ಅಮರೀಂದರ್ ಅವಸರ!

Update: 2016-12-17 18:50 GMT

ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ ವಿಧಾನಸಭಾ ಚುನಾವಣೆಯ ದಿನಾಂಕದ ಬಗ್ಗೆ ಸ್ವಲ್ಪಮಟ್ಟಿಗೆ ಗೊಂದಲ ಇದ್ದಂತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ರಾಜ್ಯದ ಶಿಕ್ಷಣ ಮಂಡಳಿ ಪರೀಕ್ಷೆಗಳು ಮುಗಿದ ಬಳಿಕ ಚುನಾವಣೆ ನಡೆಯಲಿ ಎಂಬ ಬಗ್ಗೆ ಒಲವು ಹೊಂದಿದ್ದಾರೆ. ಆದರೆ ಪಂಜಾಬ್‌ನ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮಾತ್ರ ಅವಸರದಲ್ಲಿದ್ದಾರೆ. 2017ರ ಮಾರ್ಚ್ ಒಳಗಾಗಿ ಚುನಾವಣೆಯ ಫಲಿತಾಂಶವೂ ಬರಬೇಕು ಎಂಬ ತರಾತುರಿ ಅವರದ್ದು. ಈ ಮೂಲಕ ತುಂಬುಹೃದಯದಿಂದ ತಮ್ಮ ಮೊಮ್ಮಗಳು ನಿರ್ವಾಣ್ ವಿವಾಹದಲ್ಲಿ ಪಾಲ್ಗೊಳ್ಳಬಹುದು ಎಂಬ ಲೆಕ್ಕಾಚಾರ ಅವರದ್ದು. ಅಂದರೆ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ಪಕ್ಷ ಪರಾಜಯ ಹೊಂದಿದರೂ ಸಂಭ್ರಮಿಸಲು ಕಾರಣ ಇರುತ್ತದೆ. ಆದರೆ ಚೆಂಡು ಭಾರತದ ಚುನಾವಣಾ ಆಯೋಗದ ಅಂಗಳದಲ್ಲಿದೆ.

ಅನಂತ್ ಕುಮಾರ್ ಗೊಣಗಾಟ!
ಅನಂತ್ ಕುಮಾರ್ ಸಂಸದೀಯ ವ್ಯವಹಾರಗಳ ಸಚಿವ. ಆದರೆ ಈ ಖಾತೆಯನ್ನು ಹಿಂದೆ ಹೊಂದಿದ್ದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು, ಸಂಸದೀಯ ಕಲಾಪಗಳನ್ನು ಮಾಧ್ಯಮಗಳಿಗೆ ವಿವರಿಸುವುದರಿಂದ ಅವರನ್ನು ತಡೆಯಲು ಸಾಧ್ಯವಾಗಿಲ್ಲ. ಅಂದರೆ ಕುಮಾರ್ ಈ ಬಗ್ಗೆ ದೂರುತ್ತಿದ್ದಾರೆ ಎಂಬ ಅರ್ಥವಲ್ಲ; ಆದರೆ ಮಾಧ್ಯಮದವರು ಯಾವಾಗಲೂ ನಾಯ್ಡು ಅವರನ್ನೇ ಏಕೆ ನೆಚ್ಚಿಕೊಳ್ಳುತ್ತಾರೆ ಎಂಬ ಸದ್ದು ಎಬ್ಬಿಸಿದ್ದರು. ಬಿಜೆಪಿ ಜೇಷ್ಠತಾ ಪಟ್ಟಿಯಲ್ಲಿ ವೆಂಕಯ್ಯ ನಾಯ್ಡು ಅವರದ್ದು ಅನಂತ್ ಕುಮಾರ್ ಅವರಿಗಿಂತ ಹಿರಿಯ ಶ್ರೇಣಿ. ಅವರ ಆಪ್ತ ಮೂಲಗಳ ಪ್ರಕಾರ, ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವರಾಗಿ, ಸಂಸದೀಯ ಕಲಾಪ ಸೇರಿದಂತೆ ಸರಕಾರದ ಕಾರ್ಯನಿರ್ವಹಣೆ ಬಗೆಗಿನ ಯಾವುದೇ ಸುದ್ದಿ ಅಥವಾ ಮಾಹಿತಿಯನ್ನು ಪ್ರಸಾರ ಮಾಡುವುದು ಅವರ ಹಕ್ಕು. ಆದರೆ ಮೇಲ್ನೋಟಕ್ಕೆ ಇದನ್ನು ಕಾರ್ಯವ್ಯಾಪ್ತಿ ಬಗೆಗಿನ ವಿವಾದ ಎಂದು ಅನಂತ್ ಕುಮಾರ್ ತೋರ್ಪಡಿಸಿಕೊಂಡಿಲ್ಲ. ಆದರೆ ಉಭಯ ಸಚಿವರ ಅಧೀನ ಅಧಿಕಾರಿಗಳು ಮಾತ್ರ ಯಾವುದು ನ್ಯಾಯೋಚಿತ ಎಂಬ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ.

