ವಿರಾಟ್ ಕೊಹ್ಲಿಗೆ ದ್ವಿಶತಕ ಸಂಭ್ರಮ
ಮುಂಬೈ, ಡಿ.11: ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ. ಕೊಹ್ಲಿ ಈ ವರ್ಷ ಬಾರಿಸಿದ ಮೂರನೆ ದ್ವಿಶತಕ ಇದಾಗಿದೆ.
ಒಂದೇ ಋತುವಿನಲ್ಲಿ ಮೂರು ದ್ವಿಶತಕ ಬಾರಿಸಿದ ಕೊಹ್ಲಿ ಆಸ್ಟ್ರೇಲಿಯ ದಂತಕತೆ ಡಾನ್ ಬ್ರಾಡ್ಮನ್, ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ನ್ಯೂಝಿಲೆಂಡ್‌ನ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಸರಿಗಟ್ಟಿದರು.
ನಾಲ್ಕನೆ ದಿನವಾದ ರವಿವಾರ ಅಜೇಯ 147 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ 302 ಎಸೆತಗಳಲ್ಲಿ 23 ಬೌಂಡರಿಗಳ ನೆರವಿನಿಂದ ದ್ವಿಶತಕ ಪೂರೈಸಿದರು. ರಶೀದ್ ಎಸೆತದಲ್ಲಿ ಒಂದು ರನ್ ತೆಗೆದ ಕೊಹ್ಲಿ 200 ರನ್ ಪೂರ್ಣಗೊಳಿಸಿದರು.
ಬಾಲಂಗೋಚಿ ಜಯಂತ್ ಯಾದವ್(ಅಜೇಯ 92) ಅವರೊಂದಿಗೆ 8ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 213 ರನ್ ಗಳಿಸಿರುವ ಕೊಹ್ಲಿ ಭಾರತ 169 ಓವರ್‌ಗಳಲ್ಲಿ 576 ರನ್ ಗಳಿಸಲು ನೆರವಾಗಿದ್ದಾರೆ.
ಕೊಹ್ಲಿ ಹಾಗೂ ಯಾದವ್ ಭಾರತದ ಪರ 8ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ ಸಾಧನೆ ಮಾಡಿದ್ದಾರೆ. ಯಾದವ್ 9ನೆ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರನಾಗಿದ್ದಾರೆ.