ಭಾರತದ ಶಿಕ್ಷಣ ಸಮಸ್ಯೆಉಲ್ಬಣ
ದೇಶದ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆಯಾಗಿ ನೋಡಿದರೆ, ಜಾರ್ಖಂಡ್ ರಾಜ್ಯದ ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಕೊರತೆ ವ್ಯಾಪಕವಾಗಿದೆ. ಅಲ್ಲಿನ ಪ್ರೌಢಶಾಲೆಗಳಲ್ಲಿ ಶೇ.70ರಷ್ಟು ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶೇ.38ರಷ್ಟು ಶಿಕ್ಷಕರ ಕೊರತೆ ಇದೆ.
ದೇಶದಲ್ಲಿ ಶಿಕ್ಷಣ ರಂಗ ಹಲವು ಸಮಸ್ಯೆಗಳ ಗೂಡಾಗಿದ್ದು, ಸರಕಾರಿ ಶಾಲೆಗಳ ಸ್ಥಿತಿಯಂತೂ ಅಧೋಗತಿ. ಲೋಕಸಭೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಇತ್ತೀಚೆಗೆ ಲೋಕಸಭೆಗೆ ನೀಡಿದ ಮಾಹಿತಿ ಸರಕಾರಿ ಶಾಲೆಗಳ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೇ.18 ಹಾಗೂ ಸರಕಾರಿ ಪ್ರೌಢಶಾಲೆಗಳಲ್ಲಿ ಶೇ.15ರಷ್ಟು ಶಿಕ್ಷಕ ಹುದ್ದೆಗಳು ಖಾಲಿ ಇವೆ ಎಂದು ಜಾವಡೇಕರ್ ಬಹಿರಂಗಪಡಿಸಿದ್ದಾರೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸರಕಾರಿ ಶಾಲೆಗಳಲ್ಲಿ ಪ್ರತಿ ಆರು ಶಿಕ್ಷಕ ಹುದ್ದೆಗಳ ಪೈಕಿ ಒಂದು ಖಾಲಿ. ದೇಶದಲ್ಲಿ ಒಟ್ಟಾರೆಯಾಗಿ ಹತ್ತು ಲಕ್ಷಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿವೆ. ಇದು ದೇಶದ ಸರಾಸರಿ ಖಾಲಿ ಹುದ್ದೆಗಳ ವಿವರ. ಇದರ ಒಳಹೊಕ್ಕು ನೋಡಿದರೆ, ಕಡಿಮೆ ಪ್ರಮಾಣದ ಸಾಕ್ಷರತೆ ಇರುವ ರಾಜ್ಯಗಳಲ್ಲಿ ಶಿಕ್ಷಕರ ಕೊರತೆ ಇನ್ನಷ್ಟು ಹೆಚ್ಚು. 2015-16ನೆ ಸಾಲಿನ ಶಿಕ್ಷಣ ಇಲಾಖೆಯ ವರದಿ ಪ್ರಕಾರ, ದೇಶದಲ್ಲಿ ಶಾಲೆಗೆ ತೆರಳುವ 26 ಕೋಟಿ ಮಕ್ಕಳ ಪೈಕಿ ಶೇ.55ರಷ್ಟು ಮಂದಿ ಸರಕಾರಿ ಶಾಲೆೆಗಳಲ್ಲಿ ಕಲಿಯುತ್ತಿದ್ದಾರೆ. ಶೇ.45ರಷ್ಟು ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುತ್ತಾರೆ.
ದೇಶದ 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ ಯಾಗಿ ನೋಡಿದರೆ, ಜಾರ್ಖಂಡ್ ರಾಜ್ಯದ ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಕೊರತೆ ವ್ಯಾಪಕವಾಗಿದೆ. ಅಲ್ಲಿನ ಪ್ರೌಢಶಾಲೆಗಳಲ್ಲಿ ಶೇ.70ರಷ್ಟು ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶೇ.38ರಷ್ಟು ಶಿಕ್ಷಕರ ಕೊರತೆ ಇದೆ.
ಉತ್ತರ ಪ್ರದೇಶದ ಸೆಕೆಂಡರಿ ಶಾಲೆಗಳ ಶಿಕ್ಷಕ ಹುದ್ದೆಗಳಲ್ಲಿ ಶೇ.50ರಷ್ಟು ಖಾಲಿ ಇದ್ದರೆ, ಬಿಹಾರ ಹಾಗೂ ಗುಜರಾತ್‌ನಲ್ಲಿ ಶೇ.33ರಷ್ಟು ಶಿಕ್ಷಕ ಹುದ್ದೆಗಳು ಭರ್ತಿಯಾಗಿಲ್ಲ.