ಇದು ಆಝಾದ್ ಕಾಲವಲ್ಲ!
ಪತ್ರಕರ್ತರು ಸದಾ ಸಮಬಲದ ಹೋರಾಟದ ನಿರೀಕ್ಷೆಯಲ್ಲಿರುತ್ತಾರೆ. ಆದ್ದರಿಂದ ಸಾಮಾನ್ಯವಾಗಿ ಸಂಸದರ ನಡುವೆ ನಡೆಯುವ ಕ್ರಿಕೆಟ್ ಪಂದ್ಯವನ್ನು ಎದುರು ನೋಡುತ್ತಿರುತ್ತಾರೆ. ಬಹುತೇಕ ಬಾರಿ ಗಮನ ಸೆಳೆಯುವುದು, ಈ ಪಂದ್ಯದ ಪಿತಾಮಹ ಎನಿಸಿಕೊಂಡ ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್ ಕೀರ್ತಿ ಆಝಾದ್. ಆದರೆ ಈ ಬಾರಿ ಪಂದ್ಯದ ಸುತ್ತ ಅವರು ಸುಳಿಯುವುದೂ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಆಝಾದ್ ಲೋ ಪ್ರೊಫೈಲ್ ಆಗಿಯೇ ಉಳಿದಿದ್ದಾರೆ. ಆದ್ದರಿಂದ ಈ ಬಾರಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುವ ಮೂಲಕ ಅವರು ಮುನ್ನೆಲೆಗೆ ಬರುವ ಸಾಧ್ಯತೆ ವಿರಳ.

ನ್ಯಾ. ಠಾಕೂರ್ ಅವರಿಂದ ಚಿದಂಬರಂ ಗುಣಗಾನ
ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಭಾವನಾತ್ಮಕ ಜೀವಿ ಎನಿಸಿಕೊಂಡವರು. ಸಾರ್ವಜನಿಕ ಸಮಾರಂಭದಲ್ಲೇ ಸಾಮಾನ್ಯವಾಗಿ ಇವರ ಭಾವನೆಗಳು ಕಟ್ಟೆಯೊಡೆಯುತ್ತವೆ. ಆದರೆ ಕೆಲವೊಮ್ಮೆ ತಕ್ಷಣ ಸಿಟ್ಟು ಎಲ್ಲೆ ಮೀರುವುದೂ ಇದೆ. ನ್ಯಾಯಾಲಯದಲ್ಲಿ ಘನತೆ ಕಾಪಾಡಿಕೊಳ್ಳದ ವಕೀಲರ ವಿರುದ್ಧ ಇತ್ತೀಚೆಗೆ ಅವರು ಹರಿಹಾಯ್ದರು. ಇದು ಮೀನು ಮಾರುಕಟ್ಟೆಯೇ? ಇದರಿಂದ ನಾನು ಯಾವ ನೆನಪನ್ನು ಒಯ್ಯಲು ಸಾಧ್ಯ? ವಕೀಲರು ಹೇಗೆ ನಡೆದುಕೊಳ್ಳಬೇಕು ಎಂಬ ಕಲ್ಪನೆಯೂ ಇಲ್ಲದೇ ಪರಸ್ಪರರನ್ನು ಮೀರಿಸುವ ಪ್ರಯತ್ನ ಮಾಡುತ್ತಿದ್ದೀರಿ. ನನಗೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದು ಒಂದು ವಾರ ಮಾತ್ರ. ನಾನು ಭಾರವಾದ ಹೃದಯದೊಂದಿಗೆ ಇಲ್ಲಿಂದ ವಿರಮಿಸುತ್ತಿದ್ದೇನೆ ಎಂದು ಹೇಳಿದರು. ವಕೀಲರು ಹಿರಿಯರಾದ ಪಿ.ಚಿದಂಬರಂ ಅವರಿಂದ ಕಲಿಯಬೇಕಾದ್ದು ಸಾಕಷ್ಟಿವೆ ಎಂದು ಸಿಜೆ ಹೇಳಿಬಿಟ್ಟರು. ಚಿದಂಬರಂ ಅವರತ್ತ ನೋಡಿ. ಅವರು ಎಂದಾದರೂ ಏರುಧ್ವನಿಯಲ್ಲಿ ವಾದ ಮಾಡಲು ಎದ್ದು ನಿಂತಿರುವುದು ನೋಡಿದ್ದೀರಾ? ಇಲ್ಲ. ಸದಾ ಗದ್ದಲ ಎಬ್ಬಿಸುವ ವಕೀಲರಿಂದ ಅವರು ಕಡಿಮೆ ತಿಳಿದುಕೊಂಡವರು ಎಂದುಕೊಂಡಿದ್ದೀರಾ?ಎಂದರು.

