ಸಹಕಾರಿ ಬ್ಯಾಂಕ್‌ಗಳಿಗೆ ಕೆಟ್ಟ ದಿನಗಳು, ಹೊಸವರ್ಷ ಸಂಭ್ರಮಾಚರಣೆಗೆ ಗ್ರಹಣ?

Update: 2016-12-26 18:06 GMT

ನೋಟು ರದ್ದತಿಯ ನಂತರ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ‘ಗ್ರಹಣ’
ನವೆಂಬರ್ 8ರ ನಂತರ ಭ್ರಷ್ಟಾಚಾರದ ವಿರುದ್ಧ ನೋಟು ರದ್ದತಿಯ (ರೂ. 500-1000) ಆಂದೋಲನ ಈಗ ‘ಕ್ಯಾಶ್‌ಲೆಸ್ ಸೊಸೈಟಿ’ಯ ದೃಶ್ಯ ಕಾಣಿಸುತ್ತಿದ್ದರೆ ಮುಂಬೈಯ ಶೇ.75ಕ್ಕೂ ಹೆಚ್ಚು ಎಟಿಎಂ ಮೆಷಿನ್‌ಗಳಲ್ಲಿ ‘ಕ್ಯಾಶ್’ ಇಲ್ಲ. ಅರ್ಥಾತ್ ಸೊಸೈಟಿ ‘ಕ್ಯಾಶ್‌ಲೆಸ್’ ಆಗುತ್ತಿದೆ. ಇದ್ದ ಎಟಿಎಂಗಳಲ್ಲೂ ಎರಡು ಸಾವಿರದ ನೋಟುಗಳೇ ಬರುತ್ತಿವೆ. ಅಪರೂಪಕ್ಕೆ ಒಂದೊಂದು ಕಡೆ ರೂ. 500-100ರ ನೋಟುಗಳು ಲಭ್ಯವಿದೆ.
ದೊಡ್ಡ ನೋಟುಗಳ ರದ್ದತಿಗೆ ಒಂದೂವರೆ ತಿಂಗಳು ಕಳೆಯಿತು. ಈಗಿನ ಇನ್ನೊಂದು ಸಮಸ್ಯೆ ಏನೆಂದರೆ ಮಹಾರಾಷ್ಟ್ರದ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಬಾಗಿಲು ಹಾಕುವ ದೃಶ್ಯ ಕಾಣಿಸಿದೆ.

ಮಹಾರಾಷ್ಟ್ರದ 31 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಪ್ರತೀ ದಿನ 608 ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಆದರೆ ನೋಟು ರದ್ದತಿಯ ನಂತರ ಪ್ರತೀ ದಿನ ಕೇವಲ 45.43 ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಇದಕ್ಕೆ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ದಿನ ನಿತ್ಯದ ವಹಿವಾಟು ಎಲ್ಲಾ ರೀತಿಯಲ್ಲೂ ನಿಂತಿದೆ. ಸಹಕಾರಿ ಬ್ಯಾಂಕ್‌ಗಳ ನೌಕರರಿಗೆ ಕೆಲಸವಿಲ್ಲದೆ ಸುಮ್ಮನಿರುವ ಸ್ಥಿತಿ ಬಂದಿದೆ. ಸಹಕಾರಿ ಬ್ಯಾಂಕ್‌ನಲ್ಲಿ ಹಣವೇ ಇಲ್ಲದಿರುವಾಗ ತನ್ನ ಗ್ರಾಹಕರ ಸೇವೆ ಹೇಗೆ ಮಾಡಲು ಸಾಧ್ಯ?

ಇಂದು ಮಹಾರಾಷ್ಟ್ರದ ಅನೇಕ ಸಹಕಾರಿ ಬ್ಯಾಂಕ್‌ಗಳು ರಾಜಕೀಯ ನಾಯಕರ ವಶದಲ್ಲಿವೆ. ಪ್ರತೀ ದಿನದ ವ್ಯವಹಾರಗಳಲ್ಲಿ ಈ ನಾಯಕರ ಹಸ್ತಕ್ಷೇಪ ಇರುತ್ತದೆ. ಇದರಿಂದಾಗಿ ಅನೇಕ ಬ್ಯಾಂಕ್‌ಗಳ ಹೆಸರು ಹಾಳಾಗುತ್ತಿರುವುದೂ ಸುಳ್ಳಲ್ಲ.

