×
Ad

ಸಾರಿಗೆ ಸಂಸ್ಥೆಗೆ ಪ್ರತಿನಿತ್ಯ 70 ಲಕ್ಷ ರೂ.ನಷ್ಟ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Update: 2016-12-17 20:47 IST

ಬೆಂಗಳೂರು, ಡಿ. 17: ಇಂಧನ ಬೆಲೆ ಏರಿಕೆ, 500 ರೂ. ಮತ್ತು 1 ಸಾವಿರ ರೂ. ನೋಟು ಚಲಾವಣೆ ರದ್ದುಗೊಳಿಸಿದ್ದರಿಂದ ಸಾರಿಗೆ ಸಂಸ್ಥೆಗಳಿಗೆ ಪ್ರತಿನಿತ್ಯ 70ಲಕ್ಷ ರೂ.ಗಳಷ್ಟು ನಷ್ಟ ಉಂಟಾಗುತ್ತಿದ್ದು, ನಷ್ಟ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪರೋಕ್ಷವಾಗಿ ಪ್ರಯಾಣ ದರ ಏರಿಕೆ ಮುನ್ಸೂಚನೆ ನೀಡಿದ್ದಾರೆ.

   ಶನಿವಾರ ಇಲ್ಲಿನ ಬಸವನಗುಡಿಯ ಎನ್.ಆರ್. ಕಾಲನಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಂಟಿಸಿ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡೀಸೆಲ್ ಬೆಲೆ ಪದೇ ಪದೇ ಏರಿಕೆಯಾಗತ್ತಿದ್ದು, ಪ್ರತಿ ಲೀಟರ್‌ಗೆ 58ರೂ.ಗಳಿಗೆ ಏರಿದೆ. ಇದು ಸಾರಿಗೆ ಇಲಾಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ಕೇಂದ್ರ ಸರಕಾರ ತೆರಿಗೆ ಇಳಿಕೆ ಮಾಡಿಲ್ಲ. ಹೀಗಾಗಿ ಪದೇ ಪದೇ ಇಂಧನ ಬೆಲೆ ಏರಿಕೆ ಮಾಡಲಾಗುತ್ತದೆ. ಅಲ್ಲದೆ, ನೋಟು ರದ್ದು ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳನ್ನು ಆರ್ಥಿಕ ನಷ್ಟಕ್ಕೆ ತಳ್ಳಲಿದೆ ಎಂದು ಅವರು ತಿಳಿಸಿದರು.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಷ್ಕರಕ್ಕೆ ಇಳಿದಿದ್ದ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಾಗಿದೆ. ಅಲ್ಲದೆ, ಕಾರ್ಮಿಕರ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೌಕರರ ಬೇಡಿಕೆಗಳ ಬಗ್ಗೆ ಸರಕಾರ ಸಹಾನುಭೂತಿ ಹೊಂದಿದೆ ಎಂದು ಅವರು ಹೇಳಿದರು.

ಮಾದರಿ ಬಸ್ ನಿಲ್ದಾಣ:  ಬೆಂಗಳೂರಿನ ನಾಗರಿಕರಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಎನ್‌ಆರ್ ಕಾಲನಿಯಲ್ಲಿ 3.27 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಸ್ ಅಂಕಣ ಮತ್ತು ಪ್ಲಾಟ್‌ಫಾರಂಗಳು, ಸಂಚಾರ ನಿಯಂತ್ರಕರ ಕೊಠಡಿ, ಪಾಸ್ ವಿತರಣಾ ಕೌಂಟರ್, ಪುರುಷ ಹಾಗೂ ಮಹಿಳೆಯರ ಶೌಚಾಲಯ, ಲಿಫ್ಟ್ ವ್ಯವಸ್ಥೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ಆಸನಗಳ ವ್ಯವಸ್ಥೆ, ಎಲ್‌ಇಡಿ ಬೆಳಕಿನ ವ್ಯವಸ್ಥೆ, ಗೋಪುರ ಗಡಿಯಾರ ಸೇರಿದಂತೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಸುಲ್ತಾನ್ ಪಾಳ್ಯ, ಕೆಂಪೇಗೌಡ ಬಸ್ ನಿಲ್ದಾಣ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್ ಮತ್ತು ಚೌಡೇಶ್ವರಿ ಬಸ್ ನಿಲ್ದಾಣದಿಂದ ಎನ್.ಆರ್.ಕಾಲನಿ ನೂತನ ಬಸ್ ನಿಲ್ದಾಣಕ್ಕೆ ಕಾರ್ಯಾಚರಣೆ ಮಾಡಲಾಗುವುದು ಹಾಗೂ 41ಅನುಸೂಚಿಗಳ 446 ಸುತ್ತುವಳಿಗಳನ್ನು ಗಿರಿನಗರ 2ನೆ ಹಂತ, ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಜಯನಗರ 9ನೆ ಬ್ಲಾಕ್, ತ್ಯಾಗರಾಜನಗರ ಸೇರಿದಂತೆ ವಿವಿಧೆಡೆಗೆ ಕಾರ್ಯಾಚರಣೆ ಮಾಡಲಾಗುತ್ತದೆ.

ಶಾಸಕ ರವಿ ಸುಬ್ರಮಣ್ಯ, ಕೇಂದ್ರ ಸಚಿವ ಅನಂತಕುಮಾರ್, ಮೇಲ್ಮನೆ ಸದಸ್ಯರಾದ ಎಂ.ನಾರಾಯಣಸ್ವಾಮಿ, ಟಿ.ಎ.ಶರವಣ, ಪಾಲಿಕೆ ಸದಸ್ಯ ಬಿ.ಎಸ್.ಸತ್ಯನಾರಾಯಣ, ಬಿಎಂಟಿಸಿ ಅಧ್ಯಕ್ಷ ನಾಗರಾಜು ಯಾದವ್, ಉಪಾಧ್ಯಕ್ಷ ಗೋವಿಂದರಾಜು, ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‌ರೂಪ್‌ಕೌರ್ ಸೇರಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News