×
Ad

ಸಚಿವರ ವಿರುದ್ಧ ಬಲವಂತದ ಆರೋಪ: ಸಂತ್ರಸ್ತ ಮಹಿಳೆ

Update: 2016-12-13 19:44 IST

ಬಾಗಲಕೋಟೆ, ಡಿ.13: ಅಬಕಾರಿ ಸಚಿವ ಎಚ್.ವೈ.ಮೇಟಿ ವಿರುದ್ಧ ಜೀವ ಬೆದರಿಕೆಗೆ ಒಳಗಾಗಿ ಆರೋಪ ಮಾಡಿರುವುದಾಗಿ ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂತ್ರಸ್ತ ಮಹಿಳೆ, ಓರ್ವ ಪೊಲೀಸ್ ಪೇದೆ ಸೇರಿದಂತೆ ನಾಲ್ವರು ತನಗೆ ಜೀವ ಬೆದರಿಕೆ ಹಾಕಿ ಸಚಿವರ ವಿರುದ್ಧ ಆರೋಪ ಮಾಡಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಕಳೆದ ನ.20ರಂದ ತನ್ನನ್ನು ಬಾಗಲಕೋಟೆ ನಗರದ ಹೊರವಲಯಕ್ಕೆ ಕರೆದೊಯ್ದು ಒಂದು ಕೊಠಡಿಯಲ್ಲಿ ಕೂರಿಸಿ, ಸಚಿವ ಎಚ್.ವೈ.ಮೇಟಿ ವಿರುದ್ಧ ಹೇಳಿಕೆಗಳನ್ನು ನೀಡುವಂತೆ ವಿಡಿಯೋ ಚಿತ್ರೀಕರಣ ಮಾಡಿಸಿಕೊಂಡರು ಎಂದು ಅವರು ಆರೋಪಿಸಿದರು.

ಈ ಎಲ್ಲ ಘಟನೆಗೆ ಪೊಲೀಸ್ ಪೇದೆ ಸುಭಾಷ್ ಮುಗುಳಕೋಡ ಎಂಬವರೆ ನೇರ ಕಾರಣ. ಇನ್ನು ಮೂವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಹೆಸರುಗಳನ್ನು ಬಹಿರಂಗಪಡಿಸಲು ಕಾಲಾವಕಾಶ ಬೇಕು. ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ನಾನು ಕಳೆದ ಮೂರು ದಿನಗಳಿಂದ ಮನೆ ಬಿಟ್ಟು ಹೊರಗೆ ಬಂದಿಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿದರು.

ಈ ಘಟನೆಯಿಂದ ಆಘಾತಕ್ಕೆ ಒಳಗಾಗಿರುವ ನನ್ನ ಪತಿಯೂ ಭಯದಲ್ಲಿದ್ದಾರೆ. ನನ್ನ ಆರೋಗ್ಯವೂ ಹದಗೆಟ್ಟಿದೆ. ಅನಾವಶ್ಯಕವಾಗಿ ಸಚಿವರ ಪ್ರಕರಣದಲ್ಲಿ ನನ್ನನ್ನು ಎಳೆದು ತರಲಾಗಿದೆ. ಯಾವ ಕ್ಷಣದಲ್ಲಾದರೂ ನನ್ನ ಜೀವ ಹೋಗಬಹುದು, ನನ್ನನ್ನು ಯಾರಾದರೂ ಕೊಲೆ ಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜೀವ ಭಯದಿಂದಾಗಿ ನಾನು ಹೆಸರುಗಳನ್ನು ಬಹಿರಂಗಪಡಿಸಲು ಹೆದರುತ್ತಿದ್ದೇನೆ. ಸಚಿವರ ವಿರುದ್ಧ ಹೇಳಿಕೆಯನ್ನು ನೀಡಿರುವ ವಿಡಿಯೋ ನನ್ನದೆ. ಆದರೆ, ಅದು ಒತ್ತಾಯಪೂರ್ವಕವಾಗಿ ಮಾಡಿಸಿದ ವಿಡಿಯೋ. ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ಮಾಧ್ಯಮಗಳು ನನಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News