ರಾಷ್ಟ್ರೀಯ ಮರಣ ರಿಜಿಸ್ಟ್ರಿ ರಚನೆ
ಹೊಸದಿಲ್ಲಿ, ಡಿ.27: ಕೇಂದ್ರ ಆರೋಗ್ಯ ಸಚಿವಾಲಯವು ಎಐಐಎಂಎಸ್‌ನ ಸಹಯೋಗದಲ್ಲಿ ರಾಷ್ಟ್ರೀಯ ಮರಣ ರಿಜಿಸ್ಟ್ರಿಯೊಂದನ್ನು ತಯಾರಿಸಲಿದೆ. ಅದರಲ್ಲಿ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳು ಹಾಗೂ ಅವುಗಳಿಗೆ ಕಾರಣಗಳ ಮಾಹಿತಿ ಇರಲಿದೆ.
ಭಾರತದ ವಿವಿಧ ಭಾಗಗಳ ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವುಗಳ ಕಾರಣಗಳ ಕುರಿತಾಗಿ ರಾಷ್ಟ್ರವ್ಯಾಪಿ ಮಾಹಿತಿ ಮೂಲವೊಂದನ್ನು ಪಡೆಯುವುದು ಇದರ ಗುರಿಯಾಗಿದೆ. ಇದು ನೀತಿ ನಿರೂಪಕರಿಗೆ ರೋಗ ಹರಡುವಿಕೆಯ ಉತ್ತಮ ತಿಳುವಳಿಕೆ ಪಡೆಯಲು ಹಾಗೂ ಸಂಬಂಧಿತ ವಲಯಗಳಲ್ಲಿ ಸಂಪನ್ಮೂಲ ಹಾಗೂ ಆರೋಗ್ಯ ನಿಗಾ ಸೌಲಭ್ಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆಯೆಂದು ಎಐಐಎಂಎಸ್‌ನ ಕಂಪ್ಯೂಟರೈಸೇಶನ್ ಅಧ್ಯಕ್ಷ ದೀಪಕ್ ಅಗರ್ವಾಲ್ ತಿಳಿಸಿದ್ದಾರೆ.
ಎಐಐಎಂ ಈಗಾಗಲೇ ಮರಣ ರಿಜಿಸ್ಟ್ರಿಯ ಪ್ರಾಯೋಗಿಕ ಆವೃತ್ತಿಯನ್ನು ಅನುಷ್ಟಾನಕ್ಕೆ ತಂದಿದೆ. ಅದು ವ್ಯವಸ್ಥಿತ ಔಷಧ ನಾಮಕರಣವೆಂಬ(ಸ್ನೋಮೆಡ್) ಕೋಡಿಂಗ್ ವ್ಯವಸ್ಥೆಯ ವಿಶಿಷ್ಟ ಅಂಶವನ್ನು ಪಡೆದಿದೆ.
ಭಾರತದ ಆರೋಗ್ಯ ನಿಗಾ ವ್ಯವಸ್ಥೆಯಲ್ಲಿ ಇಂತಹ ಅಂತಾರಾಷ್ಟ್ರೀಯ ಕೋಡಿಂಗ್ ವಿಧಾನ ಅನುಷ್ಠಾನಕ್ಕೆ ಬರುತ್ತಿರುವುದು ಇದೇ ಮೊದಲ ಸಲವಾಗಿದೆಯೆಂದು ಆರೋಗ್ಯ ಸಚಿವಾಲಯ ಹೇಳಿದೆ.