ಮೂಲಂಗಿ ತಿನ್ನಿ.....ಮೂಲವ್ಯಾಧಿ ದೂರವಿಡಿ

Update: 2017-01-09 09:44 GMT

ಪೋಷಕಾಂಶಭರಿತ ಗೆಡ್ಡೆರೂಪದ ತರಕಾರಿಗಳಲ್ಲೊಂದಾಗಿರುವ ಮೂಲಂಗಿಯನ್ನು ಹಾಗೆಯೇ ಸಲಾಡ್‌ನಲ್ಲಿ ಅಥವಾ ಬೇಯಿಸಿ ಮುಖ್ಯ ಆಹಾರಗಳಲ್ಲಿ ಬಳಸಬಹುದಾಗಿದೆ. ವ್ಯಾಪಕವಾಗಿ ಬಳಕೆಯಾಗುವ ಈ ತರಕಾರಿ ಬ್ರಾಸಿಕಾ ಕುಟುಂಬಕ್ಕೆ ಸೇರಿದೆ. ಚೀನಿ ಸಂಸ್ಕೃತಿಯಲ್ಲಿ ಮೂಲಂಗಿ, ಸೋಯಾಬೀನ್ ಕರ್ಡ್ ಮತ್ತು ಕ್ಯಾಬೇಜ್‌ಗಳನ್ನು ಆರೋಗ್ಯಪೂರ್ಣ ಮತ್ತು ಪುಷ್ಟಿದಾಯಕ ಆಹಾರವೆಂದು ಪರಿಗಣಿಸಲಾಗಿದೆ.

‘ಘಾಟು ವಾಸನೆಯ ಮೂಲಂಗಿಯನ್ನು ತಿನ್ನುತ್ತಿರಿ....ಬಿಸಿ ಚಹಾ ಕುಡಿಯುತ್ತಿರಿ. ವೈದ್ಯರು ಮಂಡಿಯೂರಿ ಭಿಕ್ಷೆ ಬೇಡುತ್ತಿರಲಿ ’ಎನ್ನುವುದು ಜನಪ್ರಿಯ ಚೀನಿ ನಾಣ್ಣುಡಿ. ಮೂಲಂಗಿ ಮತ್ತು ಬಿಸಿ ಚಹಾ ಸೇವನೆಯಿಂದ ಶರೀರ ಆರೋಗ್ಯಪೂರ್ಣವಾಗಿರುತ್ತದೆ, ವೈದ್ಯರ ಬಳಿಗೆ ಹೋಗಬೇಕಾಗಿಲ್ಲ ಎನ್ನವುದು ಇದರ ಅರ್ಥ.

ಶತಮಾನಗಳ ಹಿಂದೆ ಚೀನಾದಲ್ಲಿ ಬೆಳೆಯುತ್ತಿದ್ದ ಮೂಲಂಗಿ ಇಂದು ವಿಶ್ವಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ತರಕಾರಿಯಾಗಿದೆ. ರಫಾನಸ್ ಸಟಿವಸ್ ಎನ್ನುವುದು ಇದರ ಸಸ್ಯಶಾಸ್ತ್ರೀಯ ಹೆಸರು.

ಮೂಲಂಗಿ ವಿವಿಧ ರೂಪಗಳಲ್ಲಿ,ಗಾತ್ರಗಳಲ್ಲಿ ಮತ್ತು ಬಣ್ಣಗಳಲ್ಲಿ ಬೆಳೆಯುತ್ತದೆ. ಮೂಲಂಗಿಯಲ್ಲಿರುವ ಐಸೊಥಿಯೊಸೈನೇಟ್ ಸಂಯುಕ್ತವು ಅದಕ್ಕೆ ಘಾಟು ವಾಸನೆಯನ್ನು ನೀಡಿದೆ. ಬಿಳಿಯ ಮೂಲಂಗಿಯಲ್ಲಿ ಈ ವಾಸನೆ ಸೌಮ್ಯವಾಗಿದ್ದರೆ ಕೆಂಪು ಮೂಲಂಗಿಯಲ್ಲಿ ಕಟುವಾಗಿರುತ್ತದೆ. ಮೂಲಂಗಿ ಗೆಡ್ಡೆಯ ಮೇಲಿನ ಎಲೆಗಳನ್ನೂ ಆಹಾರವಾಗಿ ಬಳಸಲಾಗುತ್ತದೆ.