ಕೇಂದ್ರ ಸರಕಾರವು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಹಳೆಯ ರೂ. 500-1000ದ ನೋಟುಗಳನ್ನು ಬದಲಿಸುವ ಅಧಿಕಾರವನ್ನೇ ನೀಡಿಲ್ಲ. ಇದರಿಂದ ಈ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯೂ ಹದಗೆಟ್ಟಿತು ಎನ್ನುತ್ತಾರೆ.

ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಕೆಲಸಗಳ ನಿಗಾ ವಹಿಸಿರುವ ತಜ್ಞರ ಪ್ರಕಾರ ಈ ಜಿಲ್ಲಾ ಬ್ಯಾಂಕ್‌ಗಳ ಬಳಿ ರೂ. 500-1000ದ ರದ್ದತಿಯಾಗಿರುವ ನೋಟುಗಳು ಸುಮಾರು 5 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಈ ಹಣಕ್ಕೆ ಬ್ಯಾಂಕ್‌ಗೆ 4 ಪ್ರತಿಶತ ದರದಲ್ಲಿ ಬಡ್ಡಿ ನೀಡಬೇಕಾಗುತ್ತದೆ. ಇದರಿಂದ ಈ ಬ್ಯಾಂಕ್‌ಗಳಿಗೆ ಪ್ರತಿದಿನ 55 ಲಕ್ಷ ರೂಪಾಯಿ ಮತ್ತು ಪ್ರತೀ ತಿಂಗಳು 17 ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆಯಂತೆ.
ನೋಟು ರದ್ದತಿಯ ನಂತರ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ಮುಂದಿಟ್ಟು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ದಿಲ್ಲಿಯಿಂದ ಒಂದಿಷ್ಟು ಪರಿಹಾರ-ರಿಯಾಯಿತಿ ಪಡೆಯಲು ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿಯನ್ನು ಭೇಟಿಯಾಗಲು ಮುಂದಾಗಿದ್ದಾರೆ. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ನೋಟು ಬದಲಿಸುವುದಕ್ಕೆ ಇದ್ದ ನಿಷೇಧವನ್ನು ಮುಂದಿಟ್ಟು ಚರ್ಚೆ ನಡೆಸಲಿದ್ದಾರೆ.
***

ಏರುತ್ತಿರುವ ಬಜೆಟ್, ಇಳಿಯುತ್ತಿರುವ ವಿದ್ಯಾರ್ಥಿ ಸಂಖ್ಯೆ
ಗುಣಮಟ್ಟದ ಶಿಕ್ಷಣದ ಕೊರತೆ ಮತ್ತು ಅನುಭವಿ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ ಪ್ರತೀ ವರ್ಷ ಮುಂಬೈ ಮಹಾನಗರ ಪಾಲಿಕೆ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಸರ್ವೇಯೊಂದರ ವರದಿಯಂತೆ ಮನಪಾ ಶಾಲೆಗಳ ಬಜೆಟ್ ಕಳೆದ 6 ವರ್ಷಗಳಲ್ಲಿ 52 ಪ್ರತಿಶತ ವೃದ್ಧಿಯಾಗಿದ್ದು 1,255 ಕೋಟಿ ರೂಪಾಯಿಯಿಂದ 2,630 ಕೋಟಿ ರೂಪಾಯಿ ಅಗಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ 14 ಪ್ರತಿಶತ ಇಳಿಕೆಯಾಗಿದ್ದು 4,49,179ರಿಂದ 3,83,485 ಆಗಿರುತ್ತದೆ.

ಪ್ರಜಾ ಫೌಂಡೇಶನ್ ಮುಂಬೈ ಮನಪಾ ಶಿಕ್ಷಣ ವಿಭಾಗದ ವಿಷಯವಾಗಿ ರಿಪೋರ್ಟ್ ಕಾರ್ಡ್ ಜಾರಿಗೊಳಿಸಿದ್ದು ಮನಪಾ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 2008ರಿಂದ ನಿರಂತರ ಇಳಿಕೆಯಾಗುತ್ತಿದೆ. ಆದರೆ ಬಜೆಟ್ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ 55,668 ವಿದ್ಯಾರ್ಥಿಗಳು ಮನಪಾ ಶಾಲೆಗಳನ್ನು ತ್ಯಜಿಸಿದ್ದಾರೆ.

