ಮೊದಲ ಟೆಸ್ಟ್: ಉತ್ತಮ ಮೊತ್ತದತ್ತ ಆಸ್ಟ್ರೇಲಿಯ

Update: 2016-12-15 17:45 GMT

ಬ್ರಿಸ್ಬೇನ್, ಡಿ.15: ಪಾಕಿಸ್ತಾನದ ವಿರುದ್ಧ ಇಲ್ಲಿ ಗುರುವಾರ ಆರಂಭವಾದ ಐತಿಹಾಸಿಕ ಗುಲಾಬಿ ಬಣ್ಣದ ಚೆಂಡನ್ನು ಬಳಸಿ ಆಡಿದ ಮೊದಲ ಟೆಸ್ಟ್‌ನ ಮೊದಲ ದಿನ ಆತಿಥೇಯ ಆಸ್ಟ್ರೇಲಿಯ ಉತ್ತಮ ಆರಂಭ ಪಡೆದಿದೆ.

ಬ್ರಿಸ್ಬೇನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಸ್ಟೀವನ್ ಸ್ಮಿತ್ ಪಾಕಿಸ್ತಾನ ವಿರುದ್ಧ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ 3 ವಿಕೆಟ್‌ಗಳ ನಷ್ಟಕ್ಕೆ 288 ರನ್ ಗಳಿಸಿತು.

ಸ್ಮಿತ್(ಅಜೇಯ 110, 192 ಎಸೆತ, 16 ಬೌಂಡರಿ) ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್(ಅಜೇಯ 64, 150 ಎಸೆತ, 8 ಬೌಂಡರಿ)ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 136 ರನ್ ಸೇರಿಸಿದರು.

   ಪಾಕಿಸ್ತಾನದ ಬೌಲಿಂಗ್ ಹಾಗೂ ಫೀಲ್ಡಿಂಗ್ ಕಳಪೆಯಾಗಿತ್ತು. ಆಸೀಸ್ ನಾಯಕ ಸ್ಮಿತ್ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದುಕೊಂಡರು. 53 ರನ್ ಹಾಗೂ 97 ರನ್ ಗಳಿಸಿದ್ದಾಗ ಸ್ಮಿತ್ ಜೀವದಾನ ಪಡೆದಿದ್ದರು. ಎರಡು ಬಾರಿ ಜೀವದಾನ ಪಡೆದ ಬಳಿಕ ಕ್ರೀಸ್‌ಗೆ ಅಂಟಿಕೊಂಡು ಆಡಿದ ಸ್ಮಿತ್ 16ನೆ ಟೆಸ್ಟ್ ಶತಕ ಬಾರಿಸಿದರು.

 ಪಾಕಿಸ್ತಾನದ ವಿರುದ್ಧ ಮೊದಲ ಬಾರಿ ಶತಕ ಬಾರಿಸಿದ ಸ್ಮಿತ್ ಎಲ್ಲ ಟೆಸ್ಟ್ ಆಡುವ ದೇಶದ ವಿರುದ್ಧ ಶತಕ ಬಾರಿಸಿದ ಶ್ರೇಯಸ್ಸಿಗೆ ಭಾಜನರಾದರು. 125 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 71 ರನ್ ಗಳಿಸಿದ ಆಸ್ಟ್ರೇಲಿಯ ಆರಂಭಿಕ ಆಟಗಾರ ಮ್ಯಾಟ್ ರೆನ್‌ಶಾ ಆಕ್ರಮಣಕಾರಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್(32ರನ್) ಅವರೊಂದಿಗೆ 70 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು.

71 ರನ್‌ಗೆ ವಹಾಬ್ ರಿಯಾಝ್‌ಗೆ(1-52) ವಿಕೆಟ್‌ಒಪ್ಪಿಸಿದ ರೆನ್‌ಶಾ ತವರು ಪ್ರೇಕ್ಷಕರೆದುರು ಚೊಚ್ಚಲ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು.

ಇತ್ತೀಚೆಗೆ ನಡೆದ ನ್ಯೂಝಿಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ ವೀರೋಚಿತ ಪ್ರದರ್ಶನ ನೀಡಿದ್ದ ವಾರ್ನರ್ ಅವರನ್ನು ವೇಗದ ಬೌಲರ್ ಮುಹಮ್ಮದ್ ಆಮಿರ್ ಎಲ್ಬಿಡಬ್ಲು ಬಲೆಗೆ ಬೀಳಿಸಿದರು.

ಟೀ ವಿರಾಮಕ್ಕೆ ಮೊದಲು ಪಾಕ್ ಸಂಜಾತ ಉಸ್ಮಾನ್ ಖ್ವಾಜಾ(4) ಸ್ಪಿನ್ನರ್ ಯಾಸಿರ್ ಶಾ ಎಸೆತದಲ್ಲಿ ಔಟಾದರು. ಆಗ ಆಸ್ಟ್ರೇಲಿಯ 75 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.

ದಕ್ಷಿಣ ಆಫ್ರಿಕ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಖ್ವಾಜಾ ಅವರು ಯಾಸಿರ್ ಎಸೆತವನ್ನು ಕೆಣಕಲು ಹೋಗಿ ಮಿಸ್ಬಾವುಲ್‌ಹಕ್‌ಗೆ ಕ್ಯಾಚ್ ನೀಡಿದರು.

ಇದೇ ವೇಳೆ, ಕಿವೀಸ್ ವಿರುದ್ಧದ ಚಾಪೆಲ್-ಹ್ಯಾಡ್ಲಿ ಸರಣಿಯಲ್ಲಿನ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ ಸ್ಮಿತ್ ಅವರು ಹ್ಯಾಂಡ್ಸ್‌ಕಾಂಬ್ ಅವರೊಂದಿಗೆ ಕೈಜೋಡಿಸಿ ಆಸೀಸ್ 3 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಲು ನೆರವಾದರು.

ದಿನದಾಟದಂತ್ಯಕ್ಕೆ ಪಾಕಿಸ್ತಾನದ ವೇಗದ ಬೌಲರ್ ಆಮಿರ್(1-41) ಬೌಂಡರಿಲೈನ್‌ನಲ್ಲಿ ಚೆಂಡನ್ನು ತಡೆಯಲು ಯತ್ನಿಸಿದಾಗ ಬಲ ಮಂಡಿಗೆ ಗಾಯ ಮಾಡಿಕೊಂಡಿದ್ದಾರೆ. ಆಮಿರ್‌ರನ್ನು ಇಲೆಕ್ಟ್ರಾನಿಕ್ ಸ್ಟ್ರಚರ್‌ನ ಮೂಲಕ ಮೈದಾನದಿಂದ ಹೊರ ಕೊಂಡೊಯ್ಯಲಾಯಿತು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 90 ಓವರ್‌ಗಳಲ್ಲಿ 288/3

(ಸ್ಟೀವ್ ಸ್ಮಿತ್ ಅಜೇಯ 110, ಹ್ಯಾಂಡ್‌ಕಾಂಬ್ ಅಜೇಯ 64, ರೆನ್‌ಶಾ 71, ಆಮಿರ್ 1-40, ಯಾಸಿರ್ ಷಾ 1-97, ರಿಯಾಝ್ 1-52)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News