ಎಲೆಕೋಸು...ಆರೋಗ್ಯವರ್ಧಕವಾಗಿ ಇದರ ಸೊಗಸೇ ಸೊಗಸು
ಚೀನಿಯರ ಚಿರಯೌವನದ ರಹಸ್ಯವೇನೆಂದು ಎಂದಾದರೂ ಅಚ್ಚರಿಗೊಂಡಿದ್ದೀರಾ..? ಹೌದು, ಅದು ಎಲೆಕೋಸು ಅಥವಾ ಕ್ಯಾಬೇಜ್!
ಫೈಟೊ-ನ್ಯುಟ್ರಿಯಂಟ್ ಆ್ಯಂಟಿ-ಆಕ್ಸಿಡಂಟ್‌ಗಳಿಂದ ಸಮೃದ್ಧವಾಗಿರುವ ಈ ಎಲೆರೂಪದ ತರಕಾರಿ ಸಸ್ಯಶಾಸ್ತ್ರೀಯವಾಗಿ ‘ಬ್ರಾಸಿಕಾ ’ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಬ್ರಾಸಿಕಾ ಒಲೆರೇಸಿಯಾ. ಇದು ವಿಶ್ವಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ಕೃಷಿಬೆಳೆಯಾಗಿದೆ.
ಒಂದರ ಮೇಲೊಂದರಂತೆ ಪದರಗಳನ್ನು ಹೊಂದಿರುವ ಎಲೆಗಳ ಗುಂಪಾಗಿರುವ ಎಲೆಕೋಸು ಅದರಿಂದಾಗಿಯೇ ದುಂಡನೆಯ ಆಕಾರವನ್ನು ಹೊಂದಿರುತ್ತದೆ. ಹಸಿರು, ನೇರಳೆ,ಕೆಂಪು ಇತ್ಯಾದಿ ಬಣ್ಣಗಳಲ್ಲಿ ವಿವಿಧ ಮಾದರಿಗಳ ಎಲೆಕೋಸನ್ನು ವಿಶ್ವಾದ್ಯಂತ ಬೆಳೆಯಲಾಗುತ್ತದೆ.
ಎಲೆಕೋಸಿನ ಆರೋಗ್ಯವರ್ಧಕ ಗುಣಗಳು
ತಾಜಾ,ಕಡುಹಸಿರು ಬಣ್ಣದ ಎಲೆಗಳನ್ನು ಹೊಂದಿರುವ ಕ್ಯಾಬೇಜ್ ಸಮೃದ್ಧ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. 100 ಗ್ರಾಂ ಎಲೆಗಳಲ್ಲಿ ಕೇವಲ 25 ಕ್ಯಾಲೊರಿಗಳಿರುತ್ತವೆ.
ಎಲೆಕೋಸು ಥಿಯೊಸೈನೇಟ್, ಇಂಡೋಲ್-3-ಕಾರ್ಬಿನಲ್, ಲುಟೆನ್, ಝೀ-ಕ್ಸಾಂತಿನ್, ಸಲ್ಫೋರಾಫೇನ್ ಮತ್ತು ಐಸೊಥಿಯೊಸೈನೇಟ್‌ಗಳಂತಹ ಫೈಟೊ ಕೆಮಿಕಲ್‌ಗಳ ನಿಕ್ಷೇಪವಾಗಿದೆ.
ಶಕ್ತಿಶಾಲಿ ಆ್ಯಂಟಿ-ಆಕ್ಸಿಡಂಟ್‌ಗಳಾಗಿರುವ ಈ ಸಂಯುಕ್ತ ಗಳು ಸ್ತನ,ಗುದ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆಯನ್ನು ನೀಡುವುದರ ಜೊತೆಗೆ ರಕ್ತದಲ್ಲಿನ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುವಲ್ಲಿ ನೆರವಾಗುತ್ತವೆ.
