ್ತಪೂರಣ ವೇಳೆ ಜನರು ಕೂಡಾ ಹೆಚ್ಚು ಜಾಗರೂಕರಾಗಿರಬೇಕು’’ ಎಂದು ಹೊಸದಿಲ್ಲಿಯಲ್ಲಿರುವ ಅಖಿಲ ಭಾರತ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಸಲಹಾ ವೈದ್ಯ ಸಂಜೀವ್ ಶರ್ಮಾ ಅಭಿಪ್ರಾಯಪಡುತಾರೆ. ಇವರು 18 ವರ್ಷಗಳಿಂದ ಎಚ್‌ಐವಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ.
ಇನ್ನೊಂದೆಡೆ ಅಮೆರಿಕದಂಥ ದೇಶಗಳು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತವೆ. ‘‘ಇಲ್ಲಿ ರಕ್ತಪೂರಣ ಮೂಲಕ ಎಚ್‌ಐವಿ ಸೋಂಕು ತಗುಲುವ ಪ್ರಕರಣ ತೀರಾ ಅಪರೂಪವಾದರೂ ಸಿಡಿಸಿ, ವರದಿಯಾಗುವ ಇಂಥ ಪ್ರತಿ ಪ್ರಕರಣದ ಬಗ್ಗೆಯೂ ತನಿಖೆ ನಡೆಸಿ, ರಕ್ತ ಮಲಿನವಾಗದಂತೆ ತಡೆಯಲು ಬಹುಹಂತಗಳಲ್ಲಿ ಪ್ರಯತ್ನಗಳನ್ನು ಮಾಡುತ್ತದೆ’’ ಎಂದು ಸಿಡಿಸಿ ವಕ್ತಾರ ರಚೆಲ್ ವಿಂಗಾರ್ಡ್ ಹೇಳುತ್ತಾರೆ.

ಗುಜರಾತ್‌ನಲ್ಲಿ ಅತ್ಯಧಿಕ
ಗುಜರಾತ್‌ನಲ್ಲಿ ರಕ್ತಪೂರಣ ಮೂಲಕ ಎಚ್‌ಐವಿ ಸೋಂಕು ಹರಡುವ ಪ್ರಕರಣಗಳು ಅತ್ಯಧಿಕ. ಏಳು ವರ್ಷಗಳ ಅವಧಿಯಲ್ಲಿ ಗುಜರಾತ್‌ನಲ್ಲಿ 2518 ಇಂಥ ಪ್ರಕರಣಗಳು ವರದಿಯಾಗಿದ್ದರೆ, ಉತ್ತರ ಪ್ರದೇಶ (1,807) ಹಾಗೂ ಮಹಾರಾಷ್ಟ್ರ (1,585) ನಂತರದ ಸ್ಥಾನಗಳಲ್ಲಿವೆ.
ಜುನಾಗಢ ಸಿವಿಲ್ ಆಸ್ಪತ್ರೆಯಲ್ಲಿ ರಕ್ತಪೂರಣದಿಂದ ಎಚ್‌ಐವಿ ಸೋಂಕು ತಗುಲಿದ ಸಂತ್ರಸ್ತರು ಗುಜರಾತ್ ಹೈಕೋರ್ಟ್‌ನಲ್ಲಿ ಈ ಬಗ್ಗೆ ದಾವೆ ಹೂಡಿದ್ದಾರೆ. ಈ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಏಜೆನ್ಸಿ 2014ರಲ್ಲಿ ಈ ತನಿಖೆಯನ್ನು ಪೂರ್ಣಗೊಳಿಸಿ ನೀಡಿದ ವರದಿಯಲ್ಲಿ, ಆಸ್ಪತ್ರೆಯ ನಿರ್ಲಕ್ಷದಿಂದಾಗಿ ಸಾವು ಸಂಭವಿಸಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಸಂತ್ರಸ್ತರ ಕುಟುಂಬಗಳು ಪ್ರತಿಭಟನೆ ನಡೆಸಿದ ಬಳಿಕ ಮತ್ತೆ ತನಿಖೆಯನ್ನು ಪುನರಾರಂಭಿಸಿದೆ.
‘‘ಬಹುತೇಕ ಸಂತ್ರಸ್ತರು ಬಡಕುಟುಂಬದವರು. ಕೇವಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಷ್ಟೇ ಶಕ್ತರು’’ ಎಂದು ಈ ಗುಂಪಿನ ವಕೀಲ ಪರೇಶ್ ವಘೇಲಾ ಹೇಳುತ್ತಾರೆ.
ಕೇವಲ ಸೋಂಕು ಮಾತ್ರ ಸಂತ್ರಸ್ತರನ್ನು ಬಾಧಿಸುತ್ತಿಲ್ಲ. ಸಮಾಜದಿಂದ ಪ್ರತ್ಯೇಕವಾಗಿರುವ ಅಂಶಗಳನ್ನು ಕೂಡಾ ಇಲ್ಲಿ ಪರಿಗಣಿಸಬೇಕಾಗುತ್ತದೆ. ‘‘ಜೈಪ್ರಕಾಶ್‌ಗೆ ಎಚ್‌ಐವಿ ಸೋಂಕು ತಗುಲಿದೆ ಎಂಬ ಮಾಹಿತಿ ತಿಳಿದ ಬಳಿಕ ಆತ ಬೇರೆಯವರ ಜತೆ ಮಾತನಾಡುತ್ತಿದ್ದುದೂ ವಿರಳ. ಆತ ಹೊರಗೆ ಹೋಗಿ ಆಡುವುದನ್ನು ಇಷ್ಟಪಡುತ್ತಿದ್ದ. ಆದರೆ ಆತನ ಜೀವನದ ಕೊನೆಯ ಕೆಲ ತಿಂಗಳಲ್ಲಿ ಆತ ಮನೆಯಿಂದ ಹೊರ ಹೊರಟದ್ದೇ ಅಪರೂಪ’’ ಎಂದು ರಾಣವ ನೆನಪಿಸಿಕೊಳ್ಳುತ್ತಾರೆ.
ಜುನಾಗಢ ರಕ್ತಪೂರಣದ ಬಳಿಕ ಒಂಬತ್ತನೆ ತರಗತಿ ವಿದ್ಯಾರ್ಥಿ ತುಷಾರ್ ಕೂಡಾ ಅಸ್ವಸ್ಥನಾಗಿದ್ದು, ಇಂದಿಗೂ ಎಚ್‌ಐವಿ ಜತೆ ಹೋರಾಡುತ್ತಿದ್ದಾನೆ. ‘‘ಈತನ ರೋಗದ ವಿಚಾರವನ್ನು ನಮ್ಮ ಕುಟುಂಬ ರಹಸ್ಯವಾಗಿಯೇ ಇಟ್ಟಿದೆ’’ ಎಂದು ಆತನ ತಂದೆ ರೂಪೇಶ್ ಹೇಳುತ್ತಾರೆ. ಈ ವಿಷಯ ಜನರಿಗೆ ತಿಳಿದರೆ, ಮಗನ ವಿರುದ್ಧ ತಾರತಮ್ಯ ಎಸಗುವ ಎಲ್ಲ ಅಪಾಯವೂ ಇದೆ ಎಂಬ ಆತಂಕ ಅವರದ್ದು.

