ವಿದೇಶಿ ಉದ್ಯೋಗ : ಅಕ್ರಮ ನೇಮಕಾತಿ ಏಜೆನ್ಸಿಗಳ ವಿರುದ್ಧ ಕೇಂದ್ರದ ಕೆಂಗಣ್ಣು
ಬೆಂಗಳೂರು, ಜ.9: ವಿದೇಶಗಳಲ್ಲಿ, ಮುಖ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಜನರನ್ನು ವಂಚಿಸುವ ಅಕ್ರಮ ನೇಮಕಾತಿ ಏಜೆನ್ಸಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ.ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ವಿದೇಶಗಳಲ್ಲಿ ಉದ್ಯೋಗ ಅರಸುವ ಯಾ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಮಂದಿಯ ಶೈಕ್ಷಣಿಕ ಅರ್ಹತೆಗಳನ್ನು ಅಧಿಕಾರಿಗಳು ಯಾ ವಿದೇಶಿ ಉದ್ಯೋಗದಾತರು ಪರಿಶೀಲಿಸಲು ಅನುಕೂಲವಾಗುವಂತೆ ಅವುಗಳ ಮಾಹಿತಿ ನೀಡುವ ರಾಷ್ಟ್ರೀಯ ಭಂಡಾರವೊಂದನ್ನು ಸೃಷ್ಟಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನೋಂದಣಿಗೊಳ್ಳದ ಹಲವಾರು ನೇಮಕಾತಿ ಏಜೆನ್ಸಿಗಳು ಜನರನ್ನು ಹೇಗೆ ವಂಚಿಸುತ್ತಿವೆ ಎಂದು ನಮಗೆ ತಿಳಿದಿದೆ. ಹೆಚ್ಚಿನವರನ್ನು ಟೂರಿಸ್ಟ್ ವೀಸಾದಲ್ಲಿ ಕಳುಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಇಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಸಚಿವರು ಮೇಲಿನಂತೆ ಉತ್ತರಿಸಿದರು. ಮನೆಗೆಲಸಕ್ಕಾಗಿ ಭಾರತದಿಂದ ಹಲವರು ಹೋಗುತ್ತಿರುವ ಮಹಿಳೆಯರ ಬಗ್ಗೆ ಉಲ್ಲೇಖಿಸಿದ ಸಚಿವರು, 30 ವರ್ಷದ ಕೆಳಗಿನ ವಯಸ್ಸಿನ ಯಾರು ಕೂಡಾ ದೇಶದಿಂದ ಹೊರಕ್ಕೆ ಮನೆಗೆಲಸಕ್ಕೆಂದು ಹೋಗುವಂತಿಲ್ಲ ಎಂದು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಬೇರೆ ಕೆಲಸಕ್ಕೆ ವಿದೇಶಕ್ಕೆ ಹೋಗುವ ಮಹಿಳೆಯರು ಸಂಬಂಧಿತ ರಾಜ್ಯ ಸರಕಾರಿ ಏಜೆನ್ಸಿಗಳ ಮುಖಾಂತರವೇ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಬೇಕು ಎಂದ ಸಚಿವರು, ವಿದೇಶಗಳಲ್ಲಿ ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸುವ ವಿಚಾರದಲ್ಲಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಕ್ರಮವಾಗಿ ಮಹಿಳೆಯರನ್ನು ಸಾಗಿಸುತ್ತಿದ್ದಾರೆಂಬ ಆರೋಪದನ್ವಯ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.