ಬಟಾಟೆ.....ಆರೋಗ್ಯದ ವಿಷಯದಲ್ಲಿ ಇಲ್ಲವೇ ಇಲ್ಲ ಗಲಾಟೆ

Update: 2017-01-07 09:36 GMT

ಬಟಾಟೆ ಮಧ್ಯ ಅಮೆರಿಕ ಮೂಲದ ಪಿಷ್ಟವನ್ನೊಳಗೊಂಡ ಬೇರು ರೂಪದ ತರಕಾರಿಯಾಗಿದೆ. ಇದು ವಿಶ್ವಾದ್ಯಂತ ವ್ಯಾಪಕವಾಗಿ ಬೆಳೆಯಲಾಗುವ ಗಡ್ಡೆ ರೂಪದ ತರಕಾರಿಗಳಲ್ಲೊಂದಾಗಿದೆ. ಹಾಗೆಯೇ ವಿಶ್ವದ ಎಲ್ಲೆಡೆ ಬಳಕೆಯಾಗುವ ಅತ್ಯಂತ ಅಗ್ಗದ ಮುಖ್ಯ ಆಹಾರವಾಗಿದೆ. ಸಸ್ಯಶಾಸ್ತ್ರೀಯವಾಗಿ ಸೋಲನಸೀ ಕುಟುಂಬದ ಸೋಲನಮ್ ಟ್ಯೂಬರೋಸಮ್ ಉಪವರ್ಗಕ್ಕೆ ಸೇರಿದೆ.

ಗಿಡವು ಭೂಮಿಯ ಮೇಲೆ 12 ರಿಂದ 18 ಇಂಚು ಎತ್ತರ ಬೆಳೆಯುತ್ತದೆ. ಭೂಮಿಯ ಕೆಳಗೆ ಹಲವಾರು ಗಡ್ಡೆಗಳನ್ನುಹೊಂದಿರುತ್ತದೆ.

ಬಟಾಟೆಯ ಆರೋಗ್ಯಕಾರಿ ಗುಣಗಳು.

 ಬಟಾಟೆ ಪಿಷ್ಟ, ವಿಟಾಮಿನ್‌ಗಳು, ಖನಿಜಗಳು ಮತ್ತು ನಾರಿನಂಶಗಳನ್ನು ಹೊಂದಿದೆ. 100 ಗ್ರಾಂ ಬಟಾಟೆ 70 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಆದರೆ ಕೊಬ್ಬಿನ ಪ್ರಮಾಣ ತೀರ ಕಡಿಮೆ(100 ಗ್ರಾಂ ಬಟಾಟೆಯಲ್ಲಿ ಕೇವಲ 0.1 ಮಿ.ಗ್ರಾಂ)ಯಿರುತ್ತದೆ ಮತ್ತು ಕೊಲೆಸ್ಟರಾಲ್ ಇದರಲ್ಲಿಲ್ಲ.

ಕರಗಬಲ್ಲ ಮತ್ತು ಕರಗದ ನಾರಿನಂಶಕ್ಕೆ ಬಟಾಟೆ ಉತ್ತಮ ಮೂಲವಾಗಿದೆ. ಈ ನಾರಿನಂಶ ಮಲಬದ್ಧತೆಯನ್ನು ತಡೆಯಲು ನೆರವಾಗುತ್ತದೆ. ಜೊತೆಗೆ ಕೊಲೆಸ್ಟರಾಲ್ ಹೀರುವಿಕೆಯ ಪ್ರಮಾಣವನ್ನು ತಗ್ಗಿಸುವ ಮೂಲಕ ಪ್ಲಾಸ್ಮಾ ಎಲ್‌ಡಿಎಲ್ ಕೊಲೆಸ್ಟರಾಲ್‌ನ್ನು ಕಡಿಮೆಯಾಗಿಸುತ್ತದೆ. ಬಟಾಟೆಯಲ್ಲಿರುವ ನಾರಿನಂಶ ಕ್ಯಾನ್ಸರ್ ವಿರುದ್ಧವೂ ರಕ್ಷಣೆಯನ್ನು ನೀಡುತ್ತದೆ.

