ನಗದು ರಹಿತ ಭವಿಷ್ಯಕ್ಕೆ ನೋಟು ರದ್ದತಿ ಮುನ್ನುಡಿಯೇ?

Update: 2017-01-03 18:33 GMT

ದೇಶದಲ್ಲಿ ಅರ್ಧದಷ್ಟು ಮಂದಿಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಲ್ಲ. ಶೇ. 53ರಷ್ಟು ಮಂದಿಗೆ ಮಾತ್ರ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಇಂಟರ್‌ನೆಟ್ ಲಭ್ಯತೆ ಇಲ್ಲ. 30 ಲಕ್ಷ ಕಾರ್ಡ್‌ದಾರರ ದೊಡ್ಡ ಮಾಹಿತಿ ಗಡಣದಿಂದ ದೊಡ್ಡ ಪ್ರಮಾಣದಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆಯಾಗಿರುವ ಭಾರತದಂಥ ದೇಶದಲ್ಲಿ ಇಂಥ ಡಿಜಿಟಲ್ ವ್ಯವಸ್ಥೆಯ ಭದ್ರತೆ ಕೂಡಾ ಕಳವಳಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೋಟು ರದ್ದತಿ ನಿರ್ಧಾರದ ಬಗ್ಗೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು, ಇದನ್ನು 'ಸಂಘಟಿತ ಲೂಟಿ ಹಾಗೂ ಕಾನೂನಾತ್ಮಕ ಸುಲಿಗೆ' ಎಂದು ವ್ಯಂಗ್ಯವಾಡಿದ್ದರು. ಇದು ಇತರ ಹಲವು ಮಂದಿಯಂತೆ ನನ್ನಲ್ಲೂ ಹಲವು ಸಂದೇಹ ಹುಟ್ಟುಹಾಕಿತು. ಆದರೆ ಈ ಯೋಜನೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಕಾಳಧನ ನಿರ್ಮೂಲನೆ ಪ್ರಯತ್ನಕ್ಕೆ ಫಲ ನೀಡುತ್ತದೆ ಎಂದು ನಂಬಿದ್ದ ಹಲವರಲ್ಲಿ ನಾನೂ ಒಬ್ಬ, ಆದರೆ ಸಿಂಗ್ ವಿನಾಕಾರಣ ಇಂಥ ಪ್ರಬಲ ವಾಗ್ದಾಳಿ ನಡೆಸುವುದು ಅಸಂಭವ ಎಂಬ ಯೋಚನೆಯೂ ಬಂತು. ಇಡೀ ಕಸರತ್ತನ್ನು ಆಡಳಿತ ವೈಫಲ್ಯಕ್ಕೆ ಕನ್ನಡಿ ಎಂದು ಸಿಂಗ್ ಬಣ್ಣಿಸಿದ್ದರು. ಕೇಂದ್ರ ಸರಕಾರಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿ, ಹಣಕಾಸು ಕಾರ್ಯದರ್ಶಿಯಾಗಿ, ಹಣಕಾಸು ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಆರ್‌ಬಿಐ ಗವರ್ನರ್ ಆಗಿ ಕಾರ್ಯನಿರ್ವಹಿಸಿದ ಅಪಾರ ಅನುಭವ ಹೊಂದಿದ ವ್ಯಕ್ತಿ ಇಂಥ ಗಂಭೀರ ಆರೋಪ ಮಾಡಿದ್ದರು ಎನ್ನುವುದು ಗಮನಾರ್ಹ.

ಭಾರತದಲ್ಲಿ ಸಂಭವಿಸಿದ ಘೋರ ದುರಂತ, ಕೆಟ್ಟ ಉದ್ದೇಶದಿಂದ ಸಂಭವಿಸಿರುವುದಲ್ಲ; ಬದಲಾಗಿ ಮೋದಿ ಆಡಳಿತದ ಪ್ರಮಾದದಿಂದ ಆದದ್ದು ಎನ್ನುವುದು ಅನಾವರಣಗೊಳ್ಳುವಲ್ಲಿ ಒಂದಷ್ಟು ಸಂದೇಹಗಳಿವೆ. ನೋಟು ರದ್ದತಿಯ ಅಸಮರ್ಪಕ ಅನುಷ್ಠಾನದಿಂದ ಉಂಟಾಗಿರುವ ಅನಾಹುತಗಳು ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ದೇಶದಲ್ಲಿ 500 ಹಾಗೂ 1,000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡುವ ದಿಢೀರ್ ನಿರ್ಧಾರವನ್ನು ನವೆಂಬರ್ 8ರಂದು ಮೋದಿ ಪ್ರಕಟಿಸುವುದ ರೊಂದಿಗೆ ಈ ದುರಂತ ಸರಣಿ ಆರಂಭವಾಯಿತು. ದೇಶದ ಪ್ರಗತಿಗೆ ಕೊಡುಗೆ ನೀಡುವ ಉದ್ದೇಶದ ಈ ನಿರ್ಧಾರಕ್ಕೆ ದೇಶದ ಜನ ಬೆಂಬಲ ನೀಡಬೇಕು. ಇದು ರಾಷ್ಟ್ರೀಯತೆಯ ಪ್ರಶ್ನೆ ಎಂದು ಭಾವನಾತ್ಮಕ ಭಾಷಣದಲ್ಲಿ ದೇಶದ ಜನರಿಗೆ ಮನವಿ ಮಾಡಿದ್ದರು.

