ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿ ಜಯಿಸಿದ ಆಸ್ಟ್ರೇಲಿಯ

Update: 2016-12-06 17:53 GMT

ಕ್ಯಾನ್‌ಬೆರ್ರಾ, ಡಿ.6: ಡೇವಿಡ್ ವಾರ್ನರ್ ಆಕರ್ಷಕ ಶತಕ(119) ಹಾಗೂ ಪ್ಯಾಟ್ ಕಮ್ಮಿನ್ಸ್(4-41) ಸಾಹಸದ ನೆರವಿನಿಂದ ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್ ವಿರುದ್ಧದ ಎರಡನೆ ಏಕದಿನ ಪಂದ್ಯವನ್ನು 116 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಮೂರು ಪಂದ್ಯಗಳ ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಮೂರನೆ ಹಾಗೂ ಅಂತಿಮ ಪಂದ್ಯ ಮೆಲ್ಬೋರ್ನ್‌ನಲ್ಲಿ ಶುಕ್ರವಾರ ನಡೆಯಲಿದೆ.

ಗೆಲ್ಲಲು 379 ರನ್ ಸವಾಲು ಪಡೆದ ನ್ಯೂಝಿಲೆಂಡ್ ತಂಡ ಮ್ಮಿನ್ಸ್(4-41), ಸ್ಟಾರ್ಕ್(2-52), ಹೇಝಲ್‌ವುಡ್(2-42) ಹಾಗೂ ಫಾಕ್ನರ್(2-69) ದಾಳಿಗೆ ಸಿಲುಕಿ 47.2 ಓವರ್‌ಗಳಲ್ಲಿ 262 ರನ್‌ಗೆ ಆಲೌಟಾಯಿತು. ನಾಯಕ ಕೇನ್ ವಿಲಿಯಮ್ಸನ್(81 ರನ್, 148 ನಿಮಿಷ, 80 ಎಸೆತ, 5 ಬೌಂಡರಿ, 2 ಸಿಕ್ಸರ್) ,ನೀಶಮ್(74 ರನ್, 83 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಗಪ್ಟಿಲ್(45 ರನ್, 33 ಎಸೆತ, 7 ಬೌಂಡರಿ, 1 ಸಿಕ್ಸರ್)ನ್ಯೂಝಿಲೆಂಡ್ ಗೆಲುವಿಗಾಗಿ ಹೋರಾಟ ನಡೆಸಿದರು.

3ನೆ ವಿಕೆಟ್‌ಗೆ 125 ರನ್ ಸೇರಿಸಿದ ವಿಲಿಯಮ್ಸನ್ ಹಾಗೂ ನೀಶಮ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಲಭಿಸಿದ್ದ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ ವಾರ್ನರ್ ಶತಕ(119 ರನ್, 115 ಎಸೆತ, 14 ಬೌಂಡರಿ,1 ಸಿಕ್ಸರ್), ನಾಯಕ ಸ್ಟೀವನ್ ಸ್ಮಿತ್(72 ರನ್, 76 ಎಸೆತ, 6 ಬೌಂಡರಿ, 1 ಸಿಕ್ಸರ್), ಮಿಚೆಲ್ ಮಾರ್ಷ್(ಅಜೇಯ 76, 40 ಎಸೆತ, 2 ಬೌಂಡರಿ,7 ಸಿಕ್ಸರ್) ಹಾಗೂ ಹೆಡ್(57 ರನ್, 32 ಎಸೆತ, 6 ಬೌಂಡರಿ,2 ಸಿಕ್ಸರ್) ಅರ್ಧಶತಕದ ಬೆಂಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 378 ರನ್ ಗಳಿಸಿತು.

