ದೇವಸ್ಥಾನ ಪ್ರವೇಶಕ್ಕೆ ದಲಿತರಿಗೆ ಅವಕಾಶ

Update: 2017-01-12 07:13 GMT

ಬೆಂಗಳೂರು, ಜ.11: ‘ಸವರ್ಣೀಯರಿಂದ ದಲಿತರು ವಾಸಿಸುವ ಗ್ರಾಮದ ಸುತ್ತ ಬೇಲಿ, ಸಾಮಾಜಿಕ ಬಹಿಷ್ಕಾರ..!’ ಶೀರ್ಷಿಕೆಯಡಿ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಅ.24ರಂದು ಪ್ರಕಟವಾದ ಸುದ್ದಿಯನ್ನು ಆಧರಿಸಿ ತುಮಕೂರು ಎಸ್ಪಿ, ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಖುದ್ದು ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.  ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಮಸರಪಡಿ ಗ್ರಾಮದ ದಲಿತರು ಗ್ರಾಮದ ದೇವಸ್ಥಾನದ ಮುಂದೆ ‘ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವ ವಿಚಾರ’ ಸಂಬಂಧ ಗ್ರಾಮದ ಸವರ್ಣೀಯರೊಂದಿಗೆ ಜಗಳವಾಗಿದೆ ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.

ಉಭಯ ಸಮುದಾಯಗಳ ಮಧ್ಯೆ ಜಗಳದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ, ಗ್ರಾಮದ ಜಮೀನುಗಳಲ್ಲಿ ಬೆಳೆ ಬೆಳೆಸಿರುವ ಹಿನ್ನೆಲೆಯಲ್ಲಿ ಹೊಲಗಳಿಗೆ ಬೇಲಿ ಹಾಕಲಾಗಿದೆ. ಜನ ಸಂಚಾರಕ್ಕೆ ಬೇರೆ ದಾರಿ ಇದೆ. ದಲಿತರಿಗೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಉಭಯ ಮುಖಂಡರ ಸಭೆ ನಡೆಸಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಲಿತರು ಸೇರಿದಂತೆ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಸದರಿ ಗ್ರಾಮದಲ್ಲಿ ಯಾವುದೇ ಗಲಾಟೆ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರಿಗೆ, ತುಮಕೂರು ಎಸ್ಪಿ ವರದಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News