ಶೇ. 98ರಷ್ಟು ನಗದು ವ್ಯವಹಾರ ನಡೆಯುವ ಭಾರತದಂಥ ದೇಶದಲ್ಲಿ, ಅರ್ಥವ್ಯವಸ್ಥೆಯಿಂದ ನಗದು ದಿಢೀರನೇ ಮಾಯವಾದದ್ದು ಇಡೀ ದೇಶದ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಜನರ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸಿತು. ಫ್ಯಾಕ್ಟರಿಗಳು ಸ್ತಬ್ಧವಾದವು; ಸಣ್ಣ ಕಿರಾಣಿ ಅಂಗಡಿಗಳು ಮುಚ್ಚಿದವು. ಕೃಷಿ ಕೈಗಾರಿಕೆಗಳು ಕೂಡಾ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ನಿಂತವು. ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ ನಿರ್ಬಂಧಗಳಿಂದಾಗಿ ಲಕ್ಷಾಂತರ ಮಂದಿ, ನೋಟು ವಿನಿಮಯ ಮಾಡಿಕೊಳ್ಳಲು ಅಥವಾ ಖಾತೆಯಿಂದ ಹಣ ಪಡೆಯಲು ತಮ್ಮ ಅಮೂಲ್ಯ ಸಮಯವನ್ನು ಬ್ಯಾಂಕ್ ಶಾಖೆಗಳ ಮುಂದೆ ಅಥವಾ ಎಟಿಎಂಗಳ ಮುಂದೆ ಕಾಯುವಲ್ಲಿ ವ್ಯಯಿಸಬೇಕಾದ ಸ್ಥಿತಿ ಇದೆ. ಶ್ರೀಮಂತರು ತಮ್ಮ ಸಂಪತ್ತನ್ನು ದಾಸ್ತಾನು ಮಾಡಲು ಬ್ಯಾಂಕ್ ನೋಟುಗಳು ಮಾರ್ಗ ಎಂಬ ಕಲ್ಪನೆಯಲ್ಲಿ ಈ ನೋಟು ರದ್ದತಿ ಕಸರತ್ತು ನಡೆದಿದೆ. ವಾಸ್ತವವಾಗಿ ಈ ನಿರ್ಧಾರದ ಹೊರೆ ಬಿದ್ದದ್ದು ದೇಶದ ಬಡವರ್ಗದ ಮೇಲಾದರೂ, ಭ್ರಷ್ಟ ಹಾಗೂ ಶ್ರೀಮಂತ ಕುಳಗಳು ತಾವು ಮಾಡಿದ ಪಾಪಕಾರ್ಯಗಳಿಗಾಗಿ ಬೆಲೆ ತೆರುವ ಸಮಯ ಬಂದಿದೆ ಎಂದು ಬಡಜನತೆ ನಂಬುವಂತೆ ಮಾಡಲಾಯಿತು. ಭ್ರಷ್ಟರು ಹಾಗೂ ಶ್ರೀಮಂತ ಕುಳಗಳು ತಮ್ಮ ಅಕ್ರಮ ಸಂಪತ್ತನ್ನು 500 ಹಾಗೂ 1,000 ರೂಪಾಯಿ ನೋಟುಗಳ ರೂಪದಲ್ಲಿ, ಎಲ್ಲೋ ನೆಲಮಾಳಿಗೆಯಲ್ಲಿ ದಾಸ್ತಾನು ಮಾಡಿಟ್ಟಿದ್ದಾರೆ ಎಂಬ ನಂಬಿಕೆ ಕೇವಲ ಭ್ರಮೆ ಎನ್ನುವುದು ಇದೀಗ ಮನದಟ್ಟಾಗಿದೆ. ಶ್ರೀಮಂತ ಕುಳಗಳು ಹೊಂದಿರುವ ಅಕ್ರಮ ಸಂಪತ್ತಿನಲ್ಲಿ ಶೇ. 7ರಷ್ಟು ಪಾಲನ್ನು ಮಾತ್ರ ನಗದು ರೂಪದಲ್ಲಿ ಇದೆ ಎನ್ನುವುದು ವಾಸ್ತವ. ಉಳಿದ ಪಾಲು ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ, ಒಡವೆ ಹಾಗೂ ಇತರ ಹೂಡಿಕೆ ರೂಪದಲ್ಲಿದೆ. ದೇಶದ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ 15.44 ಲಕ್ಷ ಕೋಟಿ ರೂಪಾಯಿ ಮೌಲ್ಯದ 500 ಹಾಗೂ 1,000 ರೂಪಾಯಿ ನೋಟುಗಳ ಪೈಕಿ 13 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳು ಈಗಾಗಲೇ ವಾಪಸಾಗಿವೆ. ಉಳಿದ ಮೊತ್ತ ಕೂಡಾ ಸದ್ಯದಲ್ಲೇ ಲೆಕ್ಕಕ್ಕೆ ಸಿಗುವ ಸೂಚನೆಗಳು ಕಾಣುತ್ತಿವೆ. ಇದರಿಂದಾಗಿ ಕಪ್ಪುಹಣದ ಬಗೆಗಿನ ಸರಕಾರದ ಕಲ್ಪನೆಗಳು ಏನಾಗಿವೆ ಎಂಬ ಸವಾಲಿಗೆ ಉತ್ತರಿಸಬೇಕಾದ ಅನಿವಾರ್ಯತೆಗೆ ಸರಕಾರ ಈಗ ಸಿಲುಕಿದೆ.

