ಆಸ್ಟ್ರೇಲಿಯ ಮಡಿಲಿಗೆ ಚಾಪೆಲ್-ಹ್ಯಾಡ್ಲೀ ಟ್ರೋಫಿ

Update: 2016-12-09 18:00 GMT

ವೆುಲ್ಬೋರ್ನ್, ಡಿ.9: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬಾರಿಸಿದ ಸತತ ಎರಡನೆ ಶತಕ ಹಾಗೂ ಮಿಚೆಲ್ ಸ್ಟಾರ್ಕ್ ರಿವರ್ಸ್ ಸ್ವಿಂಗ್ ಸಹಾಯದಿಂದ ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್ ವಿರುದ್ಧದ ಮೂರನೆ ಏಕದಿನ ಪಂದ್ಯವನ್ನು 117 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿರುವ ಆಸ್ಟ್ರೇಲಿಯ ಚಾಪೆಲ್-ಹ್ಯಾಡ್ಲೀ ಟ್ರೋಫಿಯನ್ನು ವಶಪಡಿಸಿಕೊಂಡಿತು.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಸಿ)ದಲ್ಲಿ ಶುಕ್ರವಾರ ನಡೆದ 3ನೆ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಮಾಡಿದ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 264 ರನ್ ಗಳಿಸಿತು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ರನೌಟಾದ ವಾರ್ನರ್ 128 ಎಸೆತಗಳಲ್ಲಿ 13 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಸತತ ಎರಡನೆ ಶತಕ ಬಾರಿಸಿದ ವಾರ್ನರ್ ಮಂಗಳವಾರ ಕ್ಯಾನ್‌ಬೆರ್ರಾದಲ್ಲಿ 115 ಎಸೆತಗಳಲ್ಲಿ 119 ರನ್ ಗಳಿಸಿದ್ದರು.

 ಗೆಲ್ಲಲು 265 ರನ್ ಗುರಿ ಪಡೆದ ನ್ಯೂಝಿಲೆಂಡ್ ತಂಡ ಸ್ಟಾರ್ಕ್ ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿ 36.1 ಓವರ್‌ಗಳಲ್ಲಿ ಕೇವಲ 147 ರನ್‌ಗೆ ಸರ್ವಪತನವಾಯಿತು. ಕಿವೀಸ್‌ನ ಪರ ಗಪ್ಟಿಲ್(34) ಗರಿಷ್ಠ ಸ್ಕೋರ್ ದಾಖಲಿಸಿದರು. ಲಥಾಮ್(28), ಮುನ್ರೊ(20) ಹಾಗೂ ಸ್ಯಾಂಟ್ನರ್(15) ಎರಡಂಕೆ ಸ್ಕೋರ್ ದಾಖಲಿಸಿದರು.

ಸ್ಟಾರ್ಕ್‌ಗೆ ಸಹ ಆಟಗಾರರಾದ ಪ್ಯಾಟ್ ಕಮಿನ್ಸ್(2-26), ಜೇಮ್ಸ್ ಫಾಕ್ನರ್(2-26) ಹಾಗೂ ಸ್ಪಿನ್ನರ್ ಟ್ರೆವಿಸ್ ಹೆಡ್(2-37) ತಲಾ ಎರಡು ವಿಕೆಟ್ ಪಡೆದು ಸಮರ್ಥ ಸಾಥ್ ನೀಡಿದರು.

 ಏಕದಿನದಲ್ಲಿ 11ನೆ ಶತಕ ಹಾಗೂ ಈ ವರ್ಷ 7ನೆ ಶತಕ ಬಾರಿಸಿರುವ ವಾರ್ನರ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ 1998ರಲ್ಲಿ 9 ಶತಕವನ್ನು ಗಳಿಸಿದ್ದರು. ಇದು ಕ್ಯಾಲೆಂಡರ್ ವರ್ಷದಲ್ಲಿ ದಾಖಲಾದ ಗರಿಷ್ಠ ಏಕದಿನ ಶತಕವಾಗಿದೆ.

 ಕಿವೀಸ್ ತಂಡ ಫಿಂಚ್(3) ಹಾಗೂ ನಾಯಕ ಸ್ಟೀವ್ ಸ್ಮಿತ್(0)ರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿತ್ತು. ಆಗ ಜಾರ್ಜ್ ಬೈಲಿ(23) ಹಾಗೂ ಟ್ರೆವಿಸ್ ಹೆಡ್(37) ಅವರೊಂದಿಗೆ ಉಪಯುಕ್ತ ಜೊತೆಯಾಟ ನಡೆಸಿದ ವಾರ್ನರ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಹೆಡ್ ಸ್ಪಿನ್ನರ್ ಸ್ಯಾಂಟ್ನರ್‌ಗೆ ಔಟಾಗುವ ಮೊದಲು 70 ಎಸೆತಗಳಲ್ಲಿ 37 ರನ್ ಗಳಿಸಿದರು. 18 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ವಾರ್ನರ್ ಕೊನೆಯ ತನಕ ಕ್ರೀಸ್‌ನಲ್ಲಿದ್ದು ಆಸ್ಟ್ರೇಲಿಯ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಇನಿಂಗ್ಸ್‌ನ ಅಂತಿಮ ಎಸೆತದಲ್ಲಿ ಒಂದು ರನ್ ಗಳಿಸಲು ಹೋಗಿ ರನೌಟಾದರು. ಕಿವೀಸ್ ಪರ ಬೌಲ್ಟ್(3-49) ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್ ವಿವರ

ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 264/8

(ವಾರ್ನರ್ 156, ಹೆಡ್ 37, ಟ್ರೆಂಟ್ ಬೌಲ್ಟ್ 3-49, ಸ್ಯಾಂಟ್ನರ್ 2-43, ಗ್ರಾಂಡ್‌ಹೊಮ್ 2-50)

ನ್ಯೂಝಿಲೆಂಡ್: 36.1 ಓವರ್‌ಗಳಲ್ಲಿ 147 ರನ್‌ಗೆ ಆಲೌಟ್

(ಗಪ್ಟಿಲ್ 34, ಲಥಾಮ್ 28, ಮುನ್ರೊ 20, ಸ್ಟಾರ್ಕ್ 3-34, ಕಮ್ಮಿನ್ಸ್ 2-26, ಫಾಕ್ನರ್ 2-26, ಟ್ರೆವಿಸ್ ಹೆಡ್ 3-37)

ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್

ಸರಣಿಶ್ರೇಷ್ಠ: ಡೇವಿಡ್ ವಾರ್ನರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News