ಐಟಿ ಅಧಿಕಾರಿಗಳ ಮೇಲೆ ನಾಯಿ ಛೂ ಬಿಟ್ಟ ಅಜ್ಜಿ!
ಬೆಂಗಳೂರು, ಡಿ.14: ಕಪ್ಪು ಹಣವನ್ನು ಬಿಳಿ ಮಾಡಿಕೊಂಡು, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿಟ್ಟದ್ದ ಮಾಹಿತಿ ಮೇರೆಗೆ, ಅಪಾರ್ಟ್‌ಮೆಂಟ್‌ವೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ವೇಳೆ ಅಜ್ಜಿಯೊಬ್ಬರು ಎರಡು ಭಯಾನಕ ಸಾಕು ನಾಯಿಗಳನ್ನು ಛೂ ಬಿಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಚ್ಚರಿಯ ಘಟನೆ ಬುಧವಾರ ನಡೆದಿದೆ.
ನಗರದ ಯಶವಂತಪುರದಲ್ಲಿರುವ ಶಕೀಲಾಶೆಟ್ಟಿ ಎಂಬುವರಿಗೆ ಸೇರಿದ್ದ ಅಪಾರ್ಟ್‌ಮೆಂಟ್ ಮೇಲೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಲು ತೆರಳಿದ್ದರು.
ಈ ವೇಳೆ 71 ವಯಸ್ಸಿನ ಅಜ್ಜಿ ಎರಡು ಸಾಕು ನಾಯಿಗಳನ್ನು ಐಟಿ ಅಧಿಕಾರಿಗಳ ಮೇಲೆ ಛೂಬಿಟ್ಟು ಒಳಪ್ರವೇಶಿಸದಂತೆ ತಡೆ ಹಿಡಿದಿದ್ದಾರೆ ಎಂದು ಗೊತ್ತಾಗಿದ್ದು, ತದನಂತರ ಸ್ಥಳೀಯ ಪೊಲೀಸರ ಸಹಾಯದಿಂದ ಅಧಿಕಾರಿಗಳು ಕಟ್ಟಡದೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ. ಅಪಾರ್ಟ್‌ಮೆಂಟ್‌ನ ಎ ಬ್ಲಾಕ್ ಫ್ಲಾಟ್ ಸಂಖ್ಯೆ 508ರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.89 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ 2.25 ಕೋಟಿ ರೂಪಾಯಿ 2 ಸಾವಿರ ರೂಪಾಯಿ ಹೊಸ ನೋಟುಗಳಿದ್ದು, ಈ ಹಣ ಆನಂದ ಎಂಬುವರಿಗೆ ಸೇರಿದ್ದೆಂದು ವರದಿ ತಿಳಿಸಿದೆ.
ಪ್ರಕರಣ ಸಂಬಂಧ ಆನಂದ ಎಂಬುವರನ್ನು ವಶಕ್ಕೆ ಪಡೆದಿರುವ ಆದಾಯ ತೆರಿಗೆ ಅಧಿಕಾರಿಗಳು, ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.