ನೋಟು ರದ್ದತಿಯಿಂದ ಆಗಿರುವ ಅತಿದೊಡ್ಡ ಹಾನಿ ಎಂದರೆ, ಬ್ಯಾಂಕಿಂಗ್ ವ್ಯವಸ್ಥೆಯ ಬಗೆಗಿನ ವಿಶ್ವಾಸಾರ್ಹತೆ ಹೊರಟು ಹೋಗಿರುವುದು. ತಾವು ಕಷ್ಟಪಟ್ಟು ಸಂಪಾದಿಸಿ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಹಣವನ್ನು ಖಾತೆಯಿಂದ ಪಡೆಯುವ ಹಕ್ಕಿನಿಂದ ಜನಸಾಮಾನ್ಯರನ್ನು ವಂಚಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಹೊಸ ನೋಟುಗಳು ಬ್ಯಾಂಕಿನ ಹಿಂಬಾಗಿಲುಗಳ ಮೂಲಕ ಸೋರಿಕೆಯಾಗುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಹಿರಿಯ ಮುಖಂಡ ಆನಂದ್ ಶರ್ಮಾ ಆಪಾದಿಸಿದ್ದಾರೆ. ''ಜನ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಅಪಾರ ನಂಬಿಕೆ ಹೊಂದಿದ್ದರು. ಆದರೆ ಇಂದು ಭಾರತೀಯ ಬ್ಯಾಂಕ್‌ಗಳ ಬಗೆಗೆ ಜನಸಾಮಾನ್ಯರಲ್ಲಿ ಇದ್ದ ವಿಶ್ವಾಸ ಛಿದ್ರಛಿದ್ರವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಗೌರವಕ್ಕೂ ಚ್ಯುತಿ ಬಂದಿದೆ'' ಎಂದು ಶರ್ಮಾ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗಿಂತ ಸ್ವಲ್ಪಮೊದಲು ಬಿಜೆಪಿ ನಾಯಕರು ರಿಯಲ್ ಎಸ್ಟೇಟ್ ಖರೀದಿಯಲ್ಲಿ ನಿರತರಾಗಿರುವ ಬಗ್ಗೆ ಕೂಡಾ ಹಲವು ಕಥೆಗಳು ಹುಟ್ಟಿಕೊಂಡಿವೆ. ''500 ಹಾಗೂ 1,000 ರೂಪಾಯಿ ನೋಟುಗಳನ್ನು ರದ್ದು ಮಾಡುವ ಕೆಲ ದಿನಗಳ ಮುನ್ನ ಬಿಜೆಪಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿದೆ'' ಎಂದು ಕ್ಯಾಚ್ ನ್ಯೂಸ್ ಆಪಾದಿಸಿದೆ. ''ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ನಡೆಸಿದ ಭೂವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ'' ಎಂದು ಕ್ಯಾಚ್‌ನ್ಯೂಸ್ ಹೇಳಿಕೊಂಡಿದೆ.

