ಈಶ್ವರಪ್ಪ-ಬಿಎಸ್‌ವೈ ಬಿಕ್ಕಟ್ಟು ತಾರಕಕ್ಕೆ: ಡಿ.29ರಂದು ಸಭೆ
ಬೆಂಗಳೂರು, ಡಿ.27: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ವೈಮನಸ್ಯವನ್ನು ಅಂತ್ಯಗೊಳಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಡಿ.29ರಂದು ಉಭಯ ನಾಯಕರ ನಡುವೆ ಸಂಧಾನ ಸಭೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಈಶ್ವರಪ್ಪ ನಡೆಸುತ್ತಿರುವ ಚಟುವಟಿಕೆಗಳಿಂದಾಗಿ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದು, ನಮ್ಮ ಸೂಚನೆಗಳನ್ನು ಧಿಕ್ಕರಿಸಿ ನಡೆಯುತ್ತಿರುವ ಈಶ್ವರಪ್ಪರನ್ನು ಪಕ್ಷದಿಂದ ಉಚ್ಛಾಟಿಸಿ, ಇಲ್ಲವೆ ಮುಂದಿನ ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಿ ಎಂದು ಸ್ಪಷ್ಟವಾದ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ಡಿ.29ರಂದು ಹೊಸದಿಲ್ಲಿಗೆ ಬರುವಂತೆ ವರಿಷ್ಠರು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರ ನಡುವೆ ಸಂಧಾನ ಮಾತುಕತೆ ನಡೆಸಲು ಉದ್ದೇಶಿಸಿದ್ದಾರೆ. ಈ ಹಿಂದೆಯೂ ಈಶ್ವರಪ್ಪಗೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಕೆಗಳಿಂದ ದೂರ ಇರುವಂತೆ ವರಿಷ್ಠರು ತಾಕೀತು ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಜಗ್ಗದ ಈಶ್ವರಪ್ಪ, ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ.
ಪಕ್ಷದಲ್ಲಿ ಹಿಂದುಳಿದವರು ಹಾಗೂ ದಲಿತರಿಗಾಗಿ ಮೋರ್ಚಾಗಳಿರುವಾಗ, ಮತ್ತೊಂದು ಸಂಘಟನೆಯ ಅಗತ್ಯವೇನಿದೆ. ಈ ಸಮುದಾಯ, ವರ್ಗಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಪಕ್ಷದ ವ್ಯಾಪ್ತಿಯೊಳಗೆ ನಡೆಯಬೇಕು ಎಂಬ ಸೂಚನೆಯನ್ನು ಈಶ್ವರಪ್ಪ ಪಾಲಿಸುತ್ತಿಲ್ಲ. ಸಂಘಪರಿವಾರದ ಕೆಲ ನಾಯಕರು, ಈಶ್ವರಪ್ಪಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವರಿಷ್ಠರ ಬಳಿ ಯಡಿಯೂರಪ್ಪ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ನಮ್ಮ ಪಕ್ಷ ಸೇರಿದಂತೆ ಇತರೆ ಪಕ್ಷಗಳ ಮುಖಂಡರು ಈಶ್ವರಪ್ಪಗೆ ಕುಮ್ಮಕ್ಕು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆದು, ಸ್ವಯಂ ಬಲದ ಆಧಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ನಮ್ಮ ಸಂಕಲ್ಪ ಈಡೇರಲು ಸಾಧ್ಯವಿಲ್ಲವೆಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಅಡಿಯಲ್ಲೆ ಈಶ್ವರಪ್ಪ ತಮ್ಮ ಜಾತಿಯ, ಸಮುದಾಯದ ಸಮಾವೇಶವನ್ನು ಆಯೋಜನೆ ಮಾಡಿಕೊಳ್ಳಲಿ. ಅವರ ಸಮುದಾಯವನ್ನು ರಾಜಕೀಯವಾಗಿ ಬಲವರ್ಧನೆಗೊಳಿಸುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಪಕ್ಷವನ್ನು ಬಿಟ್ಟು, ಬೇರೆ ಯೊಂದು ಸಂಘಟನೆಯ ಹೆಸರಿನಲ್ಲಿ ಜನರನ್ನು ಸಂಘಟಿಸುವ ಕೆಲಸದಿಂದ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಾಕಷ್ಟು ಹಾನಿಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನಮ್ಮ ಪಕ್ಷದಲ್ಲಿನ ಕೆಲ ನಾಯಕರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಅಧಿಕಾರವನ್ನು ಪಡೆದುಕೊಳ್ಳಲು ಈ ರೀತಿಯ ಬೆಂಬಲ ನೀಡುತ್ತಿದ್ದಾರೆ ಎಂಬ ಅಂಶವು ನನ್ನ ಗಮನಕ್ಕೆ ಬಂದಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ವಿಸರ್ಜನೆಗೆ ಸೂಚಿಸಿ, ಇಲ್ಲವೆ ರಾಜ್ಯದಲ್ಲಿ ಬಿಜೆಪಿ ಎರಡು ಭಾಗಗಳಾಗಿ ವಿಭಜನೆಯಾಗುವುದನ್ನು ನೀವುಗಳು ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ವರಿಷ್ಠರಿಗೆ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.
ಯಡಿಯೂರಪ್ಪರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಎಂದು ಈಶ್ವರಪ್ಪ ಹೇಳುತ್ತಾರೆ. ಆದೆ ಮತ್ತೊಂದೆಡೆ, ಪಕ್ಷ ತನ್ನ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವುದನ್ನು ತಡೆಯುವ ವ್ಯವಸ್ಥಿತ ಷಡ್ಯಂತ್ರವು ನಡೆಯುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.