ದಾಂಡಿಗರ ಸ್ನೇಹಿ ಪಿಚ್‌ನಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆಸ್ಟ್ರೇಲಿಯಕ್ಕೆ ವಾರ್ನರ್ ಹಾಗೂ ಫಿಂಚ್(19) ಮೊದಲ ವಿಕೆಟ್‌ಗೆ 68 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಎರಡನೆ ವಿಕೆಟ್‌ಗೆ 145 ರನ್ ಜೊತೆಯಾಟ ನಡೆಸಿದ ವಾರ್ನರ್ ಹಾಗೂ ಸ್ಮಿತ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

4ನೆ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿದ ಮಾರ್ಷ್ ಹಾಗೂ ಹೆಡ್ ತಂಡದ ಮೊತ್ತವನ್ನು 319 ರನ್‌ಗೆ ತಲುಪಿಸಿದರು. ಹೆಡ್ 29 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಮಾರ್ಷ್ 33 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 50 ರನ್ ಪೂರೈಸಿದರು.

40 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿದ ಮಾರ್ಷ್ ಆಸ್ಟ್ರೇಲಿಯ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 378/5

(ವಾರ್ನರ್ 119, ಮಾರ್ಷ್ ಅಜೇಯ 76, ಸ್ಟೀವನ್ ಸ್ಮಿತ್ 72, ಹೆಡ್ 57, ಸೌಥಿ 2-63)

ನ್ಯೂಝಿಲೆಂಡ್: 47.2 ಓವರ್‌ಗಳಲ್ಲಿ 262 ರನ್‌ಗೆ ಆಲೌಟ್

(ವಿಲಿಯಮ್ಸನ್ 81, ನೀಶಮ್ 74, ಗಪ್ಟಿಲ್ 45, ಕುಮ್ಮಿನ್ಸ್ 4-41, ಸ್ಟಾರ್ಕ್ 2-52, ಹೇಝಲ್‌ವುಡ್ 2-42, ಫಾಕ್ನರ್ 2-69)

ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್.

ಅಂಕಿ-ಅಂಶ

6: ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 2016ರಲ್ಲಿ ಆರನೆ ಶತಕ ಬಾರಿಸಿದರು. ಕ್ಯಾಲೆಂಡರ್ ವರ್ಷದಲ್ಲಿ ಆಸ್ಟ್ರೇಲಿಯ ಬ್ಯಾಟ್ಸ್‌ಮನ್ ಬಾರಿಸಿದ ಗರಿಷ್ಠ ಶತಕ ಇದಾಗಿದೆ. ರಿಕಿ ಪಾಂಟಿಂಗ್(2003, 2007) ಹಾಗೂ ಮ್ಯಾಥ್ಯೂ ಹೇಡನ್(2007) ತಲಾ 5 ಶತಕ ಬಾರಿಸಿದ್ದರು.

3: ಆಸ್ಟ್ರೇಲಿಯ ಏಕದಿನ ಕ್ರಿಕೆಟ್‌ನಲ್ಲಿ ಮೂರನೆ ಬಾರಿ ಗರಿಷ್ಠ ಸ್ಕೋರ್(378 ರನ್) ದಾಖಲಿಸಿದೆ. 2005-06ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 434 ರನ್ ಹಾಗೂ ಕಳೆದ ವರ್ಷ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 417 ರನ್ ಗಳಿಸಿತ್ತು.

126: ನ್ಯೂಝಿಲೆಂಡ್ ತಂಡ ಇನಿಂಗ್ಸ್‌ನ ಅಂತಿಮ 10 ಓವರ್‌ಗಳಲ್ಲಿ 126 ರನ್ ಬಿಟ್ಟುಕೊಟ್ಟಿತು.

02: ಆಸ್ಟ್ರೇಲಿಯ ಮನುಕಾ ಓವಲ್ ಮೈದಾನದಲ್ಲಿ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿತು. ದಕ್ಷಿಣ ಆಫ್ರಿಕ ತಂಡ 2015ರ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿತ್ತು.

 02: ಸ್ವದೇಶದಲ್ಲಿ ನಡೆದ ಏಕದಿನದಲ್ಲಿ ಆಸ್ಟ್ರೇಲಿಯದ ನಾಲ್ವರು ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್‌ವೊಂದರಲ್ಲಿ 2ನೆ ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ವರ್ಷ ಶ್ರೀಲಂಕಾದ ವಿರುದ್ಧ ಸಿಡ್ನಿಯಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News