ಕೂಲಿಕಾರ್ಮಿಕರು, ಅಂಗಡಿಗಳ ಮಾಲಕರು ಹಾಗೂ ರೈತರು ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, 111 ಮಂದಿ ನೋಟು ರದ್ದತಿ ದುಷ್ಪರಿಣಾಮದಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಭಾರತೀಯ ರೈತ ಸಂಘಗಳ ಒಕ್ಕೂಟದ ಮಹಾಪ್ರಧಾನ ಕಾರ್ಯದರ್ಶಿ ಪಿ.ಚೆಂಗಲ್ ರೆಡ್ಡಿ ಹೇಳುವಂತೆ, ನೋಟು ರದ್ದತಿ ಮೂಲಕ 'ಇಂಡಿಯಾ' ಹಾಗೂ 'ಭಾರತ' ಎಂದು ದೇಶವನ್ನು ವಿಭಜಿಸಲಾಗಿದೆ. ಭಾರತದಲ್ಲಿ ರೈತರು ಜೀವಚ್ಛವವಾಗಿದ್ದಾರೆ. ಅಧಿಕಾರಿಗಳು, ಉದ್ಯಮಿಗಳು ಹಾಗೂ ನಗರ ಮೂಲದ ತಜ್ಞರು ಸೇರಿದಂತೆ ಆಡಳಿತ ವರ್ಗಕ್ಕೆ ತಮ್ಮ ಭವಿಷ್ಯದ ಬಗ್ಗೆ ಅರಿವು ಇಲ್ಲ ಹಾಗೂ ಪ್ರಮುಖ ವಲಯದಿಂದ ಹೇಗೆ ಈ ವರ್ಗ ವಿಮುಖವಾಗಿದೆ ಎನ್ನುವುದನ್ನು ಇದು ಎತ್ತಿ ತೋರಿಸಿದೆ.

 ಸಹಕಾರ ಬ್ಯಾಂಕ್‌ಗಳು ವಿಶ್ವಾಸಾರ್ಹವಲ್ಲ ಎಂಬ ಕಾರಣಕ್ಕೆ ಅವುಗಳನ್ನು ಕೂಡಾ ನೋಟು ರದ್ದತಿ ಪ್ರಕ್ರಿಯೆಯಿಂದ ಹೊರಗಿಡಲು ಸರಕಾರ ನಿರ್ಧರಿಸಿದೆ. ಇದು ಸಹಕಾರ ವಲಯವನ್ನು ನಾಶಪಡಿಸುವ ಉದ್ದೇಶಪೂರ್ವಕ ಕ್ರಮ ಇದು ಎಂಬ ಗುಮಾನಿಯೂ ಇದೆ. ದೊಡ್ಡ ವಾಣಿಜ್ಯ ಬ್ಯಾಂಕ್‌ಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅಥವಾ ಭಾರತೀಯ ರಿಸರ್ವ್‌ಬ್ಯಾಂಕಿನ ಮಾರ್ಗಸೂಚಿಯಡಿ ಅದನ್ನು ತರುವ ಪ್ರಯತ್ನ ಎಂದೂ ಹೇಳಲಾಗುತ್ತಿದೆ. ಸಾವಿರಾರು ಗ್ರಾಮಗಳಲ್ಲಿ ಜನ ತಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೆ ಸಹಕಾರ ವಲಯದ ಬ್ಯಾಂಕುಗಳನ್ನೇ ಅವಲಂಬಿಸಿದ್ದಾರೆ. ಇಂಥ ಬ್ಯಾಂಕುಗಳಿಗೆ ತೀರಾ ಕಡಿಮೆ ಪ್ರಮಾಣದ ಹೊಸ ಕರೆನ್ಸಿಯನ್ನು ನೀಡುವ ಮೂಲಕ ಅಲ್ಲಿ ವಹಿವಾಟು ಕ್ಷೀಣಿಸಲು ಕೂಡಾ ಇದು ಕಾರಣವಾಗಿದೆ.

