ಬಡಪಾಯಿ ಟೊಮೆಟೋ ಪೋಷಕಾಂಷಗಳಲ್ಲಿ ಶ್ರೀಮಂತ

Update: 2017-01-12 09:16 GMT

ಸಮೃದ್ಧ ತಿರುಳನ್ನು ಹೊಂದಿರುವ ಟೊಮಟೋ ಹಣ್ಣಿನ ರೂಪವನ್ನು ಹೊಂದಿದ್ದರೂ ತರಕಾರಿಯೆಂದೇ ಪರಿಗಣಿಸಲಾಗಿದ್ದು,ಇದು ವಿಶ್ವಕ್ಕೆ ಮಾಯನ್ನರ ಇನ್ನೊಂದು ಅದ್ಭುತ ಕೊಡುಗೆಯಾಗಿದೆ. ಟೊಮೆಟೋದಲ್ಲಿರುವ ಫೈಟೊ-ಕೆಮಿಕಲ್ ಗುಣಗಳಿಂದಾಗಿ ಮಧ್ಯ ಅಮೆರಿಕ ಮೂಲದ ಇದನ್ನು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಿಲಿಯಾಂತರ ಜನರು ಇಷ್ಟಪಡುತ್ತಾರೆ. ಸೇಬುವಿನಂತಹ ಕೆಲವು ಜನಪ್ರಿಯ ಹಣ್ಣುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಕ್ಕೆ ಲಾಭಕಾರಿಯಾದ ಸಂಯುಕ್ತಗಳನ್ನು ಒಳಗೊಂಡಿರುವುದು ಟೊಮೆಟೋದ ಹೆಚ್ಚುಗಾರಿಕೆಯಾಗಿದೆ.

ಸಸ್ಯಶಾಸ್ತ್ರೀಯವಗಿ ಸೋಲನಸೀ ಕುಟುಂಬಕ್ಕೆ ಸೇರಿರುವ ಟೊಮೆಟೋದ ವೈಜ್ಞಾನಿಕ ಹೆಸರು ಲೈಕೊಪರ್ಸಿಕನ್ ಎಸ್ಕುಲೆಂಟಮ್ ಆಗಿದೆ. ಹೆಚ್ಚಿನ ಬೆಳೆಗಾರರು ಕೆಂಪು ಬಣ್ಣದ ಟೊಮೆಟೋವನ್ನು ಬೆಳೆಯುತ್ತಾರಾದರೂ, ಹಳದಿ, ಕಿತ್ತಳೆ, ನೇರಳೆ, ಹಸಿರು ಅಥವಾ ಬಿಳಿ ಬಣ್ಣದ ಟೊಮೆಟೋಗಳನ್ನೂ ವಿಶ್ವದ ಹಲವೆಡೆ ಬೆಳೆಯಲಾಗುತ್ತದೆ.

ಟೊಮೆಟೋದಿಂದ ಆರೋಗ್ಯಕ್ಕೆ ಲಾಭಗಳು

ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿಗಳಲ್ಲೊಂದಾಗಿರುವ ಟೊಮೆಟೋದ ಪ್ರತಿ 100 ಗ್ರಾಮ್‌ನಲ್ಲಿ ಕೇವಲ 18 ಕ್ಯಾಲೊರಿಗಳಿರುತ್ತವೆ. ಇದರಲ್ಲಿ ಕೊಬ್ಬಿನಂಶವೂ ತೀರ ಕಡಿಮೆ. ಕೊಲೆಸ್ಟರಾಲ್ ಇಲ್ಲವೇ ಇಲ್ಲ. ಜೊತೆಗೆ ಟೊಮೆಟೋ ಆ್ಯಂಟಿ ಆಕ್ಸಿಡಂಟ್‌ಗಳು, ನಾರಿನಂಶ, ಖನಿಜಗಳು ಮತ್ತು ವಿಟಾಮಿನ್‌ಗಳ ಅತ್ಯುತ್ತಮ ಮೂಲವಾಗಿದೆ. ಕೊಲೆಸ್ಟರಾಲ್ ನಿಯಂತ್ರಣ ಮತ್ತು ಶರೀರದ ತೂಕ ಇಳಿಸಲು ಟೊಮೆಟೊವನ್ನು ಆಹಾರದಲ್ಲಿ ಬಳಸುವಂತೆ ವೈದ್ಯರು ಸಾಮಾನ್ಯವಾಗಿ ಶಿಫಾರಸು ಮಾಡುತ್ತಾರೆ.

ಟೊಮೆಟೋದಲ್ಲಿರುವ ಆ್ಯಂಟಿ ಆಕ್ಸಿಡಂಟ್‌ಗಳು ಗುದನಾಳ, ಪ್ರೊಸ್ಟ್ರೇಟ್, ಸ್ತನ, ಶ್ವಾಸಕೋಶ ಇತ್ಯಾದಿ ಕ್ಯಾನ್ಸರ್‌ಗಳು ಮತ್ತು ಪ್ಯಾಂಕಿಯಾಟ್ರಿಕ್ ಟ್ಯೂಮರ್‌ನ ವಿರುದ್ಧ ರಕ್ಷಣೆ ನೀಡುತ್ತವೆ.

