ರೊನಾಲ್ಡೊಗೆ ಫಿಫಾ ಶ್ರೇಷ್ಠ ಆಟಗಾರ ಪ್ರಶಸ್ತಿ

Update: 2017-01-10 11:40 GMT

ಪೋರ್ಚ್‌ಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ಎರಡು ಪ್ರಮುಖ ಯೂರೋಪಿಯನ್ ಪ್ರಶಸ್ತಿಗಳನ್ನು 2016ರಲ್ಲಿ ಗೆದ್ದ ಹಿನ್ನೆಲೆಯಲ್ಲಿ, ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಕ್ರಿಸ್ಟಿನೊ ರೊನಾಲ್ಡೊ ಪಾತ್ರರಾಗಿದ್ದಾರೆ. ಸೋಮವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ನಾಲ್ಕನೇ ಬಾರಿಗೆ ರೊನಾಲ್ಡೊ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು.

"2016 ನನ್ನ ವೃತ್ತಿಜೀವನದಲ್ಲಿ ಅವಿಸ್ಮರಣೀಯ ವರ್ಷ" ಎಂದು ಪ್ರಶಸ್ತಿ ಸ್ವೀಕರಿಸಿದ ರೊನಾಲ್ಡೊ ಉದ್ಗರಿಸಿದರು. 23 ಸ್ಪರ್ಧಿಗಳ ರೇಸ್‌ನಲ್ಲಿ ರೊನಾಲ್ಡೊ ಶೇಕಡ 34.54ರಷ್ಟು ಮತ ಪಡೆದರು. ಐದು ಬಾರಿಯ ಪ್ರಶಸ್ತಿ ವಿಜೇತ ಮೆಸ್ಸಿ ಶೇಕಡ 26.42 ಮತಗಳೊಂದಿಗೆ ರನ್ನರ್ ಅಪ್ ಆದರೆ, 8.53 ಮತಗಳನ್ನು ಗಳಿಸಿದ ಗ್ರೀಸ್‌ಮನ್ ತೃತೀಯ ಸ್ಥಾನಿಯಾದರು. ರಾಷ್ಟ್ರೀಯ ತಂಡಗಳ ನಾಯಕರು, ತರಬೇತಿದಾರರು, ಆಯ್ದ ಮಾಧ್ಯಮ ಹಾಗೂ ಫುಟ್ಬಾಲ್ ಪ್ರೇಮಿಗಳು ಈ ಆನ್‌ಲೈನ್ ಮತದಾನದಲ್ಲಿ ಭಾಗವಹಿಸುತ್ತಾರೆ.

ಐದು ಬಾರಿ ಪ್ರಶಸ್ತಿ ಗೆದ್ದ ಮೆಸ್ಸಿಯವರ ಸನಿಹಕ್ಕೆ ಇದೀಗ ರೊನಾಲ್ಡೊ ಬಂದಂತಾಗಿದ್ದು, ಪ್ರತಿಬಾರಿ ರೊನಾಲ್ಡೊ ಪ್ರಶಸ್ತಿ ಗೆದ್ದಾಗಲೂ ರನ್ನರ್ ಅಪ್ ಆಗಿ ಮೂಡಿಬಂದ ಮೆಸ್ಸಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.

ರೊನಾಲ್ಡೊ ಅವರ ಪ್ರಶಸ್ತಿ ಗೊಂಚಲಲ್ಲಿ ಈ ಬಾರಿ ಯುರೋಪಿಯನ್ ಚಾಂಪಿಯನ್‌ಶಿಪ್, ಚಾಂಪಿಯನ್ಸ್ ಲೀಗ್, ಕ್ಲಬ್ ವರ್ಲ್ಡ್ ಕಪ್ ಸೇರಿದೆ. ಜತೆಗೆ ಯುಇಎಫ್‌ಎ ಹಾಗೂ ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕ ನೀಡುವ ವರ್ಷದ ಉತ್ತಮ ಆಟಗಾರ ಪ್ರಶಸ್ತಿ ಸೇರಿದೆ.

ಮೆಸ್ಸಿಯವರ ಬಾರ್ಸಿಲೋನಾ, ಸ್ಪಾನಿಷ್ ಲೀಗ್ ಹಾಗೂ ಕಪ್ ಡಬಲ್ ಗೆದ್ದಿದೆ. ಅವರ ನಾಯಕತ್ವದ ಅರ್ಜೆಂಟೀನಾ ಕೋಪಾ ಅಮೆರಿಕ ಫೈನಲ್‌ನಲ್ಲಿ ಎಡವಿತ್ತು. ಗ್ರೀಸ್‌ಮನ್ ಅವರ ಫ್ರಾನ್ಸ್ ಹಾಗೂ ಅಟ್ಲೆಂಟಿಕೊ ಮ್ಯಾಡ್ರಿಡ್ ಎರಡೂ ಫೈನಲ್‌ಗಳಲ್ಲಿ ರೊನಾಲ್ಡೊ ತಂಡದ ವಿರುದ್ಧ ಸೋಲು ಕಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News