ಬೆಳಕಿಗೆ ಬಂದ ಗೋಯಲ್

Update: 2016-12-10 18:25 GMT

ನೋಟ್ ಬಂದಿ ಸ್ವಲ್ಪಮಟ್ಟಿಗೆ ಮೋದಿ ಹೊಳಪನ್ನು ಮಬ್ಬಾಗಿಸಿದೆ; ಅರುಣ್ ಜೇಟ್ಲಿಯವರ ಪ್ರಖರತೆಗೂ ಇದೇ ಗತಿ. ಮೋದಿ ಯೋಜನೆಯನ್ನು ಯಶಸ್ಸುಗೊಳಿಸುವ ಹೊಣೆ ಇದೀಗ ಕೇಂದ್ರ ವಿದ್ಯುತ್ ಸಚಿವ ಪಿಯೂಶ್ ಗೋಯಲ್ ಹೆಗಲೇರಿದೆ. ಗೋಯಲ್ ಬಗೆಗಿನ ಮೋದಿ ವಿಶ್ವಾಸ ಮೇಲ್ನೋಟಕ್ಕೇ ಎದ್ದುಕಾಣುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಅಳವಡಿಸುವಂತೆ ಬ್ಯಾಂಕ್ ಮುಖ್ಯಸ್ಥರನ್ನು ಮನವೊಲಿಸುವ ಹೊಣೆಯನ್ನು ಗೋಯಲ್‌ಗೆ ವಹಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಬ್ಯಾಂಕ್‌ಗಳ ಕೊರತೆ ಇರುವುದು ಕಳವಳಕ್ಕೆ ಕಾರಣವಾಗಿದೆ. ಬ್ಯಾಂಕ್‌ಗಳು ನಿಗದಿತ ಗುರಿ ತಲುಪುವಂತೆ ಗೋಯಲ್ ಸೂಚಿಸಿದ್ದಾರೆ. ಕೆಲ ದಿನಗಳ ಬಳಿಕ ಈ ಗುರಿ ತಲುಪುವಲ್ಲಿ ಮಾಡಿರುವ ಸಾಧನೆಗಳ ಪರಾಮರ್ಶೆಯನ್ನೂ ಗೋಯಲ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಎದುರಾಗಿರುವ ಸವಾಲುಗಳನ್ನು ಕಂಡುಕೊಳ್ಳುವಂತೆ ಮೋದಿ ಸೂಚಿಸಿದಾಗ ಗೋಯಲ್, ಬ್ಯಾಂಕ್‌ಗಳ ಬಳಿ ಸಾಕಷ್ಟು ಪಿಒಎಸ್ ಯಂತ್ರಗಳು ಇಲ್ಲದ ಅಂಶವನ್ನು ಗಮನಕ್ಕೆ ತಂದರು ಎಂದು ಹೇಳಲಾಗಿದೆ. ಬೇರೆ ಕಡೆಗಳಿಂದ ಇಂಥ ಯಂತ್ರ ತರಿಸಬಹುದೇ ಎಂದು ಮೋದಿ ಪ್ರಶ್ನಿಸಿದಾಗ, ವಿಯೆಟ್ನಾಂ ಮತ್ತು ಇತರ ದೇಶಗಳಿಂದ ತರಿಸಬಹುದು ಎಂದು ಗೋಯಲ್ ಉತ್ತರಿಸಿದ್ದು, ಇಡೀ ಕಾರ್ಯಾಚರಣೆಯನ್ನು ನಿಭಾಯಿಸುವ ಹೊಣೆ ಇದೀಗ ಅವರ ಮೇಲೆ ಬಿದ್ದಿದೆ. ಸುಷ್ಮಾ ಸ್ವರಾಜ್ ಅನಾರೋಗ್ಯದ ಹಿನ್ನೆಲೆಯಲ್ಲಿ ಜೇಟ್ಲಿ ವಿದೇಶಾಂಗ ಖಾತೆಗೆ ಹೆಜ್ಜೆ ಇಡುತ್ತಾರೆ ಎನ್ನಲಾಗಿದ್ದು, ದೇಶವನ್ನು ಕರೆನ್ಸಿ ಸಂಕಷ್ಟದಿಂದ ಪಾರಾಗಿಸಲು ಗೋಯಲ್ ಹಣಕಾಸು ಸಚಿವಾಲಯದ ಹೊಣೆ ಹೊರುತ್ತಾರೆಯೇ ಎಂಬ ಕುತೂಹಲ ಸಹಜವಾಗಿಯೇ ಎದ್ದಿದೆ.