ಪ್ರತಿದಿನ ಹೊಸ ಹೊಸ ನಿರ್ದೇಶನಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಸಂಘರ್ಷವನ್ನು ಹೇಗೆ ನಿಭಾಯಿಸುತ್ತಿದೆ ಎಂದು ನೋಡುವ ವೀಕ್ಷಕರಿಗೆ ಇದು ನಿಜಕ್ಕೂ ಕುಚೋದ್ಯವಾಗಿ ಕಾಣುತ್ತದೆ. ಮೂಲಭೂತವಾಗಿ ನೋಟು ರದ್ದತಿಯ ಉದ್ದೇಶ, ಕಪ್ಪುಹಣ ದಂಧೆಯನ್ನು ಮಟ್ಟಹಾಕುವುದು ಹಾಗೂ ಪಾಕಿಸ್ತಾನ ನಿರ್ದೇಶಿತ ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ಹರಿವನ್ನು ನಿಲ್ಲಿಸುವುದು. ಆದರೆ ಆ ಬಳಿಕ ಬಿಜೆಪಿ ಮುಖಂಡರು ಹೊಸ ರಾಗ ತೆಗೆದು, ದೇಶವನ್ನು ನಗದು ರಹಿತ ಸಮಾಜವಾಗಿ ಪರಿವರ್ತಿಸುವುದು ಈ ನಿರ್ಧಾರದ ಗುಪ್ತ ಕಾರ್ಯಸೂಚಿ ಎಂದು ಬಣ್ಣಿಸಿದರು. ಇದು ಮೂಲ ಉದ್ದೇಶವೇ ಅಥವಾ, ಈ ಪ್ರಹಸನ ಆರಂಭವಾದ ಬಳಿಕ ಬದಲಾದ ಕಾರ್ಯಸೂಚಿಯೇ ಎನ್ನುವುದು ಯಾರಿಗೂ ಗೊತ್ತಿಲ್ಲ. ಮೋದಿ ಹೇಳುವಂತೆ ಇದು ಕಪ್ಪುಹಣದ ವಿರುದ್ಧದ ಸಮರವಾಗಿದ್ದರೆ, ಸಾಗರೋತ್ತರ ದೇಶಗಳಲ್ಲಿ ಇರುವ ಅಘೋಷಿತ ಸಂಪತ್ತಿನ ವಿಚಾರದಲ್ಲಿ ಮೋದಿ ಏಕೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಭಾರತದಲ್ಲಿ ಗ್ರಾಮೀಣ ಪ್ರದೇಶಗಳು, ನಗರ ಕೇಂದ್ರಗಳಿಗಿಂತ ಶತಮಾನದಷ್ಟು ಹಿಂದಿವೆ ಎನ್ನುವುದು ಭಾರತದ ಚಿತ್ರಣ ನೋಡಿದ ಯಾರಿಗಾದರೂ ಸ್ಪಷ್ಟವಾಗುತ್ತದೆ. ಗ್ರಾಮೀಣ ಜನತೆಗೆ ಇನ್ನೂ ಅಗತ್ಯ ಶಿಕ್ಷಣ ಸೌಲಭ್ಯಗಳಿಲ್ಲ. ವೈದ್ಯಕೀಯ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯೂ ಅಷ್ಟಕ್ಕಷ್ಟೇ. ಇಂಥ ಪರಿಸ್ಥಿತಿಯಲ್ಲಿ ಮಾನವ ಅಭಿವೃದ್ಧಿಯ ಕನಿಷ್ಠ ಗುರಿಯನ್ನು ತಲುಪುವ ಬದಲು ಡಿಜಿಟಲ್ ವಹಿವಾಟು, ನಗದುರಹಿತ ಸಮಾಜ ಮತ್ತಿತರ ವಿಷಯಗಳ ಬಗ್ಗೆ ಮಾತನಾಡುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ. ನಮ್ಮ ರಾಜಕೀಯ ಮುಖಂಡರು ನಿಜವಾಗಿಯೂ, ಜನರ ಸಾಮರ್ಥ್ಯದ ಬಗ್ಗೆ ಮಾಹಿತಿಗಳನ್ನು ಪಡೆದು ವೆಚ್ಚ-ಲಾಭದ ವಿಶ್ಲೇಷಣೆಯ ಲೆಕ್ಕಾಚಾರದಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆಯೇ ಅಥವಾ ತಂತ್ರಜ್ಞಾನ ಕಂಪೆನಿಗಳ ಪ್ರಾಬಲ್ಯ ಇರುವ ಸೇವಾ ವಲಯದ ಆಮಿಷಗಳಿಗೆ ಬಲಿಪಶುಗಳಾಗಿದ್ದಾರೆಯೇ ಎನ್ನುವುದು ಇನ್ನೂ ಖಾತ್ರಿಯಾಗಿಲ್ಲ.