ತಾಜಾ ಎಲೆಕೋಸು ನೈಸರ್ಗಿಕ ಆ್ಯಂಟಿ-ಆಕ್ಸಿಡಂಟ್ ಮತ್ತು ವಿಟಾಮಿನ್ ಸಿ ಇವುಗಳ ಅತ್ಯುತ್ತಮ ಮೂಲವಾಗಿದೆ. ಇವು ಪ್ರತಿ ಗ್ರಾಮಿನಲ್ಲಿ 36.6 ಮಿಲಿಗ್ರಾಮ್‌ನಷ್ಟು ಇರುತ್ತವೆ. ಪುಷ್ಕಳ ವಿಟಾಮಿನ್ ಸಿ ಹೊಂದಿರುವ ಆಹಾರದ ನಿಯಮಿತ ಸೇವನೆಯು ಶರೀರವು ಸೋಂಕುರೋಗುಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ.
ಎಲೆಕೋಸು ಪ್ಯಾಂಟೊಥೆನಿಕ್ ಆ್ಯಸಿಡ್(ವಿಟಾಮಿನ್ ಬಿ-5), ಪೈರಿಡಾಕ್ಸಿನ್ (ವಿಟಾಮಿನ್ ಬಿ-6) ಮತ್ತು ಥಿಯಾಮಿನ್(ವಿಟಾಮಿನ್ ಬಿ-1)ನಂತಹ ಅಗತ್ಯ ವಿಟಾಮಿನ್‌ಗಳ ಆಗರವಾಗಿದೆ.
ನಮ್ಮ ದೇಹಕ್ಕೆ ಈ ವಿಟಾಮಿನ್‌ಗಳು ಬಾಹ್ಯಮೂಲ ಗಳಿಂದಲೇ ಪೂರೈಕೆಯಾಗಬೇಕಿರುವುದರಿಂದ ಎಲೆಕೋಸು ಈ ನಿಟ್ಟಿನಲ್ಲಿ ಪ್ರಾಧಾನ್ಯ ಪಡೆದುಕೊಂಡಿದೆ.
ಪೊಟ್ಯಾಶಿಯಂ,ಮ್ಯಾಂಗನೀಸ್,ಕಬ್ಬಿಣ ಮತ್ತು ಮ್ಯಾಗ್ನೀಶಿಯಂಗಳಂತಹ ಖನಿಜ ಗಳನ್ನೂ ಇದು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ. ಜೀವಕೋಶ ಮತ್ತು ಶರೀರದಲ್ಲಿನ ದ್ರವಗಳ ಬಹುಮುಖ್ಯ ಭಾಗವಾಗಿರುವ ಪೊಟ್ಯಾಶಿಯಂ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
ಮ್ಯಾಂಗನೀಸ್‌ನ್ನು ನಮ್ಮ ಶರೀರವು ಆ್ಯಂಟಿಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ. ಕೆಂಪು ರಕ್ತಕಣಗಳ ಸೃಷ್ಟಿಯಲ್ಲಿ ಕಬ್ಬಿಣ ಅಗತ್ಯವಾಗಿದೆ. ಎಲೆಕೋಸಿನಲ್ಲಿ ವಿಟಾಮಿನ್ ಕೆ ಹೇರಳವಾಗಿದೆ.
ನಮ್ಮ ದೇಹದಲ್ಲಿ ಆಸ್ಟರೋಫಿಕ್ ಅಥವಾ ಎಲುಬುಗಳಲ್ಲಿಯ ಖನಿಜಾಂಶಗಳನ್ನು ಹೆಚ್ಚಿಸುವ ಚಟುವಟಿಕೆಯನ್ನು ಉತ್ತೇಜಿಸುವ ಮೂಲಕ ಎಲುಬುಗಳನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಟಾಮಿನ್ ಕೆ ಎಲೆಕೋಸಿನಲ್ಲಿ ಸಮೃದ್ಧವಾಗಿದೆ.
ಅಲ್ಝಿಮರ್ ಕಾಯಿಲೆಯಿಂದ ಬಳಲುವ ರೋಗಿಗಳ ಮಿದುಳಿನಲ್ಲಿಯ ನರವ್ಯೆಹಕ್ಕೆ ಸಂಬಂಧಿಸಿದ ಹಾನಿಯನ್ನು ಸೀಮಿತ ಗೊಳಿಸುವಲ್ಲಿಯೂ ಇದು ಸಹಕಾರಿಯಾಗಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ.