×
Ad

ಮಹಿಳೆಯರ ಪಾಲಿಗೆ ನರಕವಾದ ಬೆಂಗಳೂರಿನ ಹೊಸ ವರ್ಷಾಚರಣೆ!

Update: 2017-01-02 15:35 IST

ಬೆಂಗಳೂರು,ಜ.2: ಹೊಸ ವರ್ಷಾಚರಣೆ ಸಂಭ್ರಮದ ಗುಂಗಿನಲ್ಲಿ ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಘಟನೆಗಳು ವ್ಯಾಪಕವಾಗಿ ನಡೆದಿವೆ.

ಸದಾ ಗಿಜಿಗುಡುವ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಸಾವಿರಾರು ಮಂದಿ ಗುಂಪು ಸೇರಿದ ವಿಲಾಸಿಗಳು, ಮಹಿಳೆಯರ ಜತೆ ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡುಬರುತ್ತಿದ್ದವು ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಪೊಲೀಸ್ ಸಮ್ಮುಖದಲ್ಲೇ ಸ್ವೇಚ್ಛಾಚಾರದ ಘಟನೆಗಳು ಸಾಕಷ್ಟು ನಡೆದಿವೆ ಎಂದು ವರದಿ ವಿವರಿಸಿದೆ.

ನಗರದಲ್ಲಿ ಹೊಸ ವರ್ಷಾಚರಣೆ ಗುಂಪುಗಳು ಗೌಜು- ಗದ್ದಲ ಎಬ್ಬಿಸುವುದು ಸಾಮಾನ್ಯವಾಗಿದ್ದರೂ, ಈ ಬಾರಿ ಸಂಭ್ರಮಾಚರಣೆಯ ಗಡುವನ್ನು 2 ಗಂಟೆವರೆಗೂ ವಿಸ್ತರಿಸಲಾಗಿತ್ತು. ನಗರದ ಕೇಂದ್ರಭಾಗದ ಕೆಲ ವಾಣಿಜ್ಯ ಮಳಿಗೆಗಳ ಅದರಲ್ಲೂ ಮುಖ್ಯವಾಗಿ ಪಾನಮಳಿಗೆಗಳ ಒತ್ತಡದಿಂದಾಗಿ ಪೊಲೀಸರು ಈ ಗಡುವು ವಿಸ್ತರಿಸಿದ್ದರು ಎನ್ನಲಾಗಿದೆ.

ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ನಗರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದ್ದು, 1500ಕ್ಕೂ ಹೆಚ್ಚು ಪೊಲೀಸರನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಆದರೆ ಭಾರಿ ಸಂಖ್ಯೆಯ ದ್ವಿಚಕ್ರ ವಾಹನ, ಕಾರು ಸವಾರರು ಹಾಗೂ ಪಾದಚಾರಿಗಳು ಸೇರಿದ್ದರಿಂದ ನಿಯಂತ್ರಿಸುವುದು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಪುರುಷರು ನಡೆಸುತ್ತಿದ್ದ ದಾಂಧಲೆಗೆ ಪೊಲೀಸರು ಮೂಕಪ್ರೇಕ್ಷಕರಾದರು. ಕೆಲ ಮಹಿಳೆಯರು ತಮ್ಮ ಆತ್ಮರಕ್ಷಣೆಗೆ ಆಯುಧಗಳನ್ನು ಕೂಡಾ ಬಳಸಿಕೊಂಡರು ಎಂದು ಮಿರರ್ ವರದಿ ವಿವರಿಸಿದೆ.

ಇಂಥ ಘಟನೆಗಳಿಗೆ ಹಲವು ಪ್ರತ್ಯಕ್ಷದರ್ಶಿ ಸಾಕ್ಷಿ ಮತ್ತು ಫೋಟೊ ಸಾಕ್ಷಿಗಳಿದ್ದರೂ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಅಥವಾ ಕಿರುಕುಳ ನೀಡಿದ ಬಗ್ಗೆ ಯಾವ ಪ್ರಕರಣವೂ ದಾಖಲಾಗಿಲ್ಲ. ಕೆಲ ಮಹಿಳೆಯರು ಈ ಬಗ್ಗೆ ಪೊಲೀಸರ ಸಹಾಯ ಯಾಚಿಸಿದ್ದರೂ, ಯಾರೂ ದೂರು ದಾಖಲಿಸಲು ಮುಂದಾಗಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News