ದೇಶದ ಪ್ರಪ್ರಥಮ ಕ್ಯಾಶ್ ಲೆಸ್ ಆದಿವಾಸಿ ಗ್ರಾಮದ ವಾಸ್ತವವೇನು ?

Update: 2017-01-06 10:26 GMT

ಮಲ್ಲಪುರಂ ಜಿಲ್ಲಾಧಿಕಾರಿ ಅಮಿತ್  ಮೀನಾ 5 ರೂಪಾಯಿಯನ್ನು ಡಿಜಿಟಲ್ ದಾರಿಯಲ್ಲಿ ನೆಡುಮ್ಕಾಯಂನ 27 ಜನರ ಖಾತೆಗೆ ವರ್ಗಾಯಿಸಿ ಇದು ಭಾರತದ ಮೊದಲ ನಗದುರಹಿತ ಬುಡಕಟ್ಟು ಗ್ರಾಮ ಎಂದು ಘೋಷಿಸಿದರು. ನೆಡುಮ್ಕಾಯಂನ ಡಿಜಿಟಲ್ ವ್ಯವಹಾರ ಹೀಗೆ ಆರಂಭವಾಗಿ ಅಲ್ಲೇ ಮುಕ್ತಾಯವಾಯಿತು.

‘ನನ್ನ ಮಲ್ಲಪುರಂ, ನನ್ನ ಡಿಜಿಟಲ್’ ಎನ್ನುವ ಯೋಜನೆಯಡಿ ಕೇರಳದ ಮಲ್ಲಪುರಂ ಜಿಲ್ಲೆಯನ್ನು ಭಾರತದ ಮೊದಲ ನಗದುರಹಿತ ಜಿಲ್ಲೆ ಎಂದು ಘೋಷಿಸುವ ಭಾಗವಾಗಿ ಈ ಘೋಷಣೆ ಮಾಡಲಾಗಿದೆ. ಪನಿಯಾ ಬುಡಕಟ್ಟಿನ ಸುಮಾರು 400 ಜನರು ಇರುವ ನೆಡುಮ್ಕಾಯಂಗೆ ವೈಫೈ ವ್ಯವಸ್ಥೆಯನ್ನು ಆನ್ ಲೈನ್ ಪಾವತಿಗಾಗಿ ಕೊಡಲಾಗಿದೆ. ಎಸ್ ಬಿಐ ಬಡ್ಡಿ ಆಪ್ ಬಳಸಿ ಸ್ಮಾರ್ಟ್ ಫೋನ್ ಗಳ ಮೂಲಕ ಹೇಗೆ ಡಿಜಿಟಲ್ ಪಾವತಿ ಮಾಡಬಹುದು ಎಂದು ತರಬೇತಿಯನ್ನೂ ನೀಡಲಾಗಿದೆ.

ವಾರದ ನಂತರ ವೈಫೈ ಮಾಡೆಂ ಇಟ್ಟಿರುವ ಸಮುದಾಯ ಸಭಾಭವನದ ಸಮೀಪವಿರುವ 10 ಮನೆಗಳಿಗೆ ಮಾತ್ರ ಲಭ್ಯವಾಗುತ್ತಿದೆ. ಅದೂ ರಾತ್ರಿ ಎಂಟು ಗಂಟೆಯ ನಂತರ ಬುಡಕಟ್ಟು ಜನರು ಕೆಲಸದಿಂದ ವಾಪಾಸಾಗಿ ಕಟ್ಟಡ ತೆರೆದಾಗ ಲಭ್ಯವಿರುತ್ತದೆ. ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸಮೀಪದ ಮನೆಯಿಂದ ವಿದ್ಯುತ್ ಬಳಸಿಕೊಳ್ಳಲಾಗುತ್ತದೆ. ಆದರೆ ಬುಡಕಟ್ಟು ಜನರು ಹೆಚ್ಚು ಚಿಂತಿಸಿಲ್ಲ. ಅವರ ಪ್ರಕಾರ ಕಷ್ಟದಿಂದ ಸಿಗುವ ದಿನಗೂಲಿಗಳನ್ನು ಅವರು ಬ್ಯಾಂಕ್ ಖಾತೆಗಳಲ್ಲಿ ಇಡುವುದೇ ಅಪರೂಪ. ಆ ಕಾಲನಿಯಲ್ಲಿ ನೆಲೆಸಿದ ಉದ್ಯೋಗಿಗಳಲ್ಲಿ ಮೂವರು ಮಾತ್ರ ಅರಣ್ಯ ಇಲಾಖೆಯಲ್ಲಿ ಕಾವಲು ಪಡೆಯಲ್ಲಿ ಉದ್ಯೋಗ ಮಾಡಿ ವೇತನ ಪಡೆಯುವವರು. ಇನ್ನು ಇಬ್ಬರು ಅದೇ ಕೆಲಸವನ್ನು ದಿನಗೂಲಿಗೆ ಮಾಡುತ್ತಾರೆ.

