ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಎಸ್.ಪಿ. ತ್ಯಾಗಿಗೆ ಡಿ.30ರವರೆಗೆ ಸೆರೆವಾಸ
ಹೊಸದಿಲ್ಲಿ, ಡಿ.17: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿಸಲ್ಪಟ್ಟು ಸಿಬಿಐ ಕಸ್ಟಡಿಯಲ್ಲಿದ್ದ ವಾಯುಪಡೆಯ ಮಾಜಿ ಮುಖಸ್ಥ ಎಸ್.ಪಿ.ತ್ಯಾಗಿ ಅವರಿಗೆ ಡಿ.30ರವರೆಗೆ ಸೆರೆವಾಸ ವಿಧಿಸಲಾಗಿದೆ. ಡಿ.10ರಂದು ತ್ಯಾಗಿಯವರನ್ನು ಬಂಧಿಸಲಾಗಿದ್ದು ಸಿಬಿಐ ಕಸ್ಟಡಿಗೆ ನೀಡಲಾಗಿತ್ತು.
ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ತ್ಯಾಗಿಯವರ ಪತ್ನಿ ಅತ್ತುಬಿಟ್ಟರು. ಗಣ್ಯವ್ಯಕ್ತಿಗಳ ಬಳಕೆಗೆ ಅಗತ್ಯವಿರುವ 12 ಹೆಲಿಕಾಪ್ಟರ್‌ಗಳ ಖರೀದಿಗಾಗಿ ನಡೆದ ಟೆಂಡರ್ ಪ್ರಕ್ರಿಯೆ ಸಂದರ್ಭ , ಆಗ ವಾಯುಪಡೆ ಮುಖ್ಯಸ್ಥರಾಗಿದ್ದ ತ್ಯಾಗಿ ತಮ್ಮ ಪ್ರಭಾವ ಬಳಸಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿದ್ದರು ಎಂಬುದು ಇಲ್ಲಿರುವ ವಿವಾದವಾಗಿದ್ದು ಇದರ ವಿಚಾರಣೆಯನ್ನು ಇಟಲಿ ಮತ್ತು ಭಾರತದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿ, ಅಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆಯ ಮಾತೃಸಂಸ್ಥೆ ‘ಫಿನ್‌ಮೆಕ್ಯಾನಿಕಾ’ ದ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಇಟಲಿಯ ಸುಪ್ರೀಂಕೋರ್ಟ್ ಇಟಲಿಯಲ್ಲಿ ಮರುವಿಚಾರಣೆಗೆ ಆದೇಶಿಸಿದೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಲಾಯಿತು.
ಮೂಲ ದೂರು ಮತ್ತು ಭ್ರಷ್ಟಾಚಾರ ಆರೋಪದಡಿ ವಿಧಿಸಲಾಗಿರುವ ಶಿಕ್ಷೆಯಲ್ಲಿ ದಿನಾಂಕ, ಸ್ಥಳ ಮತ್ತು ವ್ಯಕ್ತಿಗಳ ಉಲ್ಲೇಖದಲ್ಲಿ ವ್ಯತ್ಯಾಸವಿದೆ ಎಂಬ ಕಾರಣಕ್ಕೆ ಮಿಲನ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಇಟಲಿಯ ಸುಪ್ರೀಂಕೋರ್ಟ್ ರದ್ದುಪಡಿಸಿದೆ.
ಪ್ರಕರಣದ ಮೂವರು ಆರೋಪಿಗಳಾದ ಎಸ್.ಪಿ.ತ್ಯಾಗಿ, ಅವರ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ದಿಲ್ಲಿ ಮೂಲದ ವಕೀಲ ಗೌತಮ್ ಖೇತಾನ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಡಿ.21ರಂದು ನಡೆಯಲಿದೆ.