ಭೀಮ್ ಆ್ಯಪ್ ನಲ್ಲಿ ಹಣ ವರ್ಗಾವಣೆ ಹೇಗೆ?

Update: 2017-01-02 18:36 GMT
Editor : ಕೆ. ಕೆ.

ಭೀಮ್ ಆ್ಯಪ್ ಡೌನ್ ಲೋಡ್ ಮಾಡಿದ ನಂತರ ಅದರ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ನಿಮ್ಮ ಯುಪಿಐ ಪಿನ್ ಸೆಟ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಪೇಮೆಂಟ್ ಅಡ್ರೆಸ್ ಆಗಿದ್ದು ನೀವು ಕೂಡಲೇ ಹಣಕಾಸು ವರ್ಗಾವಣೆ ಮಾಡಬಹುದಾಗಿದೆ. ಇದರ ಮೂಲಕ ನೀವು ಒಂದು ಫೋನ್ ನಂಬರ್‌ಗೆ ಹಣ ಪಾವತಿಸಬಹುದು ಅಥವಾ ಪಡೆಯಬಹುದು, ಬ್ಯಾಲೆನ್ಸ್ ಹಣ ಎಷ್ಟೆಂದು ನೋಡಬಹುದು ಅಥವಾ ನಿಮ್ಮ ಫೋನ್ ನಂಬರ್ ಶೇರ್ ಮಾಡದೆಯೇ ಹಣ ಪಾವತಿಸಲು ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಬಹುದು.

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಡುಗಡೆಗೊಳಿಸಿದ ಯುಪಿಐ (ಯುನೈಟೆಡ್ ಪೇಮೆಂಟ್ಸ್ ಇಂಟರ್ ಫೇಸ್) ಆಧರಿತ ಆ್ಯಪ್- ಭೀಮ್ ಇದರ ಸಂಪೂರ್ಣ ಹೆಸರು 'ಭಾರತ್ ಇಂಟರ್ ಫೇಸ್ ಫಾರ್ ಮನಿ'. ಈ ಆ್ಯಪ್ ಮೂಲಕ ಯಾರೂ ಕೂಡಾ ಸರಳ ಡಿಜಿಟಲ್ ಪಾವತಿಗಳನ್ನು ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಮಾಡಬಹುದು. ಮೊಬೈಲ್ ವಾಲೆಟ್‌ನಲ್ಲಿ ನಾವು ಮೊದಲು ಹಣ ತುಂಬಬೇಕಾಗಿದ್ದರೆ, ಈ ಆ್ಯಪ್‌ನಲ್ಲಿ ಹಾಗಿಲ್ಲ. ಈ ಆ್ಯಪ್ ಉಪಯೋಗಿಸಿ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಯಾರು ಬೇಕಾದರೂ ಹಣ ಪಡೆಯಬಹುದು ಅಥವಾ ಪಾವತಿಸಬಹುದಾಗಿದೆ.

''ಭೀಮ್ ಆ್ಯಪ್ ಅನ್ನು ಸ್ಮಾರ್ಟ್ ಫೋನ್ ಅಥವಾ ಕಡಿಮೆ ಬೆಲೆಯ ಫೀಚರ್ ಫೋನಿನಲ್ಲೂ ಉಪಯೋಗಿಸಬಹುದಾಗಿದೆ. ಮೇಲಾಗಿ ಇಂಟರ್ ನೆಟ್ ಸಂಪರ್ಕದ ಅಗತ್ಯವೂ ಇಲ್ಲವಾಗಿದೆ'' ಎಂದು ಅದನ್ನು ಬಿಡುಗಡೆಗೊಳಿಸುವ ಸಂದರ್ಭ ಪ್ರಧಾನಿ ಮೋದಿ ಹೇಳಿದ್ದಾರೆ. ''ಕೇವಲ ಹೆಬ್ಬೆರಳು ಮಾತ್ರ ಅಗತ್ಯವಿದೆ. ಒಂದು ಕಾಲದಲ್ಲಿ ಹೆಬ್ಬೆರಳ ಗುರುತು ನೀಡುತ್ತಿದ್ದ ಅನಕ್ಷರಸ್ಥರಿಗೆ 'ಅಂಗೂಟಾ ಛಾಪ್' ಎಂದು ತಮಾಷೆ ಮಾಡಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ನಿಮ್ಮ ಹೆಬ್ಬೆರಳು ಈಗ ಬ್ಯಾಂಕ್ ಆಗಿದೆ'' ಎಂದು ಅವರು ತಿಳಿಸಿದ್ದಾರೆ.

ಭೀಮ್ ಆ್ಯಪ್ ಎಂದರೇನು ? 

ಈ ಆ್ಯಪ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ಆದುದರಿಂದ ಮೊಬೈಲ್ ವಾಲೆಟ್ ತರಹ ಅದಕ್ಕೆ ಹಣ ಹಾಕಬೇಕಾಗಿಲ್ಲ. ಮೇಲಾಗಿ ಹಣ ಪಡೆದವರು ಮತ್ತೆ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.

ಭೀಮ್ ಆ್ಯಪ್ ಪಡೆಯುವ ಬಗೆ ಹೇಗೆ ?