ಬಹಳಷ್ಟು ಮಂದಿ ಕೆಲಸಕ್ಕೆ ಸಮೀವಪೇ ಇರುವ ಅರಣ್ಯ ಇಲಾಖೆಯ ಮರದ ಡಿಪೋವನ್ನು ಅವಲಂಭಿಸಿದ್ದಾರೆ. ಅಲ್ಲಿ ವಾರಕ್ಕೊಮ್ಮೆ ಕೆಲಸ ಸಿಗಬಹುದು. ಹಾಗೆ ಕೆಲಸ ಸಿಕ್ಕರೆ ರೂ. 1000 ಸಂಬಳ ಬರುತ್ತದೆ.

ಅವರಿಗೆ ಅತೀ ಮುಖ್ಯವಾಗಿ ಬೇಕಿರುವುದು ಕುಡಿಯುವ ನೀರು ಮತ್ತು ಶೌಚಾಲಯಗಳು. ಕೇರಳವನ್ನು ಬಯಲು ಶೌಚಾಲಯ ಮುಕ್ತ ಪ್ರದೇಶವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನವೆಂಬರ್ 1 ರಂದು ಘೋಷಿಸಿದ್ದಾರೆ.

27ರ ವಯಸ್ಸಿನ ಎನ್ ರಜನೀಶ್ ಅರಣ್ಯ ಕಾವಲುಪಡೆಯಲ್ಲಿ ಕೆಲಸ ಮಾಡಿ ದಿನಕ್ಕೆ ರೂ. 400 ಸಂಪಾದಿಸುತ್ತಾನೆ. ಆತನ ಮನೆಯಿಂದಲೇ ಸಮುದಾಯ ಭವನಕ್ಕೆ ವಿದ್ಯುತ್ ಸಿಗುತ್ತದೆ. ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಈ ಸಮುದಾಯ ಬೇಡಿಕೆ ಇಟ್ಟಿದೆ. “ನಾವೆಲ್ಲರೂ ಸಮೀಪದ ನದಿಗೆ ನೀರು ತರಲು ಹೋಗುತ್ತೇವೆ. ಹಗಲಿನ ವೇಳೆ ಪ್ರವಾಸಿಗರು ಅಲ್ಲಿರುವ ಕಾರಣ ಮಹಿಳೆಯರು ಹೋಗಲು ಸಾಧ್ಯವಾಗುವುದಿಲ್ಲ. ಸಂಜೆ 5ರ ನಂತರವೇ ನೀರು ತರಬೇಕಿದೆ. ಮಳೆಗಾಲದಲ್ಲಿ ಕೊಳಕು ನೀರನ್ನೇ ಬಟ್ಟೆಯಲ್ಲಿ ಶೋಧಿಸಿ ಕುಡಿಯಬೇಕಿದೆ” ಎನ್ನುತ್ತಾರೆ ರಜನೀಶ್. ಹೆತ್ತವರು ಮತ್ತು ಇಬ್ಬರು ಮಕ್ಕಳು ಸೇರಿ ಅವರ ಕುಟುಂಬದಲ್ಲಿ ಏಳು ಮಂದಿ ಸದಸ್ಯರು.

ನೆಡುಮ್ಕಾಯಂನ 103 ಮನೆಗಳಲ್ಲಿ 15 ಮನೆಗಳಿಗೆ ಮಾತ್ರ ಶೌಚಾಲಯ ಸೌಲಭ್ಯವಿದೆ. ಉಳಿದ ಕುಟುಂಬಗಳು ಕೆಲವು ಸಾರ್ವಜನಿಕ ಶೌಚಾಲಯ ಅಥವಾ ಸಮೀಪದ ತೋಟದಲ್ಲಿ ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ತಮ್ಮ ಇನ್ನೂ ಪೂರ್ಣವಾಗದ ಎರಡು ಕೋಣೆಯ ಮನೆಯತ್ತ ಬೊಟ್ಟು ಮಾಡುತ್ತಾ ರಜನೀಶ್ ಪತ್ನಿ ರಶ್ಮಿ ಅವರು ಏಳು ಮಂದಿ ನೆಲೆಸಲು ಕಷ್ಟವಾಗುತ್ತಿರುವುದನ್ನು ತಿಳಿಸುತ್ತಾರೆ. “ರಾತ್ರಿಯಲ್ಲಿ ಮನೆಯಲ್ಲಿ ನೀರು ಇಡುವುದಿಲ್ಲವಾದ ಕಾರಣ ಶೌಚಾಲಯಕ್ಕೆ ಹೋಗಲಾಗುವುದಿಲ್ಲ” ಎನ್ನುತ್ತಾರೆ.

20 ವರ್ಷಗಳಿಂದ ಸ್ವಲ್ಪ ಸರಕಾರಿ ಉದ್ಯೋಗದಲ್ಲಿದ್ದಾರೆ. “ನಗದುರಹಿತ ವ್ಯವಹಾರದಿಂದ ನಮ್ಮ ಜೀವನ ಬದಲಾಗದು. ಮಹಿಳೆಯರ ಸುರಕ್ಷತೆಗಾದರೂ ಮೊದಲಿಗೆ ಶೌಚಾಲಯ ವ್ಯವಸ್ಥೆ ಬೇಕು” ಎನ್ನುತ್ತಾರೆ ಸ್ವಪ್ನಾ.