2008-2009ರಲ್ಲಿ ಮನಪಾ ಶಾಲೆಗಳಲ್ಲಿ 4,51,810 ವಿದ್ಯಾರ್ಥಿಗಳು ಓದುತ್ತಿದ್ದರು. 2015-2016ರಲ್ಲಿ 3,83,485 ಉಳಿದಿದೆ. ಪ್ರಜಾ ಫೌಂಡೇಶನ್‌ನ ಅನುಸಾರ ಇದೇ ರೀತಿ ಮಕ್ಕಳು ಕಡಿಮೆಯಾದರೆ 2020ರ ತನಕ ಮುಂಬೈ ಮನಪಾ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ 2,82,000ಕ್ಕೆ ಇಳಿಯಬಹುದಾಗಿದೆ.

 ಮನಪಾ ಶಾಲೆಗಳಲ್ಲಿನ ಶಿಕ್ಷಣ ಪ್ರಣಾಳಿಕೆಯಲ್ಲಿ ಪಾಲಕರಿಗೆ ವಿಶ್ವಾಸ ಕಡಿಮೆಯಾಗುತ್ತಿರುವ ಕಾರಣ ಪ್ರತೀ ವರ್ಷ ವಿದ್ಯಾರ್ಥಿಗಳ ನೋಂದಣಿಯ ಕೂಡಾ ಕಡಿಮೆಯಾಗಿದೆ. 2008-09ರಲ್ಲಿ ಮೊದಲನೆ ತರಗತಿಯಲ್ಲಿ 63,392 ಮಕ್ಕಳು ನೋಂದಣಿಗೊಂಡಿದ್ದರೆ 2015-16ರಲ್ಲಿ 34,549 ಮಕ್ಕಳು ನೋಂದಣಿಯಾಗಿದ್ದಾರೆ. ಇದೇ ದೃಶ್ಯ ಮುಂದುವರಿದರೆ 2020ರ ಸುಮಾರಿಗೆ ಮೊದಲನೆ ತರಗತಿಗೆ ವಿದ್ಯಾರ್ಥಿಗಳ ನೋಂದಣಿ 5,500 ಕೂಡಾ ಮೀರಲಾರದು ಎಂದಿದೆ ಪ್ರಜಾ ಸಮೀಕ್ಷೆ.

‘‘ನಾವು ಮನಪಾ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಎಲ್ಲಾ ರೀತಿಯ ಪ್ರಯತ್ನ ಕೈಗೊಂಡಿರುತ್ತೇವೆ’’ ಎಂದು ಮಹಾನಗರ ಪಾಲಿಕೆ ಶಿಕ್ಷಣಾಧಿಕಾರಿ ಮಹೇಶ್ ಪಾಲ್ಕರ್ ಹೇಳುತ್ತಾರೆ. ಇತ್ತ ಪ್ರಜಾ ಫೌಂಡೇಶನ್‌ನ ಸಂಸ್ಥಾಪಕ ನಿತಿನ್ ಮೆಹ್ತಾ ಹೇಳುತ್ತಾರೆ- ‘‘ಶಿಕ್ಷಣದ ಗುಣಮಟ್ಟ ಏರಿಕೆಯಾಗದೆ ಈ ಸಮಸ್ಯೆ ಪರಿಹಾರವಾಗಲಾರದು’’ ಎಂದು.