 ಗೂಗಲ್ ಪ್ಲೇನಲ್ಲಿ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದ ಈ ಭೀಮ್ ಆ್ಯಪ್ ಡೌನ್ ಲೋಡ್ ಮಾಡಬಹುದು ಹಾಗೂ ಅದು ಉಚಿತ ಆ್ಯಂಡ್ರಾಯ್ಡ್ಡಾ ಆ್ಯಪ್ ಆಗಿದೆ. ಈ ಆ್ಯಪ್ ಐಒಸಿ ಪ್ಲಾಟ್ ಫಾರ್ಮ್‌ನಲ್ಲಿ ಶೀಘ್ರದಲ್ಲಿಯೇ ಲಭ್ಯವಾಗಲಿದೆ.

 ಅದರ ಬಳಕೆ ಹೇಗೆ ?

 ಭೀಮ್ ಆ್ಯಪ್ ಡೌನ್ ಲೋಡ್ ಮಾಡಿದ ನಂತರ ಅದರ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ನಿಮ್ಮ ಯುಪಿಐ ಪಿನ್ ಸೆಟ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಪೇಮೆಂಟ್ ಅಡ್ರೆಸ್ ಆಗಿದ್ದು ನೀವು ಕೂಡಲೇ ಹಣಕಾಸು ವರ್ಗಾವಣೆ ಮಾಡಬಹುದಾಗಿದೆ. ಇದರ ಮೂಲಕ ನೀವು ಒಂದು ಫೋನ್ ನಂಬರ್‌ಗೆ ಹಣ ಪಾವತಿಸಬಹುದು ಅಥವಾ ಪಡೆಯಬಹುದು, ಬ್ಯಾಲೆನ್ಸ್ ಹಣ ಎಷ್ಟೆಂದು ನೋಡಬಹುದು ಅಥವಾ ನಿಮ್ಮ ಫೋನ್ ನಂಬರ್ ಶೇರ್ ಮಾಡದೆಯೇ ಹಣ ಪಾವತಿಸಲು ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಬಹುದು.

ಸಾಮಾನ್ಯ ನೆಟ್ ಬ್ಯಾಂಕಿಂಗ್‌ನಂತೆ ಐಎಫ್‌ಎಸ್‌ಸಿ ಮುಖಾಂತರ ಯುಪಿಐಯೇತರ ಬ್ಯಾಂಕುಗಳಿಗೂ ಹಣ ಪಾವತಿ ಮಾಡಬಹುದಾಗಿದೆ.

 

ಫೀಚರ್ ಫೋನುಗಳಲ್ಲಿಯೂ ಅದು ಕಾರ್ಯನಿರ್ವಹಿಸುವುದೇ?

ಆ್ಯಪ್ ಹೊರತಾಗಿ ಯುಎಸ್‌ಎಸ್‌ಡಿ ಅನ್ ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡಾಟಾ) ಮೂಲಕ ಅದಕ್ಕೆ ಸಂಪರ್ಕವನ್ನು ಫೀಚರ್ ಫೋನ್ ಉಪಯೋಗಿಸಿ ಸಾಧಿಸಬಹುದಾಗಿದೆ. ಇದಕ್ಕಾಗಿ ನೀವು *99 ಡಯಲ್ ಮಾಡಬೇಕು. ಈ ಮಾದರಿಯಲ್ಲಿ ಯಾವುದೇ ಇಂಟರ್ ನೆಟ್ ಸಂಪರ್ಕ ಅಗತ್ಯವಿಲ್ಲವಾಗಿದೆ.

 
ಯಾವ ಬ್ಯಾಂಕುಗಳಲ್ಲಿ ಈ ಆ್ಯಪ್ ಸಪೋರ್ಟ್ ಲಭ್ಯವಿದೆ?

ಯುಪಿಐ ಸಪೋರ್ಟ್ ಇರುವ ಎಲ್ಲ ಪ್ರಮುಖ ಬ್ಯಾಂಕುಗಳ ವ್ಯವಹಾರಗಳನ್ನೂ ಭೀಮ್ ಆ್ಯಪ್ ಮೂಲಕ ಮಾಡಬಹುದಾಗಿದೆ. ಈ ಆ್ಯಪ್ ಮೂಲಕ ವ್ಯವಹರಿಸಬಹುದಾದ ಬ್ಯಾಂಕುಗಳೆಂದರೆ - ಅಲಹಾಬಾದ್ ಬ್ಯಾಂಕ್, ಆಂಧ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ, ಡಿಸಿಬಿ ಬ್ಯಾಂಕ್, ದೇನಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ಇಂಡಿಯನ್ ಬ್ಯಾಂಕ್ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆರ್.ಬಿ.ಎಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಜಯ ಬ್ಯಾಂಕ್.

ಹಣ ವ್ಯವಹಾರ ಮಿತಿಯಿದೆಯೇ ?

ಪ್ರತಿಯೊಂದು ಟ್ರಾನ್ಸಾಕ್ಷನ್ ಸಂದರ್ಭ ರೂ. 10,000 ಮಿತಿಯಿದ್ದು, 24 ಗಂಟೆಗಳಲ್ಲಿ ರೂ 20,000 ತನಕ ಹಣ ಪಾವತಿ ಮಾಡಬಹುದಾಗಿದೆ.

Writer - ಕೆ. ಕೆ.

contributor

Editor - ಕೆ. ಕೆ.

contributor

Similar News