ದೇಶದಲ್ಲಿ ಅರ್ಧದಷ್ಟು ಮಂದಿಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಲ್ಲ. ಶೇ. 53ರಷ್ಟು ಮಂದಿಗೆ ಮಾತ್ರ ಬ್ಯಾಂಕಿಂಗ್ ಸೇವೆ ಲಭ್ಯವಿದೆ. ದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಇಂಟರ್‌ನೆಟ್ ಲಭ್ಯತೆ ಇಲ್ಲ. 30 ಲಕ್ಷ ಕಾರ್ಡ್‌ದಾರರ ದೊಡ್ಡ ಮಾಹಿತಿ ಗಡಣದಿಂದ ದೊಡ್ಡ ಪ್ರಮಾಣದಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆಯಾಗಿರುವ ಭಾರತದಂಥ ದೇಶದಲ್ಲಿ ಇಂಥ ಡಿಜಿಟಲ್ ವ್ಯವಸ್ಥೆಯ ಭದ್ರತೆ ಕೂಡಾ ಕಳವಳಕ್ಕೆ ಕಾರಣವಾಗಿದೆ.

ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶ್ರೀಮಂತ ದೇಶವಾದ ಸ್ವೀಡನ್, ನಗದುರಹಿತ ಪ್ರಯೋಗವನ್ನು ಇದೀಗ ಆರಂಭಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಸ್ವೀಡನ್‌ನ ಕೇಂದ್ರೀಯ ಬ್ಯಾಂಕ್ ಸದ್ಯಕ್ಕೆ ಈ ನಡೆಗೆ ತಡೆ ಒಡ್ಡಿದೆ. ಸ್ವೀಡನ್‌ನಲ್ಲಿ ಶೇ. 20ರಷ್ಟು ಚಿಲ್ಲರೆ ಪಾವತಿ ಮಾತ್ರ ನಗದು ರೂಪದಲ್ಲಿ ಆಗುತ್ತಿದ್ದು, ಈ ಪ್ರಯತ್ನವನ್ನು ಕೈಗೊಳ್ಳಲು ಅಲ್ಲಿನ ಸರಕಾರಕ್ಕೆ ಅವಕಾಶವಿದೆ. ಆದರೂ ಈ ಬಗ್ಗೆ ಮರು ಚಿಂತನೆಗೆ ಮುಂದಾಗಿದೆ. ''ಡಿಜಿಟಲ್ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಯಾವ ಗುಂಪನ್ನೂ ಹಿಂದುಳಿಯಲು ಬಿಡುವುದಿಲ್ಲ'' ಎನ್ನುವುದು ಅವರ ನಿಲುವು. ಸ್ವೀಡನ್‌ನ ಕೇಂದ್ರೀಯ ಬ್ಯಾಂಕ್ ಆದ ರಿಕ್ಸ್‌ಬ್ಯಾಂಕ್, ಎಲ್ಲ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಸಲಹೆ ನೀಡಿ, ತಮ್ಮ ವ್ಯಾಪಾರ ಮಾದರಿಯನ್ನು ನಗದು ವಹಿವಾಟೂ ಒಳಗೊಂಡಿರುವ ವ್ಯವಹಾರವಾಗಿ ಪರಿವರ್ತಿಸಲು ಸೂಚಿಸಿದೆ.

ಮೋದಿಯವರ ನೋಟು ರದ್ದತಿ ನಿರ್ಧಾರದ ಅಂತಿಮ ಗುರಿ ಭಾರತದ ಆರ್ಥಿಕತೆಯನ್ನು ಡಿಜಿಟಲ್‌ಗೊಳಿಸುವುದು ಇರಬಹುದು. ಈ ನಿಟ್ಟಿನಲ್ಲಿ ನೋಟು ರದ್ದತಿ ಒಂದು ಹೆಜ್ಜೆಯಾಗಿದ್ದರೆ, ಸರಕಾರ ಉದ್ದೇಶಪೂರ್ವಕವಾಗಿ ಈ ಪ್ರಕ್ರಿಯೆಯಲ್ಲಿ ಪಾರದರ್ಶಕ ನೀತಿ ಅನುಸರಿಸಬೇಕಿತ್ತು. ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ಕಂಪೆನಿಗಳು, ಬಿಲ್ ಅಂಡ್ ಮಿಲಿಂದಾ ಗೇಟ್ಸ್ ಪ್ರತಿಷ್ಠಾನ ಹಾಗೂ ಯುಎಸ್‌ಎಐಡಿ ಬೆಂಬಲದೊಂದಿಗೆ ಡಿಜಿಟಲ್ ಪಾವತಿ ಉದ್ಯಮ ವಿಶ್ವ ನಾಯಕರ ಜತೆ ಕೈಜೋಡಿಸಿ, ರಾಜಕೀಯ ಅವಕಾಶವಾದಿತನವನ್ನು ಬಳಸಿಕೊಂಡು, ಬ್ಯಾಂಕ್‌ಗಳ ದ್ರವ್ಯತೆ ಪ್ರಮಾಣವನ್ನು ಕಡಿಮೆ ಮಾಡುವ ಹುನ್ನಾರ ನಡೆಸಿವೆ. ಇಂಥ ಜಾಗತಿಕ ಮೇಲ್ವರ್ಗಕ್ಕೆ, ಭವಿಷ್ಯದಲ್ಲಿ ಇದು ಅವಕಾಶವನ್ನು ಸೃಷ್ಟಿಸುವ ಕ್ಷೇತ್ರ. ಆದರೆ ಅರ್ಧದಷ್ಟು ಜನರನ್ನು ಹಿಂದೆ ಬಿಟ್ಟು ಇದು ಆಗುತ್ತಿದೆ.

