ಇಂಡಿಗೊ ಅವ್ಯವಸ್ಥೆ: ಹೊಸ ಪಿಐಎಲ್ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ ದಿಲ್ಲಿ ಹೈಕೋರ್ಟ್
Photo credit: PTI
ಹೊಸದಿಲ್ಲಿ: ಇಂಡಿಗೊ ವಿಮಾನ ರದ್ದತಿಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡ ಪ್ರಯಾಣಿಕರಿಗೆ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಕೋರಿ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿರುದ್ಧ ತನಿಖೆ ನಡೆಸುವಂತೆ ಕೋರಿ ಎನ್ಜಿಒ ಸೆಂಟರ್ ಫಾರ್ ಅಕೌಂಟೆಬಿಲಿಟಿ ಅಂಡ್ ಸಿಸ್ಟಮ್ಯಾಟಿಕ್ ಚೇಂಜ್ (ಸಿಎಎಸ್ಸಿ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತು ಯಾವುದೇ ನಿರ್ದೇಶನಗಳನ್ನು ನೀಡಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಇಂಡಿಗೊ ವಿಮಾನ ಅವ್ಯವಸ್ಥೆ ಕುರಿತ ಪಿಐಎಲ್ ಈಗಾಗಲೇ ಹೈಕೋರ್ಟ್ನಲ್ಲಿ ಬಾಕಿ ಇದೆ. ಅರ್ಜಿದಾರರು ಹೊಸ ಪಿಐಎಲ್ ಸಲ್ಲಿಸುವ ಬದಲು ಆ ವಿಷಯದಲ್ಲಿ ಕಕ್ಷಿದಾರನಾಗಲು ಕೋರಿಕೆ ಸಲ್ಲಿಸಬೇಕಿತ್ತು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠ ಹೇಳಿದೆ.
ಪ್ರಸ್ತುತ ಪಿಐಎಲ್ನಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಹಿಂದಿನ ಪಿಐಎಲ್ನಲ್ಲಿ ನ್ಯಾಯಾಲಯ ಈಗಾಗಲೇ ಪರಿಶೀಲಿಸುತ್ತಿದೆ ಎಂದು ಹೈಕೋರ್ಟ್ ಗಮನಿಸಿದೆ.