ನರೇಗಾ ಉದ್ಯೋಗ ಖಾತ್ರಿ ಯೋಜನೆ : ಕರ್ನಾಟಕ ದೇಶದಲ್ಲೇ ಪ್ರಥಮ
ಬೆಂಗಳೂರು, ಡಿ.30: ನರೇಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನಿಗದಿಪಡಿಸಿದ 6 ಕೋಟಿ ಮಾನವ ದಿನಗಳಲ್ಲಿ 5.50 ಕೋಟಿ ಮಾನವ ದಿನಗಳನ್ನು ಬಳಕೆ ಮಾಡಿಕೊಂಡಿದೆ.ನಿಗದಿ ಪಡಿಸಿದ ಶೇಕಡಾ 90ರಷ್ಟು ಮಾನವ ದಿನಗಳನ್ನು ಬಳಸಿಕೊಂಡು ದೇಶದಲ್ಲಿ ಪ್ರಥಮ ಸ್ಥಾನ ಹೊಂದಿದೆ ಎಂದು ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಹಾಗೂ ಕೃಷಿ ಉತ್ಪನ್ನ ಆಯುಕ್ತರಾದ ಟಿ.ಎಂ.ವಿಜಯ ಭಾಸ್ಕರ್ ವಿಧಾನ ಸೌಧದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದರು.
36.35 ಲಕ್ಷ ಹೆಕ್ಟೇರ್ ಪ್ರದೇಶದಿಂದ ಮುಂಗಾರು ಮಳೆ ವೈಫಲ್ಯದಿಂದ ರಾಜ್ಯಕ್ಕೆ 17,193 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ 4702 ಕೋಟಿ ಪರಿಹಾರ ಕೇಳಿದೆ. ನರೇಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜ್ಯಕ್ಕೆ 2600 ಕೋಟಿ ಬಾಕಿ ಬರಬೇಕಿದೆ. ಕಾರ್ಮಿಕರ ದಿನ ಕೂಲಿಗೆ ತೊಂದರೆಯಾಗದಂತೆ 862 ಕೋಟಿ ಮುಂಗಡವಾಗಿ ಬಿಡುಗಡೆ ಮಾಡಿದೆ.ಕಾಮಗಾರಿಗೆ ಬಳಸುವ ಸಾಮಗ್ರಿ ಮತ್ತು ಮುಂದಿನ ಕಾಮಗಾರಿಗಳಿಗೆ ಬೇಕಾದ ಹಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ನಿಗದಿತ ಗುರಿ ಬಹುತೇಕ ತಲುಪಿರುವುದರಿಂದ ಇನ್ನೂ 10 ಕೋಟಿ ಮಾನವ ದಿನಗಳಿಗಾಗಿ ರಾಜ್ಯ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದೆ.
ಹಿಂಗಾರು ಮಳೆ ವೈಫಲ್ಯದಿಂದ ಆದ ನಷ್ಟ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸರ್ವೆ ನಂತರ ನಿಖರವಾಗಿ ತಿಳಿಯಲಿದೆ.
ದಿಲ್ಲಿಯಲ್ಲಿ ಪ್ರಧಾನಿಯನ್ನು ಇಂದು ಬೇಟಿ ಮಾಡಲಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮುಂಗಾರು ಮತ್ತು ಅತಿವೃಷ್ಪಿಯಿಂದ ಆದ ನಷ್ಟಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ. ಬರಗಾಲದಿಂದ ತತ್ತರಿಸಿರುವ ಜನ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ ಎಂದು ವಿಜಯ ಭಾಸ್ಕರ್ ಮಾಹಿತಿ ನೀಡಿದರು.