ಫೆ.6ಕ್ಕೆ ವಿಧಾನ ಮಂಡಲದ ಜಂಟಿ ಅಧಿವೇಶನ: ಕಾನೂನು ಸಚಿವ ಟಿ.ಬಿ.ಜಯಚಂದ್ರ

Update: 2017-01-10 15:11 GMT

ಬೆಂಗಳೂರು, ಜ. 10: ವಿಧಾನ ಮಂಡಲದ ವರ್ಷದ ಮೊದಲ ಜಂಟಿ ಅಧಿವೇಶನವನ್ನು 2017ರ ಫೆ.6ರಂದು ಕರೆಯಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ರಾಜ್ಯಪಾಲ ವಜುಭಾಯಿ ವಾಲಾ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲದೆ, ಈ ಅಧಿವೇಶನವು ಐದು ದಿನಗಳ ಕಾಲ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸೇತುವೆಗಳ ನಿರ್ಮಾಣ: ರಸ್ತೆ ಅಭಿವೃದ್ಧಿ ನಿಗಮದಿಂದ ಮುಂದಿನ 3ವರ್ಷಗಳಲ್ಲಿ 1,395.58 ಕೋಟಿ ರೂ.ವೆಚ್ಚದಲ್ಲಿ 195 ಸೇತುವೆಗಳನ್ನು ನಿರ್ಮಾಣಕ್ಕೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಜಯಚಂದ್ರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

2017-18ನೆ ಸಾಲಿನಲ್ಲಿ 350 ಕೋಟಿ ರೂ., 2018-19ನೆ ಸಾಲಿನಲ್ಲಿ 450 ಕೋಟಿ ರೂ. ಹಾಗೂ 2019-20ನೆ ಸಾಲಿನಲ್ಲಿ 495.58 ಕೋಟಿ ರೂ.ವೆಚ್ಚದಲ್ಲಿ ಪ್ರಮುಖ ಸೇತುವೆಗಳನ್ನು ನಿರ್ಮಿಸಿ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ ಎಂದು ಅವರು ವಿವರ ನೀಡಿದರು.

ಡಯೋಗ್ನೋಸ್ಟಿಕ್ಸ್ ಯಂತ್ರಗಳ ಖರೀದಿ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 103.53 ಕೋಟಿ ರೂ.ವೆಚ್ಚದಲ್ಲಿ ರೋಗಗಳ ಪತ್ತೆ ಹಚ್ಚುವ ವೈದ್ಯಕೀಯ ಡಯೋಗೋಸ್ಟಿಕ್ಸ್ ಯಂತ್ರಗಳ ಖರೀದಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬಡ ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸುವುದು ಈ ಉಪಕರಣಗಳ ಖರೀದಿಯ ಮೂಲ ಉದ್ದೇಶ. ಪ್ರತಿ ಜಿಲ್ಲೆಯ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ (ಕಂಪ್ಯೂಟೆಡ್ ಟೋಮೋಗ್ರಫಿ), ಎಂ.ಆರ್.ಐ ಸ್ಕ್ಯಾನ್(ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್) ಡಯೋಗ್ನೋಸ್ಟಿಕ್ಸ್ ಉಪಕರಣ ಅಳವಡಿಸಲಾಗುವುದು. ಇದಕ್ಕಾಗಿ ಕೇಂದ್ರ ಸರಕಾರ ರಾಜ್ಯಕ್ಕೆ 41.77ಕೋಟಿ ರೂ.ಅನುದಾನವನ್ನು ನೆರವಿನ ರೂಪದಲ್ಲಿ ನೀಡಲಿದೆ ಎಂದು ಅವರು ತಿಳಿಸಿದರು.

ಕಲಬುರಗಿಯಲ್ಲಿ ನೂತನವಾಗಿ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‌ಗಳ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಹೈದರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರಕಾರ ಜಂಟಿಯಾಗಿ 47.10 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಸಂಪುಟವು ಸಮ್ಮತಿಸಿದೆ.

ಕಲಬುರಗಿಯಲ್ಲಿ ನೂತನವಾಗಿ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್‌ಗಳ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಹೈದರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರಕಾರ ಜಂಟಿಯಾಗಿ 47.10 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಸಂಪುಟವು ಸಮ್ಮತಿಸಿದೆ. ಅಲೆ ತಡೆ ಗೋಡೆ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನಲ್ಲಿ 820 ಮೀಟರ್ ಎತ್ತರದ ಅಲೆ ತಡೆ ಗೋಡೆ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಯಚಂದ್ರ ಇದೇ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News