ನಾರಿನಂಶ ಪಿಷ್ಟದ ನಿಧಾನ ಜೀರ್ಣಕ್ರಿಯೆಯಲ್ಲಿ ನೆರವಾಗುವ ಜೊತೆಗೆ ಕರುಳಿನಲ್ಲಿಯ ಸಾಮಾನ್ಯ ಸಕ್ಕರೆಯನ್ನು ಹೀರಿಕೊಳ್ಳುತ್ತದೆ. ತನ್ಮೂಲಕ ರಕ್ಯದಲ್ಲಿನ ಸಕ್ಕರೆಯನ್ನು ಸಾಮಾನ್ಯ ಮಟ್ಟದಲ್ಲಿ ಕಾಯ್ದುಕೊಳ್ಳಲು ನೆರವಾಗುವ ಇದು ರಕ್ತದೊತ್ತಡದ ಏರಿಳಿತವನ್ನು ನಿವಾರಿಸುತ್ತದೆ. ಇದೇ ಕಾರಣದಿಂದ ಮಧುಮೇಹಿಗಳ ಪಾಲಿಗೂ ಕಾರ್ಬೊಹೈಡ್ರೇಟ್‌ಗಳ ಸಮೃದ್ಧ ಮೂಲವಾಗಿ ಬಟಾಟೆಯನ್ನು ಪರಿಗಣಿಸಲಾಗುತ್ತದೆ.

 ನಿಯಾಸಿನ್,ಪೈರಿಡಾಕ್ಸಿನ್(ವಿಟಾಮಿನ್ ಬಿ-6) ಮತ್ತು ಥಿಯಾಮಿನ್(ವಿಟಾಮಿನ್ ಬಿ-1)ನಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳು ಸಾಕಷ್ಟು ಉತ್ತಮ ಪ್ರಮಾಣದಲ್ಲಿ ಬಟಾಟೆಯಲ್ಲಿವೆ. ಈ ವಿಟಾಮಿನ್‌ಗಳು ನಮ್ಮ ಶರೀರಕ್ಕೆ ಹೊರಗಿನಿಂದಲೇ ಪೂರೈಕೆಯಾಗಬೇಕಾಗಿರುವುದರಿಂದ ಬಟಾಟೆ ನಮ್ಮ ಶರೀರದ ಆರೋಗ್ಯಕ್ಕೆ ಸಾಕಷ್ಟು ಸಹಾಯಕಾರಿಯಾಗಿದೆ.

ತಾಜಾ ಬಟಾಟೆ ಅದರ ಸಿಪ್ಪೆಯೊಂದಿಗೆ ಆ್ಯಂಟಿಆಕ್ಸಿಡಂಟ್ ವಿಟಾಮಿನ್ ಆಗಿರುವ ವಿಟಾಮಿನ್ ಸಿ ಅನ್ನು ಉತ್ತಮ ಪ್ರಮಾಣದಲ್ಲಿ ಒಳಗೊಂಡಿದೆ. 100 ಗ್ರಾಂ ಬಟಾಟೆಯು 11.4 ಮಿ.ಗ್ರಾಂ ಅಥವಾ ನಮ್ಮ ದೈನಂದಿನ ಅಗತ್ಯದ ಶೇ.20ರಷ್ಟು ವಿಟಾಮಿನ್ ಸಿ ಅನ್ನು ಒದಗಿಸುತ್ತದೆ.

ವಿಟಾಮಿನ್ ಸಿ ಅನ್ನು ಸಮೃದ್ಧವಾಗಿ ಹೊಂದಿರುವ ಆಹಾರಗಳ ಸೇವನೆ ಸೋಂಕುಕಾರಕಗಳ ವಿರುದ್ಧ ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುತ್ತದೆ.

    ಕಬ್ಬಿಣ, ತಾಮ್ರ, ಪೊಟ್ಯಾಶಿಯಂ, ಮ್ಯಾಗ್ನೇಶಿಯಂ ಮತ್ತು ರಂಜಕದಂತಹ ಅಗತ್ಯ ಖನಿಜಗಳು ಬಟಾಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿವ. ಮ್ಯಾಂಗನೀಸ್‌ನ್ನು ನಮ್ಮ ಶರೀರವು ಆ್ಯಂಟಿಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News