×
Ad

ತಮ್ಮ ನಿಶ್ಚಿತಾರ್ಥ ಏರ್ಪಡಿಸಿದ ನ್ಯೂಸ್ ಚಾನೆಲ್ ಗಳಿಗೆ ವಿರಾಟ್-ಅನುಷ್ಕಾ ಮಂಗಳಾರತಿ ಮಾಡಿದ್ದು ಹೀಗೆ!

Update: 2016-12-30 12:17 IST

ಮುಂಬೈ, ಡಿ.30: ತಮ್ಮ ವಿವಾಹ ನಿಶ್ಚಿತಾರ್ಥವಾಗಿದೆಯೆಂಬ ಊಹಾಪೋಹಗಳ ಹರಡಿಕೊಂಡ ಹಿನ್ನೆಲೆಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಟ್ವಿಟ್ಟರ್ ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿ ಈ ಬಗ್ಗೆ ಸುದ್ದಿ ಹರಡಿದ ನ್ಯೂಸ್ ಚಾನೆಲ್ ಗಳಿಗೆ ಮಂಗಳಾರತಿ ಮಾಡಿದ್ದಾರೆ. ‘‘ನಾವಿಬ್ಬರೂ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಹಾಗೆ ಮಾಡಿದರೂ ಅದನ್ನು ಅಡಗಿಸಿಡುವುದಿಲ್ಲ,’’ ಎಂದು ಅವರು ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ.

‘‘ಸುಳ್ಳು ಸುದ್ದಿಗಳನ್ನು ಹರಡಿ ಜನರನ್ನು ಗೊಂದಲಕ್ಕೀಡು ಮಾಡುವುದನ್ನು ನ್ಯೂಸ್ ಚಾನೆಲ್ ಗಳು ನಿಲ್ಲಿಸದೇ ಇರುವುದರಿಂದ ನಾವೇ ಈ ಗೊಂದಲವನ್ನು ಕೊನೆಗಾಣಿಸುತ್ತಿದ್ದೇವೆ,’’ ಎಂದು ವಿರಾಟ್ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಇಂದು ಈ ಟ್ವೀಟ್ ಮಾಡಿದ್ದರೆ ಅನುಷ್ಕಾ ಅದನ್ನು ರಿಟ್ವೀಟ್ ಮಾಡಿದ್ದಾರೆ.

ಬುಧವಾರ ರಾತ್ರಿ ಅನುಷ್ಕಾ ಹಾಗೂ ವಿರಾಟ್ ಜೋಡಿ ಹರಿದ್ವಾರದ ಆಶ್ರಮವೊಂದಕ್ಕೆ ಹೋಗಿ ಅಲ್ಲಿ ಪೂಜೆ ಸಲ್ಲಿಸಿದೆ.ಅವರಿಬ್ಬರು ಆಶ್ರಮದ ಮುಖ್ಯ ಗುರು ಅನಂತ್ ಮಹಾರಾಜ್ ಅವರ ಜತೆ ನಿಂತು ತೆಗೆಸಿರುವ ಫೋಟೋವನ್ನು ಆಶ್ರಮದ ಅನುಯಾಯಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಆದರೆ ಅನಂತ್ ಮಹಾರಾಜ್ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದರೂ ಅವರ ಅನುಯಾಯಿಯೊಬ್ಬರು ವಿರಾಟ್, ಅನುಷ್ಕಾ ಅಲ್ಲಿಗೆ ಬಂದು ಹೋಗಿದ್ದನ್ನು ದೃಢಪಡಿಸಿದ್ದಾರೆ.

ಅಮಿತಾಭ್ ಬಚ್ಚನ್ ಹಾಗೂ ಉದ್ಯಮಿ ಅನಿಲ್ ಅಂಬಾನಿ ಡೆಹ್ರಾಡೂನ್ ಗೆ ಬಂದು ಅಲ್ಲಿಂದ ರಿಷಿಕೇಶ್ ಗೆ ಹೊರಟಿದ್ದು ವಿರಾಟ್-ಅನುಷ್ಕಾ ನಿಶ್ಚಿತಾರ್ಥ ಅಲ್ಲಿ ನಡೆಯಲಿದೆಯೆಂಬ ಗುಲ್ಲು ಹಬ್ಬಲು ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News