ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಮತ್ತೆ ಚಾಲನೆ
ಬೆಂಗಳೂರು, ಡಿ.17: ಕರ್ನಾಟಕ ಲೋಕಸೇವಾ ಆಯೋಗವು 2014ರಲ್ಲಿ ಆರಂಭಿಸಿದ್ದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ.
ರಾಜ್ಯ ಸರಕಾರ ಹಾಗೂ ಕೆಪಿಎಸ್ಸಿ ನಡುವಿನ ಜಟಾಪಟಿ ಕಾರಣದಿಂದ ಸಂದರ್ಶನ ನಿಯಮವೇ ಅಂತಿಮವಾಗಿರಲಿಲ್ಲ. ಕಳೆದ ತಿಂಗಳು ಈ ಬಗ್ಗೆ ಸಚಿವ ಸಂಪುಟ ಕರಡು ನಿಯಮ ಪ್ರಕಟಿಸಿತ್ತು. ಇದಕ್ಕೆ ಆಕ್ಷೇಪಣೆ ಪಡೆದು ಬಹುತೇಕ ಅದೇ ನಿಯಮವನ್ನು ಉಳಿಸಿಕೊಂಡು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಸಚಿವ ಸಂಪುಟದಲ್ಲಿ ನಿರ್ಧರಿಸಿದ್ದ ಬಹುತೇಕ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ. ಸಂದರ್ಶನವು 1:3 ಅನುಪಾತದಲ್ಲಿಯೆ ನಡೆಯಲಿದ್ದು, ಕಳೆದ ಎಪ್ರಿಲ್‌ನಲ್ಲಿ ನಡೆದ ದಾಖಲೆ ಪರಿಶೀಲನೆಯ ಪಟ್ಟಿಯಂತೆ ಸಂದರ್ಶನ ನಡೆಸಲಾಗುತ್ತದೆ.
ಕೆಪಿಎಸ್ಸಿ ಅಧಿಕಾರಿಗಳ ಪ್ರಕಾರ 2017ರ ಜನವರಿ ಹಾಗೂ ಫೆಬ್ರವರಿಯಲ್ಲಿ ಸಂದರ್ಶನ ನಡೆಯುವುದು ಖಾತ್ರಿಯಾಗಿದೆ. ಪರೀಕ್ಷೆ ಬರೆದು ಸುಮಾರು ಒಂದು ವರ್ಷದ ಬಳಿಕ ಸಂದರ್ಶನ ಪ್ರಕ್ರಿಯೆಗೆ ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಸಂದರ್ಶನಕ್ಕೆ ಸಂಬಂಧಿಸಿ ಸರಕಾರದ ಕರಡು ನಿಯಮಕ್ಕೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಪಿ.ಸಿ. ಹೊಟಾ ಸಮಿತಿ ಶಿಫಾರಸಿನಂತೆ ಸಮಿತಿಯಲ್ಲಿ ಐವರು ಸದಸ್ಯರಿರಬೇಕು ಹಾಗೂ ಇವರಲ್ಲಿ ಒಬ್ಬರು ಮಾತ್ರ ಕೆಪಿಎಸ್ಸಿ ಸದಸ್ಯರಾಗಿರಬೇಕು. ಹಾಗೆಯೆ ಸಮಿತಿ ಸದಸ್ಯರ ಸರಾಸರಿ ಅಂಕ ತೆಗೆದುಕೊಂಡು ದೊಡ್ಡ ಪ್ರಮಾಣದ ಗರಿಷ್ಠ ಹಾಗೂ ಕನಿಷ್ಠ ಅಂಕಗಳನ್ನು ಕೈಬಿಟ್ಟು ಮತ್ತೆ ಸರಾಸರಿ ತೆಗೆಯುವಂತೆ ಸೂಚಿಸಲಾಗಿತ್ತು. ಇದರ ಪರವಾಗಿಯೆ ಅಭ್ಯರ್ಥಿಗಳು ವಕಾಲತ್ತು ಮಾಡಿದ್ದರು.