ಶಿಕ್ಷಣ ನಮ್ಮ ಹಕ್ಕು. ಶಾಲೆಗಳಲ್ಲೇ ಭಾವೀ ನಾಗರಿಕರ ಸೃಷ್ಟಿಯಾಗುವುದು. ದೇಶದ, ಎಲ್ಲಕ್ಕಿಂತ ಅತಿ ಶ್ರೀಮಂತ ಮಹಾನಗರ ಪಾಲಿಕೆ ಮುಂಬೈ ಮನಪಾ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಶಿಕ್ಷಣಕ್ಕಾಗಿ ಇರಿಸುವ ಬಜೆಟ್‌ನ ಸದುಪಯೋಗ ಆಗುತ್ತಿಲ್ಲವೇ? ಕೇವಲ ಬಜೆಟ್ ವಿತರಿಸಿದರಷ್ಟೇ ಶಿಕ್ಷಣದ ಸ್ತರ ಏರಿಕೆಯಾಗದು ಎನ್ನುವುದು ತಜ್ಞರ ಪ್ರತಿಕ್ರಿಯೆ.
***

ಅಂಚೆ ಕಚೇರಿಯಲ್ಲಿ ‘ಹೇರಾಫೇರಿ’
ರೂ. ಐನೂರು-ಸಾವಿರದ ನೋಟು ರದ್ದತಿಯ ನಂತರ ಕೆಲವು ಬ್ಯಾಂಕ್‌ಗಳಲ್ಲಿ ಭ್ರಷ್ಟಾಚಾರ ನಡೆದಿರುವ ಸಂಗತಿ ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ವರದಿಯಾಗಿದೆ. ಆದರೆ ಮುಂಬೈ ಮಹಾನಗರದ ಸಮೀಪದ ಮೀರಾ ರೋಡ್‌ನಲ್ಲಿ ಅಂಚೆ ಕಚೇರಿಯಲ್ಲೂ ಕೋಟಿಗಟ್ಟಲೆ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ದೂರು ವರದಿಯಾಗಿದೆ. ಇಲ್ಲಿನ ಓರ್ವ ಮಹಿಳಾ ಏಜೆಂಟ್ ಮತ್ತು ಆಕೆಯ ಸಹಾಯಕಿ ಒಟ್ಟುಗೂಡಿ ಕೋಟಿಗಟ್ಟಲೆ ರೂಪಾಯಿಯ ‘ಹೇರಾಫೇರಿ’ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ. ಸುಮಾರು 250ರಷ್ಟು ಗ್ರಾಹಕರಿಗೆ ವಂಚಿಸಲಾಗಿದೆಯಂತೆ. ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಸಹಾಯಕಿ ಪರಾರಿಯಾಗಿದ್ದಾಳೆ. ಅತ್ತ ಅಂಚೆ ಇಲಾಖೆಯೂ ವಿಭಾಗೀಯ ತನಿಖೆಯನ್ನು ಆರಂಭಿಸಿದೆ.

ಅಂಚೆ ಕಚೇರಿಯಲ್ಲಿ ಇವರಿಬ್ಬರು ಮಹಿಳೆಯರು (ಏಜೆಂಟ್) ವಿಭಿನ್ನ ಉಳಿತಾಯ ಖಾತೆಗಳು ಮತ್ತು ಹೂಡಿಕೆ ಯೋಜನೆಗಳಲ್ಲಿ ಹಣ ಜಮಾ ಮಾಡಿದ ಗ್ರಾಹಕರ ಹಣವನ್ನು ಮೆಚ್ಯುರಿಟಿ ಆದ ನಂತರ ತಾವೇ ಆ ಹಣವನ್ನು ತೆಗೆದಿದ್ದಾರೆ. ಹೇಗೆಂದರೆ ಆ ಹಣವನ್ನು ಯಾರ ಹೆಸರಲ್ಲಿ ದಾಖಲಿಸಬೇಕಿತ್ತೋ ಆ ಹೆಸರನ್ನು ಅಲ್ಲಿ ನಮೂದಿಸಿರಲಿಲ್ಲ. ಆದರೆ, ಸೀಲ್ ಹಾಕಿದ ಪಾಸ್‌ಬುಕ್ ಆ ಗ್ರಾಹಕರಿಗೆ ನೀಡುತ್ತಿದ್ದರು. ರಿಜಿಸ್ಟರ್‌ನಲ್ಲಿ ಬೇರೆಯೇ ಹೆಸರುಗಳಿರುತ್ತಿತ್ತು. ಹೀಗಾಗಿ ಗ್ರಾಹಕರಿಗೆ ಯಾವುದೇ ಸಂಶಯ ಬಂದಿರಲಿಲ್ಲ. ಇದು ಅನೇಕ ವರ್ಷಗಳಿಂದ ನಡೆಯುತ್ತಿದ್ದು ಕೋಟಿಗಟ್ಟಲೆ ರೂಪಾಯಿ ಗೋಲ್‌ಮಾಲ್ ನಡೆದಿರುವ ಸಂಶಯ ವ್ಯಕ್ತಪಡಿಸಲಾಗಿದೆ. ಇಲ್ಲಿ ಅಂಚೆ ಕಚೇರಿಯ ಒಳಗಿನವರೂ ಸೇರಿರುವ ಸಂಶಯವಿದೆ.