ನೋಟು ರದ್ದತಿ ನಿರ್ಧಾರ ಪ್ರಕಟವಾಗಿ ಎರಡು ತಿಂಗಳು ಸಮೀಪಿಸುತ್ತಿದ್ದು, ಬಹುತೇಕ ನಗರವಾಸಿಗಳು, ಅದರಲ್ಲೂ ಮುಖ್ಯವಾಗಿ ದುಡಿಯುವ ಬಡವರ್ಗ ಇದನ್ನು ಇಂದಿಗೂ ಬೆಂಬಲಿಸುತ್ತಿದೆ. ಆದರೆ ದೇಶದಲ್ಲಿ ಮಾತ್ರ ಪರಿಸ್ಥಿತಿ ಸಹಜತೆಯತ್ತ ಬರುತ್ತಿಲ್ಲ. ಸದ್ಯೋಭವಿಷ್ಯದಲ್ಲಿ ಇದನ್ನು ಸುಧಾರಿಸದಿದ್ದರೆ, ಆರ್ಥಿಕ ಚಟುವಟಿಕೆ ಸ್ಥಗಿತ ವಿದ್ಯಮಾನದಿಂದ ಸಂರಕ್ಷಿಸಲ್ಪಟ್ಟಿರುವ ಭಾರತೀಯ ಆರ್ಥಿಕತೆಯಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗುವ ಎಲ್ಲ ಸಾಧ್ಯತೆ ಇದೆ. ಇದು ಎಂದೂ ಸರಿಪಡಿಸಲಾಗದಂಥ ಹಾನಿ.

ಕೃಪೆ: India tomarow

ಕ್ಯಾಶ್‌ಲೆಸ್ ಆಗಲು ಹೊರಟ

ದೇಶದಲ್ಲಿ ಹೀಗೂ ಒಂದು ಊರು !