ಸುಮಿತ್ರಾ ಮಹಾಜನ್ ಅಸಮಾಧಾನ?
 ಸಂಸತ್ತಿನ ಚಳಿಗಾಲದ ಅಧಿವೇಶನ ವಿವಾದದಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಹೆಚ್ಚು ಅಸಮಾಧಾನಗೊಂಡದ್ದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್. ಅದರಲ್ಲೂ ಮುಖ್ಯವಾಗಿ ಚಳಿಗಾಲದ ಅಧಿವೇಶನದ ಅವಧಿಯಲ್ಲೇ ಎರಡು ಬಾರಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿಯವರ ಸಿಟ್ಟು ಕಟ್ಟೆಯೊಡೆದ ಬಳಿಕ. ಒಂದು ಬಾರಿ ಅವರು ಅನಂತ್ ಕುಮಾರ್ ಅವರಲ್ಲಿ, ಲೋಕಸಭೆಯ ಸ್ಪೀಕರ್ ಕೂಡಾ ಸದನ ಕಲಾಪ ನಡೆಸಲು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸದಾ ಸದನದಲ್ಲಿ ಗೌರವಯುತ ಸ್ಥಾನ ಹೊಂದಿರುವ ಸುಮಿತ್ರಾ ಮಹಾಜನ್, ಇಡೀ ಸದನದಲ್ಲಿ ಕೋಲಾಹಲದ ಪರಿಸ್ಥಿತಿ ಇದ್ದರೂ, ಆಡಳಿತ ಪಕ್ಷದವರು ಮಸೂದೆಗೆ ಆಂಗೀಕಾರ ಪಡೆಯಲು ಅವರಿಗೆ ಅನುಕೂಲ ಮಾಡಿಕೊಡುವ ಮೂಲಕ ಆಡಳಿತ ಪಕ್ಷದ ಪಕ್ಷಪಾತಿಯಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣದಿಂದ ತಮ್ಮ ಗೌರವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿದ್ದಾರೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಇದರ ಜತೆಗೆ ಅಡ್ವಾಣಿ ಆಕ್ರೋಶ, ಸಭಾಧ್ಯಕ್ಷರಲ್ಲಿ ಬೇಸರ ತಂದಿದೆ. ಬಹುಶಃ ಅವರ ಮುಖದಲ್ಲಿ ನಗೆ ತಂದುಕೊಳ್ಳಲು ವಿಶೇಷ ಅಧಿವೇಶನ ಅಥವಾ ಬಜೆಟ್ ಅಧಿವೇಶನವಾದರೂ ಅವಕಾಶ ನೀಡುತ್ತದೆಯೇ ಎಂದು ಕಾದುನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News