×
Ad

ಉತ್ತರಾಖಂಡ| ಗುಂಪಿನಿಂದ ಥಳಿತಕ್ಕೊಳಗಾದ ಪತ್ರಕರ್ತ ಮೃತ್ಯು

Update: 2025-12-17 16:46 IST

Photo credit: X/@AjitSinghRathi

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಗುಂಪೊಂದು ಹಲ್ಲೆ ನಡೆಸಿದ ಬಳಿಕ ಪತ್ರಕರ್ತನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಕಜ್ ಮಿಶ್ರಾ ಮೃತ ಪತ್ರಕರ್ತ. ರಾಜ್‌ಪುರದಲ್ಲಿ ಈ ಘಟನೆ ನಡೆದಿದೆ.

ಡೆಹ್ರಾಡೂನ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ಸೋಮವಾರ ರಾತ್ರಿ ಪತ್ರಕರ್ತ ಪಂಕಜ್ ಮಿಶ್ರಾ ಅವರ ನಿವಾಸಕ್ಕೆ ನುಗ್ಗಿ ಅವರನ್ನು ಗುಂಪೊಂದು ಥಳಿಸಿದೆ. ಪ್ರಮುಖ ಆರೋಪಿ ಅಮಿತ್ ಸೆಹಗಲ್ ಡಿಜಿಟಲ್ ಮೀಡಿಯಾ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ನಡೆಸಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ಕಾರಣ ತಿಳಿದಿಲ್ಲ. ಆದ್ದರಿಂದ ಕುಟುಂಬವು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ವಿನಂತಿಸಿದೆ. ನಾವು ವರದಿಯನ್ನು ಪರಿಶೀಲಿಸುತ್ತೇವೆ ಮತ್ತು ಹೇಳಿಕೆಗಳನ್ನು ಸಂಗ್ರಹಿಸುತ್ತೇವೆ. ನಂತರ ಈ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದರು.

ಮಿಶ್ರಾ ಅವರ ಸಹೋದರ ಅರವಿಂದ್ ನೀಡಿದ ದೂರಿನ ಆಧಾರದ ಮೇಲೆ ರಾಜ್‌ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಮಿತ್ ಮತ್ತು ಇತರ ಕೆಲವರು ಮಿಶ್ರಾ ಅವರ ನಿವಾಸಕ್ಕೆ ನುಗ್ಗಿ ಹತ್ಯೆ ಮಾಡುವ ಉದ್ದೇಶದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

"ಗುಂಪು ಅಮಿತ್ ಅವರ ಎದೆ, ಹೊಟ್ಟೆಗೆ ಥಳಿಸಿದ ಪರಿಣಾಮ ಅವರ ಬಾಯಿಯಿಂದ ರಕ್ತಸ್ರಾವವಾಗಲು ಪ್ರಾರಂಭಿಸಿತು. ಮಿಶ್ರಾ ಮತ್ತು ಅವರ ಪತ್ನಿಯ ಮೊಬೈಲ್ ಫೋನ್‌ಗಳನ್ನು ಕೂಡ ಗುಂಪು ಕಿತ್ತುಕೊಂಡಿದೆ. ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ಸ್ಥಿತಿ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು" ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News