ಮೀರಾ ರೋಡ್ ನಿವಾಸಿ ಅನಿಲ್ ಪಂಡಿತ್ ಎಂಬವರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಸ್ಟಲ್ ಸೇವಿಂಗ್ಸ್ ಯೋಜನೆಯಲ್ಲಿ ಜಮಾ ಮಾಡಲಾದ ಹಣದ ಅಂತಿಮ ಅವಧಿ ವಿಚಾರಿಸಲು ಪೋಸ್ಟ್ ಆಫೀಸ್‌ಗೆ ಬಂದು ಮಾಹಿತಿ ಕೇಳಿದಾಗ ಅವರ ಖಾತೆಯಿಂದ ಅವಧಿಯ ಮೊದಲೇ 8 ಲಕ್ಷ ರೂಪಾಯಿ ತೆಗೆಯಲಾಗಿದೆ ಎನ್ನಲಾಯಿತು ಹಾಗೂ ಖಾತೆ ಮುಚ್ಚಲಾಗಿದೆ ಎಂದರು. ಈ ಹಣ ಮಹಿಳಾ ಏಜಂಟರ ಮೂಲಕ ಜಮಾ ಮಾಡಿದ್ದರು. ಏಜೆಂಟ್ ಮತ್ತು ಆಕೆಯ ಸಹಾಯಕಿ ಈಗ ವಿಚಾರಣೆ ಎದುರಿಸಬೇಕಾಗಿದ್ದು ಸಹಾಯಕಿಯನ್ನು ಹುಡುಕಬೇಕಾಗಿದೆ.

ಮಹಿಳಾ ಏಜಂಟರು ಕಪ್ಪು ಹಣವನ್ನು ಬಿಳಿ ಮಾಡುವ ಆಸೆ ತೋರಿಸಿ ಅನೇಕರಿಗೆ ವಂಚಿಸಿದ್ದಾರೆಂದೂ ಹೇಳಲಾಗಿದೆ. ಕೆಲವು ಜನರಿಂದ ಅಂಚೆ ಕಚೇರಿಯಲ್ಲಿ ಖಾತೆ ತೆರೆಸಿ 9 ಲಕ್ಷ ರೂಪಾಯಿಯ ಹಳೆ ನೋಟುಗಳನ್ನು ಜಮಾ ಮಾಡಿದೆವು ಎಂದು ಅವರಿಗೆಲ್ಲ ತಿಳಿಸಿದ್ದರು. ಆದರೆ ಆ ಗ್ರಾಹಕರ ಖಾತೆಗೆ ಹಣ ಜಮಾ ಮಾಡಲೇ ಇಲ್ಲ. ಇದೀಗ ತನಿಖೆ ನಡೆಯುತ್ತಿದೆ. ಇಲ್ಲಿ ಅಂಚೆ ಕಚೇರಿಯ ಕೆಲವು ಅಧಿಕಾರಿಗಳ ಮೇಲೂ ಸಂಶಯವಿದೆ.
***

ನ್ಯೂ ಇಯರ್ ಟೂರ್ ಇಲ್ಲ!
ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸಲಿದೆ. ಈ ಬಾರಿ ಡಿ. 31 ಶನಿವಾರ ಬಂದಿದೆ. ಹೊಸ ವರ್ಷದ ಮೊದಲ ದಿನ ರವಿವಾರ. ಹಾಗಿದ್ದರೂ ಅನೇಕರು ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮುಂಬೈಯ ಹಲವು ಟೂರ್ ಆಪರೇಟರ್‌ಗಳನ್ನು ವಿಚಾರಿಸಿದರೆ ಹೊಸ ವರ್ಷ-2017ರ ಸಂಭ್ರಮಾಚರಣೆಯ ತಯಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 30ರಿಂದ 40ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆಯಂತೆ.