ದಿಗ್ವಿಜಯ್ ಜೋಕ್!
ಪಿಯೂಶ್ ಗೋಯಲ್ ಒಂದೆಡೆ ಪ್ರಾಮುಖ್ಯ ಹೆಚ್ಚಿಸಿಕೊಳ್ಳುತ್ತಿದ್ದರೆ, ಪಿಕೆ ಅಲಿಯಾಸ್ ಪ್ರಶಾಂತ್ ಕಿಶೋರ್ ಪ್ರಖರತೆ ಮಾತ್ರ ಮಬ್ಬಾಗಿದೆ. ಎಬಿಪಿ ನ್ಯೂಸ್‌ನಲ್ಲಿ ನಿರೂಪಕರೊಬ್ಬರು ದಿಗ್ವಿಜಯ್ ಸಿಂಗ್ ಅವರನ್ನು ಕುರಿತು ಪಿಕೆ ಬಗ್ಗೆ ಪ್ರಶ್ನಿಸಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಿಕೆ ಯಾರು? ಎಂದು ಮರುಪ್ರಶ್ನಿಸಿದರು. ಸಹಜವಾಗಿಯೇ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಆದರೆ ಕಿಶೋರ್‌ಗೆ ಇದು ಹಾಸ್ಯವಾಗಿ ಕಂಡಿತೇ ಎನ್ನುವುದು ಪ್ರಶ್ನೆ. ಪಕ್ಷದ ಸಿದ್ಧಾಂತಕಾರ ಎಂದು ಬಿಂಬಿಸಿಕೊಂಡಿರುವ ಸಿಂಗ್, ಪ್ರಶಾಂತ್ ಕಿಶೋರ್ ಅವರನ್ನು ಅಂಕಿ ಅಂಶಗಳ ತಜ್ಞ ಎಂದು ಬಣ್ಣಿಸಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಗಾರಿಕೆಯನ್ನು ರೂಪಿಸುವ ಹೊಣೆಯನ್ನು ಪಕ್ಷ ಕಿಶೋರ್‌ಗೆ ವಹಿಸಿದೆ. ಆದರೆ ಸಿಂಗ್, ಕಿಶೋರ್ ಈ ಮುನ್ನ ಬಿಜೆಪಿ ಜತೆ ಹಾಗೂ ಜೆಡಿಯು ಬಣದಲ್ಲಿ ಇದ್ದುದನ್ನೂ ವಿಶೇಷವಾಗಿ ಪ್ರಸ್ತಾಪಿಸಿದರು.

ದೀದಿ ತರಾಟೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೆ. ದಿಲ್ಲಿ, ಉತ್ತರಪ್ರದೇಶ, ಬಿಹಾರ ಮತ್ತಿತರ ಕಡೆಗಳಲ್ಲಿ ಅವರು ನೋಟುಬಂದಿ ವಿರುದ್ಧ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ನೋಟು ಗೊಂದಲದ ಹೊಣೆ ಹೊತ್ತು ಮೋದಿ ರಾಜೀನಾಮೆ ನೀಡಬೇಕು ಎಂದೂ ದೀದಿ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರನ್ನೂ ಬಿಟ್ಟಿಲ್ಲ. ದೀದಿಯ ಉಗ್ರರೂಪವನ್ನು ರಾಜಕೀಯ ವಿಶ್ಲೇಷಕರು ವಿಸ್ಮಯ ಎಂದು ಪರಿಗಣಿಸುತ್ತಾರೆ. ಅವರ ಪ್ರಕಾರ, ದೀದಿ 2019ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಮೋದಿಗೆ ಪ್ರಬಲ ಎದುರಾಳಿಯಾಗಿ ತಾನು ರೂಪುಗೊಳ್ಳುತ್ತೇನೆ ಎಂಬ ಅತೀವ ವಿಶ್ವಾಸ ಅವರಿಗಿದೆ. ನಿತೀಶ್ ಕುಮಾರ್ ಅವರೂ ಆ ಹುದ್ದೆಯ ಮೇಲೆ ಕಣ್ಣಿಟ್ಟಂತಿದೆ. ಇದೀಗ ಕನಸು ಕಾಣುವ ಕಾಲ. ಆದರೆ ಎಷ್ಟರವರೆಗೆ ಈ ಕನಸು ಇರುತ್ತದೆ ಹಾಗೂ ಪ್ರತಿಭಟನೆಯ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. 2019 ಇನ್ನೂ ದೂರ ಇದೆ!

