×
Ad

ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ: 12 ಶಂಕಿತರ ಬಂಧನ

Update: 2017-01-04 15:39 IST

ಬೆಂಗಳೂರು, ಜ.4: ನಗರದ ಕಮ್ಮನಹಳ್ಳಿಯಲ್ಲಿ ಹೊಸ ವರ್ಷದ ಮೊದಲ ದಿನ ಕಾಮುಕರ ತಂಡವೊಂದು ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಣಸವಾಡಿ ಪೊಲೀಸರು 12 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯ ರಸ್ತೆ ಬದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮನೆ ಮಾಲಿಕ ಪ್ರಶಾಂತ್ ಫ್ರಾನ್ಸಿಸ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಶಂಕಿತರನ್ನು ಸೆರೆ ಹಿಡಿದಿದ್ದಾರೆ.

‘‘ಆರೋಪಿಗಳನ್ನು ಶೀಘ್ರವೇ ಬಂಧಿಸಿ ಶಿಕ್ಷೆ ನೀಡಲಾಗುವುದು’’ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಡಿ.31ರ ಮಧ್ಯ ರಾತ್ರಿ ಯುವತಿಯೊಬ್ಬಳು ರಿಕ್ಷಾದಿಂದ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಹೊಂಡಾ ಆ್ಯಕ್ಟೀವಾದಲ್ಲಿ ಬಂದ ಇಬ್ಬರು ಕಾಮುಕರು ಯುವತಿಯನ್ನು ಅಡ್ಡಗಟ್ಟಿದ್ದಾರೆ. ಮಾತ್ರವಲ್ಲ ಆಕೆಯನ್ನು ಬಲವಂತವಾಗಿ ಅಪ್ಪಿ ಮುತ್ತಿಟ್ಟಿದ್ದಾರೆ. ಯುವತಿಯನ್ನು ಎಳೆದುಕೊಂಡು ಹೋಗಲು ವಿಫಲ ಯತ್ನ ನಡೆಸಿದ್ದ ಕಾಮುಕರು ಅಮಾನುಷವಾಗಿ ಆಕೆಯನ್ನು ರಸ್ತೆಗೆ ತಳ್ಳಿ ಪರಾರಿಯಾಗಿದ್ದಾರೆ. ಕಾಮುಕರ ತಂಡ ಸಂತ್ರಸ್ತ ಯುವತಿಯ ಮನೆಯೆದುರೇ ಈ ಕೃತ್ಯ ಎಸಗಿದ್ದಾರೆ.

ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾಗ ಸಾವಿರಾರು ಜನರಿದ್ದಾಗಲೆ ಕಾಮುಕರ ಗುಂಪು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ವಿಷಯ ಮೊನ್ನೆಯಷ್ಟೇ ವರದಿಯಾಗಿದ್ದು, ಇದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News