ಫ್ಲಾವನಾಯ್ಡಾ ಆ್ಯಂಟಿ ಆಕ್ಸಿಡಂಟ್ ಆಗಿರುವ ಲೈಕೊಪಿನ್ ಟೊಮೆಟೋದಲ್ಲಿರುವ ವಿಶಿಷ್ಟ ಫೈಟೊಕೆಮಿಕಲ್ ಸಂಯುಕ್ತವಾಗಿದೆ. ಕೆಂಪು ಟೊಮೆಟೋಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಕ್ಯಾರೊಟಿನಾಯ್ಡಾಗಳ ಜೊತೆಗೆ ಸೇರಿಕೊಂಡು ಹಾನಿಕಾರಕ ಆಕ್ಸಿಜನ್ ಫ್ರೀ ರ್ಯಾಡಿಕಲ್‌ಗಳಿಂದ ಶರೀರದಲ್ಲಿನ ಜೀವಕೋಶಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಲೈಕೊಪಿನ್ ಅಲ್ಟ್ರಾ ವಯೊಲೆಟ್ ಕಿರಣಗಳಿಂದ ಚರ್ಮಕ್ಕೂ ರಕ್ಷಣೆಯನ್ನು ನೀಡುತ್ತದೆ ಮತ್ತು ತನ್ಮೂಲಕ ಚರ್ಮದ ಕ್ಯಾನ್ಸರ್‌ನ ಅಪಾಯವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ. ಝೀ-ಕ್ಸಾಂತಿನ್ ಟೊಮೆಟೋದಲ್ಲಿ ಪುಷ್ಕಳವಗಿರುವ ಇನ್ನೊಂದು ಫ್ಲಾವನಾಯ್ಡಾ ಸಂಯುಕ್ತವಾಗಿದೆ. ಇದು ಹಾನಿಕಾರಕ ಅಲ್ಟ್ರಾ ವಯೊಲೆಟ್ ಕಿರಣಗಳನ್ನು ಸೋಸುವ ಮೂಲಕ ವಯಸ್ಸಾದವರ ಕಣ್ಣುಗಳಿಗೆ ರಕ್ಷಣೆಯನ್ನು ನೀಡುತ್ತದೆ. ಇದು ವಿಟಾಮಿನ್ ಎ ಮತ್ತು ಬೀಟಾ ಕ್ಯಾರೊಟಿನ್‌ಗಳು, ಕ್ಸಾಂತಿನ್ ಮತ್ತು ಲುಟೆನ್‌ನಂತಹ ಫ್ಲಾವನಾಯ್ಡಾ ಆ್ಯಂಟಿ ಆಕ್ಸಿಡಂಟ್‌ಗಳ ಅತ್ಯುತ್ತಮ ಮೂಲವಾಗಿದೆ. ಇವು ಒಟ್ಟಾಗಿ ರಾತ್ರಿ ಗೋಚರತೆಯನ್ನು ಉತ್ತಮಗೊಳಿಸುವ ಜೊತೆಗೆ ಕಣ್ಣಿನ ರೆಟಿನಾ,ಎಲುಬು ಮತ್ತು ಚರ್ಮದ ಆರೋಗ್ಯ ರಕ್ಷಣೆಯಲ್ಲಿ ನೆರವಾಗುತ್ತವೆ. ಸಮೃದ್ಧ ಫಾವನಾಯ್ಡಿಗಳನ್ನು ಹೊಂದಿರುವ ಟೊಮೆಟೋ ಸೇವನೆ ಶ್ವಾಸಕೋಶಗಳು ಮತ್ತು ಅಂಡಾಶಯ ಕ್ಯಾನ್ಸರ್‌ಗಳಿಂದ ರಕ್ಷಣೆಯನ್ನು ನೀಡುತ್ತದೆ.

ಅಲ್ಲದೆ ಆ್ಯಂಟಿ ಆಕ್ಸಿಡಂಟ್ ವಿಟಾಮಿನ್ ಸಿ ಅನ್ನು ಪುಷ್ಕಳವಾಗಿ ಹೊಂದಿದೆ. ಅದು ನಮ್ಮ ದೈನಂದಿನ ಅಗತ್ಯದ ಶೇ.21ರಷ್ಟು ವಿಟಾಮಿನ್ ಸಿ ಅನ್ನು ಒದಗಿಸುತ್ತದೆ. ವಿಟಾಮಿನ್ ಸಿ ಅನ್ನು ಸಮೃದ್ಧವಾಗಿ ಹೊಂದಿರುವ ಆಹಾರಗಳ ಸೇವನೆ ಸೋಂಕುಕಾರಕಗಳ ವಿರುದ್ಧ ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುತ್ತದೆ.

ತಾಜಾ ಟೊಮೆಟೋ ಪೊಟ್ಯಾಶಿಯಂನ ಸಮೃದ್ಧ ಮೂಲವಾಗಿದೆ. 100 ಗ್ರಾಂ ಟೊಮೆಟೋ 237 ಮಿ.ಗ್ರಾಂ ಪೊಟ್ಯಾಶಿಯಂ ಮತ್ತು ಕೇವಲ 5 ಮಿ.ಗ್ರಾಂ ಸೋಡಿಯಂ ಅನ್ನು ಹೊಂದಿದೆ. ಪೊಟ್ಯಾಶಿಯಂ ಎದೆಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ನಮ್ಮ ಶರೀರದಲ್ಲಿನ ಜೀವಕೋಶಗಳು ಮತ್ತು ದ್ರವಗಳ ಪ್ರಮುಖ ಘಟಕವಾಗಿದೆ.

ಫೋಲೇಟ್‌ಗಳು,ರಿಬೊಫ್ಲಾವಿಯನ್,ವಿಟಾಮಿನ್ ಬಿ-6 ಮತ್ತು ಥಿಯಾಮಿನ್ (ವಿಟಾಮಿನ್ ಬಿ-1)ನಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಟೊಮೆಟೋದಲ್ಲಿವೆ. ಕಬ್ಬಿಣ, ತಾಮ್ರ, ಮತ್ತು ಮ್ಯಾಂಗನೀಸ್‌ನಂತಹ ಅಗತ್ಯ ಖನಿಜಗಳೂ ಇದರಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News