ಹಣದ ಅಭಾವದಿಂದಾಗಿ ಜನರು ಎಲ್ಲ ಪ್ರವಾಸದ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದಾರೆ. ಪ್ರತೀ ವರ್ಷದ ಕೊನೆಗೆ ಯಾವ ರೀತಿಯ ಮೋಜು-ಮಸ್ತಿಯ ಯೋಜನೆಯಿತ್ತೋ ಜನರು ಈಗ ಇವೆಲ್ಲದರ ಆಸಕ್ತಿ ಕಳೆದುಕೊಂಡಿದ್ದಾರೆ. ಹೀಗಾಗಿ ದುಬೈಯ ವಿಮಾನ ಟಿಕೆಟ್ ಕೂಡಾ 6,000 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಮುಂಬೈಯಿಂದ ಗೋವಾಕ್ಕೆ ಹೋಗುವ ವಿಮಾನ ಟಿಕೆಟ್‌ನಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 30 ಇಳಿಕೆಯಾಗಿದೆ. ಮುಂಗಡ ಕಾದಿರಿಸುವಿಕೆ ಕಡಿಮೆಯಾದ ಕಾರಣ ಹೊಟೇಲ್ ಕೋಣೆಗಳ ಬಾಡಿಗೆ ದರಗಳನ್ನೂ ಕಡಿಮೆ ಮಾಡಲಾಗಿದೆ ಎನ್ನುತ್ತಾರೆ ಟೂರ್ ಆಪರೇಟರ್‌ಗಳು.

ಹಾಗಿದ್ದೂ ಕೆಲವು ಟೂರ್ ಆಪರೇಟರ್‌ಗಳ ಪ್ರಕಾರ ಈ ಪರಿಸ್ಥಿತಿ ತಾತ್ಕಾಲಿಕ. ನೋಟು ರದ್ದತಿಯ ಗೊಂದಲ ಮುಗಿಯುತ್ತಿದ್ದಂತೆ ಮುಂದಿನ ಬೇಸಿಗೆ ರಜೆಯ ಸಮಯ ಮತ್ತೆ ಪ್ರವಾಸೋದ್ಯಮ ಎದ್ದು ನಿಲ್ಲಬಹುದು ಎಂಬ ಆಶಾವಾದ ಅವರು ವ್ಯಕ್ತಪಡಿಸುತ್ತಾರೆ.
***

ಚಿನ್ನದ ಕೆಲಸಗಾರರ ಪಲಾಯನ
ನೋಟು ರದ್ದತಿಯ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಮುಂಬೈಯ ಆಭರಣ ಮಾರುಕಟ್ಟೆ ತಣ್ಣಗಾಗಿದೆ. ಮುಂಬೈಯಲ್ಲಿ ಒಂದೂವರೆ ಲಕ್ಷದಷ್ಟಿರುವ ಆಭರಣ ತಯಾರಿಕೆಯ ಕಾರ್ಮಿಕರಲ್ಲಿ ಶೇ. 70ರಷ್ಟು ಕಾರ್ಮಿಕರು ಕೆಲಸ ತ್ಯಜಿಸಿ ಊರಿಗೆ ಮುಖಮಾಡುತ್ತಿದ್ದಾರೆ. ಉದ್ಯೋಗದ ಪರ್ಯಾಯ ವ್ಯವಸ್ಥೆಯೇ ಕಂಡು ಬಾರದ್ದರಿಂದ ಅವರೆಲ್ಲ ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ.