ಮದನಿ ಯೋಜನೆ
ದಿಲ್ಲಿಯ ಪಂಚತಾರಾ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ಮುಸ್ಲಿಂ ಸಂಸದರ ಸಭೆ ನಡೆಯಿತು. ಸಮುದಾಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸುವುದು ಇದರ ಉದ್ದೇಶವಾಗಿತ್ತು. ಜಮಾತೆ ಉಲೇಮಾ ಇ ಹಿಂದ್ ಮುಖ್ಯಸ್ಥ ಮೌಲಾನಾ ಮಹಮ್ಮೂದ್ ಮದನಿ ಈ ಸಭೆ ಆಯೋಜಿಸಿದ್ದರು. ಬಹುತೇಕ ಬಿಜೆಪಿಯೇತರ ಮುಸ್ಲಿಂ ಸಂಸದರು ಭಾಗವಹಿಸಿದ್ದರು. ಸಭೆಯಲ್ಲಿ ಒಂದಷ್ಟು ಪಟಾಕಿಗಳೂ ಸಿಡಿದವು. ಭೋಪಾಲ್‌ನಲ್ಲಿ ಸಿಮಿ ಕಾರ್ಯಕರ್ತರು ಬಲಿಯಾದ ವಿಷಯವನ್ನು ಕಾಂಗ್ರೆಸ್ ಸಂಸದರೊಬ್ಬರು ಪ್ರಸ್ತಾಪಿಸಿದಾಗ, ಯುಪಿಎ ಅಧಿಕಾರದಲ್ಲಿದ್ದಾಗ ಕೂಡಾ ಇಂಥದ್ದೇ ಘಟನೆಗಳು ನಡೆದಿದ್ದವು ಎಂದು ಮದನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಮತ್ತೊಬ್ಬ ಕಾಂಗ್ರೆಸ್ ಮುಖಂಡ ಉತ್ತರ ಪ್ರದೇಶ ಚುನಾವಣೆ ಬಗ್ಗೆ ಮಾತನಾಡಿ, ಮಹಾಘಟಬಂಧನದ ಅನಿವಾರ್ಯತೆಯನ್ನು ಪ್ರಸ್ತಾಪಿಸಿದರು. ಈ ವಿಚಾರವೂ ಗದ್ದಲಕ್ಕೆ ಕಾರಣವಾಯಿತು. ಚರ್ಚೆಯಲ್ಲಿ ತ್ರಿವಳಿ ತಲಾಖ್ ಹಾಗೂ ಸಮಾನ ನಾಗರಿಕ ಸಂಹಿತೆ ವಿಚಾರಗಳೂ ಪ್ರಸ್ತಾಪವಾದವು. ಆದರೆ ಪಾಲ್ಗೊಂಡಿದ್ದ ಮುಖಂಡರು ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಹೊಟೇಲ್‌ನ ಊಟೋಪಚಾರ ಮಾತ್ರ ಎಲ್ಲರಿಗೂ ಆಪ್ಯಾಯಮಾನ ಎನಿಸಿತು. ಭಾರತದಲ್ಲಿ ಮುಸ್ಲಿಮರಿಗೆ ಸಂಬಂಧಿಸಿದ ವಿಚಾರದಲ್ಲಿ, ಮದನಿ ಮತ್ತೊಂದು ಸಭೆಯನ್ನು ಆಯೋಜಿಸಬೇಕಾಗಬಹುದು!.

ಯುವರಾಜ್ ಔತಣದಲ್ಲಿ ಯುವರಾಜ
ಕಳೆದ ಬುಧವಾರ ಸಂಜೆ ರಾಜಧಾನಿಯ ಐಟಿಸಿ ಮೌರ್ಯದಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ವಿವಾಹ ನಿಮಿತ್ತ ಆಯೋಜಿಸಿದ್ದ ಅದ್ದೂರಿ ಔತಣದಲ್ಲಿ ರಾಹುಲ್‌ಗಾಂಧಿ ಮುಂದಿನ ಸಾಲಿನಲ್ಲಿ ಕುಳಿತು ಗಮನ ಸೆಳೆದಿದ್ದರು. ಮೋದಿ ವಿರುದ್ಧ ವಾಗ್ದಾಳಿಯಲ್ಲಿ ಸದಾ ತೊಡಗಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷನ ಜತೆ ಸೆಲ್ಫಿ ತೆಗೆಸಿಕೊಳ್ಳಲು ಗುಂಪು ಸೇರಿತ್ತು. ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಸುತ್ತಲೂ ಸೆಲ್ಫಿ ಆಕಾಂಕ್ಷಿಗಳು ನೆರೆದಿದ್ದರು. ಮೋದಿ ಔತಣಕೂಟಕ್ಕೆ ಬಂದಿದ್ದರೆ ಸೆಲ್ಫಿಗಾಗಿ ಯಾರೂ ರಾಹುಲ್ ಅಥವಾ ಜೇಟ್ಲಿಯವರನ್ನು ಸುತ್ತುವರಿಯುತ್ತಿರಲಿಲ್ಲ ಎಂಬ ಧ್ವನಿಯೊಂದು ಆಗ ಕೇಳಿಬಂತು. ರಾಹುಲ್‌ಗಾಂಧಿ ಕ್ರಿಕೆಟ್ ಪ್ರೇಮಿ ಅಲ್ಲ ಎನ್ನುವುದು ವಾಸ್ತವ. ಅವರ ನೆಚ್ಚಿನ ಕ್ರೀಡೆ ಫುಟ್‌ಬಾಲ್. ಅವರ ನೆಚ್ಚಿನ ತಂಡಗಳು ಬ್ರೆಝಿಲ್ ಹಾಗೂ ಅರ್ಜೆಂಟೀನಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News