“ನಮಗೆ ಉದ್ಯೋಗ ಕೊಡಿ, ನಾವೇ ಇಲ್ಲಿಂದ ಹೋಗುತ್ತೇವೆ”

Update: 2017-01-01 09:55 GMT

ಮುಝಫ್ಫರ್ ನಗರ ಮತ್ತು ಶಮಿ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮುಗಲಭೆಗಳು ಸುಮಾರು 50,000 ಮುಸ್ಲಿಂ ಕುಟುಂಬಗಳ ಬದುಕನ್ನು ಜರ್ಜರಿತಗೊಳಿಸಿವೆ. ಗ್ರಾಮಗಳು ಮತ್ತು ಪಟ್ಟಣಗಳ ಹೊರವಲಯಗಳಲ್ಲಿ ವಾಸಿಸುತ್ತಿರುವವರ ಬದುಕು ನರಕವಾಗಿದೆ. ಈ ಕುಟುಂಬಗಳಿಗೆ 2017 ರ ನಿರೀಕ್ಷೆಗಳೇನು?

ಸಂತ್ರಸ್ತ ಶಿಬಿರದಲ್ಲಿ ನೆಲೆಸಿರುವ ಲೋಮನ್ ಅಲಿ 2017ರಲ್ಲಿ ಬಯಸುವುದು ಒಂದು ಉತ್ತಮ ಉದ್ಯೋಗ. ಇದರಿಂದ ಬರುವ ಹಣ ಜೀವನೋಪಾಯಕ್ಕೆ ಆಗುತ್ತದೆ ಎನ್ನುವುದು ಎಷ್ಟು ಮುಖ್ಯವೋ, ಕನಿಷ್ಠ ತಾನು ಪ್ರೀತಿಸುವ ಹುಡುಗಿಯನ್ನು ಮದುವೆಯಾಗಿ ಊರಿನಿಂದ ದೂರ ಹೋಗಿಬಿಡಬಹುದು ಎನ್ನುವ ಆಶಯವೂ ಹಿನ್ನೆಲೆಯಲ್ಲಿದೆ.

ಕಂಧಾಲದಲ್ಲಿ ನಡೆದ ಮದುವೆಯೊಂದರಲ್ಲಿ ತಮ್ಮ ಪ್ರಿಯತಮೆಯನ್ನು ಅವರು ಭೇಟಿಯಾಗಿದ್ದರು. ತನ್ನ ತಂದೆ ಇಬ್ಬರು ಸಹೋದರರು, ಸೋದರ ಸಂಬಂಧಿ ಮತ್ತು ಆಕೆಯ ಐವರು ಮಕ್ಕಳ ಜೊತೆಗೆ ಕೈರಾನಾ ನಾಹಿದ್ ಕಾಲನಿಯ ಒಂದು ಕೋಣೆಯ ಮನೆಯಲ್ಲಿ ಆತ ವಾಸವಿದ್ದಾರೆ.

ಮುಝಫ್ಫರ್ ನಗರದ ಗಲಭೆ ಪೀಡಿತ ಪ್ರದೇಶದಿಂದ ವಲಸೆ ಬಂದು ಅವರು ಈ ಸಂತ್ರಸ್ತ ಶಿಬಿರದಲ್ಲಿ ನೆಲೆಸಿದ್ದಾರೆ. ತಮ್ಮ ಸಂಗಾತಿ ಜೊತೆಗೆ ಖಾಸಗಿಯಾಗಿ ಮಾತನಾಡಲೂ ಲೋಮನ್‌ಗೆ ಅವಕಾಶ ಸಿಗುವುದಿಲ್ಲ.

ಲೋಮನ್ 17 ರ ವಯಸ್ಸಿನವನಾದ ಕಾರಣ ಕಾನೂನುಬದ್ಧವಾಗಿ ಆಕೆಯನ್ನು ಮದುವೆಯಾಗಬಹುದೇ ಎನ್ನುವುದೂ ಆತನಿಗೆ ಗೊತ್ತಿಲ್ಲ. ಆದರೆ ಆತನ ವಯಸ್ಸನ್ನು ಹೇಳುವ ಯಾವುದೇ ದಾಖಲೆಗಳು ಇಲ್ಲದ ಕಾರಣ ಮದುವೆಯಾಗುವ ಭರವಸೆಯೂ ಇದೆ.

ಮೂಲತಃ 2013 ಸೆಪ್ಟಂಬರ್‌ನ ಗಲಭೆಯಲ್ಲಿ ಅತೀ ಹೆಚ್ಚು ಪೀಡಿತವಾದ ಫುಗಾನ ಗ್ರಾಮಕ್ಕೆ ಸೇರಿದ ಕುಟುಂಬದ ಪ್ರಕಾರ ಲೋಮನ್ ಬಾಗಶಃ 17 ವರ್ಷದವನಿರಬೇಕು. ತಮ್ಮ ಗ್ರಾಮದಿಂದ 17 ಕಿ.ಮೀ ದೂರದಲ್ಲಿರುವ ಕೈರಾನಕ್ಕೆ ಈ ಕುಟುಂಬ ಎರಡು ವರ್ಷಗಳ ಹಿಂದೆ ಬಂದು ನೆಲೆಸಿದೆ. ಆತನ ಇಬ್ಬರು ಸಹೋದರರು ಪಕ್ಕದಲ್ಲೇ ಇರುವ ಮನೆಯಲ್ಲಿ ನೆಲೆಸಿದ್ದಾರೆ.