ಆಭರಣ ಕಾರ್ಮಿಕರು ಮುಂಬೈಯಲ್ಲಿ ಝವೇರಿ ಬಝಾರ್, ಭೊಲೇಶ್ವರ, ಕಾಲ್ಬಾದೇವಿ, ಮಝ್‌ಗಾಂವ್, ಅಂದೇರಿ, ಘಾಟ್‌ಕೋಪರ್, ಗೋರೆಗಾಂವ್, ಮಲಾಡ್, ಬೊರಿವಲಿ, ಭಾಯಂದರ್ ಮುಂತಾದೆಡೆ ಚಿಕ್ಕ ಚಿಕ್ಕ ಕೋಣೆಗಳಲ್ಲಿ ಕೆಲಸ ಮಾಡುತ್ತಾರೆ. ಇನ್ನು ಹಲವೆಡೆ ಕಾರ್ಮಿಕರು ಜುವೆಲ್ಲರಿ ಶೋರೂಮ್‌ಗಳ ಹಿಂಬದಿ ಆಭರಣ ತಯಾರಿಸುತ್ತಾರೆ.

ಮುಂಬೈಯ ಹೋಲ್‌ಸೇಲ್ ಗೋಲ್ಡ್ ಜ್ಯುವೆಲ್ಲರಿ ಅಸೋಸಿಯೇಶನ್‌ನ ಅಧ್ಯಕ್ಷ ವಿನೋದ್ ಜೈನ್ ವಡಾಲ ಹೇಳುವಂತೆ ಈ ಕಾರ್ಮಿಕರು ದೈನಿಕ ಅಥವಾ ಮಾಸಿಕ ವೇತನದಲ್ಲಿ ಗುತ್ತಿಗೆದಾರರ ಮೂಲಕ ಕೆಲಸ ಮಾಡುತ್ತಾರೆ. ಪ್ರತೀ ಕಾರ್ಮಿಕ ದಿನವೊಂದಕ್ಕೆ ರೂ. 500ರಿಂದ 600 ಅಥವಾ ತಿಂಗಳಲ್ಲಿ 12,000ರಿಂದ 15,000 ಸಂಪಾದಿಸುತ್ತಾರೆ. ಅದರಲ್ಲಿ ಸುಮಾರು 5,000ದಲ್ಲಿ ತಮ್ಮ ಎಲ್ಲ ಖರ್ಚನ್ನು ಸರಿದೂಗಿಸಿ ಉಳಿದ ಮೊತ್ತವನ್ನು ಊರಿನ ಕುಟುಂಬಕ್ಕೆ ಕಳುಹಿಸುತ್ತಾರೆ. ನೋಟು ಅಮಾನ್ಯದ ನಂತರ ಇವರೆಲ್ಲರಿಗೂ ಕೆಲಸ ಕಡಿಮೆಯಾಗಿದೆ.

ಬಂಗಾಳ ಸ್ವರ್ಣಶಿಲ್ಪಿ ಕಲ್ಯಾಣ್ ಸಂಘದ ಕಾಳಿದಾಸ ಸಿನ್ಹಾ ಹೇಳುವಂತೆ ಹೆಚ್ಚಿನ ಚಿನ್ನದ ಕೆಲಗಾರರು ಪಶ್ಚಿಮ ಬಂಗಾಳದವರು. ಈಗ ಅವರೆಲ್ಲರೂ ನಿರುದ್ಯೋಗಿಗಳಾಗಿದ್ದಾರೆ. ‘ವಿ’ ಚೈನ್ ಗ್ರೂಪ್ನ ಪ್ರಮುಖರು ಹೇಳುವ ಪ್ರಕಾರ, ಅವರ ಬಳಿ ಹಿಂದೆ 150ರಷ್ಟು ಕೆಲಸಗಾರರಿದ್ದರೆ ಇಂದು ಕೇವಲ 40 ಕೆಲಸಗಾರರು ಮಾತ್ರ ಉಳಿದಿದ್ದಾರೆ.

ನೋಟ್ ಅಮಾನ್ಯದ ನಂತರ ಆಭರಣಗಳ ಅಂಗಡಿಗಳ ಮೇಲೆ ಹದ್ದಿನ ದೃಷ್ಟಿ ಇರುವ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಜನ ಆಭರಣ ಖರೀದಿಸದೆ ಮೀನಮೇಷ ಎಣಿಸುತ್ತಿದ್ದಾರೆ. ಎಲ್ಲಿ ಲಾಕರ್‌ಗಳ ತನಿಖೆ ಆರಂಭಿಸುತ್ತಾರೋ ಎಂಬ ವದಂತಿ ಬೇರೆ ಇದೆ! 
 

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News