ಆದರೆ ಸರಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಮತ್ತೆ ಅಕ್ರಮಕ್ಕೆ ಕಾರಣವಾಗುವಂತೆ ಕೆಪಿಎಸ್ಸಿ ಸದಸ್ಯರು ಹಾಗೂ ಒಟ್ಟಾರೆ ಸರಾಸರಿ ಅಂಕವನ್ನೆ ಪರಿಗಣಿಸಲು ನಿರ್ಧರಿಸಲಾಗಿದೆ. ಗರಿಷ್ಠ ಹಾಗೂ ಕನಿಷ್ಠ ಅಂಕಗಳ ಬಗ್ಗೆ ಸರಕಾರ ಗಮನ ಹರಿಸಲಿಲ್ಲ.
ಕಾನೂನು ಹೋರಾಟ ಸಾಧ್ಯತೆ: ಸರಕಾರದ ಪರಿಷ್ಕೃತ ನಿಯಮದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಸರಕಾರದ ಈ ನಿಯಮವು ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ. ಇದರಿಂದ ಯಾವುದೇ ಸುಧಾರಣೆಯಾಗುವುದಿಲ್ಲ. ಪಿ.ಸಿ. ಹೊಟಾ ಸಮಿತಿ ಶಿಫಾರಸ್ಸನ್ನು ಜಾರಿ ಮಾಡುತ್ತಿಲ್ಲ ಎನ್ನುತ್ತಾರೆ ಅಭ್ಯರ್ಥಿಯೊಬ್ಬರು.
ಇಕ್ಕಟ್ಟಿಗೆ: ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದಲ್ಲಿ ರಾಜ್ಯ ಸರಕಾರದ ಮುಖಭಂಗಕ್ಕೆ ಕಾರಣವಾಗಿದ್ದ 2011ರ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪಟ್ಟಿ ವಿರುದ್ದದ ಪ್ರಕರಣ ಸರಕಾರವನ್ನು ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ನ್ಯಾಯಾಧೀಕರಣದ ಆದೇಶದಂತೆ ಡಿ.20ರೊಳಗೆ 2011ರ ಆಯ್ಕೆ ಪಟ್ಟಿಗೆ ಆದೇಶ ಪ್ರತಿ ನೀಡಬೇಕಿದೆ. ಆದರೆ ಇದುವರೆಗೂ ಆದೇಶ ಪ್ರತಿ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಯನ್ನೂ ಆರಂಭಿಸಿಲ್ಲ. ಇನ್ನೊಂದೆಡೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಯಾವುದೇ ಪ್ರಯತ್ನ ಮಾಡಿಲ್ಲ. ಮೇಲ್ಮನವಿ ಸಲ್ಲಿಸಬಹುದಾದ ಪ್ರಕರಣ ಎಂದು ಅಡ್ವೊಕೇಟ್ ಜನರಲ್ ಅಭಿಪ್ರಾಯಪಟ್ಟಿದ್ದಾರೆ.
ವಾರದಲ್ಲಿ ಹೊಸ ಅಧಿಸೂಚನೆ: ಕೆಪಿಎಸ್ಸಿಯ ನೂತನ ವೇಳಾಪಟ್ಟಿ ಪ್ರಕಾರ 2017ರ ಎಪ್ರಿಲ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪ್ರಾಥಮಿಕ ಪರೀಕ್ಷೆ ನಡೆಯಲಿದೆ. ಡಿಸೆಂಬರ್ ಅಂತ್ಯದೊಳಗೆ ಅಧಿಸೂಚನೆ ಹೊರಡಿಸಬೇಕಿದೆ. ಮೀಸಲು ಗೊಂದಲದ ಹಿನ್ನೆಲೆಯಲ್ಲಿ ಸುಮಾರು 403 ಹುದ್ದೆಗಳ ಅಧಿಸೂಚನೆ ವಿಳಂಬವಾಗುತ್ತಿದೆ. ಇನ್ನೊಂದು ವಾರದಲ್ಲಿ ಈ ಕುರಿತು ಅಂತಿಮ ನಿರ್ಣಯವಾಗಿ ಅಧಿಸೂಚನೆ ಹೊರಡಿಸಲು ಕೆಪಿಎಸ್ಸಿಗೆ ಪಟ್ಟಿ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.