ಆರೋಪಿಯನ್ನು ಹಿಡಿಯಲು ಬಂದ ಪೊಲೀಸರ ಮೇಲೆಯೇ ನಾಯಿಗಳನ್ನು ಛೂ ಬಿಟ್ಟ ಮಹಿಳೆ !
ಬೆಂಗಳೂರು, ಡಿ.27: ಕೊಲೆ ಯತ್ನ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಲು ಪೊಲೀಸರು ಇತ್ತೀಚೆಗೆ ಮುಂಜಾವು ಮೂರು ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಲೇಔಟಿನ ಕಾಶಿನಗರದಲ್ಲಿರುವ ಆತನ ಮನೆಯ ಕದ ತಟ್ಟಿದಾಗ ಅವರನ್ನು ಒಳಪ್ರವೇಶಿಸಲು ಬಿಡದ ಯುವತಿಯೊಬ್ಬಳು ತನ್ನ ನಾಯಿಯನ್ನು ಪೊಲೀಸರತ್ತ ಛೂ ಬಿಟ್ಟ ಪರಿಣಾಮ ಅವರು ಪ್ರಾಣ ಭಯದಿಂದ ಅಲ್ಲಿಂದ ಓಡಿ ಹೋಗುವಂತಾದ ಪ್ರಸಂಗ ನಡೆದಿತ್ತು ಕೊನೆಗೆ ನಾಯಿಯನ್ನು ಅದ್ಹೇಗೋ ತಮ್ಮ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಸಫಲರಾದರು.
ವರದಿಗಳ ಪ್ರಕಾರ ವಿನೋದ್ ಆಲಿಯಾಸ್ ಕೋತಿ ಎಂಬ ಯುವಕ ಕೊಲೆ ಯತ್ನ ಪ್ರಕರಣವೊಂದರಲ್ಲಿ ಬೇಕಾಗಿದ್ದವನಾಗಿದ್ದರಿಂದ ಆತನನ್ನು ಬೆಳಗಿನ ಜಾವ ಸುಲಭವಾಗಿ ಹಿಡಿಯಬಹುದೆಂದು ಪೊಲೀಸರ ಒಂದು ತಂಡ ಆತನ ಮನೆಯತ್ತ ನಡೆದಿತ್ತು. ಆದರೆ ಬಾಗಿಲು ತೆರೆದಿದ್ದ ವಿನೋದ್ ಸಹೋದರಿ ಇಷ್ಟು ಹೊತ್ತಿನಲ್ಲಿ ಬಾಗಿಲು ಬಡಿದಿದ್ದೇಕೆಂದು ಪೊಲೀಸರನ್ನು ಪ್ರಶ್ನಿಸಿದ್ದಳಲ್ಲದೆ ವಿನೋದ್ ಹೆಸರಿನವರು ಮನೆಯಲ್ಲಿಲ್ಲವೆಂದು ಹೇಳಿದ್ದಳು. ಪೊಲೀಸರನ್ನು ನಿಂದಿಸಿದ್ದೇ ಅಲ್ಲದೆ ತನ್ನ ಕೈಯ್ಯಲ್ಲಿದ್ದ ಮೊಬೈಲ್ ಫೋನನ್ನೂ ಅವರತ್ತ ಬೀಸಿದ ಪರಿಣಾಮ ಅದು ಗೋಡೆಗೆ ಬಡಿದು ಚೂರುಚೂರಾಗಿತ್ತು. ಅಂತಿಮ ಯತ್ನವಾಗಿ ಆಕೆ ತನ್ನ ನಾಯಿಯನ್ನು ಪೊಲೀಸರತ್ತ ಛೂ ಬಿಟ್ಟಿದ್ದಳು.ಈ ವಿದ್ಯಮಾನದಿಂದ ಸಂಭಾಳಿಸಿಕೊಂಡಿರುವ ಪೊಲೀಸರು ಇದೀಗ ವಿನೋದನನ್ನು ಬಂಧಿಸಿದ್ದಾರೆ ಹಾಗೂ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾದ ಆತನ ಸಹೋದರಿಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.