ಜೈಲಿನಲ್ಲಿ ಎದ್ದು ನಿಂತಿದೆ ಅದ್ಭುತ ತಾಜ್ ಮಹಲ್ !

Update: 2017-01-01 07:14 GMT

ಗೋರಖ್‌ಪುರ, ಜ.1: ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್ ವಿಶ್ವದ ಅದ್ಭುತಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಗಿದೆ. ಈಗ ಅದೇ ರಾಜ್ಯದ ಗೋರಖ್‌ಪುರದಲ್ಲಿ ಇನ್ನೊಂದು ಭವ್ಯ ತಾಜ್ ಮಹಲ್ ಎದ್ದು ನಿಂತಿದೆ. ಆದರೆ ಈ ತಾಜ್ ಮಹಲ್ ಅಮೃತ ಶಿಯಿಂದ ನಿರ್ಮಾಣ ಮಾಡಿದ್ದಲ್ಲ. ಇದು ಬೆಂಕಿ ಕಡ್ಡಿಗಳಿಂದ ನಿರ್ಮಾಣವಾಗಿರುವ ಅತ್ಯಂತ ಅಪರೂಪದ ಕಲಾಕೃತಿ.

ಈ ಕಲಾಕೃತಿಯನ್ನು ನಿರ್ಮಿಸಿದವನು ಫ್ರಾನ್ಸ್‌ನ ಆಲ್ಬಟ್ ಬಾಸ್ಕಲ್. ಇದನ್ನು ಆತ ನಿರ್ಮಿಸಿದ್ದು, ಗೋರಖ್‌ಪುರದ ಜೈಲಿನಲ್ಲಿ. ಆಗ್ರಾದ ತಾಜ್ ಮಹಲ್ ನಿರ್ಮಿಸಿದ ಶಹಜಹಾನ್‌ನನ್ನು ಆತನ ಪುತ್ರನೇ ಜೈಲಿಗೆ ಅಟ್ಟಿದ್ದ. ಆದರೆ ಈ ಆಧುನಿಕ ಶಹಜಹಾನ್ ಆಲ್ಬರ್ಟ್ ತನ್ನ ಸ್ವಯಂಕೃತ ಅಪರಾಧದಿಂದ ಜೈಲು ಸೇರಿದವನು.

ಭಾರತ -ನೇಪಾಳ ಗಡಿಯಲ್ಲಿ ಮಾದಕ ವಸ್ತು ಚರಸ್ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಕೈಗೆ ಸಿಕ್ಕಿ ಬಿದ್ದು 2014ರಲ್ಲಿ ಈತ ಜೈಲು ಸೇರಿದ್ದ. ಸಾಲದ್ದಕ್ಕೆ ಈತನಿಗೆ ಎಚ್‌ಐವಿ ಸೋಂಕು ಕೂಡಾ ತಗುಲಿದೆ. ಆಲ್ಬರ್ಟ್‌ಗೆ ಈತ ತನ್ನ ಪತ್ನಿಯ ನೆನಪು ಕಾಡಿ ಆಕೆಗಾಗಿ ಏನಾದರೂ ಸ್ಮರಣೀಯ ಉಡುಗೊರೆ ನೀಡಬೇಕು ಎಂದು ನಿರ್ಧರಿಸಿ ಈ ಅದ್ಭುತ ಕಲಾಕೃತಿಯನ್ನು ರಚಿಸಿದ್ದಾನೆ.

30 ಸಾವಿರ ಬೆಂಕಿ ಕಡ್ಡಿಗಳು ಹಾಗೂ ಎರಡು ಕೆ.ಜಿ. ಫೆವಿಕಲ್ ಬಳಸಿ ಈ ತಾಜ್‌ಮಹಲ್‌ನ್ನು ನಿರ್ಮಿಸಲಾಗಿದೆ. ಇದಕ್ಕೆ ಬೇಕಾದ ಸಾಮಗ್ರಿಗಳನ್ನು ಪೊಲೀಸರೇ ಆತನಿಗೆ ನೀಡಿ ಸಹಕರಿಸಿದ್ದಾರೆ. ಇದೀಗ ಆಲ್ಬರ್ಟ್‌ನ ಪ್ರೇಮದ ಸಂಕೇತವಾಗಿರುವ ಅಪರೂಪದ ತಾಜ್‌ಮಹಲ್ ಕಲಾಕೃತಿ ಉತ್ತರ ಪ್ರದೇಶ ಪೊಲೀಸರ ವಸ್ತು ಸಂಗ್ರಹಾಲಯದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಚಿತ್ರಗಳು ವೈರಲ್ ಆಗಿದ್ದು, ಭಾರೀ ಪ್ರಶಂಸೆ ಪಾತ್ರವಾಗಿದೆ.

ಆಲ್ಬರ್ಟ್‌ನನ್ನು ಕಾಣಲು ಫ್ರಾನ್ಸ್‌ನಿಂದ ಬಂದ ಆತನ ಸ್ನೇಹಿತನ ಮೂಲಕ ಈ ಕಲಾಕೃತಿಯನ್ನು ಪೊಲೀಸರು ಆಲ್ಬರ್ಟ್ ಪತ್ನಿಗೆ ಕಳುಹಿಸಿಕೊಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News