ಜನಾರ್ಧನರೆಡ್ಡಿ-ಶ್ರೀರಾಮುಲುಗೆ ನೋಟಿಸ್?
ಬೆಂಗಳೂರು, ಡಿ.14: ಮಾಜಿ ಸಚಿವ ಜನಾರ್ಧನರೆಡ್ಡಿ ಪುತ್ರಿಯ ಅದ್ದೂರಿ ವಿವಾಹಕ್ಕೆ ಕಪ್ಪು ಹಣವನ್ನು ಬಿಳಿ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಬಂಧನದಲ್ಲಿರುವ ಕೆಎಎಸ್ ಅಧಿಕಾರಿ ಭೀಮಾನಾಯ್ಕ ಪ್ರಕರಣ ಸಂಬಂಧ ಸಂಸದ ಶ್ರೀರಾಮುಲು ಹಾಗೂ ಜನಾರ್ಧನರೆಡ್ಡಿಗೆ ಸಿಐಡಿ ಶೀಘ್ರದಲ್ಲಿಯೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆಗಳಿವೆ.
ಸಿಐಡಿ ಈಗಾಗಲೇ ಆರೋಪಿ ಭೀಮಾನಾಯ್ಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಜೊತೆ ನಿಕಟ ಸಂಪರ್ಕ ಹೊಂದಿರುವುದಾಗಿ ಭೀಮಾನಾಯ್ಕ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದ್ದು, ಕಪ್ಪು ಹಣವನ್ನು ಬಿಳಿ ಮಾಡಲು ಯುವಕರನ್ನು ಬಳಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನು ನಗದು ಬದಲಾಯಿಸಿರುವ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಭೀಮಾನಾಯ್ಕ ಪ್ರಕರಣಕ್ಕೆ ಅಧಿಕೃತವಾಗಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಅಲ್ಲದೆ, ಭೀಮಾನಾಯ್ಕ ವಿಚಾರಣೆ ಸಂದರ್ಭದಲ್ಲಿ ಕೆಲ ಉದ್ಯಮಿ ಮತ್ತು ಬ್ಯಾಂಕ್ ಸಿಬ್ಬಂದಿಗಳೂ ಈ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ.
ಇಡಿ ವಶಕ್ಕೆ ಜಯಚಂದ್ರ: ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಯಚಂದ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವೆರಗೆ ಯಾವುದೇ ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿಲ್ಲ. ಆದರೆ, ಜಯಚಂದ್ರ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳಿಂದ ಗೊತ್ತಾಗಿದೆ.
ಜಯಚಂದ್ರ, ಪ್ರಶಾಂತ್ (ಜಯಚಂದ್ರ ಸಂಬಂಧಿ), ಸುಪ್ರೀತ್‌ಶೆಟ್ಟಿ, ವೇಣುಗೋಪಾಲ್, ಉಮೇಶ್, ರೆಹಮತ್ ಪಾಶ, ಶೇಖರ್, ಮಂಚನಾಯಕನಹಳ್ಳಿಯ ತಾಲೂಕು ಪಂಚಾಯತಿ ಸದಸ್ಯ ರಾಘವೇಂದ್ರ ಎಂದು ತಿಳಿದುಬಂದಿದೆ.