ಬಿಹಾರ | ಮಹಿಳೆಯರಿಗೆ ಮೀಸಲಾಗಿದ್ದ ಯೋಜನೆಯ ನಗದು ಪುರುಷರಿಗೆ ಜಮೆ: ಮರಳಿ ಪಡೆಯಲು ಅಧಿಕಾರಿಗಳಿಂದ ಹರಸಾಹಸ
ಸಾಂದರ್ಭಿಕ ಚಿತ್ರ (PTI)
ದರ್ಭಾಂಗ/ಪಾಟ್ನಾ: ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಮಹಿಳೆಯರಿಗೆಂದೇ ಮೀಸಲಾಗಿದ್ದ ಯೋಜನೆಯಡಿ ಪುರುಷ ಗ್ರಾಮಸ್ಥರಿಗೆ 10,000 ರೂ. ನಗದು ವರ್ಗಾವಣೆಯಾಗಿದ್ದು, ಅದನ್ನು ಮರಳಿ ಪಡೆಯಲು ಬಿಹಾರದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಖಾತೆಗಳಿಗೆ ತಲಾ 10,000 ರೂ. ನಗದು ಸ್ವೀಕರಿಸಿರುವ ಪುರುಷ ಗ್ರಾಮಸ್ಥರ ಗುಂಪೊಂದು ಆ ಮೊತ್ತವನ್ನು ಈಗಾಗಲೇ ಛತ್ ಪೂಜೆ, ದೀಪಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ್ದಾರೆ. ಮತ್ತೆ ಕೆಲವರು ಬಾತುಕೋಳಿಗಳು ಹಾಗೂ ಮೇಕೆಗಳನ್ನು ಖರೀದಿಸಿದ್ದು, ತಮಗೆ ಬಂದಿದ್ದ ಮೊತ್ತವನ್ನು ಮರಳಿ ನೀಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಸೆಪ್ಟೆಂಬರ್ 26ರಂದು ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆಯಡಿ ಸುಮಾರು 1.40 ಕೋಟಿ ಮಹಿಳೆಯರಿಗೆ ತಲಾ 10,000 ರೂ. ಸಹಾಯ ಧನವನ್ನು ಅವರ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿತ್ತು.
ಆದರೆ, ತಾಂತ್ರಿಕ ತೊಡಕಿನಿಂದ ಈ ಯೋಜನೆಯ ಮೊತ್ತವು ದರ್ಭಾಂಗ ಜಿಲ್ಲೆಯ ಜಾಲೆ ವಿಧಾನಸಭಾ ಕ್ಷೇತ್ರದ ಅಹಿಯಾರಿ ಗ್ರಾಮದ ಕೆಲವು ಪುರುಷರ ಖಾತೆಗಳಿಗೆ ತಪ್ಪಾಗಿ ವರ್ಗಾವಣೆಯಾಗಿದೆ ಎಂದು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರಕಾರಿ ಸಂಸ್ಥೆ ಜೀವಿಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದ ಕನಿಷ್ಠ ಮೂವರು ಪುರುಷ ಗ್ರಾಮಸ್ಥರ ಖಾತೆಗಳಿಗೆ ಜೀವಿಕಾದ ಬ್ಲಾಕ್ ಯೋಜನಾ ನಿರ್ದೇಶಕರಿಂದ ವರ್ಗಾವಣೆಯಾಗಿರುವ ತಲಾ 10,000 ರೂ. ಅನ್ನು ಮರಳಿಸುವಂತೆ ಈಗಾಗಲೇ ಅವರಿಗೆಲ್ಲ ನೋಟಿಸ್ ಜಾರಿಗೊಳಿಸಲಾಗಿದೆ.
ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆಯಡಿ ತಪ್ಪಾಗಿ ನಗದು ಸ್ವೀಕರಿಸಿರುವ ಫಲಾನುಭವಿಗಳನ್ನು ನಾಗೇಂದ್ರ ರಾಮ್, ಬಲರಾಮ್ ಸಾಹ್ನಿ ಹಾಗೂ ರಾಮ್ ಸಾಗರ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ವಿಕಲಚೇತನರೂ ಹಾಗೂ ಆರ್ಥಿಕವಾಗಿ ಬಡವರೂ ಆಗಿದ್ದಾರೆ.