ಈಶ್ವರಪ್ಪರಿಗೆ ವರಿಷ್ಠರ ಕಟ್ಟಪ್ಪಣೆ
ಬೆಂಗಳೂರು, ಡಿ. 17: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಕಾರ್ಯ ಚಟುವಟಿಕೆಗೆ ತೀವ್ರ ವಿರೋಧವಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸುವ ದೃಷ್ಟಿಯಿಂದ ರಾಯಣ್ಣ ಬ್ರಿಗೇಡ್‌ನಿಂದ ಹೊರಬನ್ನಿ ಎಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪರಿಗೆ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪಕ್ಷದ ವಿರೋಧ ಕಟ್ಟಿಕೊಂಡು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಮುಂದುವರಿಯುವುದು ಸರಿಯಲ್ಲ. ಅಲ್ಲದೆ, ಪಕ್ಷದಲ್ಲಿ ಗೊಂದಲ ಮೂಡಿಸುವುದು ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲಿದೆ. ಆ ಹಿನ್ನೆಲೆಯಲ್ಲಿ ಬ್ರಿಗೇಡ್ ಚಟುವಟಿಯಿಂದ ಹಿಂದೆ ಸರಿಯಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಈಶ್ವರಪ್ಪರಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಪಕ್ಷ ಸಂಘಟನೆ, ನೀವು ಭವಿಷ್ಯದ ದೃಷ್ಟಿಯಿಂದ ಸಂಘಟನೆ ಮಾಡುತ್ತಿರಬಹುದು. ಇದರಿಂದ ಪಕ್ಷಕ್ಕೆ ದಲಿತ ಮತ್ತು ಹಿಂದುಳಿದ ಮತಗಳ ಕ್ರೋಡೀಕರಣ ಆಗಬಹುದು. ಆದರೆ, ಪಕ್ಷದ ಪ್ರಮುಖರೇ ಅಪಸ್ವರ ತೆಗೆದರೆ ಏನು ಮಾಡಲು ಸಾಧ್ಯವಿಲ್ಲ. ನಿಮ್ಮಂತಹ ಹಿರಿಯರಿಗೆ ನೋಟಿಸ್ ನೀಡುವುದು ಹಾಗೂ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಈಶ್ವರಪ್ಪರಿಗೆ ವರಿಷ್ಠರು ಸ್ಪಷ್ಟಣೆ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. 2019ರ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದು. ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನದ ನಿರೀಕ್ಷೆಯಿರುವ ಏಕೈಕ ರಾಜ್ಯ ಎಂದರೆ ಅದು ಕರ್ನಾಟಕ ಎಂದ ಅವರು, ತಮಿಳುನಾಡು, ಕೇರಳ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪಕ್ಷದ ಸ್ಥಿತಿ ನಿಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸಾಕಷ್ಟಿದ್ದು, ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಮತದಾರರು ಒಲವು ತೋರುವ ಸಂದರ್ಭದಲ್ಲಿ ನೀವು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮೂಲಕ ಅಡ್ಡದಾರಿ ತುಳಿಯಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಶಿವಮೊಗ್ಗ ಕ್ಷೇತ್ರದಿಂದ ನಿಮಗೆ ಟಿಕೆಟ್ ಕೈ ತಪ್ಪಲಿದೆ ಎಂಬ ಆತಂಕ ಬೇಡ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೂ, ನೀವು ಮೇಲ್ಮನೆ ಸದಸ್ಯರಾಗಿದ್ದೀರಿ. ಆ ಸ್ಥಾನದಲ್ಲಿ ಮುಂದುವರಿಯಲು ಅವಕಾಶವಿದೆ. ರಾಯಣ್ಣ ಬ್ರಿಗೇಡ್‌ಗೆ ಕೆಲವರು ಬೆಂಬಲ ನೀಡಬಹುದು. ಆದರೆ, ಪಕ್ಷದ ಅಧ್ಯಕ್ಷರು, ಉಸ್ತುವಾರಿಗಳ ಸೂಚನೆ ಧಿಕ್ಕರಿಸಿ ರಾಯಣ್ಣ ಚಟುವಟಿಕೆಯಲ್ಲಿ ಮುಂದುವರಿಯಬೇಡಿ ಎಂದು ಕಟ್ಟಪ್ಪಣೆ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಏಕಪಕ್ಷೀಯ ತೀರ್ಮಾನ ನಿಲ್ಲಬೇಕು
‘ಪಕ್ಷ ನನಗೆ ತಾಯಿ ಇದ್ದಂತೆ. ಆ ತಾಯಿಗೆ ದ್ರೋಹ ಎಸಗುವುದಿಲ್ಲ. ತಾನು ಆರೆಸ್ಸೆಸ್‌ನಿಂದ ಬೆಳೆದು ಬಂದ ಶಿಸ್ತು, ನೀತಿ-ನಿಯಮಗಳ ಅರಿವಿದೆ. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದಲ್ಲಿ ನಿಯಂತ್ರಿಸಬೇಕು ಎಂದು ಈಶ್ವರಪ್ಪ, ಅಮಿತ್ ಷಾ ಅವರಿಗೆ ಮನವಿ ಮಾಡಿದ್ದಾರೆಂದು ಹೇಳಲಾಗಿದೆ.