ಶಿಕ್ಷಕರ ಕೊರತೆಗೆ ಮುಖ್ಯ ಕಾರಣ ಎಂದರೆ, ನಿಯಮಿತವಾಗಿ ಖಾಲಿ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳದಿರುವುದು. ಹುದ್ದೆಗಳಿಗೆ ಮಂಜೂರಾತಿ ನೀಡದಿರುವುದು, ಗೊಂದಲಕಾರಿ ನೇಮಕಾತಿ ನೀತಿ, ಕೆಲ ವಿಷಯಗಳಿಗೆ ತಜ್ಞ ಶಿಕ್ಷಕರ ಕೊರತೆ ಹಾಗೂ ಸಣ್ಣ ಶಾಲೆಗಳಿರುವುದರಿಂದ ಇರುವ ಶಿಕ್ಷಕರು ಹರಿದು ಹಂಚಿ ಹೋಗಿರುವುದು ಕೂಡಾ ಇದಕ್ಕೆ ಕಾರಣವಾಗಿದೆ. ದೇಶದಲ್ಲಿ ಸುಮಾರು 60 ಲಕ್ಷ ಶಿಕ್ಷಕ ಹುದ್ದೆಗಳು ಸರಕಾರಿ ಶಾಲೆಗಳಲ್ಲಿದ್ದು, ಈ ಪೈಕಿ ಒಂಬತ್ತು ಲಕ್ಷ ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಹಾಗೂ ಪ್ರೌಢಶಾಲೆಗ ಳಲ್ಲಿ ಒಂದು ಲಕ್ಷದಷ್ಟು ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿವೆ. ಅಂದರೆ ಒಟ್ಟು 10 ಲಕ್ಷ ಶಿಕ್ಷಕ ಹುದ್ದೆಗಳು ಖಾಲಿ. ಹಿಂದಿ ಮಾತನಾಡುವ ದೊಡ್ಡ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶದಲ್ಲಿ ಸುಮಾರು 33 ಕೋಟಿ ಮಂದಿ ವಾಸವಿದ್ದಾರೆ. ದೇಶದ ಒಟ್ಟು ಶಿಕ್ಷಕರ ಕೊರತೆಯಲ್ಲಿ ಈ ಭಾಗದ ಪಾಲು ಶೇ.25ರಷ್ಟು. ಅಂದರೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಸೇರಿ ಈ ಭಾಗದಲ್ಲಿ ಶೇ.26ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ತದ್ವಿರುದ್ಧವಾಗಿ ಗೋವಾ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಯಾವ ಪ್ರಾಥಮಿಕ ಶಿಕ್ಷಕ ಹುದ್ದೆಯೂ ಖಾಲಿ ಇಲ್ಲ.
ಅಸ್ಸಾಂ, ಹಿಮಾಚಲ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಕ್ರಮವಾಗಿ ಶೇ.3.9, 3.9 ಮತ್ತು 2ರಷ್ಟು ಹುದ್ದೆಗಳು ಮಾತ್ರ ಖಾಲಿ ಇವೆ. ಅಂದರೆ ಇಲ್ಲಿ ಶಿಕ್ಷಕ ಹುದ್ದೆಗಳುಬಹುತೇಕ ಭರ್ತಿಯಾಗಿವೆ. ಅಂತೆಯೇ ಮಿಜೋರಾಂ ಹಾಗೂ ಸಿಕ್ಕಿಂನ ಪ್ರೌಢಶಾಲೆ ಗಳಲ್ಲಿ ಯಾವ ಶಿಕ್ಷಕ ಹುದ್ದೆಯೂ ಖಾಲಿ ಇಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇಡೀ ದೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲದ ಏಕೈಕ ರಾಜ್ಯವೆಂದರೆ ಸಿಕ್ಕಿಂ.
ಹಿಂದಿ ಮಾತನಾಡುವ ಉತ್ತರ ರಾಜ್ಯಗಳ ದೊಡ್ಡ ನಗರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ, ಅಂದರೆ ದಿಲ್ಲಿ ಹಾಗೂ ಚಂಡಿಗಡದಂಥ ಪ್ರದೇಶಗಳಲ್ಲಿ ಕೂಡಾ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ಕೊರತೆ ಇರುವುದು, ಹಿಂದಿ ಪ್ರದೇಶಗಳ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಎರಡೂ ನಗರಗಳಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೇ.25ರಷ್ಟು ಶಿಕ್ಷಕ ಹುದ್ದೆಗಳು ಖಾಲಿ ಇವೆ.