ಗಲಭೆ ಶುರುವಾದಾಗ 9ನೇ ತರಗತಿಯಲ್ಲಿದ್ದ ಲೋಮನ್ ಮಧ್ಯವಾರ್ಷಿಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದ. ತಮ್ಮದೇ ಶಾಲೆಯ ಹಿಂದೂ ಸ್ನೇಹಿತರು ಮನೆಗೆ ದಾಳಿ ಮಾಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಆ ಗಲಭೆಯಲ್ಲಿ ಆತನ ಅಂಕಲ್ ಪ್ರಾಣ ಕಳೆದುಕೊಂಡಿದ್ದರು.

ಆ ನಂತರ ಎಂದೂ ಗ್ರಾಮಕ್ಕೆ ಅವರು ಹಿಂದಿರುಗಿಲ್ಲ. ನಾಹಿದ್ ಕಾಲನಿಯಲ್ಲಿರುವ ಎಲ್ಲಾ ಪುರುಷರೂ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ನಿತ್ಯ ಕೆಲಸವೂ ಸಿಗದ ಸ್ಥಿತಿ ಇದೆ.

 “ಗಲಭೆ ಪೀಡಿತ ಸಂತ್ರಸ್ಥ ಮುಸ್ಲಿಮರಿಂದ ದೌರ್ಜನ್ಯಗೊಳಗಾಗಿ ಹಿಂದೂಗಳು ಕೈರಾನಾ ಬಿಡುತ್ತಿದ್ದಾರೆ” ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ ಹೇಳುತ್ತಾರೆ. ಆದರೆ ಇಲ್ಲಿನ ಸಂತ್ರಸ್ತ ಮುಸ್ಲಿಂ ಕುಟುಂಬಗಳ ಸ್ಥಿತಿ ಮತ್ತು ದಿನಚರಿ ನೋಡಿದಾಗ ಆ ಮಾತೆಷ್ಟು ಹಾಸ್ಯಾಸ್ಪದ ಎನ್ನುವುದು ತಿಳಿದು ಬರುತ್ತದೆ.

“ಅವರು ನಮಗೆ ನೆರವು ನೀಡಲು ಸಾಧ್ಯವಾಗದೆ ಇದ್ದಲ್ಲಿ, ಕನಿಷ್ಠ ನಮ್ಮ ಜೀವನವನ್ನು ಇನ್ನಷ್ಟು ಹೀನಾಯವಾಗಿಸುವುದು ಬೇಡ. ಇಲ್ಲಿ ನೆಲೆಸಲು ಯಾರು ಬಯಸುತ್ತಾರೆ? ಇದು ನರಕ. ನಮಗೆ ಉದ್ಯೋಗ ಕೊಡಲಿ. ಅವರು ಎಲ್ಲಿ ಬಯಸುತ್ತಾರೋ ಅಲ್ಲೇ ಹೋಗಿ ನೆಲೆಸುತ್ತೇವೆ” ಎಂದು ಲೋಮನ್ ಹೇಳುತ್ತಾರೆ.

2013ರ ನಂತರ ಲೋಮನ್ ಜೀವನದಲ್ಲಿ ಬೆಳಕು ಕಂಡ ಕ್ಷಣವೆಂದರೆ ತನ್ನ ಸಂಗಾತಿಯನ್ನು ಭೇಟಿಯಾದ ದಿನ. ಕೈರಾನಾದ ಕಾರ್ಖಾನೆಯಲ್ಲಿ ಕೆಲಸ ಮಾಡಿ ರೂ. 30,000ವನ್ನು ಲೋಮನ್ ಉಳಿತಾಯ ಮಾಡಿದ್ದಾನೆ. ಅದರಿಂದ ವ್ಯಾನ್ ಒಂದನ್ನು ಖರೀದಿಸಿ ಮದುವೆಗೆ ಹೋಗಿದ್ದ.

ಅಲ್ಲೇ ಯುವತಿಯನ್ನು ಭೇಟಿಯಾಗಿದ್ದ. ಬಿಳಿ ವ್ಯಾನ್ ಮತ್ತು ಬಿಳಿ ಶರಟು ಕಂಡು ಯುವತಿ ಮೆಚ್ಚಿಕೊಂಡಿದ್ದಳು ಎಂದು ನೆನಪಿಸಿಕೊಳ್ಳುತ್ತಾನೆ ಲೋಮನ್. ಆದರೆ 12ನೇ ತರಗತಿ ಓದಿರುವ ಯುವತಿಗೆ ಆಕೆಯ ತಂದೆ ಬೇರೆ ಮದುವೆ ಮಾಡುವ ಯೋಚನೆಯಲ್ಲಿದ್ದಾರೆ. ಹೀಗಾಗಿ ಓದದೆ ಇರುವ ತಾನು ಉತ್ತಮ ಕೆಲಸವನ್ನಾದರೂ ಪಡೆದರೆ ಯುವತಿಯನ್ನು ಮದುವೆಯಾಗಬಹುದು ಎನ್ನುವುದು ಲೋಮನ್ ಬಯಕೆ.

ತಾಯಿ, ಮನೆ, ಅಂಕಲ್ ಎಲ್ಲರನ್ನೂ ಕಳೆದುಕೊಂಡ ಲೋಮನ್ ಈಗ ಯುವತಿಯನ್ನು ಮದುವೆಯಾಗುವ ಒಂದೇ ಕನಸಿನ ಜೊತೆಗೆ ಉದ್ಯೋಗ ಅರಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News