ಇದನ್ನು ತಯಾರಿಸಲು ಚೀನಾಕ್ಕೆ ಆಗಲಿಲ್ಲ !

Update: 2017-01-11 11:03 GMT

ಆ ದೇಶ ರಾಕೆಟ್ ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ವಿಶ್ವದಲ್ಲಿರುವ ಲಕ್ಷಾಂತರ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಿದೆ ಮತ್ತು ಹೈಸ್ಪೀಡ್ ರೈಲುಗಳನ್ನು ನಿರ್ಮಿಸಿದೆ. ಆದರೆ ಈವರೆಗೂ ಒಂದು ನಿರ್ಮಾಣದ ಕ್ಷೇತ್ರದಲ್ಲಿ ಮಾತ್ರ ಚೀನಾ ಸೋತು ಹೋಗಿದೆ. ಅದೇ ಬಾಲ್ ಪಾಯಿಂಟ್ ಪೆನ್!

ವರ್ಷದ ಹಿಂದೆ ಪ್ರೀಮಿಯರ್ ಲಿ ಕೇಕಿಯಾಂಗ್ ರಾಷ್ಟ್ರೀಯ ಟೀವಿ ವಾಹಿನಿಯಲ್ಲಿ ತಮ್ಮ ದೇಶಕ್ಕೆ ಉತ್ತಮ ಗುಣಮಟ್ಟದ ಸರಳ ಪೆನ್ನುಗಳನ್ನು ತಯಾರಿಸಲು ಸಾಧ್ಯವಾಗದೆ ಇರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಜರ್ಮನಿ, ಸ್ವಿಟ್ಜರ್ಲಾಂಡ್ ಮತ್ತು ಜಪಾನಿಗೆ ಹೋಲಿಸಿದಲ್ಲಿ ಸ್ಥಳೀಯವಾಗಿ ತಯಾರಾಗುವ ಪೆನ್ನುಗಳು ಬಹಳ ಕಠಿಣ ಮೊನಚನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಕುಶಲ ಬಾಲ್ ಪಾಯಿಂಟ್ ಕಲೆ

ಸಮಸ್ಯೆ ಪೆನ್ನನ್ನು ತಯಾರಿಸುವುದರಲ್ಲಿ ಇಲ್ಲ. ಅದರ ನಿಬ್ಬನ್ನು ತಯಾರಿಸುವುದೇ ಚೀನಾಗೆ ಕಷ್ಟವಾಗಿದೆ. ಶಾಯಿಯನ್ನು ಬರೆಯಲು ಕೊಡುವ ಪೆನ್ನಿನ ತುದಿಯಲ್ಲಿರುವ ಸಣ್ಣ ಬಾಲನ್ನು ಸೃಷ್ಟಿಸುವುದು ಚೀನಾಗೆ ಕಷ್ಟವಾಗಿದೆ. ನಾವು ಇದನ್ನು ಅಯ್ಯೋ ಇಷ್ಟೇ ದೊಡ್ಡ ಸಮಸ್ಯೆಯೇ ಎಂದು ತಳ್ಳಿ ಹಾಕಬಹುದು.

ಆದರೆ ನಿಬ್ಬಿನಲ್ಲಿರುವ ಬಾಲ್ ನಿರ್ಮಿಸಲು ಕರಾರುವಕ್ಕಾದ ಯಂತ್ರ ಮತ್ತು ಕಠಿಣ, ಅಲ್ಟ್ರಾ ತೆಳು ಸ್ಟೀಲ್ ಪ್ಲೇಟ್ ಗಳು ಬೇಕು. ಸರಳವಾಗಿ ಹೇಳಬೇಕೆಂದರೆ ಚೀನಾದಲ್ಲಿ ಸಿಗುವ ಸ್ಟೀಲ್ ಉತ್ತಮ ಗುಣಮಟ್ಟದ್ದಲ್ಲ. ಹೀಗಾಗಿ ಆ ದೇಶ ತನ್ನ ಪೆನ್ನುಗಳ ನಿಬ್ಬನ್ನು ಕರಾರುವಕ್ಕಾಗಿ ರೂಪಿಸುವಲ್ಲಿ ವಿಫಲವಾಗಿದೆ.

ಆ ಸಾಮರ್ಥ್ಯವಿಲ್ಲದೆ ಚೀನಾದ 3000 ಪೆನ್ನು ನಿರ್ಮಾಪಕರು ಈ ಅತೀ ನಿರ್ಣಾಯಕ ಭಾಗವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಾರೆ. ಪ್ರತೀ ವರ್ಷ ಇದಕ್ಕಾಗಿ ಪೆನ್ನು ಉದ್ಯಮವು 120 ಮಿಲಿಯ ಯುವಾನ್ (17.3 ಮಿಲಿಯ ಡಾಲರ್) ವೆಚ್ಚ ಮಾಡುತ್ತದೆ.

