‘ಯುಎಪಿಎ’ ಪ್ರಕರಣಗಳ ಪರಿಶೀಲನೆಗೆ ಪ್ರಾಧಿಕಾರ ರಚನೆ: ಗೃಹ ಸಚಿವ ಪರಮೇಶ್ವರ್

Update: 2016-12-18 14:59 GMT

ಬೆಂಗಳೂರು, ಡಿ. 18: ಕಾನೂನು ಬಾಹಿರ ಅಪರಾಧ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)-1967ರಡಿ ದಾಖಲಾಗುವ ಪ್ರಕರಣಗಳ ಪರಿಶೀಲನೆಗೆ ಶೀಘ್ರದಲ್ಲೆ ಪ್ರಾಧಿಕಾರವೊಂದನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ಏರ್ಪಡಿಸಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ದೇಶಿತ ಕಾಯ್ದೆಯಲ್ಲಿಯೇ ಪ್ರಾಧಿಕಾರ ರಚಿಸಬೇಕೆಂಬ ನಿರ್ದೇಶನವಿದ್ದರೂ, ರಾಜ್ಯದಲ್ಲಿ ಪ್ರಾಧಿಕಾರ ರಚನೆ ಮಾಡಿರಲಿಲ್ಲ ಎಂದರು.

ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಮೊದಲು ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಾಧಿಕಾರ ಅವುಗಳನ್ನು ಪರಿಶೀಲಿಸಿದ ಬಳಿಕ ತನಿಖಾ ತಂಡಗಳಿಗೆ ವಹಿಸುತ್ತವೆ. ಆದರೆ, ಇದೀಗ ದಾಖಲಾಗುವ ಪ್ರಕರಣಗಳು ನೇರವಾಗಿ ತನಿಖಾ ತಂಡಗಳಿಗೆ ವಹಿಸಲಾಗುತ್ತಿದೆ. ಇದರಿಂದ ಕಾಯ್ದೆ ದುರುಪಯೋಗ ಆರೋಪಗಳ ಹಿನ್ನೆಲೆಯಲ್ಲಿ ಪ್ರಾಧಿಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗವು ಈ ಬಗ್ಗೆ ಮನವಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಯುಎಪಿಎ ಪ್ರಾಧಿಕಾರ ರಚನೆ ಮಾಡಲು ನಿರ್ಧರಿಸಿದೆ ಎಂದು ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಣೆ ನೀಡಿದರು.

ರಾಜ್ಯದಲ್ಲಿನ ಅಲ್ಪಸಂಖ್ಯಾತರ ಮೇಲೆ ಅನಾವಶ್ಯಕವಾಗಿ ‘ಸುಳ್ಳು ಆರೋಪ’ದ ಮೇಲೆ ದಾಖಲಿಸಿಕೊಂಡಿರುವ ಪೊಲೀಸ್ ದೂರುಗಳನ್ನು ಹಿಂಪಡೆಯುವ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾನೂನಿನ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಪರಮೇಶ್ವರ್ ತಿಳಿಸಿದರು.

ನಾಮ ನಿರ್ದೇಶನದಲ್ಲಿ ಆದ್ಯತೆ: ನಗರ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನ ವೇಳೆ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕೆಂದು ಸಲಹೆ ಮಾಡಿದ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್, ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮೂಡಿಸಲು ಕಾಂಗ್ರೆಸ್ ಮುಂದಾಗಬೇಕೆಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ದೊರೆಯದ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕುಗಳಲ್ಲಿ ಅವರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಅಲ್ಪಸಂಖ್ಯಾತರ ಮಹಿಳೆಯರ ಸ್ವ ಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ಅಗತ್ಯ ನೆರವು ನೀಡಬೇಕೆಂದು ರಮೇಶ್‌ಕುಮಾರ್ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News