ರಾಜ್ಯ ಸರಕಾರದಲ್ಲಿ ಮನೆಯಿಲ್ಲದವರಿಗೆ ವಸತಿ ವ್ಯವಸ್ಥೆಗಳಿವೆ. ಆದರೆ ಕನಿಷ್ಠ ಮೂರು ಸೆಂಟ್ಸ್ ಜಾಗವಿದ್ದರೆ ಮಾತ್ರ ಮನೆ ಕಟ್ಟಲು ರೂ. 2.50 ಲಕ್ಷ ಹಣ ಕಂತಿನಲ್ಲಿ ಸಿಗುತ್ತದೆ. ಬಹಳಷ್ಟು ಬುಡಕಟ್ಟು ಜನರಿಗೆ ಆಸ್ತಿ ಇಲ್ಲದೆ ಮನೆ ಕಟ್ಟುವ ಯೋಜನೆ ಬಳಸಿಕೊಳ್ಳಲಾಗುತ್ತಿಲ್ಲ. ಕೆಲವರು ಅರ್ಜಿ ಹಾಕಿದ್ದರೂ ಅದು ಅಂಗೀಕಾರವಾಗಿಲ್ಲ ಎನ್ನುತ್ತಾರೆ ದಿನಕ್ಕೆ ರೂ. 400 ಸಂಪಾದಿಸುವ ಸಿ ಮನು.

ಜಿಲ್ಲಾಧಿಕಾರಿ ಮೀನಾ ಅವರು ನೆಡುಮ್ಕಾಯಂನಲ್ಲಿ ಮೂಲ ಸೌಕರ್ಯಗಳಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಇಲ್ಲಿನ ಬಹಳಷ್ಟು ಬುಡಕಟ್ಟು ಮಂದಿಗೆ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ ಇದ್ದ ಕಾರಣ ಈ ಗ್ರಾಮವನ್ನು ಯೋಜನೆಗೆ ಆರಿಸಿಕೊಂಡಿದ್ದಾಗಿ ಹೇಳುತ್ತಾರೆ. ಬಹಳಷ್ಟು ಮಂದಿ 3 ಕಿಮೀ ದೂರದಲ್ಲಿರುವ ಕರುಲೈನ ಕೇರಳ ಗ್ರಾಮೀಣ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಾರೆ. ಇನ್ನು ಕೆಲವರು 15 ಕಿಮೀ ದೂರದ ನೀಲಂಬರ್ ನಲ್ಲಿ ಖಾತೆ ಹೊಂದಿದ್ದಾರೆ. “ಸ್ಥಳೀಯ ಪಂಚಾಯತ್ ಗೆ ಈ ಕಾಲನಿಗೆ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ. ಇಲ್ಲಿನ ಅಭಿವೃದ್ಧಿ ಮೇಲೆ ನಾವು ಕಣ್ಣಿಡುತ್ತೇವೆ” ಎನ್ನುತ್ತಾರೆ ಮೀನಾ.

ಆದರೆ ದಿನಗೂಲಿ ನೌಕರ 38 ವರ್ಷದ ಕುಟ್ಟನ್ ಪ್ರಕಾರ ಬ್ಯಾಂಕ್ ಖಾತೆಗಳು ಇದ್ದ ಮಾತ್ರಕ್ಕೆ ಏನೂ ಸಾಧನೆಯಾಗದು. ಕುಟ್ಟನ್ ತನ್ನ ಬ್ಯಾಂಕ್ ಖಾತೆಗಾಗಿ ಬ್ಯಾಂಕನ್ನು ಕೊನೇ ಬಾರಿ ಭೇಟಿ ಮಾಡಿರುವುದು ಯಾವಾಗ ಎಂದೇ ಮರೆತಿದ್ದಾರೆ. ನೆಡುಮ್ಕಾಯಂ ನಲ್ಲಿ ಯಾವುದೋ ಡಿಜಿಟಲ್ ಕ್ರಾಂತಿಯಾಗಿದೆ ಎನ್ನುವುದನ್ನು ಆತ ಕೇಳಿಯೂ ಇಲ್ಲ! ಕಾಲನಿಯ ಬಹಳಷ್ಟು ಮಂದಿಗೆ ವಾರಕ್ಕೆ ಒಂದೆರಡು ದಿನ ಮಾತ್ರ ಕೆಲಸ ಸಿಗುತ್ತದೆ. ಅದಕ್ಕೆ ನಗದಿನಲ್ಲೇ ಸಂಬಳವೂ ಸಿಗುತ್ತದೆ. ಹೀಗಾಗಿ ನಗದಿಲ್ಲದ ವ್ಯವಹಾರಕ್ಕೆ ಅವಕಾಶವೇ ಇಲ್ಲ ಎನ್ನುತ್ತಾರೆ ಅವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News