* ರೂ. 500, 1000 ದ ನೋಟನ್ನೇ ನೋಡಿಲ್ಲ

* ಇವರ ಪಾಲಿಗೆ ದೇಶದಲ್ಲಿ ಈಗಲೂ ಸೋನಿಯಾ ಸರಕಾರ

ಒಂದು ಕಡೆ ನೋಟು ಅಮಾನ್ಯದ ಬಳಿಕ ಇಡೀ ದೇಶ ಸರತಿಯಲ್ಲಿ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಎಂದೂ ಸಾವಿರ ರೂಪಾಯಿ ನೋಟನ್ನೇ ನೋಡದವರು ಮತ್ತು ಅದಕ್ಕಾಗಿ ಸರತಿ ನಿಲ್ಲದ ಇಂತಹ ಕೆಲವರೂ ಇದ್ದಾರೆ! ಇವರಿಗೆ ನೋಟು ಅಮಾನ್ಯದಂಥ ಒಂದು ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ವಿಷಯವೂ ಗೊತ್ತಿಲ್ಲ. ಇದು ಮಹಾರಾಷ್ಟ್ರದ ಒಂದು ಗ್ರಾಮದ ಕತೆ. ರೋಶಮಲ್ ಎನ್ನುವ ಈ ಗ್ರಾಮ ಪುಣೆಯಿಂದ 500 ಕಿ.ಮೀ. ದೂರ ದಲ್ಲಿದೆ. ಇಲ್ಲಿ ನೆಲೆಸಿರುವ ಆದಿವಾಸಿಗಳಿಗೆ ರೂ. 500 ಮತ್ತು ರೂ. 1000 ನೋಟುಗಳು ಚಲಾವಣೆಯಲ್ಲಿರುವುದೇ ತಿಳಿದಿಲ್ಲ. ರೋಶಮಲ್ ಗ್ರಾಮದಲ್ಲಿ ನೆಲೆಸಿರುವ ಜನರ ಪ್ರಕಾರ ದೇಶದಲ್ಲಿ ಈಗ ಇಂದಿರಾ ಗಾಂಧಿ ಮಗಳು ಸೋನಿಯಾ ಸರಕಾರವಿದೆ! (ಸೋನಿಯಾ ಗಾಂಧಿ ಇಂದಿರಾರ ಸೊಸೆ ಎನ್ನುವುದೂ ಅವರಿಗೆ ತಿಳಿದಿಲ್ಲ.)ಗ್ರಾಮದ ಜನರ ಬಳಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇರುವ ಪ್ರಶ್ನೆಯೇ ಬರುವುದಿಲ್ಲ. ಗ್ರಾಮದಲ್ಲಿ ರಸ್ತೆ, ವಿದ್ಯುತ್, ವಸತಿ ಅಥವಾ ನೀರಿನಂತಹ ಮೂಲ ಸೌಕರ್ಯಗಳೂ ಇಲ್ಲ. ಗ್ರಾಮಸ್ಥರಿಗೆ ನೋಟು ಅಮಾನ್ಯದ ಸುದ್ದಿಯೂ ಗೊತ್ತಿಲ್ಲ. ಇವರ ಬಳಿ ದೊಡ್ಡ ಮೌಲ್ಯದ ನೋಟೇ ಬರದ ಕಾರಣ ಸಮಸ್ಯೆಯೂ ಆಗಿಲ್ಲ. ಆದರೆ ಇವರು ಜೋಳ ಮತ್ತು ಮೆಕ್ಕೆಜೋಳವನ್ನು ಮಂಡಿಗೆ ಹಾಕಲು ಹೋಗುವುದಿಲ್ಲ. ಏಕೆಂದರೆ ಕಿಲೋಗೆ ರೂ. 13-15ರಂತೆ ಮಾರಾಟವಾಗುತ್ತಿದ್ದ ಬೇಳೆಗಳು ಈಗ ರೂ. 10ಕ್ಕೆ ಮಾರಾಟವಾಗುತ್ತಿರುವ ಕಾರಣ ಎಲ್ಲವನ್ನೂ ದಾಸ್ತಾನಿನಲ್ಲೇ ಇಟ್ಟು ಕಾಯುತ್ತಿದ್ದಾರೆ.

ಸುದ್ದಿಗಳ ಪ್ರಕಾರ ಗ್ರಾಮದಲ್ಲಿ ರಸ್ತೆಗಳು ಅಥವಾ ಬಸ್ಸೂ ಇಲ್ಲ. ಮಂಡಿಗೆ ಇವರು ನಡೆದೇ ಹೋಗುತ್ತಾರೆ. ಅಥವಾ ಅತೀ ವಿರಳವಾಗಿ ಓಡಾಡುವ ಜೀಪ್ ಹಿಡಿಯಬೇಕು. ಸಮೀಪದಲ್ಲಿ ಪೆಟ್ರೋಲ್ ಪಂಪ್ ಕೂಡ ಇಲ್ಲ. ಆದರೆ ಅಲ್ಲಲ್ಲಿ ಬಾಟಲಿಗಳಲ್ಲಿ ಸೀಮೆ ಎಣ್ಣೆ ಮಾರುವವರು ಕಾಣ ಸಿಗುತ್ತಾರೆ. ನೋಟು ಅಮಾನ್ಯವಾದ ನಂತರ ಬ್ಯಾಂಕಿನಿಂದ 2,000 ರೂಪಾಯಿಗಳನ್ನು ಮಾತ್ರ ತೆಗೆಯಬಹುದು ಎಂದು ಹೇಳಿದಾಗ, ಅದು ಜೀವನೋಪಾಯಕ್ಕೆ ಸಾಕಾಗುತ್ತದೆ ಎನ್ನುವ ಉತ್ತರ ಬರುತ್ತದೆ. ''ನಿಮಗೆ ಇದಕ್ಕಿಂತ ಹೆಚ್ಚು ಹಣದ ಆವಶ್ಯಕತೆ ಏಕಿದೆ? ನಾವು ತಿಂಗಳಿಗೆ 1,500 ರೂಪಾಯಿಗಳಲ್ಲಿ ಕಾಲ ಕಳೆಯುತ್ತೇವೆ'' ಎಂದು ಉತ್ತರಿಸುತ್ತಾರೆ!

Writer - ಜಾರ್ಜ್ ಅಬ್ರಹಾಂ

contributor

Editor - ಜಾರ್ಜ್ ಅಬ್ರಹಾಂ

contributor

Similar News