‘ನೈಸ್’ ಸಂಸ್ಥೆಯ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಿಲ್ಲ: ಕಾನೂನು ಸಚಿವ ಜಯಚಂದ್ರ

Update: 2016-12-19 15:08 GMT

ಬೆಂಗಳೂರು, ಡಿ. 19: ‘ನೈಸ್’ ಅಕ್ರಮ ಸಂಬಂಧ ಸದನ ಸಮಿತಿ ಮಹತ್ವದ ಶಿಫಾರಸ್ಸುಗಳೊಂದಿಗೆ ವರದಿ ನೀಡಿದ್ದು, ಅದು ವ್ಯರ್ಥವಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಲ್ಲದೆ, ಮೂಲ ಒಪ್ಪಂದವನ್ನು ಉಲ್ಲಂಘಿಸಿ ಟೋಲ್ ಸಂಗ್ರಹ ತಡೆಗೆ ರಾಜ್ಯ ಸರಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ಅಕ್ರಮ ಸಂಬಂಧ ಸದನ ಸಮಿತಿ ಶಿಫಾರಸ್ಸುಗಳ ಅನುಷ್ಠಾನಕ್ಕೆ ತರಲು ಮೂರು ಮಂದಿ ನೇತೃತ್ವದ ಉನ್ನತ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಣೆ ನೀಡಿದರು.

ಅನಧಿಕೃತ ಟೋಲ್ ಸಂಗ್ರಹ ತಡೆ, ಹೆಚ್ಚುವರಿ ಭೂಮಿ ರೈತರಿಗೆ ವಾಪಸ್ ಹಾಗೂ 12ಸಾವಿರ ಎಕರೆ ಹೆಚ್ಚುವರಿ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಡಿ-ನೋಟಿಫೈ ಮಾಡುವುದು ಸೇರಿದಂತೆ ಒಟ್ಟು 22 ಶಿಫಾರಸ್ಸುಗಳನ್ನು ಮಾಡಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

500 ರೂ.ಮತ್ತು 1 ಸಾವಿರ ರೂ. ನೋಟು ರದ್ದತಿ ಬಳಿಕ ಒಂದು ತಿಂಗಳು ಕಾಲ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ‘ನೈಸ್’ ರಸ್ತೆಯಲ್ಲಿ ಟೋಲ್ ಸಂಗ್ರಹ ನಿಂತಿರಲಿಲ್ಲ ಎಂದ ಅವರು, ಪ್ರತಿನಿತ್ಯ 1.53 ಕೋಟಿ ರೂ.ಗಳನ್ನು ಅನಧಿಕೃತವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ದೂರಿದರು.

‘ನೈಸ್’ ಅಕ್ರಮ ಸಂಬಂಧದ ದಾಖಲೆಗಳು ಒಂದು ಕೊಠಡಿಗೂ ಹೆಚ್ಚಿದ್ದು, ನೂರಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್, ಹೈಕೋರ್ಟ್ ಸೇರಿ ವಿವಿಧ ನ್ಯಾಯಾಲಯಗಳಲ್ಲಿದ್ದು, ಹಲವು ಆದೇಶಗಳು ಬಂದಿವೆ ಎಂದ ಅವರು, ಯಾವುದೇ ಕಾರಣಕ್ಕೂ ‘ನೈಸ್’ ಸಂಸ್ಥೆ ಮಾಲಕರಿಗೆ ರಸ್ತೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News