ಪರಿಹಾರ ವಿರಳ- ವಿಳಂಬ
ಜೈಪ್ರಕಾಶ್ ಹಾಗೂ ತುಷಾರ್ ಪ್ರಕರಣದಂಥ ಪ್ರಕರಣಗಳು ಭಾರತದಲ್ಲಿ ವಿರಳವೇನಲ್ಲ. ಈ ವರ್ಷದ ಮೇ ತಿಂಗಳಲ್ಲಿ ಅಸ್ಸಾಂನಲ್ಲಿ ಮೂರೂವರೆ ವರ್ಷದ ಬಾಲಕನಿಗೆ ರಕ್ತಪೂರಣದ ಬಳಿಕ ಎಚ್‌ಐವಿ ಸೋಂಕು ಕಾಣಿಸಿಕೊಂಡಿತು. ಆಗಸ್ಟ್ ತಿಂಗಳಲ್ಲಿ ಒಡಿಶಾದಲ್ಲಿ ನಾಲ್ಕೂವರೆ ವರ್ಷದ ಬಾಲಕನಿಗೆ ರಕ್ತಪೂರಣದ ಮೂಲಕ ಎಚ್‌ಐವಿ ವೈರಸ್ ಹರಡಿತು.
‘‘ದಿಲ್ಲಿಯಲ್ಲಿ ಇಂಥ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಯಾರಿಗೂ ಆಸ್ಪತ್ರೆಗಳಿಂದ ಪರಿಹಾರ ಸಿಕ್ಕಿದ್ದು ಗಮನಕ್ಕೆ ಬಂದಿಲ್ಲ’’ ಎಂದು ಶರ್ಮಾ ಸ್ಪಷ್ಟಪಡಿಸುತ್ತಾರೆ.
ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬಳಿಗೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ರಕ್ತಪೂರಣ ಮಾಡಲಾಗಿತ್ತು. ಆಗ ಎಚ್‌ಐವಿ ಸೋಂಕು ತಗುಲಿ ನವಜಾತ ಶಿಶು ಬಲಿಯಾಯಿತು. ಎರಡು ದಶಕಗಳ ಸುದೀರ್ಘ ಕಾನೂನು ಹೋರಾಟದ ಬಳಿಕ 2016ರ ಜೂನ್ ತಿಂಗಳಲ್ಲಿ ಪರಿಹಾರ ಸಿಕ್ಕಿತು.
ಈ ಮಧ್ಯೆ ಜುನಾಗಢ ಸಂತ್ರಸ್ತರು ಹಾಗೂ ಅವರ ಕುಟುಂಬಗಳು ಪ್ರತಿವಾದಿಗಳು, ‘‘ಸಿಬಿಐ ನಮ್ಮ ನೆರವಿಗೆ ಬರುತ್ತದೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಆದರೆ ನಮ್ಮ ನಿರೀಕ್ಷೆ ಹುಸಿಯಾಗುತ್ತಿದೆ ಎಂದು ಹೇಳುತ್ತಾರೆ.
ರಾಜ್ಯ ರಾಜಧಾನಿಯಿಂದ 400 ಕಿಲೋಮೀಟರ್ ದೂರದ ಜುನಾಗಢದ ಒಂದು ಕೊಠಡಿಯ ಬಾಡಿಗೆ ಮನೆಯಲ್ಲಿ ವಾಸವಿರುವ ರಾಣವ ಅವರ ಏಕೈಕ ಬೇಡಿಕೆ, ‘‘ನಮ್ಮ ಮಗನ ವಿಚಾರದಲ್ಲಿ ನಮಗೆ ನ್ಯಾಯ ಬೇಕು’’
ಕೃಪೆ: ಜ್ಞಿಜಿಛ್ಞಿ

Writer - ನಿಖಿಲ್ ಎಂ. ಬಾಬು

contributor

Editor - ನಿಖಿಲ್ ಎಂ. ಬಾಬು

contributor

Similar News