ಮೂಲಂಗಿಯಿಂದ ಆರೋಗ್ಯ ಲಾಭಗಳು

ಮೂಲಂಗಿ ಅತಿ ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುವ ಗೆಡ್ಡೆರೂಪದ ತರಕಾರಿಗಳಲ್ಲೊಂದಾಗಿದೆ. ಪ್ರತಿ 100 ಗ್ರಾಂ ತಾಜಾ ಗೆಡ್ಡೆ ಕೇವಲ 16 ಕ್ಯಾಲೊರಿ ಗಳನ್ನೊಳಗೊಂಡಿರುತ್ತದೆ. ಜೊತೆಗೆ ಆ್ಯಂಟಿ ಆಕ್ಸಿಡಂಟ್‌ಗಳು, ಇಲೆಕ್ಟ್ರೊಲೈಟ್‌ಗಳು, ನಾರಿನಂಶ, ಖನಿಜಗಳು ಮತ್ತು ವಿಟಾಮಿನ್‌ಗಳ ಅತ್ಯುತ್ತಮ ಮೂಲವಾಗಿದೆ.

ಹೇರಳ ನಾರಿನಂಶದಿಂದಾಗಿ ಮೂಲಂಗಿಯು ಮಲಬದ್ಧತೆಯನ್ನು ನಿವಾರಿಸಿ ಮೂಲವ್ಯಾಧಿಯ ವಿರುದ್ಧ ರಕ್ಷಣೆಯನ್ನು ನೀಡುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೆ ಗೊತ್ತೇ ಇದೆ.

ಮೂಲಂಗಿಯು ಇತರ ಕ್ರುಸಿಫೆರಸ್ ಮತ್ತು ಬ್ರಾಸಿಕಾ ಕುಟುಂಬಕ್ಕೆ ಸೇರಿದ ತರಕಾರಿಗಳಂತೆ ಸಲ್ಫೋರಾಫೇನ್ ಎಂದು ಕರೆಯಲಾಗುವ ಐಸೊಥಿಯೊಸೈನೇಟ್ ಆ್ಯಂಟಿ ಆಕ್ಸಿಡಂಟ್ ಸಂಯುಕ್ತವನ್ನು ಒಳಗೊಂಡಿರುತ್ತದೆ. ಇದು ಪ್ರಾಸ್ಟೇಟ್, ಸ್ತನ, ಗುದನಾಳ ಮತ್ತು ಅಂಡಾಶಯ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ತಾಜಾ ಮೂಲಂಗಿಯು ವಿಟಾಮಿನ್ ಸಿ ಅನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ವಿಟಾಮಿನ್ ಸಿ ಶಕ್ತಿಶಾಲಿಯಾದ, ನೀರಿನಲ್ಲಿ ಕರಗಬಲ್ಲ ಆ್ಯಂಟಿ ಆಕ್ಸಿಡಂಟ್ ಆಗಿದ್ದು ಕೊಲಾಜಿನ್ ತಯಾರಿಕೆಯಲ್ಲಿ ನಮ್ಮ ಶರೀರಕ್ಕೆ ಅಗತ್ಯವಾಗಿದೆ.

ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳನ್ನು ಶರೀರದಿಂದ ನಿವಾರಿಸುವಲ್ಲಿ, ಕ್ಯಾನ್ಸರ್ ಮತ್ತು ಉರಿಯೂತದ ವಿರುದ್ಧ ರಕ್ಷಣೆಯಲ್ಲಿ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ವಿಟಾಮಿನ್ ಸಿ ನೆರವಾಗುತ್ತದೆ.

   ಫೋಲೇಟ್‌ಗಳು,ರಿಬೊಫ್ಲಾವಿಯನ್,ವಿಟಾಮಿನ್ ಬಿ-6 ಮತ್ತು ಥಿಯಾಮಿನ್ (ವಿಟಾಮಿನ್ ಬಿ-1)ನಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಮೂಲಂಗಿಯಲ್ಲಿವೆ.

ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಶಿಯಂ ನಂತಹ ಅಗತ್ಯ ಖನಿಜಗಳೂ ಇದರಲ್ಲಿವೆ.

ನಂಜನ್ನು ನಿವಾರಿಸುವ ಇಂಡೋಲ್‌ಗಳಂತಹ ಹಲವಾರು ಫೈಟೊಕೆಮಿಕಲ್‌ಗಳು ಮತ್ತು ಝೀ-ಕ್ಸಾಂತಿನ್,ಲುಟೆನ್ ಮತ್ತು ಬಿ-ಕ್ಯಾರೊಟಿನ್‌ಗಳಂತಹ ಫ್ಲಾವೊನಾಯ್ಡಾ ಆ್ಯಂಟಿ ಆಕ್ಸಿಡಂಟ್‌ಗಳೂ ಮೂಲಂಗಿಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News