ಆದರೆ ಐದು ವರ್ಷಗಳ ಸಂಶೋಧನೆ ಬಳಿಕ ದೇಶದ ಟೈಯುವಾನ್ ಕಬ್ಬಿಣ ಮತ್ತು ಸ್ಟೀಲ್ ಸಂಸ್ಥೆ ಸಮಸ್ಯೆ ಬಗೆಹರಿಸಿದ್ದಾಗಿ ಹೇಳಿದೆ. ಇತ್ತೀಚೆಗೆ ಅದು ಮೊದಲ ಹಂತದಲ್ಲಿ 2.3 ಮಿಲಿಮೀಟರ್ ಬಾಲ್ ಪಾಯಿಂಟ್ ಪೆನ್ ನಿಬ್ಬುಗಳನ್ನು ತಯಾರಿಸಿದೆ. ಒಮ್ಮೆ ಪ್ರಯೋಗಾಲಯದ ಪರೀಕ್ಷೆಗಳು ಪೂರ್ಣಗೊಂಡ ಮೇಲೆ ಚೀನಾ ಎರಡು ವರ್ಷದೊಳಗೆ ಪೂರ್ಣವಾಗಿ ಪೆನ್ನು ನಿಬ್ಬಿನ ಆಮದನ್ನು ನಿಲ್ಲಿಸಬಹುದು ಎನ್ನಲಾಗಿದೆ.

ಮುಖ್ಯವಾಗಿ 2025ರೊಳಗೆ ಚೀನಾ ನಿರ್ಮಿತ ಹೈಟೆಕ್ ವಸ್ತುಗಳಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿ ಪ್ರಗತಿಯ ಪಥದಲ್ಲಿ ಸಾಗಿದೆ. ಆದರೆ ಬಾಲ್ ಪಾಯಿಂಟ್ ಪೆನ್ನುಗಳಂತಹ ಸಣ್ಣ ವಸ್ತುಗಳಿಗೆ ಆದ್ಯತೆ ಸಿಗುತ್ತಿಲ್ಲ ಎನ್ನುವುದೂ ಅಷ್ಟೇ ನಿಜ.

ಜಗತ್ತಿನ ಅರ್ಧದಷ್ಟು ಕಬ್ಬಿಣ ಮತ್ತು ಸ್ಟೀಲ್ ಉತ್ಪಾದಿಸುತ್ತಿದ್ದರೂ ಚೀನಾ ಈಗಲೂ ಅಧಿಕ ಗುಣಮಟ್ಟದ ಸ್ಟೀಲ್ ಅನ್ನು ಆಮದು ಮಾಡಿಕೊಳ್ಳುತ್ತಿದೆ. ಈ ವಿಷಯವನ್ನೇ ಲೀ ಅವರು ಟೀವಿ ವಾಹಿನಿಯಲ್ಲಿ ದೇಶದ ಮುಂದಿಟ್ಟಿದ್ದಾರೆ.

ವಾಸ್ತವದಲ್ಲಿ ಕರಾರುವಕ್ಕಾಗಿ ಮಾಡುವ ಕುಶಲ ಇಂಜಿನಿಯರಿಂಗ್ ಕೆಲಸದಲ್ಲಿ ಚೀನಾ ಯಾವಾಗಲೂ ಹಿಂದೆಯೇ ಇದೆ ಎನ್ನುವುದು ಹಾಂಗ್ ಕಾಂಗ್ ವಿಶ್ವವಿದ್ಯಾನಿಲಯದ ಔದ್ಯಮಿಕ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಜಾರ್ಜ್ ಹುವಾಂಗ್ ಅಭಿಪ್ರಾಯವಾಗಿದೆ.

“ಏರೋಸ್ಪೇಸ್ ಮತ್ತು ರಕ್ಷಣಾ ಇಲಾಖೆಗಳಂತಹ ಕೆಲವು ಕಡೆ ಮಾತ್ರ ಕರಾರುವಕ್ಕಾದ ಕುಶಲ ಇಂಜಿನಿಯರಿಂಗ್ ಗೆ ಚೀನಾ ಮಹತ್ವ ನೀಡಿದೆಯೇ ವಿನಾ ಕಡಿಮೆ ವ್ಯಾಪ್ತಿಯಿರುವ ಕ್ಷೇತ್ರಗಳಲ್ಲಿ ನೀಡಿಲ್ಲ” ಎನ್ನುತ್ತಾರೆ ಹುವಾಂಗ್. ಸ್ಮಾರ್ಟ್ ಫೋನ್ ಗಳು ಮತ್ತು ಕಂಪ್ಯೂಟರ್ ಗಳ ವಿಚಾರದಲ್ಲೂ ಹೈ ಎಂಡ್ ಕಂಪ್ಯೂಟರ್ ಚಿಪ್ ಗಳನ್ನು ಜಪಾನ್ ಮತ್ತು ತೈವಾನ್ ಗಳಿಂದ ಚೀನಾ ಆಮದು ಮಾಡಿಕೊಳ್ಳುತ್ತದೆ.

ಹೀಗಾಗಿ ಕರಾರುವಕ್ಕಾದ ಇಂಜಿನಿಯರಿಂಗ್ ಕೌಶಲ್ಯದಲ್ಲಿ ಚೀನಾ ಹಿಂದೆ ಬಿದ್ದಿದೆ. ವಾಸ್ತವದಲ್ಲಿ ಚೀನೀಯರು ಕುಶಲ ಕಲೆಗಾರರಾಗಿದ್ದರೂ, ಅದೇ ಉತ್ಸಾಹ ಆಧುನಿಕ ಸಂದರ್ಭಗಳಲ್ಲಿ ವ್ಯಕ್ತವಾಗಿಲ್ಲ ಎನ್ನುವುದನ್ನು ಹುವಾಂಗ್ ಬೊಟ್ಟು ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News